ಲೇಖನ ಸಂಗಾತಿ
ಮೇಘ ರಾಮದಾಸ್ ಜಿ
“ಬಂಧುತ್ವದ ದೇಶ
ಬರಡಾಗದಿರಲಿ”
ನಮ್ಮದು ವೈವಿಧ್ಯಮಯ ರಾಷ್ಟ್ರ, ಎಲ್ಲಾ ಧರ್ಮಗಳೂ ಒಟ್ಟಾಗಿ ಕೂಡಿ ಬಾಳುತ್ತಿರುವ ನೆಲ, ಇಷ್ಟು ಧರ್ಮಗಳು, ಆಚರಣೆಗಳು ಇರುವುದರಿಂದಲೇ ನಮ್ಮ ದೇಶದ ಉಡುಗೆ – ತೊಡುಗೆ, ಅಡುಗೆ, ಭಾಷೆ, ಸಂಸ್ಕೃತಿ, ಜೀವನಶೈಲಿ, ಎಲ್ಲವೂ ವೈವಿಧ್ಯತೆಯಿಂದ ಕೂಡಿದೆ. ಇಷ್ಟೇ ಅಲ್ಲದೆ ಪ್ರಪಂಚದಲ್ಲಿಯೇ ಇಷ್ಟು ವೈವಿಧ್ಯತೆ ಇರುವ ದೇಶ ಭಾರತ ಮಾತ್ರ ಎಂದೆಲ್ಲಾ ನಮ್ಮ ಶಾಲೆಯಲ್ಲಿ, ನಮಗೆ ಸಮಾಜ ವಿಜ್ಞಾನ ಪಾಠ ಮಾಡುವಾಗ ಶಿಕ್ಷಕರು ಹೇಳಿದ ನೆನೆಪು, ನನಗೆ ಇನ್ನೂ ಮಾಸಿಲ್ಲ. ಆಗೆಲ್ಲಾ ರಾಷ್ಟ್ರೀಯ ಹಬ್ಬಗಳು ಬಂದರೆ ಸಾಕು ನಮಗೆಲ್ಲಾ ಗರ್ವ. ದೇಶದ ಮಹತ್ವ ಸಾರುವ ಹಾಡುಗಳಿಗೆ ನೃತ್ಯ ಮಾಡುವುದು, ಪೆರೇಡ್ ಮಾಡುವುದು ಎಂದರೆ ಹಬ್ಬ. ಮನೆಯಲ್ಲಿ ಆಚರಿಸುವ ಹಬ್ಬಗಳಿಗಿಂತ ಈ ಹಬ್ಬಗಳು ನಮಗೆ ಅಧಮ್ಯ ಆನಂದ ನೀಡುತ್ತಿದ್ದವು.
ಆದರೆ ಇಂದೇಕೊ ನಮ್ಮ ರಾಷ್ಟ್ರೀಯ ಹಬ್ಬಗಳು ಮಂಕಾದಂತೆ ಕಂಡವು. ಕಳೆದ ಜನವರಿ 22ರಂದು ನಡೆದ ಒಂದು ಸಂಭ್ರಮ ನಮ್ಮ ದೇಶದ ದಿಕ್ಕನ್ನೇ ಬದಲಿಸಬಹುದು ಎನ್ನುವ ಆತಂಕ ಹುಟ್ಟಿಸಿದೆ. ಅಂದು ಹಾರಾಡಿದ ಏಕ ವರ್ಣದ ಬಾವುಟಗಳು ನಮ್ಮ ಅಶೋಕ ಚಕ್ರವಿರುವ ತ್ರಿವರ್ಣ ಧ್ವಜವನ್ನು ಮರೆಮಾಚಿದ ಕಾರ್ಮೋಡಗಳಂತೆ ಕಾಣುತ್ತಿದ್ದವು. ನಿಜಕ್ಕೂ ಆ ಏಕ ವರ್ಣದ ಬಾವುಟಗಳ ಹಾರಟಕ್ಕೆ ಅನುಮತಿ ನೀಡಿದ್ದೂ ಸಹಾ ನಮ್ಮ ದೇಶದ ಆತ್ಮವಾದ ಸಂವಿಧಾನವೇ ಅಲ್ಲವೇ? ಭಾರತವು ಗಣರಾಜ್ಯವಾಗಿದ್ದು, ಸ್ವತಂತ್ರ್ಯ ರಾಷ್ಟ್ರವಾಗಿದೆ. ನಮಗೆ ಇಷ್ಟದ ಧರ್ಮವನ್ನು ಪಾಲಿಸುವ ಸ್ವತಂತ್ರ್ಯ ನೀಡಿರುವುದೂ ಸಹಾ ನಮ್ಮ ಸಂವಿಧಾನವೆ. ಆದರೆ ಈಗಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾಗಳನ್ನು ಗಮನಿಸಿದರೆ ದೇಶವನ್ನು ಕೇವಲ ಒಂದು ಧರ್ಮಕ್ಕೆ ಹಾಗು ಒಂದು ಸಮುದಾಯಕ್ಕೆ ಸೇರಿದ್ದು ಎಂದು ಘೋಶಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಇದು ಸಂವಿಧಾನದ ಆಶಯಕ್ಕೆ ಬಿದ್ದ ದೊಡ್ಡ ಹೊಡೆತ ಎಂದೆನಿಸುತ್ತಿದೆ.
