‘ಕೊಡು ಕೊಳ್ಳುವಿಕೆ’ ಹನಿಬಿಂದು ಲೇಖನ

ಬದುಕೆಂದರೆ ಕೊಟ್ಟು ಪಡೆಯುವಂತಹ ಕಾರ್ಯ. ನಮ್ಮನ್ನು ಹೆತ್ತ ತಾಯಿ ನಮಗೆ ಜನ್ಮ ನೀಡಿ ಬದುಕಿನಲ್ಲಿ ಅದೇನು ಬೇಕೋ ಎಲ್ಲವನ್ನೂ  ದಯಪಾಲಿಸಿ, ವಿದ್ಯೆ ಬುದ್ಧಿ ಕೊಟ್ಟು ಮಾಂಸದ ಮುದ್ದೆಯಂತೆ ಇರುವ ನಮ್ಮನ್ನು ಮನುಷ್ಯರನ್ನಾಗಿ ಪರಿವರ್ತಿಸಿ ಒಂದಷ್ಟು ದಿನಗಳ ಬಳಿಕ ಇನ್ನೂ ಒಂದಷ್ಟು ತಿಳಿದುಕೊಳ್ಳಲಿ ಎನ್ನುತ್ತಾ ಶಾಲೆಗೆ ಕಳುಹಿಸುತ್ತಾರೆ. ತದ ನಂತರವೂ ಕೂಡ ಮಕ್ಕಳಿಗೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಪೂರೈಸಿ ಒದಗಿಸಿ ಕೊಡುವುದರಲ್ಲಿ ಪೋಷಕರ ಜವಾಬ್ದಾರಿಯೂ ಇರುತ್ತದೆ. ಇದಕ್ಕೆ ಬೇಕಾಗಿ ಅವರು ನಮ್ಮಿಂದ  ಯಾವುದನ್ನು ಅಪೇಕ್ಷಿಸುತ್ತಾರೆ? ಕೆಲವು ಪೋಷಕರು ತಮ್ಮ ಮಕ್ಕಳಿಂದ ಬಹಳ ನಿರೀಕ್ಷೆ ಇಟ್ಟುಕೊಳ್ಳಬಹುದು. ಮಗ ಅಥವಾ ಮಗಳು ಒಳ್ಳೆ ಕೆಲಸಕ್ಕೆ ಸೇರಿ ಬಂದ ಹಣ,  ಅದು ನಮಗೆ ಸಿಗಬೇಕು, ಜೀವನಪೂರ್ತಿ ಅವರು ದುಡಿದ ಹಣವೆಲ್ಲ ನಮ್ಮ ಪಾಲಾಗಬೇಕು. ನಾವೇ ತಾನೇ ಇವರಿಗೆ  ವಿದ್ಯೆ ಬುದ್ಧಿ ಕೊಟ್ಟು ಖರ್ಚು ಮಾಡಿ ಓದಿಸಿತ್ತು? ಈ ರೀತಿ ಯೋಚನೆ ಮಾಡುವವರು ಕೆಲವರಾದರೆ ಇನ್ನು ಕೆಲವರ ಆಲೋಚನೆಗಳೇ ಬೇರೆ. “ಮಕ್ಕಳನ್ನು ಸಾಕುವುದು ಅವರಿಗೆ ವಿದ್ಯಾಭ್ಯಾಸ ಕೊಡುವುದು ಇದೆಲ್ಲ ಪೋಷಕರಾದ ನಮ್ಮ ಕರ್ತವ್ಯ. ನಮ್ಮ ಕರ್ತವ್ಯವನ್ನು ನಾವು ಬಹಳಷ್ಟು ಕಷ್ಟಪಟ್ಟು ಶಿರಸಾ ಪಾಲಿಸಿ,  ಮಕ್ಕಳಿಗೆ ಏನು ಬೇಕು ಅದನ್ನು ತಂದುಕೊಟ್ಟು,  ನಮ್ಮ ಜವಾಬ್ದಾರಿಯನ್ನು ನಾವು ಅತ್ಯಂತ ಉತ್ತಮವಾಗಿ ನಿರ್ವಹಿಸಿದ್ದೇವೆ. ನಮ್ಮ ಮಕ್ಕಳು ನಮಗಾಗಿ ಏನನ್ನು ಮಾಡಿ ಇಡುವುದು ಬೇಡ,  ಬದಲಾಗಿ ಅವರ ಬದುಕನ್ನು ಅವರು ಉತ್ತಮವಾಗಿ ಕಟ್ಟಿಕೊಂಡರೆ ಸಾಕು” ಎಂದು ಆಲೋಚನೆ ಮಾಡುವವರು ಹಲವರು.
