ಮರಗಳ ದೈವಾರಾಧನೆಯ ಮಜಲುಗಳು…ವಿಶೇಷ ಲೇಖನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಹುಷ್….!! ಅಬ್ಬಾ ಎಂತಹ ರಣ ಬಿಸಿಲು. ಅಯ್ಯೋ ಯಾವಾಗ ಭೂಮ್ತಾಯಿ ತಂಪಾಗುವಳೋ….?

“ತಂಪಾದ ಗಾಳಿ ಬೀಸಲಿ…”

ಈ ಮಾತುಗಳೇ ಹೇಳುತ್ತವೆ.  ಮಾನವ ಮೂಲತಃ ಪ್ರಕೃತಿ ಆರಾಧಕ. ಅವನು ನಿಸರ್ಗಜೀವಿ. ಆತನ ಬದುಕಿನ ಪ್ರಾರಂಭದಿಂದಲೂ ಗುಡ್ಡಬೆಟ್ಟ, ಕಾಡು, ನೀರು, ತೊರೆ, ನದಿ, ಹಳ್ಳ… ಒಟ್ಟಾರೆ ಪ್ರಕೃತಿಯೊಂದಿಗೆ ಬದುಕನ್ನು ಕಟ್ಟಿಕೊಂಡ ಮನುಷ್ಯ ಪ್ರಕೃತಿಯಲ್ಲಿ ದೇವರನ್ನೂ ಕಂಡುಕೊಂಡಿದ್ದಾನೆ. ಅದರಲ್ಲೂ ವಿಶೇಷವಾಗಿ ಅವನಿಗೆ ಮರಗಳೆಂದರೆ ಎಲ್ಲಿಲ್ಲದ  ಮಮಕಾರ…!!  

ಆದಿಮಾನವನು ಮರಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದನು. ಗ್ರಾಮ್ಯ ಪರಿಸರದಲ್ಲಿ ಬೇವಿನ ಮರದ ಸತ್ಯಮ್ಮನಾಗಿ, ಬನ್ನಿ ಮಹಾಕಾಳಿಯಾಗಿ, ಬಿಲ್ವಪತ್ರೆಯ ಮರವು ಶಿವನ ಸ್ವರೂಪವಾಗಿ ಜನಮನದಲ್ಲಿ ಸಾಂಪ್ರದಾಯಿಕವಾಗಿ ಮೂಡಿ ಬಂದಿವೆ. ಮರಗಳೆಂದರೆ… ಪೂಜ್ಯನೀಯ ಭಾವನೆ. ಅಂದು ಆತನಿಗೆ ಮರದ ಮಹತ್ವ ಗೊತ್ತಿತ್ತು,  ಹಾಗಾಗಿ ಆದಿಮಾನವನು ಮರಗಳನ್ನು ತನ್ನ “ಆದಿ ದೈವವೆಂದೇ” ಭಾವಿಸಿದ್ದನು.  ಒಂದೊಂದು ಮರವು ಒಂದೊಂದು ಸಂಪತ್ತಿನ ಕಣಜವೆಂದು ತಿಳಿದುಕೊಂಡಿದ್ದನು.  ಅದರ ಪ್ರತಿಯೊಂದು ಭಾಗವು ಅದರ ಉಪಯೋಗ, ಅದರ ಮಹತ್ವ, ಎಲ್ಲವನ್ನು ಅರ್ಥ ಮಾಡಿಕೊಂಡು ಉಪಯೋಗಿಸುತ್ತಿದ್ದನು. ಮರಗಳೆಂದರೆ ಮನುಷ್ಯಕುಲದ ದೈವವೆಂದೆ ಹೇಳಬಹುದು. ಯಾವುದೇ ಮರವನ್ನು ತೆಗೆದುಕೊಂಡರೂ ಅದರಿಂದ ಅನೇಕ ಉಪಯೋಗಗಳನ್ನು ಇಂದಿಗೂ ನಾವು ಕಾಣುತ್ತೇವೆ. ಮರಗಳಿಂದ ಕೇವಲ ಬಾಹ್ಯ ಉಪಯೋಗವಲ್ಲದೆ, ಅವುಗಳ ಆಂತರಿಕ ಗುಣಗಳಿಂದ ನಮ್ಮನ್ನು ಇನ್ನಷ್ಟು ತನ್ನತ್ತ ಸೆಳೆದುಕೊಂಡಿದೆ.

