ನಂರುಶಿ ಕಡೂರು ಅವರ ಕೃತಿ’ಕುರುಡು ಕಂದೀಲು,(ಗಜಲ್ ಸಂಕಲನ) ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ

ನಂರುಶಿ ಕಡೂರು(ಶಿವಪ್ರಕಾಶ ರು ಕುಂಬಾರ) ಇವರು ಡಿಪ್ಲೋಮಾ ಮಾಡಿ ಪ್ರಸ್ತುತ ಬೆಂಗಳೂರು ಮೆಟ್ರೋ ರೈಲ್ವೆಯಲ್ಲಿ ಕಿರಿಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದು ಈಗಾಗಲೇ ಕವನ, ಗಜಲ್,  ಖಸಿದಾ, ಕಾದಂಬರಿ, ಕಥೆ ಹೀಗೆ  ವಿವಿಧ ಸಾಹಿತ್ಯ ಪ್ರಕಾರದ  ಆರು ಕೃತಿಗಳನ್ನು ಪ್ರಕಟಿಸಿದಲ್ಲದೆ ಸಂಪಾದಿಕೀಯ ಕಾರ್ಯವನ್ನು ಮಾಡಿದ್ದಾರೆ. ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಗಳಿಸಿದ್ದು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗ ಅವರು ತಮ್ಮ ಏಳನೇ ಕೃತಿಯಾದ ಕುರುಡು ಕಂದೀಲು ಗಜಲ್ ಸಂಕಲನವನ್ನು ಪ್ರಕಟಿಸಿ ಓದುಗರ ಕೈಯಲ್ಲಿ ಇಟ್ಟಿದ್ದಾರೆ .

ಗಜಲ್ ಉರ್ದು ಸಾಹಿತ್ಯದಲ್ಲಿ ಎಲ್ಲರ ಮನಸೆಳೆದ ಸುಂದರವಾದ ಶೃಂಗಾರ ಕಾವ್ಯವಾಗಿದೆ. ಉರ್ದು ಸಾಹಿತ್ಯದ ರಾಜಕುಮಾರಿಯಾದ ಗಜಲನ್ನು ಕನ್ನಡದ ರಸಿಕ ಕವಿಗಳು ಕನ್ನಡ ಸಾಹಿತ್ಯಕ್ಕೆ ಸೊಸೆಯಾಗಿ ಬರಮಾಡಿಕೊಂಡಿದ್ದಾರೆ. ಮನೆಗೆ ಬಂದ ಸೊಸೆ ಎಲ್ಲರ ಮನ ಗೆಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ಕನ್ನಡ ಗಜಲ್ ಸಾಹಿತ್ಯ ಬೆಳೆಯಲು  ಕೆಲವು ಕಾಲ ತೆಗೆದುಕೊಂಡು ಈಗ ಈ ಮನೆಯ ಸೊಸೆಯಾಗಿ ಎಲ್ಲರ ಮನ ಗೆದ್ದಿದ್ದಾಳೆ, ಎಂದು ನಮ್ಮ ನಂರುಶಿ  ಅವರು ಹೇಳುತ್ತಾರೆ. ಇಂದು ಅನೇಕ ಕನ್ನಡದ ರಸಿಕ ಕವಿಗಳು ಕನ್ನಡ ಗಜಲ್ ಗಳನ್ನು ಹೇರಳವಾಗಿ ರಚಿಸುತ್ತಿದ್ದಾರೆ ..

