“ಬೆವರು ಮತ್ತು ತೇರು” ಬೇಸಿಗೆ ವಿಶೇಷ ಲೇಖನ-ಸಂಗೀತ ರವಿರಾಜ್

ಮಾಗಿ ಮುಗಿದ ಮೇಲೆ ಬರುವ ವೈಶಾಖವೆನ್ನುವ ಬಿಸಿಲು ಕಾಲ , ಖುಷಿಯ ಕಾಲವು ಹೌದು.  ಆದರೆ ಈಗ ಪ್ರಸ್ತುತ ದಿನಮಾನಸದಲ್ಲಿ  ಬೇಸಿಗೆಯ ನಿಜವಾದ ತಾಪ ,ಒಂದು ಶಾಪವಾಗಿ ಪರಿಣಮಿಸಿದೆ ಎಂದರು ತಪ್ಪಲ್ಲ. ಇದಕ್ಕೆ ಈಗ ಹಲವಾರು ಕಾರಣಗಳನ್ನು ಕೊಡಬಹುದು. ಆದರೂ ಮಳೆಗಾಲದ ನಂತರದ ,  ಚಳಿಗಾಲವಾದ ಮೇಲೆ ಬರುವ ಇದೊಂಥರಾ ಸ್ವಾತಂತ್ರ್ಯ ಋತು ಎನ್ನಬಹುದು. ಮಳೆಗಾಲವೆಂದರೆ ಮಳೆಗೆ ಹೊರಗೆ ಹೋಗಲಾಗದು , ಮನೆಯಲ್ಲಿದ್ದರು ಹಳ್ಳಿಗಳಲ್ಲಿ ವಿದ್ಯುತ್ ಆಗಾಗ್ಗೆ ಕೈ ಕೊಡುತ್ತದೆ, ಸಮಾರಂಭಗಳು ಕಡಿಮೆ ಹೀಗೆಲ್ಲ ಕಾರಣ ಕೊಡಬಹುದು. ಚಳಿಯು ಹಾಗೆ  ಶೀತ, ಜ್ವರ , ಥಂಡಿಯ ಸಬೂಬು ಹೇಳುವ ಕಾಲ. ಆದರೆ ಬೇಸಿಗೆಯ ಮೇಲೆ ದೊಡ್ಡ ಬೇಸರವಿಲ್ಲ. ಅದೆಷ್ಟೋ ರಾಶಿ ರಾಶಿ ಹಣ್ಣುಗಳ ಋತು ಇರುವ ಬೇಸಿಗೆಯ ಕಾಲ , ಬೇಸಿಗೆಗೆ ಪ್ರಕೃತಿಯ ಕೊಡುಗೆಯು ಹೌದು. ದೇಹಕ್ಕೆ ತಂಪು ನೀಡಿ ಬಿಸಿಲಿಗೆ ಸಮತೋಲನ ಮಾಡುವುದಕ್ಕೆ ಪ್ರಕೃತಿಯಲ್ಲಿ ಈ ಕಾಲದಲ್ಲಿ ಇಷ್ಟೊಂದು ಹಣ್ಣುಗಳಿವೆ. ಪ್ರಖರ ಬಿಸಿಲು ಇಲ್ಲದೆ ಹದವಾದ ಬಿಸಿಲಿದ್ದ ಒಂದಾನೊಂದು ಕಾಲ ಈಗ ಕೊಂಚ ಕಡಿಮೆ. ಅದರಲ್ಲೂ ಈ ವರ್ಷವಂತು ಕೇವಲ ಎರಡು ತಿಂಗಳು ಮಳೆ ಬಂದು ಈಗ ನೀರಿಲ್ಲದೆ ಬಣ ಬಣ ಎನ್ನುವ ಬೇಸಿಗೆಯನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆಲ್ಲ ನಾವೇ ಮನುಷ್ಯರೇ ಕಾರಣ ಎನ್ನುವುದಕ್ಕೆ ನೂರಾರು ಕಾರಣ ಕೊಡಬಹುದು.