ದೇಶಕ್ಕೆ ಸ್ವತಂತ್ರ್ಯ ಸಿಕ್ಕಾಗ ದೇಶವನ್ನು ಹೇಗೆ ಕಟ್ಟಬೇಕು? ಹೇಗೆ ಮುನ್ನಡೆಸಬೇಕು? ಎಂದು ತಿಳಿದಿದ್ದ ಗಣ್ಯರೆಲ್ಲರೂ ಸೇರಿ ನಮ್ಮ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನವನ್ನು ನಮಗೆ ನೀಡಿದ್ದರು. ಈ 76 ವರ್ಷವೂ ಸಹಾ ಭಾರತ ಈ ಸಂವಿಧಾನ ಎಂಬ ದೊಡ್ಡ ಆಲದ ಅಡಿಯಲ್ಲಿ ತಂಪಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಆದರೆ ಮುಂದೆ ಈ ತಂಪು ಕಾಡ್ಗಿಚ್ಚಾಗಿ ಬದಲಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಸರ್ವಧರ್ಮದ ಶಾಂತಿಯ ತೋಟವಾಗಿರುವ ದೇಶ, ದ್ವೇಷದ ಮುಳ್ಳುಗಳಿಂದ ಸುತ್ತುವರಿದು ಜನರ, ಅದರಲ್ಲಿಯೂ ಅಸಹಾಯಕರನ್ನು ಚುಚ್ಚಿ ನೋಯಿಸುವ ಅಸ್ತ್ರವಾದರೆ ಮತ್ತೇ 1947ಕ್ಕಿಂತ ಮೊದಲಿದ್ದ ದಾಸ್ಯ ಮರುಸೃಷ್ಠಿಯಾಗುವುದರಲ್ಲಿ ಅನುಮಾನವಿಲ್ಲ. ನಿಜವಾಗಿಯೂ ಸಂವಿಧಾನದ ಅಗತ್ಯವಿರುವ ಜನರನ್ನು ರಕ್ಷಿಸಲು ಬಾಬಾ ಸಾಹೇಬರೇ ಮರು ಹುಟ್ಟು ಪಡೆಯುಬೇಕಾಗುತ್ತದೆನೋ?
ಇನ್ನು ಈ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೊಂಬರಾಟದಲ್ಲಿ ಹೆಚ್ಚಾಗಿ ಕುಣಿಯುತ್ತಿರುವವರು ನಮ್ಮ ದೇಶದ ದೊಡ್ಡ ಆಸ್ತಿ ಎಂದೇ ಕರೆಸಿಕೊಳ್ಳುವ ನಮ್ಮ ಮುಗ್ದ ಯುವಜನತೆ. ಹೌದು ಈ ವಯಸ್ಸೇ ಅಂತದ್ದು, ಯಾವುದು ಹೆಚ್ಚು ಪ್ರಚಾರ, ಹೆಸರು ನೀಡುತ್ತದೆಯೋ ಅದರ ಹಿಂದೆ ಹೋಗುವುದು ಸಹಜ. ಆದರೆ ನಮ್ಮ ಯುವಜನರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುವ ಸಲುವಾಗಿ ಈ ಬುಟಾಟಿಕೆಗಳಲ್ಲಿ ಭಾಗವಹಿಸುವ ಬದಲಿಗೆ, ತಮ್ಮ ಭವಿಷ್ಯವನ್ನು ಸುಭದ್ರಗೊಳಿಸುವ ದಾರಿಯನ್ನು ಆರಿಸಿಕೊಳ್ಳುವ ಅಗತ್ಯ ಹೆಚ್ಚಿದೆ. ಇವತ್ತು ಯಾರು ಬೇಕಾದರೂ, ಯಾವ ಶಿಕ್ಷಣವನ್ನಾದರೂ, ಯಾವ ಹುದ್ದೆಯನ್ನಾದರೂ ಪಡೆದು ಯಾವ ದೇಶಕ್ಕಾದರೂ ಹೋಗಬಹುದು ಎಂಬ ಅವಕಾಶ ಸಿಕ್ಕಿರುವುದು ನಮ್ಮ ಸಂವಿಧಾನದಿಂದಲೇ ಹೊರತು ಯಾವುದೇ ಸಮುದಾಯ ಅಥವಾ ಧರ್ಮದಿಂದಲ್ಲ ಎನ್ನುವುದು ಕಣ್ಣಿಗೆ ಕಟ್ಟಿರುವ ಸತ್ಯ. ಯುವಜನತೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಭವಿಷ್ಯ ಗುಲಾಮಗಿರಿಯಲ್ಲಿ ಕೊನೆಯಾಗುತ್ತದೆ.