ಗಜಲ್ ಸಾಹಿತ್ಯ ಶೃಂಗಾರದೊಂದಿಗೆ ಮನ ಸೆಳೆಯುವ ಸರಸದ ಪಿಸುಮಾತುಗಳನ್ನು ಆಡುವ ಹೃದಯ ಗೆಲ್ಲುವ ಸಾಹಿತ್ಯ.  ಪ್ರೀತಿ, ವಿರಹಗಳೆ ಮೀಸಲಾಗಿದ್ದ ಈ ಸಾಹಿತ್ಯ ಇಂದು ಸಮಾಜಮುಖಿಯಾಗಿ ಮಹಿಳಾ ಸಂವೇದನೆ ಶೋಷಣೆ ಸಮಾಜದಲ್ಲಿ ಇದ್ದ ದಳ್ಳುರಿಯನ್ನು ಎತ್ತಿ ತೋರಿಸುವ ಜೊತೆಗೆ ಕೇವಲ ನೊಂದವರಿಗೆ ಸಾಂತ್ವನ  ಹೇಳುವುದಲ್ಲದೆ ದೃಢ ಧ್ವನಿಯಿಂದ ಅವುಗಳನ್ನು ಖಂಡಿಸುವ ಸಾಹಿತ್ಯವಾಗಿದೆ. ಗಜಲ್ ಗೆ ತನ್ನದೇ ಆದ  ಛಂಧೋವೈಶಿಷ್ಟವಿದ್ದು ಗಜಲ್ಕಾರರು ಅದನ್ನು ಅರ್ಥ ಮಾಡಿಕೊಂಡು ಛಂದೋಬದ್ಧವಾಗಿ ಗಜಲ್ ಗಳನ್ನು ರಚಿಸಿದರೆ ಓದುಗರ ಮನ ಗೆಲ್ಲುತ್ತದೆ. ಅಂತಹ ಗಜಲ್ ಗಳು ಜನರ ಮನದಲ್ಲಿ ನಿಲ್ಲುತ್ತವೆ. ಇವೆಲ್ಲವನ್ನು ಅರಿತು ನಂರುಶಿ ಅವರು ಗಜಲ್ ಗಳನ್ನು ರಚನೆ ಮಾಡಿದ್ದಾರೆ.

ನಂರುಶಿ ಯವರ ಮೂರನೇ ಗಜಲ್ ಸಂಕಲನವಾದ ಕುರುಡು ಕಂದೀಲು ಶೀರ್ಷಿಕೆ ವಿಶಿಷ್ಟ ಅರ್ಥ ನೀಡುವ ಹೆಸರಾಗಿದೆ. ಕಂದೀಲು ಎಷ್ಟೇ ಕುರುಡಾಗಿದ್ದರೂ ಎಷ್ಟೇ ಗಾಳಿ ಬೀಸಿದರೂ  ಬೆಳಕು ನೀಡಿ ದಾರಿ ತೋರಿಸುತ್ತದೆ. ಅದರಂತೆ ನೊಂದ ಬೆಂದ ಹೃದಯಗಳಿಗೆ ಗಜಲ್ ಸಾಂತ್ವನ ಹೇಳುತ್ತವೆ. ಕುರುಡ ಕಂದೀಲು ಗಜಲ್ ಸಂಕಲನದಲ್ಲಿ ಒಟ್ಟು  54  ಗಜಲ್ ಗಳನ್ನು ಛಂದೋಬದ್ಧವಾಗಿ ರಚಿಸಿದ್ದಾರೆ. ಈ ಸಂಕಲನದಲ್ಲಿ ಮುರದ್ಧಪ್ ಗಜಲ್, ಗೈರ್ ಮುರದ್ಧಪ್ ಗಜಲ್, ಮುಸಲ್ ಸಲ್ ಗಜಲ್, ಗೈರ್ ಮುಸಲ್ ಸಲ್ ಗಜಲ್, ಹೀಗೆ ನಾಲ್ಕು ಪ್ರಕಾರದ ಗಜಲ್ ಗಳನ್ನು ನಾವು ಓದುತ್ತೇವೆ. ಇಲ್ಲಿಯ ಎಲ್ಲಾ ಗಜಲ್ ಗಳನ್ನು ಮಾತ್ರಾಗಣದ ಲೆಕ್ಕಾಚಾರದಿಂದ ರಚಿತವಾಗಿದ್ದು ೧೩ ಮಾತ್ರೆಗಳ ಛೋಟಿ ಬೆಹರ್ ದಿಂದ ೩೦ ಮಾತ್ರೆಗಳ ಬಡಿ ಬೆಹರ್ ಗಜಲ್ ಗಳಲ್ಲದೆ ಸೆಹ್  ಗಜಲ್ ಎಂಬ ದೀಘಾ೯ ಗಜಲ್ ನ್ನು ನಾವು ಕಾಣುತ್ತೇವೆ. ಗಜಲ್  ಗಳಲ್ಲಿ ತಖಲ್ಲುಸ ನಾಮ ನಂರುಶಿ ಎಂದು ಬಳಿಸಿದ್ದಾರೆ.