           ಇಲ್ಲಿ ಕೊಟ್ಟು ಪಡೆಯುವ ಕಾರ್ಯ ಎಂದರೆ ಪ್ರೀತಿ, ಕೇರ್ ಅಷ್ಟೇ. ಚಿಕ್ಕವರಾಗಿದ್ದಾಗ ಪೋಷಕರು ಕೊಟ್ಟ ಆ ಪ್ರೀತಿಯನ್ನು   ಅವರ ವೃದ್ದಾಪ್ಯ ಸಮಯದಲ್ಲಿ ಅವರು ನಮ್ಮಿಂದ ನಿರೀಕ್ಷಿಸುತ್ತಾರೆ. ಅದನ್ನು ನೀಡಲು ನಮ್ಮ ಬದುಕಿನಲ್ಲಿ ನಮಗೆ ಸಮಯವೇ ಇರುವುದಿಲ್ಲ. ಬದುಕಿಗಾಗಿ, ಹಣಕ್ಕಾಗಿ ದುಡಿಮೆಯ ಹೋರಾಟ ನಮ್ಮದಾಗಿರುತ್ತದೆ. ನಮ್ಮ ಸಂಸಾರ, ಕುಟುಂಬ ಮನೆ ಮಕ್ಕಳು, ಇವುಗಳಲ್ಲಿ ನಾವು ಬಿಝಿ ಆಗಿ ಬಿಡುತ್ತೇವೆ. ಅತ್ಯಂತ ಹೆಚ್ಚು ಖರ್ಚು ಮಾಡಿ, ಡಾನ್ಸ್ ಕ್ಲಾಸ್, ಆ ಕ್ಲಾಸ್ ಈ ಕ್ಲಾಸ್ ಅಂತ ಇಂಜಿನಿಯರಿಂಗ್ , ಮೆಡಿಕಲ್ ನಂತಹ ಹೈಯರ್ ಡಿಗ್ರೀ ಕಲಿಸಿದ ಹೆಚ್ಚಿನ ಮಕ್ಕಳಿಂದು ವಿದೇಶದಲ್ಲಿ, ಭಾರತದ ಮತ್ತೊಂದು ಮೂಲೆಯಲ್ಲಿ ಇದ್ದು, ವೃದ್ಧ ದಂಪತಿಗಳು ಮನೆಯಲ್ಲಿ ಕೆಲಸದವರ ಜೊತೆಯೋ, ನಾಯಿ ಬೆಕ್ಕು ಸಾಕಿಕೊಂಡು, ವೃದ್ಧಾಶ್ರಮಗಳ ಒಳಗೆ ಬಾಳು ಕಳೆಯುವ ಪರಿಸ್ಥಿತಿ ಬಂದಿದೆ. ದುಡ್ಡು ಇರುವವರಿಗೆ  ಇಂದು ಹೈ ಟೆಕ್ ವೃದ್ದಾಷ್ರಮಗಳೂ ಇವೆ. ಲಕ್ಷಗಟ್ಟಲೆ ಸುರಿದರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದು ನಮ್ಮ ಹಿರಿಯರ ಪರಿಸ್ಥಿತಿ. ಹಣ ಮಾಡದೆ ಇರುವ ಪೋಷಕರನ್ನು ಕೆಲವು ಮಕ್ಕಳೇ ದಾರಿಯ ನಡುವೆ ಬಿಟ್ಟು ಬಂದರೆ, ಇನ್ನೂ ಕೆಲವರನ್ನು ಬೀದಿ ನಾಯಿಗಳ ಹಾಗೆ ಊಟ ಬಿಸಾಕಿ ಸಾಕುತ್ತಿರುವವರೂ ಇದ್ದಾರೆ. ಇನ್ನೂ ಕೆಲವರು ಹೊಡೆದು ಬಡಿದು ಬುದ್ಧಿ ಹೇಳುವ ಮಕ್ಕಳಿದ್ದಾರೆ.
