ಸುಕುಮಾರ ಅವರ ಗಜಲ್

ಬನ್ನಿರಯ್ಯ ಕನ್ನಡ ಕಣ್ಮಣಿಗಳೇ ಮತದಾನ ಮಾಡುವ ಬನ್ನಿ
ಉಜ್ವಲ ಭವಿಷ್ಯದ ಆಕಾಂಕ್ಷಿಗಳೇ ಮತದಾನ ಮಾಡುವ ಬನ್ನಿ

ನಾಯಕನ ಆಯ್ಕೆ ಮಾಡುವುದು ಎಮ್ಮಗಳ ಕರ್ತವ್ಯ ಅರಿವಿರಲಿ
ಸಂಸ್ಕಾರ ಸಂಸ್ಕೃತಿಯ ರೂವಾರಿಗಳೇ ಮತದಾನ ಮಾಡುವ ಬನ್ನಿ

ಉತ್ತಮ ನಿರ್ಣಯವಿದ್ದು ಸುಮ ಅರಳಲಿ ನಮ್ಮ ವಿವೇಕದಿ
ತಮವ ಸರಿಸುವ ಕಂದೀಲುಗಳೇ ಮತದಾನ ಮಾಡುವ ಬನ್ನಿ

ಎಡ ಬೆರಳಿನ ಶಾಯಿಯ ಪಸೆ ಮೂಡಿಸಲಿ ಶುಕ್ರದೆಸೆ
ಪ್ರಜಾತಂತ್ರ ಪಾಲಿಸುವ ಕಲಿಗಳೇ ಮತದಾನ ಮಾಡುವ ಬನ್ನಿ

ಯಂತ್ರ ಯಂತ್ರಗಳ ನಡುವೆ ತಂತಿ ಮತಿಗಳು ಬೆಸೆದಿವೆ
ತಂತ್ರ ಪ್ರಶ್ನಿಸುವ ಮನಗಳೇ ಮತದಾನ ಮಾಡುವ ಬನ್ನಿ

ಪ್ರಜಾರಾಜರೇ ನವ ಸಮಾಜದ ಕರ್ತೃಗಳು ನೆನಪಿರಲಿ ಎಂದೂ
ಹೊಗಳಿ ದೂಷಿಸುವವರು ನಾವುಗಳೇ ಮತದಾನ ಮಾಡುವ ಬನ್ನಿ

ಜನ ಜಾಗೃತಿ ಪ್ರಣತಿ ಬೆಳಗಲಿ ತಿಮಿರ ಜರಿಯಲು
ಭೂತ ಭವಿಷ್ಯದ ಕೊಂಡಿಗಳೇ ಮತದಾನ ಮಾಡುವ ಬನ್ನಿ


Leave a Reply

Back To Top