ಧರ್ಮ ಒಬ್ಬ ವ್ಯಕ್ತಿಯ ವೈಯಕ್ತಿಕ ಆಚರಣೆಯಾಗಿರಬಹುದೇ ಹೊರತು ಒಂದು ದೇಶದ ಬುನಾದಿಯಾಗಬಾರದು. ಅದರಲ್ಲಿಯೂ ಭಾರತದಂತಹ ಬಹುಧರ್ಮೀಯ ರಾಷ್ಟ್ರದಲ್ಲಿ, ಏಕಧರ್ಮ ಪ್ರಾಬಲ್ಯ ಸ್ಥಾಪಿಸುವುದು ದೇಶದ ಭವಿಷ್ಯಕ್ಕೆ ಬೀಳುವ ದೊಡ್ಡ ಕೊಡಲಿ ಪೆಟ್ಟು. ಏಕಧರ್ಮ ತನ್ನ ಹಿಡಿತ ಸಾಧಿಸಿದಲ್ಲಿ ದೇಶದ ಇತರೆ ಧರ್ಮಗಳು ಹೊರಗುಳಿಯುವ ಮನಸ್ಸು ಮಾಡಿದರೆ, ಅವರನ್ನು ತಡೆಯಲು ಮತ್ತೆ ಸಂವಿಧಾನದ ಮೊರೆ ಹೋಗಬೇಕಾಗುತ್ತದೆ. ಧರ್ಮದ ಬುನಾದಿ ಹೊತ್ತು ಹೊರಟ ದೇಶಗಳಲ್ಲಿ ನೀರಿಗಿಂತ ಹೆಚ್ಚು ರಕ್ತ ಹರಿದಿರುವುದು ಸುಳ್ಳಲ್ಲ.
ಇನ್ನು ಮಹಿಳೆಯರ ವಿಚಾರಕ್ಕೆ ಬಂದರೆ, ಈಗ ಏಕವರ್ಣದ ಶಾಲ್ ಧರಿಸಿ ಪ್ರಚಾರ ಮಾಡಲು ಬಿಟ್ಟಿರುವ ಜನರು ಮುಂದೆ ಅವರ ಇಚ್ಛೆ ಈಡೇರಿದಾಗ ಅದೇ ಶಾಲ್ ನಿಂದ ಹೆಣ್ಣನ್ನು ಕಟ್ಟಿ ಮತ್ತೆ ಅದೇ ಹಳೆಯ ಪುರುಷ ಪ್ರಧಾನ ಸಮಾಜದ ದಾಸಿಯರನ್ನಾಗಿ ಮಾಡಿಕೊಳ್ಳುತ್ತಾರೆ. ಸಂವಿಧಾನದ ಅಡಿಯಲ್ಲಿ ಸಾಕಷ್ಟು ಮಹಿಳಾಪರ ಕಾನೂನುಗಳಿದ್ದರೂ ಸಹಾ ಈಗಲೂ ಎಷ್ಟೋ ದೌರ್ಜನ್ಯಗಳು, ಅತ್ಯಾಚಾರಗಳು, ಮರ್ಯಾದಾಗೇಡು ಹತ್ಯೆಗಳು ಬೆಳಕಿಗೆ ಬರದೆ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಇನ್ನು ಸಂವಿಧಾನ ಮತ್ತು ಕಾನೂನುಗಳ ಬಲವೇ ಇಲ್ಲದೆ ಇದ್ದಾಗ ಹೆಣ್ಣಿನ ಪರಿಸ್ಥಿತಿ ಎಷ್ಟು ಹೀನಾಯವಾಗಿರಬಹುದು ಎಂದು ಯೋಚಿಸುವ ಅನಿವಾರ್ಯತೆ ಬಂದೊದಗಿದೆ.
ಆದ್ದರಿಂದ ನಮ್ಮ ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮನ್ವಯ, ಪ್ರಜಾತಂತ್ರ, ಗಣರಾಜ್ಯವಾದ ಭಾರತವೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಎಂಬ ಆದರ್ಶಗಳನ್ನು ಕಳೆದುಕೊಳ್ಳದೆ, ದೇಶದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಧೈರ್ಯವಾಗಿ ನೆಮ್ಮದಿಯಿಂದ ಬದುಕಬೇಕಾದರೆ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಹೂವಿನ ನಡಿಗೆಯಾಗಬೇಕಾದರೆ ಸಂವಿಧಾನವನ್ನು ಅರ್ಥೈಸಿಕೊಂಡು, ಬಳಸಿ, ಉಳಿಸಿಕೊಳ್ಳುವ ಅಗತ್ಯ ನಮ್ಮೆಲ್ಲರ ಮೇಲಿದೆ, ಅಲ್ಲವೇ…?
ಮೇಘ ರಾಮದಾಸ್ ಜಿ