       ಮೋಡವಿಲ್ಲದ ರಾತ್ರಿಯ ಚಂದಿರನಾಟ , ಬೆಳದಿಂಗಳೂಟ ಇವೆಲ್ಲ ವೈಶಾಖದ ವರವೆಂಬುದು ದಿಟ. ಎಲ್ಲ ಕಾಲಗಳು ಆಯಾ ಕಾಲಕ್ಕೆ ಅನುಕೂಲವೇ ಆಗಿ ಅದರದೇ ಆದ ಸ್ವಾದದೊಂದಿಗೆ ನಮ್ಮೊಂದಿಗೆ ತೆರೆದುಕೊಳ್ಳುತ್ತದೆ. ವೈಶಾಖವು ಹಾಗೆ, ಅದರದೇ ಆದ ಸ್ವಾದದೊಂದಿಗೆ ಚೆಲುವು ಹೊಂದಿದೆ. ಚಂದಿರನ ಸೊಬಗನ್ನು ನಾವೆಲ್ಲ ಮನಪೂರ್ತಿ ಆಸ್ವಾದಿಸುವ ಋತು ವೈಶಾಖವೆ ನೀನೆಂದಿಗು ಹೀಗೆ ಇರು ಎಂಬುದಾಗಿ ಮನಸ್ಸು ಹಂಬಲಿಸುತ್ತದೆ. ಫಲಭರಿತ ಹಣ್ಣಿನ ಮರಗಳನ್ನು ನೋಡುವ ಸೊಬಗು ಕಣ್ಣನ್ನು ತುಂಬುತ್ತದೆ . ಇದರೊಂದಿಗೆ ಸಮಾರಂಭಗಳು ಮತ್ತು ಜಾತ್ರೆಗಳ ಸುಗ್ಗಿ ಕಾಲ. ನಮ್ಮೂರಿನ ಮತ್ತು ಆಸು ಪಾಸು ಊರುಗಳ ತೇರನ್ನೇಳೆಯುವ ಜಾತ್ರೆ, ಒತ್ತೇಕೋಲ , ಪತ್ತನಾಜೆ, ಕೊರಗಜ್ಜ ದೈವ, ಧರ್ಮದೈವ ಮತ್ತು ಇತರ ದೈವಗಳ ನೇಮ –  ನಡಾವಳಿ  ಹೀಗೆ ಸಾಲುಗಟ್ಟಿ ಬರುವ ನಮ್ಮೂರಿನ ವಿಶೇಷ ಜಾತ್ರೆ ಆರಾಧನೆಗಳು ನಮಗೆಲ್ಲ
ವರದಾನ . ಇವೆಲ್ಲವೂ  ನಡೆಯುವುದು ಸ್ವಲ್ಪವೇ ಅಂತರದ ಆಸುಪಾಸಿನ ಗ್ರಾಮಗಳಲ್ಲಿ ಆಗಿರುವುದರಿಂದ ಅಕ್ಕಪಕ್ಕದ ಊರುಗಳಿಗು  ನಾವೆಲ್ಲ ಹೋಗಿ ಪಾಲ್ಗೊಳ್ಳುತ್ತವೆ. ಅದರಲ್ಲೂ ವಿಶೇಷ ನಮ್ಮ ಚೆಂಬು ಗ್ರಾಮದ ಎರಡು ಊರ ಜಾತ್ರೆಗಳು . ಗೊನೆ ಕಡಿದ  ನಂತರ ವಾರದ ಅಂತರದಲ್ಲಿ ಭಾಗಮಂಡಲ ಭಗಂಡೇಶ್ವರ ಸನ್ನಿಧಿಯಿಂದ ಭಂಡಾರ ತರುವಲ್ಲಿಂದ ಪ್ರಾರಂಭವಾಗಿ , ಕರಾವಳಿಯ ಗ್ರಾಮೀಣ,  ಜಾನಪದ ಕ್ರೀಡೆ  ಕೋಳಿ ಅಂಕದವರೆಗೆ ಇದ್ದು ಮುಕ್ತಾಯಗೊಳ್ಳುತ್ತದೆ.  