   ಅರವತ್ತರ ನಂತರ ಅರಳು ಮರಳು ಅಂತಾರೆ. ಈ ರೀತಿ ತಮ್ಮ ಪೋಷಕರು ವಿಚಿತ್ರವಾಗಿ ನಡೆದುಕೊಳ್ಳಲು ಆರಂಭಿಸಿದರೆ ಮನೆಗೆ ಬಂದ ಅಂದದ ಮಡದಿ ಅವರನ್ನು ತಮ್ಮ ಜೊತೆ ಇರಲು ಒಪ್ಪುವುದಿಲ್ಲ. ಆಗ ಸಿಟಿಗೆ ಹೋಗಿ ಬೇರೆ ಮನೆ ಮಾಡುವುದೋ ಅಥವಾ ಆ ಹಿರಿಯರನ್ನು ಮನೆಯಿಂದ ಓಡಿಸಿವುದೋ, ಬೇರೆ ಮಕ್ಕಳ ಮನೆಗೆ ಕಳಿಸುವುದೋ, ತಮ್ಮ ಮನೆಯಲ್ಲೇ ಪ್ರತ್ಯೇಕ ಒಂದು ಕೋಣೆ ಮಾಡಿ ಅಲ್ಲಿ ಬಿಡುವುದೋ ಹೀಗೆ ಒಂದೊಂದು ಅರೇಂಜ್ಮೆಂಟ್ ಆಗಿರುತ್ತದೆ.
   ಕೆಲವು ವಯಸ್ಸಾದ ಪೋಷಕರೂ ಹಾಗೆಯೇ. ಬಂದವರ ಹತ್ತಿರ ಎಲ್ಲಾ ಸಿಗರೇಟ್ ಕೇಳುವುದು, ಮಗ ಕೊಡುವುದಿಲ್ಲ ಎಂಬ ದೂರು ಕೊಡುವುದು ಅವರ ಮರ್ಯಾದೆ ಪ್ರಶ್ನೆ ಆಗಿಬಿಡುತ್ತದೆ. ಮಕ್ಕಳಿರುವಾಗ ಇಡೀ ದಿನ ಸಿಗರೇಟ್ ಎಳೆಯುವುದು ಒಳ್ಳೆಯದಲ್ಲ ಎಂದು ಹೇಳಿದರೂ ಕೇಳದೆ ಇರುವುದು,  ಅರ್ಧ ರಾತ್ರಿಯವರೆಗೂ ಮಲಗದೆ ಇರುವುದು, ಯಾರ ಬಳಿ ಆದರೂ ಜೋರಾಗಿ ಫೋನಿನಲ್ಲಿ ಮಾತನಾಡುತ್ತಿರುವುದು, ಮನೆಯ ಸ್ವಚ್ಛತೆಗೆ ಅಡ್ಡಿ ಪಡಿಸುವುದು, ಎಂಬತ್ತು ವರ್ಷಗಳ ಬಳಿಕ ಎಲ್ಲಾದರೂ ಹೋಗಿ ಬೀಳುವುದು, ಹಾಕಿದ ಎಲ್ಲಾ ಬಟ್ಟೆಗಳನ್ನು ಕೂಡ ಹರಿದು