ಮರಗಳೆಂದರೆ… ಮನುಷ್ಯನಿಗೆ ಆಸರೆ, ನೆರಳು, ಹಣ್ಣು, ತಂಗಾಳಿ, ಉಸಿರು, ಬೆಳಕು… ಎಲ್ಲವೂ ಹೌದು.!!  ಮರವೆಂದರೆ…ಕಲ್ಪವೃಕ್ಷ, ಕಾಮಧೇನು ಇದ್ದಂತೆ.  ಮರದ ಚಿಕ್ಕ ಚಿಕ್ಕ ಭಾಗಗಳಿಂದ ಹಿಡಿದು ದೊಡ್ಡ ದೊಡ್ಡ ಭಾಗಗಳವರೆಗೂ ಮನುಷ್ಯಕುಲಕ್ಕೆ ಬಹುದೊಡ್ಡ ಆಶ್ರಯದ ವರ.  ಮನುಷ್ಯ ಹತ್ತು ಹಲವಾರು ರೀತಿಯಲ್ಲಿ ಮರಗಳನ್ನು ಇಂದಿಗೂ ಉಪಯೋಗಿಸುತ್ತಿದ್ದಾನೆ.

 ಒಂದೊಂದು ಮರದಿಂದ ಸಾಂಸ್ಕೃತಿಕ ಪರಂಪರೆಯ ಹಬ್ಬವನ್ನು ಆಚರಿಸುತ್ತಾನೆ. ಅದರ ಹಿನ್ನೆಲೆಯಲ್ಲಿ ಹೇಳುವುದಾದರೆ, ನೈಸರ್ಗಿಕ ಕಾರಣಗಳು, ಸಾಂಸ್ಕೃತಿಕ ಕಾರಣಗಳು, ವೈದ್ಯಕೀಯ ಕಾರಣಗಳಿಂದಾಗಿ ಅವು ಇನ್ನಷ್ಟು ಹೆಚ್ಚುಗಾರಿಕೆ ಹೊಂದಿವೆ.

  ಬೇವು, ಮಾವು, ಹಂಚಿಮರ, ಕಣಗಿಲೆ, ಲೆಕ್ಕಿ, ಬಿಕ್ಕೆ , ತೆಂಗು, ಈಚಲ, ತುಳಸಿ, ಬಾಳೆ, ಶ್ರೀಗಂಧ, ಬನ್ನಿ, ಆಲ, ನೆಲ್ಲಿ, ನುಗ್ಗೆ, ಹೊಂಗೆ, ಬೀಟೆ, ತೇಗ, ಬಿದಿರು, ಒಂದೇ ಎರಡೇ… ಹೀಗೆ ಹತ್ತು ಹಲವಾರು ಸಣ್ಣ ಸಣ್ಣ ಸಸ್ಯಗಳಿಂದ ಹಿಡಿದು ದೊಡ್ಡ ದೊಡ್ಡ ಮರಗಳವರೆಗೂ ಬಹು ಉಪಯುಕ್ತಕರವಾದ ವಿವಿಧ ಜಾತಿಯ ಮರಗಳನ್ನು ನಾವು ಕಾಣುತ್ತೇವೆ.  ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದೊಂದು ಹಬ್ಬದೊಡನೆ ಒಂದೊಂದು ಮರಗಳ ಆರಾಧನೆ ಬೆಸೆದುಕೊಂಡಿದೆ.