ಈ ನಡುವೆ ಇರುವ ಹಲವಾರು ದಿನಗಳಲ್ಲಿ ಬಲು ಶ್ರೀಮಂತವಾದ ಜಾತ್ರೆಯ ಸಂಪ್ರದಾಯಗಳು , ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿದೆ. ನಮ್ಮ ಗ್ರಾಮದಲ್ಲಿ ಮುಖ್ಯವಾಗಿ  ಚಾಂಬಾಡು ಶ್ರೀ ಕಿನುಮಣಿ ಉಳ್ಳಾಕುಲು  ಕಿರುಚಾವಡಿ ಮತ್ತು ಮಾಡ ಶ್ರೀ ಕಿನುಮಣಿ ದೈವಸ್ಥಾನಗಳು ಇವೆ. ಚಾಂಬಾಡು ಕಿರುಚಾವಡಿಯ ಕುದುರೆ ಮೇಲೆ ಕುಳಿತ ಉಳ್ಳಾಕುಲು ದೈವದ ಜಾತ್ರೆ ನೇಮೋತ್ಸವ ಪ್ರತಿ ವರ್ಷ ಡಿಸೆಂಬರ್ ತಿಂಗಳ ಹತ್ತಕ್ಕೆ ನಡೆದರೆ, ಪಗ್ಗು ನೇಮೋತ್ಸವ ಮೇ ತಿಂಗಳ ಐದನೇ ತಾರೀಖಿಗೆ ಪ್ರತಿ ವರ್ಷ ನಡೆಯುತ್ತದೆ. ಸಂಪೂರ್ಣ ಗ್ರಾಮಕ್ಕೆ ಈ ಎರಡು ಜಾತ್ರೆಗಳು ಸಡಗರವನ್ನು ನೀಡುವ ಕಾಲ . ಪ್ರತಿ ಮನೆಯಿಂದ ಜಾತ್ರೆಗೆ ಹೋಗಿ ಅಚ್ಚಲು – ಪಚ್ಚಲು ಪಾವತಿ ಮಾಡಿ ದೈವದ ಆಶೀರ್ವಾದ ಪಡೆಯಬೇಕು . ಊರಿಂದ ಹೊರಗಿರುವವರು , ಊರಿಂದ ಮದುವೆ ಆಗಿ ಹೋದ ಹೆಣ್ಣುಮಕ್ಕಳು ಎಲ್ಲರೂ ಸಂಭ್ರಮದಿಂದ ಜಾತ್ರೆಗೆ ಬರುತ್ತಾರೆ . ಚೆಂಬು ಸೀಮೆಯ ಐದೂರುಗಳನ್ನು ಸೇರಿಸಿ ಒಟ್ಟಿಗೆ ಗ್ರಾಮ ಅಂತ ಕರೆಯುತ್ತಾರೆ. ಹೀಗೆ ಐದೂರು ಚೆಂಬು ಗ್ರಾಮದ  ಮನೆ ಮನೆಗಳಲ್ಲಿ ಜಾತ್ರೆಯ ಸಡಗರ ಇರುತ್ತದೆ. ಮೇ ತಿಂಗಳಲ್ಲಿ ನಡೆಯುವ ಮಾಡ ಉಳ್ಳಾಕುಲು ಜಾತ್ರೆ ಬಿರುಬಿಸಿಲಿನ ಸೆಖೆಯಲ್ಲಿ ಆದರೂ , ಬೆವರು ಸುರಿಸುತ್ತಾ ಐಸ್ ಕ್ಯಾಂಡಿ ಮೆಲ್ಲುತ್ತಾ ಜನ ಸ್ಪಂದಿಸುವ ರೀತಿಗೆ ಬಿಸಿಲೇ ಬೆಚ್ಚಿ ಬೀಳುತ್ತದೆ. ಅಂತಹ ಜೀವಂತಿಕೆಯ ಜಾತ್ರೋತ್ಸವವನ್ನು ನಾವು ಬೇಸಿಗೆಯಲ್ಲಿ ಅನುಭವಿಸುತ್ತೇವೆ. ಈ ಜಾತ್ರೆಯಲ್ಲಿ ಚಾಂಬಾಡು