ಹಾಕಿಕೊಳ್ಳುವುದು, ಮಲ ಮೂತ್ರ ಕಂಡ ಕಂಡಲ್ಲಿ ಮಾಡುವುದು, ಪಕ್ಕದ ಮನೆಗೆ ಹೋಗಿ ಊಟ ಕೇಳಿ ತಿನ್ನುವುದು ಹೀಗೆ ಮಾಡುವ ಪೋಷಕರನ್ನು ಇಬ್ಬರೂ ಕೆಲಸಕ್ಕೆ ಹೋಗುವ ಇಂದಿನ ಕಾಲದಲ್ಲಿ ಹೇಗೆ ಸಹಿಸುವುದು? ಇದೂ ಕಷ್ಟವೇ. ಅದೆಷ್ಟೋ ಜನ ಮಲಗಿದಲ್ಲೇ ಇರುವ ತಾಯಿಗೆ ಬೆಳಗ್ಗೆ ಆಹಾರ ಕೊಟ್ಟು ಸ್ವಚ್ಛಗೊಳಿಸಿ ಮಲಗಿಸಿ ಹೋದರೆ ಸಂಜೆಯೇ ಹಿಂದಿರುಗಿ ಮನೆಗೆ ಬಂದು ನೋಡುವುದು. ಕೆಲಸಕ್ಕೆ ಜನ ಸಿಗಲಾರರು, ಸಿಕ್ಕಿದರೂ ಅವರ ಸಂಬಳ ಕೊಡಲಾಗದು. ಆಗೆಲ್ಲ ಅನುಕೂಲ ಶಾಸ್ತ್ರ. ಇದು ನಿತ್ಯ ಸತ್ಯ. ನಮ್ಮ ಕಾಲ ಮೇಲೆ ನಾವು ಕೆಲಸ ಮಾಡಿ ಬದುಕಲು ಸಾಧ್ಯ ಆಗುವವರೆಗೆ ಮಾತ್ರ ನಾವು ಬದುಕಬೇಕು ಅಂದುಕೊಳ್ಳುತ್ತೇನೆ. ಎಂದಿಗೂ ಪರರಿಗೆ ಹೊರೆ ಆಗಿ ನಮ್ಮ ಬದುಕು ಇರಬಾರದು. ಆದರೆ ಕೈ ಕಾಲು ಬಿದ್ದಾಗ, ಯಾವುದಾದರೂ ಸಣ್ಣ ಸರ್ಜರಿ ಆದಾಗ,  ಅನಾರೋಗ್ಯ ಸಮಯದಲ್ಲಿ, ಡೆಲಿವರಿ ಸಮಯದಲ್ಲಿ ನಾವು ಕೂಡ ಅವರ ಹಾಗೆ ಅಸಹಾಯಕರೇ ಅಲ್ಲವೇ? ಅಂತಹ ಸಮಯದಲ್ಲಿ ಪೋಷಕರು ನಮ್ಮನ್ನು ಅವರಿಗೆ ಏನೇ ಕಷ್ಟ ಬಂದರೂ ನೋಡಲು ಇರುವುದಿಲ್ಲವೇ? ಅಥವಾ ನಾವೇ ಜನ ಮಾಡಿ ಆದರೂ ಇರುವುದಿಲ್ಲವೇ?
