ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
(ಗೈರ್ ಮುಸಲ್ ಸಿಲ್ )
ಅಂದು ನಿನ್ನ ನೋಡುತ್ತ ನೋಡುತ್ತಲೇ ಉಳಿದೆ
ಮಾತಿಲ್ಲದೆ ಎಲ್ಲವನು ನುಡಿಯುತ್ತಲೇ ಉಳಿದೆ
ಮಿಥ್ಯವೆ ಬಲವೀಗ ಅನುಗಾಲ ಪ್ರಿಯವಾಗಿದೆ
ನಾನೋ ಬದ್ಧತೆಯ ಸತ್ಯ ಹೇಳುತ್ತಲೇ ಉಳಿದೆ
ಬೆನ್ನ ಹಿಂದೆ ಎಲ್ಲಿದೆ ಬಲ ಎಲ್ಲವೂ ಖಾಲಿ ಖಾಲಿ
ಮುಂದೆ ದಾರಿ ಕಾಣದೆ ತಡವರಿಸುತ್ತಲೇ ಉಳಿದೆ
ತುಟಿಯತನಕ ಬಂದ ನಿಲುವು ನಿಲ್ಲುವುದೇಕೋ
ಗೋಚರವಾದ ಹೆಸರನು ಉಸಿರುತ್ತಲೇ ಉಳಿದೆ
ಕಂಡೂ ಕಾಣದವನ ಶೋಧಿಸುತ್ತಿರುವೆ ಈಗಲೂ
ಮುಗಿಯದ ದಾರಿಯಲಿ ನಡೆಯುತ್ತಲೇ ಉಳಿದೆ
ದೇಹಾಭಿಮಾನ ಅಳಿದಮೇಲೆ ಲಜ್ಜೆ ಎಲ್ಲಿದೆ ಅನು
ಆತ್ಮಕ್ಕಾವ ಲಿಂಗ ನಾ ನಾನಲ್ಲ ತಿಳಿಸುತ್ತಲೇ ಉಳಿದೆ
ಅನಸೂಯ ಜಹಗೀರದಾರ