       ನಂರುಶಿಯವರ ಕುರುಡು ಕಂದಿಲು ಗಜಲ್ ಸಂಕಲನಕ್ಕೆ ಹಿರಿಯ ಸಾಹಿತಿಗಳು ವಿಮರ್ಶಕರಾದ ಡಾ. ವೈ ಎಂ ಯಾಕೊಳ್ಳಿ ಸವದತ್ತಿ ಗುರುಗಳು ಉತ್ತಮವಾದ ವಿಮರ್ಶೆಯೊಂದಿಗೆ ಸಂಕಲನಕ್ಕೆ ವಿವರವಾದ ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಇನ್ನೊಬ್ಬ ಹಿರಿಯ ಸಾಹಿತಿಗಳಾದ ಐ ಕೆ ಕಮ್ಮಾರ್ ಗದಗ ಅವರು ತುಲನಾತ್ಮಕವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ಮತ್ತೊಬ್ಬ ಹಿರಿಯ ಸಾಹಿತಿ ಹಾಗೂ ವಿಮರ್ಶಕರಾದ ಅಬ್ದುಲ್ ಹೈ ತೋರಣಗಲ್ಲು ಬಳ್ಳಾರಿ ಇವರು ಕೃತಿ ಪ್ರಕಟಣೆ ಮುಂಚೆ ಗಜಲ್ ಗಳನ್ನು ಓದಿ ವಿಮರ್ಶನಾತ್ಮಕವಾದ ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಬರೆದು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಕಲಾಕಾರರಾದ ರಾಘವಾಂಕುರ ಅವರು ಸಂಕಲನಕ್ಕೆ ಅಂದವಾದ ಅರ್ಥಪೂರ್ಣವಾದ ಮುಖ ಚಿತ್ರವನ್ನು ಚಿತ್ರಿಸಿ ಕೃತಿಯ ಅಂದವನ್ನು ಹೆಚ್ಚಿಸಿದ್ದಾರೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ನಂರುಶಿ ಅವರು ತಮ್ಮ ಕುಲ ಕಾಯಕವನ್ನು ಮಾಡುವ ಕುಲ ಬಾಂಧವರಿಗೆ ಕೃತಿಯನ್ನು ಅರ್ಪಿಸಿ  ಋಣ ಮುಕ್ತರಾಗಿದ್ದಾರೆ. ಹಾಗೂ ರಂಗಕರ್ಮಿಗಳಾದ ರಾಧಾಕೃಷ್ಣ ಪಲ್ಲಕ್ಕಿ ಅವರಿಗೂ ಕೃತಿಯನ್ನು ಅರ್ಪಿಸಿದ್ದಾರೆ.

ಮನಸು ಮುದುಡಿದಾಗ ಮುಖವನೋಡಿ ಏನು ಹೇಳಲಾರೆ
ಹಸಿದಿರುವ ಹೊಟ್ಟೆಗೆ ಬಿಸಿಯ ಅನ್ನ ನೀಡಿ ನೋಡಬೇಕು        ( ಗಜಲ್ ೧)

ಬಡತನದಿಂದ ಹಸಿವಿನಿಂದ ಮನುಜನ ಮುಖ ಬಾಡಿರುತ್ತದೆ ಅಂತಹ ಮುಖಗಳನ್ನು ನೋಡಿ ಏನೂ ಹೇಳಲಾಗುವುದಿಲ್ಲವೆಂದು ಗಜಲ್ ಕಾರರು ಮತ್ಲಾದಲ್ಲಿ ಹೇಳಿದ್ದಾರೆ ಎಲ್ಲಾ ದಾನಕ್ಕಿಂತ ಅನ್ನ ದಾನ ಶ್ರೇಷ್ಠವೆಂದು ಹಿರಿಯರು ಹೇಳಿದ್ದಾರೆ. ಹಸಿವು ಎಂಬುದು ಸಮಾಜದಲ್ಲಿ ಇರುವ ಬಡತನವನ್ನು ತೋರಿಸುವ ಒಂದು ದೊಡ್ಡ ರೋಗ. ಹಸಿದವನ ಮುಂದೆ ಒಂದು ಕೊಪ್ಪರಿಗೆ ಹೊನ್ನು ಇಟ್ಟರೆ ಮುಖ ಅರಳುವುದಿಲ್ಲ. ಅವನ ಮುಂದೆ ಒಂದುಮುಷ್ಟಿ ಬಿಸಿ ಅನ್ನ ಇಟ್ಟರೆ ಅವನ ಮುಖ ಸಂತೋಷದಿಂದ ಅರಳುತ್ತದೆ. ಆ ಮುಖ ನೋಡಿದವರಿಗೆ ಮನದಲ್ಲಿ ಸಂತಸ ಮೂಡುತ್ತದೆ. ಈ ಸತ್ಯ ವನ್ನು ಗಜಲ್ ಕಾರರು ಗಜಲ್ ದಲ್ಲಿ ರೂಪಕಗಳೊಂದಿಗೆ ಸೊಗಸಾಗಿ ವಿವರಿಸಿದ್ದಾರೆ.