       ಕಷ್ಟ , ದುಃಖ, ನೋವು, ಹತಾಶೆ, ಬದುಕಿನ ಏಳು ಬೀಳುಗಳು ಎಲ್ಲರಿಗೂ ಇವೆ. ಕೆಲವೊಂದು ಸಮಸ್ಯೆಗಳಿಗೆ ಕೊನೆ ಇಲ್ಲ. ಏನೂ ಓದದ , ಸಮ್ಮ ಪುಟ್ಟ ಕೆಲಸ ಮಾಡಿ,  ಕಷ್ಟ ಪಟ್ಟು ಕೂಲಿ ಮಾಡಿ ಅದು ಹೇಗೋ ತನ್ನ ಸಂಸಾರ ಸಾಕುತ್ತಿರುವ ಮಗನೊಬ್ಬ ಕ್ಯಾನ್ಸರ್ ಪೀಡಿತ ತನ್ನ ತಾಯಿಯನ್ನೋ, ತಂದೆಯನ್ನೋ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ನಿಂತು ಅದು ಹೇಗೆ ತಾನೇ ನೋಡಿಕೊಂಡಾನು ಅಲ್ವಾ? ಕೆಲಸಕ್ಕೆ ಹೋಗದೆ ಇದ್ದರೆ ಊಟಕ್ಕಿಲ್ಲ, ಕುಟುಂಬ ಸಾಕಲು ಆಗದು. ಆಗ ಅವರ ಸ್ವಾರ್ಥ ಬದುಕು ಅನಿವಾರ್ಯ ಅನ್ನಿಸಿ ಬಿಡುತ್ತದೆ. ಇಂದು ಭಾರತದ ಹೆಚ್ಚಿನ ಕುಟುಂಬಗಳಲ್ಲಿ ಆಗುತ್ತಿರುವುದು ಇದೇ. ಸಿರಿವಂತ ಮಗ ಪಟ್ಟಣದಲ್ಲಿ ಹೆಂಡತಿ ಮಕ್ಕಳ ಜೊತೆ ಯಾರ ಸುದ್ದಿ ಬೇಡ ಅಂತ ಅವನಷ್ಟಕ್ಕೆ ಬದುಕುತ್ತಾ ಇರುತ್ತಾನೆ. ಹಳ್ಳಿಯಲ್ಲಿ ಇರುವ ಬಡ ಮಗನಿಗೆ ಇದು ಅನಿವಾರ್ಯ ಆದರೂ ಅವನು ಅಸಹಾಯಕ. ಇದೇ ಕೊಡು ಕೊಳ್ಳುವಿಕೆ ಸಾಧ್ಯ ಆಗದ ಬಡತನದ ಬದುಕು.
   ಪ್ರತಿ ಮನುಷ್ಯ ಹೆಣಗಾಡುವುದು ಆಸ್ಪತ್ರೆಗಳ ಬಿಲ್ ಕಟ್ಟಲು ಸಾಧ್ಯ ಆಗದೆ. ಎಷ್ಟು ಜನ ಮೆಡಿಕಲ್ ಓದಿ ಡಾಕ್ಟರ್ ಆಗಿತ್ತಾರೋ, ಅದಕ್ಕಿಂತ ಹೆಚ್ಚು ಜನ ಹಣ ಇಲ್ಲದೆ ಆಸ್ಪತ್ರೆಗೆ ಬರಲು ಹೆದರಿ ರೋಗಗಳ ಜೊತೆ ಬದುಕುತ್ತಿದ್ದಾರೆ. ಜೊತೆಗೆ ನೋವಲ್ಲೆ ಸಾಯುತ್ತಾರೆ. ಲಕ್ಷಗಟ್ಟಲೆ ಖರ್ಚು ಮಾಡಿ ಜೀವನ ಪೂರ್ತಿ ಲೋನ್ ಕಟ್ಟುವವರು, ಕಟ್ಟುತ್ತಾ ಇರುವವರು, ದುಡಿದ ಹಣವೆಲ್ಲ ಹಿರಿಯರಿಗೆ ವ್ಯಯಿಸಿದ ಮಕ್ಕಳು ಕೂಡಾ ಇದ್ದಾರೆ. ಇಂತಹ ಬಡತನದ ಪರಿಸ್ಥಿತಿ ಸರಿ ಮಾಡಿ ಕೊನೆಗಾಲದಲ್ಲಿ ಸರಿಯಾಗಿ ಬದುಕಬೇಕು ಎಂದಿದ್ದರೆ ಹಣ ಮಾಡಿ, ಹಣ ಕೂಡಿ ಇಡಬೇಕು. ಇಲ್ಲದೆ ಹೋದರೆ ಮಕ್ಕಳು ಸಾಕುತ್ತಾರೆಯೆ? ಹಣ ಬ್ಯಾಂಕಿನಲ್ಲಿ ಇಟ್ಟರೆ ಇಂಕಮ್ ಟ್ಯಾಕ್ಸ್ ಕಾಟ, ಮನೆಯಲ್ಲಿ ಇಟ್ಟರೆ ಮಕ್ಕಳ ಕಾಟ. ಹಣಕ್ಕಾಗಿ ಜಗಳ. ಹಣ ಇಟ್ಟರೂ ನೆಮ್ಮದಿ ಇಲ್ಲ ಅಲ್ಲವೇ? ಹಣಕ್ಕಾಗಿ, ಆಸ್ತಿಗಾಗಿ ಪೋಷಕರನ್ನು ಕೊಂದ ಅದೆಷ್ಟೋ ವಾರ್ತೆಗಳು ಸರ್ವೇ ಸಾಮಾನ್ಯ. ಇಲ್ಲಿ ಕೊಡು ಕೊಳ್ಳುವಿಕೆ ಹೇಗೋ ಏನೋ.
    ಭಾರತದಲ್ಲಿ ಬಿಪಿಎಲ್ ಕಾರ್ಡು ಹೆಚ್ಚಾಗಿ ಇರುವುದಕ್ಕೂ ಸರಕಾರದಿಂದ ಒಂದಷ್ಟು ಅವರಿಗಾಗಿ ಯೋಜನೆಗಳು ಸಿಗುವ ಕಾರ್ಯ ಆಗುತ್ತಿದ್ದರೂ, ಅಂತಹ ಕೆಲಸಕ್ಕೆ ಓಡಾಟ ಮಾಡುವ ಜನ ಇಲ್ಲ, ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಮಧ್ಯವರ್ತಿಗಳ ಕಾಟ, ಸರಿಯಾಗಿ ಅರ್ಜಿ ಹಾಕಲು ಜನರ,ಸಮಯದ, ಹಣದ ಕೊರತೆ, ಮಾಹಿತಿ ಕೊರತೆ, ಓಡಾಟಕ್ಕೆ ಯಾರಿಲ್ಲ, ಹೀಗಾಗಿ ಮರಣಗಳ ಸಂಖ್ಯೆ ಬಡವರಲ್ಲಿ ಹೆಚ್ಚು.
  ದೇಶದಲ್ಲಿ ವೈದ್ಯಕೀಯ ಜನರ ಕೈಗೆಟಕುವ ದರದಲ್ಲಿ ಸಿಕ್ಕಿದಾಗ ಮಾತ್ರ healthy country ಇರಲು ಸಾಧ್ಯ. ಇಲ್ಲದೆ ಹೋದರೆ ದುಡ್ಡಿದ್ದವ ಬದುಕಿಯಾನು ಅಷ್ಟೇ. ಕೊರೋನ ದಿನಗಳ ಹಾಗೆ ಶವ ಸಂಸ್ಕಾರಕ್ಕೆ ಕೂಡಾ ಇಲ್ಲದ ಜನ ಏನು ತಾನೇ ಮಾಡಿಯಾರು? ಆಗ ಕೊಡು ಕೊಳ್ಳುವಿಕೆಯ ಪ್ರೀತಿ ಮರೆಯುವುದು ಮಾತ್ರ ಅಲ್ಲ , ಸತ್ತೇ ಹೋಗಿರುತ್ತದೆ. ಇದು ವಾಸ್ತವ. ಕಟು ಸತ್ಯ ಅಲ್ಲವೇ? ನೀವೇನಂತೀರಿ?

————————————-

Leave a Reply

Back To Top