 ಬನ್ನಿ ಸಂಬಂಧಗಳನ್ನು ಬೆಸೆಯುತ್ತಲೇ, ಬಂಗಾರವಾಗುತ್ತದೆ. ಯುಗಾದಿ ಬಂತೆಂದರೆ ಬೇವು, ಮಾವು ಸಮ್ಮಳಿತಗೊಳ್ಳುತ್ತವೆ.

 ಮನುಷ್ಯನ ಹುಟ್ಟಿನಿಂದ ಹಿಡಿದು ಸಾವಿನವರೆಗೂ ಬಿದಿರು ಬೆಂಬಿಡದೆ ಬೆಂಬಲವನ್ನ ನೀಡುತ್ತದೆ. ನಿನ್ನ ಬದುಕಿನ ಪ್ರತಿಕ್ಷಣದಲ್ಲಿಯೂ  ಜೊತೆಯಾಗುವೆ ಎನುತ್ತದೆ ಬಿದಿರು.  
ನಿನಗೆ ಶಕ್ತಿದಾಯಕವಾಗಿ ಸದಾ ನಿನ್ನೊಂದಿಗೆ ಇರುವೆನೆಂದು ನುಗ್ಗೆಕಾಯಿ  ನಮ್ಮೊಡನೆ ನುಗ್ಗಿ ನುಗ್ಗಿ ಬರುತ್ತದೆ. ನಸುಕಿನಲ್ಲಿಯೇ ನನ್ನನ್ನು ಇಳಿಸಿ ಹದವಾಗಿ ತಂಪೇರಿಸಿ ನೀ ಕುಡಿದರೆ ನಾನು ನಿನ್ನನ್ನು, ನಿನ್ನ ದೇಹವನ್ನು ಅತ್ಯಂತ ತಂಪಾಗಿಡುವೆ ಎಂದು ಈಚಲ ಹೇಳುತ್ತದೆ. ಜೊತೆ ಜೊತೆಗೆ ನೀನು ಮನಸ್ಸು ಮಾಡಿದರೆ, ನಾನು ಚಾಪೆಯಂತೆ ಹಾಸಿಗೆಯಾಗಿಯೂ ನಿನಗೆ ಸಹಾಯ ಮಾಡುತ್ತೇನೆ, ಎನ್ನುವ ಈಚಲ ಎಲ್ಲರ ದೃಷ್ಟಿಯೊಳಗೆ ಉಪಯೋಗಿಕ್ಕಾರಿಯಾಗಿದ್ದರೂ ಅದನ್ನು ಮತ್ತು  ಉಪಯೋಗಿಸುವವರನ್ನು ನಾವು ಕೆಟ್ಟ ಪದಗಳನ್ನು ಬಳಿಸಿ, ಕೆಟ್ಟದೃಷ್ಟಿಕೋನದಿಂದ ನೋಡುತ್ತೇವೆ.  

 ಈ ಮರವನ್ನು ಮರಗಳಲ್ಲಿಯೇ ಅತ್ಯಂತ ಶ್ರೇಷ್ಠ ಮರವೆಂದು ನಾವು ಭಾವಿಸಿಕೊಂಡಿದ್ದೇವೆ. ಅದನ್ನು ಕಲ್ಪವೃಕ್ಷವೆಂದು ಕರೆಯುತ್ತೇವೆ. ಅದೇ ತೆಂಗು..!!   ತೆಂಗಿನ ಮರದ ಪ್ರತಿ ಭಾಗವು ಕೂಡ ಮನುಷ್ಯನ ಎಲ್ಲಾ ಆಸರೆಗಳನ್ನು, ಆಶಯವನ್ನು ಪೂರೈಸುತ್ತದೆ.  ಪುಟ್ಟ ಮನೆಗೆ ಹೊಚ್ಚುವ ಹಚ್ಚಡವಾಗಿ, ದೇಹ ತಂಪಾಗಲು ಹದವಾದ ತಂಪಾದ ತಿಳಿನೀರಿನ ಎಳೆನೀರಾಗಿ, ಕಾಯಿಯಿಂದ ಕೊಬ್ಬರಿ, ಜುಬ್ಬರದಿಂದ  ದಿಂಬಾಗಲು,   ಮದುವೆಯಲ್ಲಿ ಚಪ್ಪರವಾಗಲು  ಶೃಂಗಾರದಲ್ಲಿ ವಧುವಿನಂತೆ ಶೃಂಗರಿಸಲು ತೆಂಗಿನ ಗರಿಗಳು ಬೇಕೇ ಬೇಕು..!!

 ಇನ್ನೂ  ‘ಹಣ್ಣುಗಳ ರಾಜ’ ಪ್ರತಿಯೊಬ್ಬರ ಮನಸ್ಸನ್ನು ಕದ್ದ ಚೋರ. ಶ್ರೇಷ್ಠ ತತ್ವಜ್ಞಾನಿ ಶಾಯರಿಗಳ ಸರದಾರ, ಗಾಲಿಬ್ ಮಿರ್ಜಾನ್  ಹೃದಯವನ್ನೂ ಕದ್ದ ಚಿತ್ತ ಚೋರವಾದ ಆ ಹಣ್ಣೇ ಮಾವು…!! ಇಂಥ ಮಾವು ಯಾರಿಗೆ ಇಷ್ಟವಿಲ್ಲ ಹೇಳಿ..?  ಎಲ್ಲರಿಗೂ ಇಷ್ಟವಾದುದು ಮಾವು…!!  ಮಾವಿನ ಮರವು ಅಗಲವಾದ ಹಲಗೆಯನ್ನು ಮಾಡಲು, ರುಚಿಕರವಾದ ಹಣ್ಣು ತಿನ್ನಲು,  ಹಬ್ಬ ಹರಿದಿನಗಳಲ್ಲಿ, ಉತ್ಸವಗಳಲ್ಲಿ ಶೃಂಗಾರಗೊಳ್ಳುವ ತೋರಣವಾಗಲು, ಮಾವಿನ ಮರವನ್ನು ನಾವು ಮೊದಲಿಂದ ಅಪ್ಪಿಕೊಳ್ಳುತ್ತೇವೆ. ಒಪ್ಪಿಕೊಳ್ಳುತ್ತೇವೆ. ಮಾವಿನ ಮರದ ಮಹತ್ವವೇ ಅಂತದಹದ್ದು…!!

“ಬ್ಯಾಸಿಗಿ ದಿವಸಾಕ ಬೇವಿನ ಮರ ತಂಪ…”  
ಎನ್ನುವ ಹಿರಿಯರ ಜಾನಪದ ನುಡಿಗಳು ಬೇವಿನ ಮರದ ಮಹತ್ವವು  ‘ಬೇಸಿಗೆಯ ಏರ್ ಕೂಲರ್’  ಇದ್ದಂತೆ ಎಂದರೂ ತಪ್ಪಾಗಲಾರದು.  ಬಿಸಿಲಿನಿಂದ ಬಳಲಿ ಬಂದ ವ್ಯಕ್ತಿಗಳಿಗೆ ಬೇವಿನ ಮರದ ಕೆಳಗೆ ಹೋದರೆ ತನ್ನ ಆಯಾಸವನ್ನೆಲ್ಲ ನೀಗಿಸಿಕೊಳ್ಳುತ್ತಾನೆ. ಔಷಧಿಯ ಗುಣವಾಗಿ ಬೇವಿನ ಹೂವು, ಬೇವು ಬೆಲ್ಲವಾಗಿ, ಮನೆಗೆ ಬೇಕಾದ ಪರಿಕರವಾಗಿ, ಪಿಠೋಪಕರಣಕ್ಕೆ ಪ್ರತಿ ರೂಪವಾಗಿ, ಎಲೆ, ಟೊಂಗೆ, ಕಾಂಡ, ಬೇರು.. ಎಲ್ಲವೂ ಉಪಯೋಗಕ್ಕೆ ಬರುವ ಬೇವು ಬಂಧುವಿದ್ದಂತೆ ಮನುಷ್ಯನಿಗೆ…!!