ಕಿರುಚಾವಡಿಯ ಉಳ್ಳಾಕುಲು ದೈವದ ಕುದುರೆ ಬಂಡಿ ಎಳೆದು, ಅಲ್ಲಿ ಉತ್ಸವ ಆಗಿ ಮತ್ತೆ ಮಾಡ ದೈವಸ್ಥಾನದಲ್ಲಿ ಜಾತ್ರೆ ನೇಮೋತ್ಸವ ನಡೆಯುತ್ತದೆ. ಮನೆಯಿಂದ ಕಾಲ್ನಡಿಗೆಯಲ್ಲಿ ಕ್ರಮಿಸುವ ದೂರದ ಈ ಜಾತ್ರೆಯನ್ನು ನಾವಂತೂ ಒಂದ್ವರ್ಷವು ತಪ್ಪಿಸುವುದಿಲ್ಲ.  ಈ ಜಾತ್ರೆಯೆಂಬ ಅಚ್ಚರಿಯ ಮುಂದೆ ಬೇಸಿಗೆಯ ಬಿಸಿ ಯಾವ ಲೆಕ್ಕವೂ ಅಲ್ಲ!  ಜಾತ್ರೆಗೆ ಎಂಟು ದಿನಗಳ ಮುಂದೆ ಗೊನೆ ಕಡಿವ ಕಾರ್ಯಕ್ರಮ ಆದ ಮೇಲೆ ಊರಿನ ಮನೆಗಳಲ್ಲಿ ಚಪ್ಪರ ಹಾಕಿ ಸಮಾರಂಭ ಮಾಡಬಾರದು ಎನ್ನುವ ಕಟ್ಟಳೆ ಇದೆ. ಸಮಾರಂಭದ ತೋರಣ ಚಪ್ಪರ ಎಲ್ಲವೂ ಹಾಕುವುದು ಜಾತ್ರೆಗೆ ಆಗಬೇಕು ಎಂಬುದು ಪ್ರತೀತಿ. ಈ ಅವಧಿಯಲ್ಲಿ ಊರಿನವರು ಯಾರು ಹೊರಗೆ ಹೋಗಿ ಉಳಿದುಕೊಳ್ಳಬಾರದು. ಇದಕ್ಕಿಂತ ಮುಖ್ಯವಾಗಿ ಆ ದಿನಗಳಲ್ಲಿ ಊರಿನವರು ಮಾಂಸಾಹಾರ ಮಾಡಬಾರದು . ಇದು ನಮ್ಮ ಜಾತ್ರೆಯ ಕಟ್ಟಳೆ. ಭಂಡಾರವನ್ನು ತಿರುಗಿ ಕಳುಹಿಸಿದ ಮೇಲೆ ಎಲ್ಲವೂ ಮೊದಲಿನಂತೆ ಯಥಾಸ್ಥಿತಿಗೆ ಬರುತ್ತದೆ. ನಮ್ಮೂರಲ್ಲಿ ಮಾಡ ದೈವಸ್ಥಾನದಲ್ಲಿ ನಡೆಯುವಂತಹ  ಪಗ್ಗು ನೇಮ, ಊರಿನ ಕೊನೆಯ ನೇಮ ನಡಾವಳಿ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ರುದ್ರ ಚಾಮುಂಡಿ ದೈವಕ್ಕೆ , ‘ ದೊಂಪದ  ಬಲಿ’  ಆದ ಮೇಲೆ ಜಾತ್ರೆ ಸಮಾಪ್ತಿಗೊಳ್ಳುತ್ತದೆ. ಹೀಗೆ ನಮ್ಮೂರಿನ ಎರಡು ವಿಶೇಷ ಜಾತ್ರೆಗಳ  ಚಾರಿತ್ರಿಕ ಹಿನ್ನೆಲೆ ‘ ಚೆಂಬು ಐದೂರು ಗ್ರಾಮದ ಸಾಂಸ್ಕೃತಿಕ ಅಧ್ಯಯನ’  ಎಂಬ ಸಂಶೋಧನಾ ಪ್ರಬಂಧದಲ್ಲಿ ವಿವರವಾಗಿ ಸಿಗುತ್ತದೆ.