ಸಾವಿರ ಕನಸುಗಳನು ತೆಗೆದು ಎಸೆಯುವವನು ನಾನಾಗಲಾರೆ
ಕಾಮನ ರಂಗಿನಲಿ ನೆತ್ತರ ಎರಚುವವನು ನಾನಾಗಲಾರೆ       ( ಗಜಲ್೭)

ಮೇಲಿನ ಮತ್ಲಾದಲ್ಲಿ ಬಳಿಸಿದ ರದೀಪ್ ನಾನಾಗಲಾರೆ ಎಂಬುದು ಒಂದು ವಿಶಿಷ್ಟವಾದ ಅರ್ಥವನ್ನು ಕೊಡುತ್ತದೆ. ಎಲ್ಲರೂ ಮಾಡುವಂತೆ ಶೋಷಣೆ ಮೋಸಗಳನ್ನು ಮಾಡಿ ಹೆಣ್ಣಿನ ಮನ  ನೋವಿಸುವವರೇ ಈಗ ಬಹಳ ಇದ್ದಾರೆ. ಅಂತ ವ್ಯಕ್ತಿ ನಾನಾಗಲಾರೆ ಎಂದು ಗಜಲ್ ಕಾರರು ಸಾರಿ ಸಾರಿ ಹೇಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಸಾವಿರಾರು ಕನಸುಗಳು ಇರುತ್ತವೆ. ಅವನು ಕಟ್ಟಿದ ಕನಸುಗಳನ್ನು ಬೇರೆಯವರು ಅಳಿಸಲು ಪ್ರಯತ್ನಿಸುತ್ತಾರೆ ಆದರೆ ಗಜಲ್ ಕಾರರು ಅಂತಹ ವ್ಯಕ್ತಿ ನಾನಾಗಲಾರೆ ಎಂದು ವಿವರಿಸಿದ್ದಾರೆ. ಸಮಾಜದಲ್ಲಿ ನಡೆಯುವ ಶೋಷಣೆ ಬಗ್ಗೆ ರೂಪಕಗಳೊಂದಿಗೆ ಸೊಗಸಾಗಿ ರಚಿಸಿದ್ದಾರೆ. ಮತ್ತು ಪ್ರತಿಭಟನಾ ದನಿಯನ್ನು ಇಲ್ಲಿ ಎತ್ತಿದ್ದಾರೆ .

ಒಂದೇ ಒಂದು ಮಾತು ಸಾಕು ಜೀವ ಉಳಿಯಲು
ಒಂದೇ ಒಂದು ಭೇಟಿ ಸಾಕು ಹಸಿರು ಚಿಗುರಲು          (ಗಜಲ್ ೧೩)

ಎರಡು ಜೀವಿಗಳು ಪ್ರೀತಿಯಲ್ಲಿ ಬೆಸೆದಾಗ ಅವರಿಗೆ ಜಗದ ಯಾವ ಜಂಜಾಟವು ಬೇಕಾಗುವುದಿಲ್ಲ ನೆಮ್ಮದಿಯಾಗಿ ಬದುಕು ಸಾಧಿಸಲು ಪ್ರೀತಿಯ ಒಂದು ಮಾತು ಸಾಕು. ಜೀವನ ಸಂತಸದಲ್ಲಿ ಅರಳುತ್ತದೆ, ಎದೆಯಲಿ ಹಸಿರು ಚಿಗುರಲು ನೋಟ ಒಂದೇ ಸಾಕು  ಎಂದು ಪ್ರತಿಮೆಗಳೊಂದಿಗೆ ಹೇಳಿದ್ದಾರೆ. ಪ್ರೀತಿ  ಜಗವನ್ನು ಆಳುತ್ತದೆ, ದ್ವೇಷವನ್ನು ಅಳಿಸುತ್ತದೆ ಪ್ರೀತಿಯಿಂದಲೇ ಬದುಕು ಎಂದು ಹೇಳುತ್ತಾರೆ ಗಜಲ್ ಕಾರರು. ಜಿಎಸ್ ಶಿವರುದ್ರಪ್ಪ ರವರು ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ  ಎಂದು ಹೇಳಿದಂತೆ ಎಲ್ಲದಕ್ಕೂ ಪ್ರೀತಿಯೇ  ಮುಖ್ಯವೆಂದು ಹೇಳುತ್ತಾರೆ. ಪ್ರೀತಿಯ ಒಂದು ನೋಟ ಪ್ರೀತಿಯ ಒಂದು ನಗೆ ಬಾಳ ಕತ್ತಲೆಗೆ ಬೆಳಕು ಮೂಡಿಸುತ್ತದೆ ಬದುಕು ಹಸನಾಗುತ್ತದೆಂದು  ತಿಳಿದಿದ್ದಾರೆ.