ಕಾಡುಗಳಲ್ಲಿಯ ಮರಗಳು, ಕಾಡಬನದ ಹೂಗಳೆಂದೇ ನಾಡಿಗೆ ಹೆಸರುವಾಸಿಯಾಗಿವೆ.  ‘ಲೆಕ್ಕಿ’ ಒಂದು ಕಾಲದಲ್ಲಿ ಲೆಕ್ಕಿಯ ಬರಲು ಬಡವರ ಮನೆಗಳಿಗೆ ಆಶ್ರಯ ನೀಡುವ ಆಸರೆದಾತೆಯಾಗಿತ್ತು, ಶಿಕ್ಷಕರ ಕೈಯಲ್ಲಿರುವ ಬೆತ್ತವಾಗಿ ವಿದ್ಯಾರ್ಥಿಗಳನ್ನು ತಿದ್ದಿದ್ದು ಸುಳ್ಳೇ..?   ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜನರ ಸಾವಿನಲ್ಲಿಯೂ ಮೂರು ಎಲೆ ಲೆಕ್ಕಿ ಹೂವನ್ನು ಶಿವನ ಸ್ವರೂಪವೆಂದು ಪೂಜಿಸಿ  ಶವಗಳಿಗೆ ಪತ್ರಿಯೆಂದು ಹಾಕುತ್ತಾರೆ.
 ‘ಹೊನ್ನಂಬರಿ’ ಹೊನ್ನಿನಂತಹ ಬಣ್ಣದ ಹೊನ್ನಂಬರಿಯು ಗೌರಿ, ಗಂಗೆ, ದೀಪಾವಳಿ ಹಬ್ಬಗಳನ್ನು ಸಂಭ್ರಮದಿಂದ ಈ ಹೂವಿನಿಂದಲೇ ಆಚರಿಸಲಾಗುತ್ತದೆ.  ಕಾಡಿನ ಇನ್ನೊಂದು ಹೂವು, ‘ಅಣ್ಣೆ ಹೂವು’,  ಹೊಲದ ತುಂಬಾ ಅಣ್ಣನಂತೆ ಬೆಳೆದು ನಿಂತ ಅಣ್ಣೆಯ ತಪ್ಪಲು ಗಾಯಗಳಿಗೆ ದಿವ್ಯ ಔಷಧ..!! ಹಾಗಲ, ಬಿಲ್ವಪತ್ರೆ…. ಹೀಗೆ ಹತ್ತು ಹಲವಾರು ಸಸ್ಯಗಳು ನಮ್ಮ ಭಾರತೀಯ ಪರಂಪರೆಯಲ್ಲಿ ಆಯುರ್ವೇದದೊಂದಿಗೆ ಬೆರತು ಔಷಧವಾಗಿ, ಸಾಂಸ್ಕೃತಿಕ ಹೂವುಗಳಾಗಿ, ಮರವಾಗಿ, ಸಸ್ಯಗಳಾಗಿ ತಮ್ಮ ಮಹತ್ವವನ್ನು ಉಳಿಸಿಕೊಂಡಿವೆ. ಹಾಗಾಗಿ ಕಾಡಿನ ಯಾವುದೇ ಹೂಗಳಾಗಲಿ ಸಸ್ಯಗಳಾಗಲಿ ಪ್ರತಿಯೊಂದು ಕೂಡ ಉಪಯೋಗಕಾರಿ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಭಾರತೀಯರು.