               ಇಂತಹ ಸಾಂಸ್ಕೃತಿಕ ಹಿನ್ನೆಲೆಯ ಪ್ರತಿ ಊರಿನ ಜಾತ್ರೆಗಳು ಬೇಸಿಗೆಯ ಕಳೆಯನ್ನು ಇನ್ನು ಹೆಚ್ಚು ಮಾಡುತ್ತವೆ. ಬೇಸಿಗೆಗೆ ಇನ್ನು ಮಾನಸಿಕ ತಂಪು ನೀಡುತ್ತದೆ ಎಂದರು ಅತಿಶಯೋಕ್ತಿ ಅಲ್ಲ . ಇಂತಹ ನಂಬಿಕೆಗಳು ನಮ್ಮನ್ನು ನಿಡುಗಾಲ ಕಾಯುತ್ತದೆ ಎಂಬುದರಲ್ಲಿ ಅರ್ಥವಿದೆ. ಎಂತಹ
ರಣ ಬಿಸಿಲಿದ್ದರು ಯಾರು ಯಾವ ಜಾತ್ರೆಯನ್ನು ತಪ್ಪಿಸದಂತಹ ಮನಸ್ಸು ನಮ್ಮದು. ಈ ಜಾತ್ರೆಯ ಪದ್ಧತಿಗಳು ಹಗಲಿನೊಂದಿಗೆ ರಾತ್ರಿಯೂ ಬೆಸೆದುಕೊಂಡಿದೆ   ಎನ್ನುವುದು ವಿಶೇಷ. ಜಾತ್ರೆಗೆ ಮಕ್ಕಳು ಮತ್ತು ಮಹಿಳೆಯರು ಸ್ಪಂದಿಸುವ ರೀತಿಯೇ ಇದಕ್ಕೊಂದು ಮೆರಗು . ಮಕ್ಕಳಂತೂ ಮುಂಜಾನೆಯೇ ಹೊಸ ಅಂಗಿ ಹಾಕಿ ಹೊರಟು  ಬಿಡುತ್ತಾರೆ. ಆ ದಿನ ಅವರ ಕೈಯಲ್ಲಿ ದುಡ್ಡು ಕಾಸು ಇರಲೇಬೇಕು . ದೊಡ್ಡವರು ಸ್ವಲ್ಪವಾದರು ಕೊಡದೆ ಇರುವುದಿಲ್ಲ. ಬೆವರು ಸುರಿಸುತ್ತಾ  ಅಲ್ಲಿರುವ ಶರಬತ್ತು ಕುಡಿದು, ಕಲ್ಲಂಗಡಿ ಮೆಲ್ಲುತ್ತಾರೆ.
ಗೋಳಿಬಜೆ, ನೀರುಳ್ಳಿ ಬಜೆ, ಗೋಬಿ ಅಂತ ಕಂಡದನ್ನು  ತಿನ್ನುತ್ತಾರೆ. ಅವರಿಗೆ ಬಿಸಿ ಕಾಲದ ಯಾವ ಉರಿ ಇರುವುದಿಲ್ಲ. ಧೂಳಂತು  ಲೆಕ್ಕಕ್ಕೆ ಇಲ್ಲ . ಹೆಂಗಳೆಯರು ಅಷ್ಟೇ ಎಂದಾದರೊಮ್ಮೆ ಜಾತ್ರೆಯಲ್ಲಿ ಸಿಗುವಾಗ ಕಷ್ಟ ಸುಖ ಮಾತನಾಡುತ್ತ ಹೊಸತನ ಕಾಣಲು ಬಯಸುತ್ತಾರೆ. ದೈವದೊಂದಿಗೆ ಬೇಕಾದನ್ನು ಬೇಡಿಕೊಳ್ಳುತ್ತಾರೆ. ಬಳೆ