ಮನುಜನ ಆಸೆಗೆ ಕಲ್ಲು ಮೃದಂಗ ಬಡಿಯುತಿದೆ ಕೇಳಿಸಿಕೋ
ಹಿರಿಯರು ನುಡಿದಂತೆ ಚರ್ಮ ಘಂಟೆ ನುಡಿಯುತಿದೆ ಕೇಳಿಸಿಕೋ      (ಗಜಲ್೨೨)

ಇಂದು ವಿಶ್ವದ ಮಾನವ ಜೀವಿಯು ಜಾಗತೀಕರಣ ಪ್ರಗತಿಯನ್ನು ಹೇಳುತ್ತಾ ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತಿದ್ದಾರೆ. ಪ್ರಕೃತಿಯಲ್ಲಿ ಸೃಷ್ಟಿ ಆಗಲಾರದನ್ನು ತಾನು ಸೃಷ್ಟಿಸುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾನೆ. ಕಲ್ಲು ಮೃದಂಗವನ್ನು ಬಡಿಯುತ್ತಾ ಅದರಿಂದ ದನಿ ಬರುತ್ತದೆಂಬ ಭ್ರಮೆಯಲ್ಲಿದ್ದಾನೆ. ಚರ್ಮದ ಗಂಟೆಯಿಂದ ನಾದ ಬರುತ್ತದೆಂಬ ಭ್ರಮೆಯಲ್ಲಿದ್ದಾನೆ. ಇವನ ಅತಿಯಾದ ಆಸೆಯಿಂದ ಪ್ರಕೃತಿ ವಿಕೋಪದಿಂದ ಜಗವು ವಿನಾಶವಾಗುತ್ತಿದೆಂದು ಗಜಲ್ ಕಾರರು ತಮ್ಮ ಗಜಲ್ ದಲ್ಲಿ ವಿವರಿಸಿದ್ದಾರೆ.

ಗುಟುಕು ಕೊಟ್ಟು ತುತ್ತನಿಟ್ಟು ಬೆಳೆಸಿದ ತಾಯಿಯೇ
ಕಾಲನಿಟ್ಟು ರೆಕ್ಕೆಕೊಟ್ಟು ನಡೆಸಿದ ತಾಯಿಯೇ     ( ಗಜಲ್ ೪೬)

ಈ ಗಜಲ್ ದಲ್ಲಿ ಗಜಲ್ ಕಾರರು ತಮ್ಮ ಹೆತ್ತ ತಾಯಿಯ ಮಹತ್ವ ಮತ್ತು ತಾಯಿ ಮಗುವನ್ನು ಯಾವ ರೀತಿಯಾಗಿ ಬೆಳೆಸುತ್ತಾಳೆಂದು ವಿವರಿಸುತ್ತಾ ಹೋಗುತ್ತಾರೆ. ಪ್ರೀತಿಯಿಂದ ತುತ್ತನಿಟ್ಟು ಬೆಳೆಸಿದೆ, ಕೈ ಹಿಡಿದು ನಡೆಯಲು ಕಲಿಸಿದೆ, ವಿದ್ಯೆ ಬುದ್ಧಿ ಕಲಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುವಂತೆ ಮಾಡಿದೆ, ನಿನ್ನ ಪ್ರೀತಿಯ ಭದ್ರಕೋಟೆ ನನಗೆ ಸದಾ ಶ್ರೀರಕ್ಷೆ ನೀಡುತ್ತದೆ. ಜೀವನಕ್ಕೆ ಸಂಜೀವಿನಿಯನ್ನು ತುಂಬಿದ ತಾಯೇ ನಿನ್ನ ಋಣ ಎಂದೂ ತೀರಿಸಲಾಗದೆಂದು ಗಜಲ್ ಕಾರರು ತಾಯಿಯ ಪ್ರೀತಿ ಮತ್ತು ರಕ್ಷಣೆ ಋಣದ ಬಗ್ಗೆ ರೂಪಕಗಳೊಂದಿಗೆ ಸುಂದರವಾಗಿ ಗಜಲ್ ದಲ್ಲಿ ಬಿತ್ತರಿಸಿದ್ದಾರೆ.