 “ಮರಗಳು ಮನುಷ್ಯನಿಗೆ ವರಗಳಿದ್ದಂತೆ”  ಎಂದು ಹೇಳುವುದು ಅದಕ್ಕಾಗಿಯೇ..!! ವೈಜ್ಞಾನಿಕವಾಗಿ ನಾವು ಆಲೋಚಿಸುವುದಾದರೆ ಮರಗಳ ಮಹತ್ವ ಅತ್ಯಂತ ಉನ್ನತವಾದದ್ದು. ನಮಗೆ ಬೇಡವಾದ ಕಾರ್ಬನ್ ಡೈಯಾಕ್ಸೈಡ್ ಅನ್ನು ತಾನು ಸ್ವೀಕರಿಸಿ,  ಪರಿಸರವನ್ನು ಸ್ವಚ್ಛಗೊಳಿಸುವುದರ ಜೊತೆ ಜೊತೆಗೆ ನಮಗೆ ಬೇಕಾಗಿರುವ ನಮ್ಮ ಪ್ರಾಣವಾಯು ಆಮ್ಲಜನಕವನ್ನು ನಮಗೆ ಒದಗಿಸುತ್ತದೆ. ನೆರಳು, ಅಂಟು, ಹಣ್ಣು, ಹೂ… ಕೊಡುವುದರ ಜೊತೆ ಜೊತೆಗೆ “ನಾನು ನಿನ್ನ ಜೊತೆಗಿರುವೆನೆಂದು” ಸ್ನೇಹಿತನಂತೆ ವರ್ತಿಸುತ್ತವೆ ಮರಗಳು.

ಇಂತಹ ನಿರ್ಮಲ ಉಪಕಾರಿ ಮರಗಳನ್ನು ಕಡಿದು, ತುಂಡರಿಸಿದ ನಾವು,  ಅಚ್ಚ ಹಸಿರಿನ ಈ ಭೂಮಿಯನ್ನು ಬರಡು ಬಂಜರ ಭೂಮಿಯನ್ನಾಗಿಸಿದ್ದೇವೆ. ಜಗತ್ತಿಗೆ ಶಕ್ತಿ ನೀಡುವ, ದಿಗ್ಗೆಂದು  ಉರಿಯುವ ಸೂರ್ಯ ತನ್ನ ತಾಪಮಾನವನ್ನು ಹೆಚ್ಚಿಸಿಕೊಂಡು ನಮಗೆ ನೂರಾರು ರೋಗಗಳನ್ನು ನೀಡುತ್ತಿದ್ದಾನೆ. ಇದರಿಂದ ನಾವು ಹೊರಬರಲು ಒಂದೇ ದಾರಿ. ಜಗತ್ತಿನ ತುಂಬಾ ಮರಗಳನ್ನು ಹಚ್ಚೋಣ. ಆಗ ತಂಪನ್ನು ಮರಗಳೇ ನಮಗೆ ಹಂಚುತ್ತವೆ. ಮರಗಳು ನಮ್ಮ ಬದುಕೆಂದು ಭಾವಿಸಿಕೊಳ್ಳುವ, ಪರಿಸರದ ಸಮತೋಲನವನ್ನು ಕಾಪಾಡಿ ಎಂದು ಸದಾಶಯ ಬಯಸೋಣ.

One thought on “ಮರಗಳ ದೈವಾರಾಧನೆಯ ಮಜಲುಗಳು…ವಿಶೇಷ ಲೇಖನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

  1. ವಿವಿಧ ಮರಗಳ ಬಗ್ಗೆ ಒಳ್ಳೆಯ ಲೇಖನವನ್ನೇ ಹೆಣೆದಿದ್ದೀರಿ. ನಿಮ್ಮ ನಿರೂಪಣಾ ಕೌಶಲ್ಯ ಮೆಚ್ಚುವಂಥಹುದು. ನಿಜವಾಗಿ ಹೇಳಬೇಕೆಂದರೆ ಉಪಯೋಗಕ್ಕೆ ಬಾರದ ಮರವೇ ಇಲ್ಲ. ಪರಿಸರದ ಮರುಸೃಷ್ಟಿಯಾಗಬೇಕಿದೆ.
    ಅಭಿನಂದನೆಗಳು.

Leave a Reply

Back To Top