ತಿಂಡಿ, ಬಿಂದಿ ಎಂದೆಲ್ಲ ತೆಗೆದುಕೊಳ್ಳುತ್ತಾ ಸಂಭ್ರಮಿಸುತ್ತಾರೆ. ಬೇಕಾದ ಬಣ್ಣದ , ವಿವಿಧ ರೀತಿಯ ಬಟ್ಟೆ ಧರಿಸುವ ಸಂಪೂರ್ಣ ಅವಕಾಶ ಜಾತ್ರೆಗೆ ಇದೆ. ಇಲ್ಲಿ ಯಾರೂ ನಮ್ಮನ್ನು ಪ್ರಶ್ನಿಸುವುದಿಲ್ಲ. ಶಾಲೆಗೆ ಹೋಗುವಾಗ ಒಂದು ದಿನ ಸಮವಸ್ತ್ರ ತಪ್ಪಿಸಿದರೆ ‘ ನೀನೆಲ್ಲಿಗೆ ಜಾತ್ರೆಗೆ ಹೊರಟದ್ದಾ ‘ ಅಂತ ಗುರುಗಳು ಕೇಳುತ್ತಾರೆ. ಜಾಸ್ತಿ ಬಣ್ಣ ಬಣ್ಣದ ಬಟ್ಟೆ ಧರಿಸಿದರೆ ಜಾತ್ರೆ ಎಂದು ಬಿಡುತ್ತಾರೆ.  ಯಾಕೆಂದರೆ ಈ ಬೀರು ಬಿಸಿಲಿನ ಜಾತ್ರೆಯಲ್ಲಿ ಬಿಸಿಲಿನ ಬಣ್ಣವು ಸೇರಿ ಬಲೂನು , ಬಂಟಿಂಗ್ಸ್, ಲೈಟಿಂಗ್ಸ್, ಆಟಿಕೆ, ಪಾನೀಯ ಇತ್ಯಾದಿಗಳಿಂದಾಗಿ ಒಂದು ಜಾತ್ರೆಯಲ್ಲಿ ನೂರಾರು ಬಣ್ಣವಿರುತ್ತದೆ. ಆದುದರಿಂದ ಈ ಬಿರು ಬಿಸಿಲಿನ ಜಾತ್ರೆ ಅಪಾರ ಬಣ್ಣದಿಂದ ಸಮ್ಮಿಶ್ರ ಗೊಂಡ ಕೌದಿಯಂತೆ ಕೂಡಿರುತ್ತದೆ ಎಂಬುದು ಸತ್ಯ.
             ಹೀಗೆ ಬೇಸಿಗೆಯನ್ನು ಮುಕ್ತವಾಗಿ ಅನುಭವಿಸುವ ನಾವುಗಳು , ಅಯ್ಯೋ  ಧೂಳು,  ಬಿಸಿಲು , ನೀರಿಲ್ಲ  ಎಂಬುದಾಗಿ ಕಿರಿ ಕಿರಿ ಹೇಳುತ್ತಾ ಋತುವಿಗು ಆರೋಪ ಮಾಡುವ ಸಣ್ಣತನವನ್ನು ನಾವ್ಯಾರೂ ತೋರಿಸುವುದು ಬೇಡ ಅಲ್ಲವೇ? ಋತುಗಳು ಇಷ್ಟೆಲ್ಲಾ ಕೊಡುವಾಗ ನಾವು ಪ್ರಕೃತಿಗೆ ಪ್ರೀತಿಯಿಂದ ಧನ್ಯವಾದ ಹೇಳೋಣ . ಬಿರು ಬಿಸಿಲಿನ ವೈಶಾಖದಲ್ಲಿ ನಡೆಯುವ ಈ ಜಾತ್ರೆಗಳು ಋತುವಿಗೊಂದು ಮೆರುಗು. ಆಯಾ ಕಾಲದ , ಆಯಾ ಸಂಗತಿಗಳನ್ನು ಸಂಭ್ರಮಿಸುವುದೆ ನಮ್ಮ ಕೆಲಸವಾಗಬೇಕು . ಇದು ಪ್ರಕೃತಿಗೆ ನಮ್ಮ ಕೊಡುಗೆ.


Leave a Reply

Back To Top