ಅಂಗೈಲಿರುವ ರೇಖೆಗಳಲ್ಲಿ ಏನೂ ಅಡಗಿಲ್ಲ
ಹಣೆಯ ಮೇಲಿನ ಖಾಲಿ ಜಾಗದಿ ಏನೂ ಬರೆದಿಲ್ಲ  ( ಗಜಲ್೪೯)

ಈ ಗಜಲ್ ದಲ್ಲಿ ಗಜಲ್ ಕಾರರು ಮೂಢನಂಬಿಕೆಗಳ ವಿರುದ್ಧ ಸಮರಸಾರಿದ್ದಾರೆ. ಕೇವಲ ಹಣೆಬರಹ ದೈವವೆಂದು ಕೆಲಸ ಮಾಡದೆ ಕೂಡುವುದು ತಪ್ಪು ನಮ್ಮ ಕೈ ರೇಖೆಯಲ್ಲಿ ಹಣೆಯಲ್ಲಿ ಏನು ಬರೆದಿರುವದಿಲ್ಲ ಈ ಮೂಢನಂಬಿಕೆಗಳನ್ನು ಬಿಟ್ಟು ಪರಿಶ್ರಮದಿಂದ ನಮ್ಮ ಬದುಕು ಕಟ್ಟಿ ಕೊಳ್ಳಬೇಕೆಂದು  ರೂಪಕಗಳೊಂದಿಗೆ ಗಜಲ್ ದಲ್ಲಿ ವಿವರಿಸಿದ್ದಾರೆ.

ನಂರುಶಿ  ಕಡೂರು  ಅವರ ಕುರುಡು ಕಂದೀಲು ಗಜಲ್ ಸಂಕಲನದಲ್ಲಿ ಇರುವ ಎಲ್ಲ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ ಮತ್ತು ಕೆಲವು ಗಜಲ್ ಗಳು ಚಿಂತನೆಗೆ ಹಚ್ಚುತ್ತವೆ. ಗಜಲ್ ದ ಸ್ಥಾಯಿ ಗುಣವಾದ ಪ್ರೀತಿಯ ಗುಂಗಿನಲ್ಲಿ ತೇಲಿಸದೆ ಬದುಕಿನ ವಿವಿಧ ಆಯಾಮಗಳ ಬಗ್ಗೆ ಚಿಂತನೆಗೆ ಹಚ್ಚುವಂತಹ ಗಜಲ್ ಗಳು ಈ ಸಂಕಲನದಲ್ಲಿವೆ. ಜಗತ್ತಿನ ವಾಸ್ತವಿಕ ಹಾಗೂ ಆಗು ಹೋಗುಗಳ ಬಗ್ಗೆ ವಿವರಿಸುವ ಗಜಲ್ ಗಳು ಇವೆ. ನಂರುಶಿ  ಅವರಿಂದ ಇನ್ನು ಉತ್ತಮವಾದ  ಗಜಲ್ ಗಳು ರಚಿಸಬಲ್ಲರೆಂಬ ಭರವಸೆಯನ್ನು  ಈ ಸಂಕಲನ ಕೊಡುತ್ತದೆ. ಇವರಿಂದ ಇನ್ನೂ ಅನೇಕ  ಉತ್ತಮವಾದ ಗಜಲ್  ಸಂಕಲಗಳು ಪ್ರಕಟವಾಗಲೆಂದು ಶುಭ ಹಾರೈಸುತ್ತ ನನ್ನ ಬರಹಕ್ಕೆ ವಿರಾಮ ಕೊಡುವೆ.


One thought on “ನಂರುಶಿ ಕಡೂರು ಅವರ ಕೃತಿ’ಕುರುಡು ಕಂದೀಲು,(ಗಜಲ್ ಸಂಕಲನ) ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ

  1. ಸಮರ್ಪಕವಾದ ವಿಮರ್ಶೆ. ಅಭಿನಂದನೆಗಳು ಅಕ್ಕ
    ಹಮೀದಾ ಬೇಗಂ ದೇಸಾಯಿ ಸಂಕೇಶ್ವರ

Leave a Reply

Back To Top