ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ

ಬರವಣಿಗೆ ಬಿಟ್ಟೇ ಹೋಗಿತ್ತು.. ಏನಾದ್ರೂ ಬರೀಬೇಕು ಅಂದ್ಕೊಳ್ತಾನೇ ವರುಷಗಳು ಉರುಳಿ ಹೋಗಿದ್ದವು.. ನಾಳೆ ನಾಳೆ ಎಂದು ಎದೆಯ ಶಬ್ದಗಳನ್ನು ಸಾಂತ್ವನಿಸುತ್ತಲೇ ಸಮಯ ಕಳೆದುಬಿಟ್ಟಿದ್ದೆ…. ತೀರಾ ಅಪರೂಪಕ್ಕೆ ಅವಳು ಗೇಟು ದಾಟುತ್ತಿದ್ದಳು. ಅಬ್ಬಾ  ನನ್ನ ಲೇಖನಿಗೊಂದಷ್ಟು ವಿಷಯ ಸಿಕ್ಕತು ಅಂದ್ಕೊಂಡೆ… ಈಗ ಇನ್ನಷ್ಟು ಉಬ್ಬಿಕೊಂಡಿದ್ದಳು. ಗುಡ್ಡ ಅಗೆದವಳಂತೆ ಬುಸ್ ಬುಸ್ ಎಂದು ಉಸಿರ ದಬ್ಬುತ್ತ ಜಗುಲಿಗೆ ಕುಂಡೆ ಕೀಲಿಸಿದಳು.  ತುಂಬಾ ಅಪರೂಪ ಆಗ್ಬಿಟ್ರಿ ಅಂದೆ.. ನೇರ ನನ್ನನ್ನೇ ದಿಟ್ಟಿಸಿದಳು.. “ಇವಳು ಯಾಕಾದ್ರೂ ಬರ್ತಾಳೋ ಅಂತ ನೀನಂದಕೊಳ್ಳೋದು ನಂಗೊತ್ತಿಲ್ವಾ?” ಎಂಬಂತಿತ್ತು ನೇರ ನೋಟ. ನಾನು ದಿಟ್ಟಿ ತಪ್ಪಿಸಿದೆ. ನಿಂಗೊಂದು ಕಥೆ ಹೇಳ್ತೇನೆ ಕೇಳು ಎಂದು ಮಾತಿಗೆ ಮೊದಲಿಟ್ಟಳು. ನೀವೀಗ ಅವಳ ಕಥೆಯನ್ನು ಅವಳ ಮಾತುಗಳಲ್ಲೇ ಕೇಳಿ ಆಯ್ತಾ.. 
     “ನಿಂಗೊತ್ತಲ್ಲ  ಕಾರವಾರ ಕಡಲ ತೀರದಲ್ಲಿ ಮೇಲಾ ನೆರೆದಿತ್ತು… ಜಂಗುಳಿಯಿಂದ ಸದಾ ದೂರವೇ ಇರಬಯಸುವ ನಾನು ದಿವ್ಯ ನಿರ್ಲಕ್ಷ್ಯದಿಂದಿದ್ದೆ. ಗೆಳತಿಯರು ಕರೆ ಮಾಡಿ ಕೊರೆದಿದ್ದೇ ಕೊರೆದಿದ್ದು.. ಅಬ್ಬಾ ಏನೆಲ್ಲಾ ಇದೆ ಗೊತ್ತಾ ? ಎಲ್ಲವೂ ಹೆಣ್ಮಕ್ಕಳಿಗೆ ಬೇಕಾಗುವ ವಸ್ತುಗಳು. ಒಂದಿನ ಹೋಗೋಣ್ವಾ…. ಗೆಳತಿ ಮಮತಾ ಕರೆಮಾಡಿ ಕೇಳಿದಳು. ಯಾಕೋ ಬೇಜಾರುರೀ ಎಂದು ರಾಗ ಎಳೆದೆ.. “ಕೇವಲ ಕಾಲು ಕಿಲೋಮೀಟರು ದೂರದಲ್ಲಿ ಬೀಚ್…‌ ನಿಮ್ಮದೆಂತದು … ಸುಮ್ನೆ ಬನ್ನಿ “ಎಂದಳು. ಅವಳ ಒತ್ತಡಕ್ಕೆ ರೆಡಿಯಾಗಿದ್ದು…  ಅಮ್ಮೋ…. ಉತ್ಸವ ಮುಗಿದು ವಾರ ಕಳೆದರೂ ಸ್ಟಾಲ್ ಗಳ ಅಂಗಳದಲ್ಲಿ ಜನಜಾತ್ರೆ ನೆರೆದಿತ್ತು. ನಾವೂ ಸಂದಣಿಯಲ್ಲಿ ನುಸುಳಿಕೊಂಡೆವು… ಅಬ್ಬಾ ಕಿಚನ್ ಚಮಚದಿಂದ ಹಿಡಿದು ಗಾರ್ಡನ್ ಲ್ಲಿ ಗಿಡಗಳ ಬೆಳಸುವ ಪ್ಲಾಸ್ಟಿಕ ಕುಂಡಗಳವರೆಗೆ, ನೇಲ್ ಪೇಂಟ್ ಇಂದ ಶುರುವಾಗಿ ತೀರಾ ಇತ್ತೀಚಿನ ಫ್ಯಾಶನ್ನಿನ ಎಲಿಫಂಟಾ ಜೀನ್ಸ ತನಕ ಎಲ್ಲವೂ ಅಲ್ಲಿದ್ದವು…  ಈ ಸಣ್ಣಪುಟ್ಟ ವ್ಯಾಪಾರಿಗಳು ಈ ಭೂಮಿಮೇಲೆ ಗಂಡಸರೆಂಬ ಒಂದು ಜಾತಿಯನ್ನು ಮರೆತೇ ಬಿಟ್ಟಂತಿತ್ತು.. ಶೊಪಿಂಗ್ ಮೊಲ್ಗಳಲ್ಲಿ ಒಂಬೈನೂರ ತೊಂಬತ್ತೊಂಬತ್ತು ಎಂದು ಬರೆದ ಟೆಗ್ ತೂಗಾಕಿಕೊಂಡು ಹ್ಯಾಂಗರ್ ಗಳಲ್ಲಿ ಬಿಮ್ಮನೆ ಬಿಂಕವಾಗಿ ಜೋತುಬೀಳುವ ಅನಾರಕಲಿಗಳು, ಗೌನುಗಳು, ಕ್ರಾಪ್ ಟಾಪ್ಗಳು ,ಲೆಗ್ಗಿನ್ಸ್ ಜಗ್ಗಿನ್ಸ್, ಕ್ರಾಪ್ ಟ್ರಸರ್, ಶ್ರಗ್ಸ, ಓವರ್ ಕೋಟ್ಗಳು ಇಲ್ಲಿ ಅಬ್ಬೆ ಪಾರಿಗಳಂತೆ ಸೌ ಕೋ ಏಕ್  ಸಿರ್ಫ ತೀನಸೌ, ದೋಸೌ ಕೋ ಏಕ್ ಗಳೆಂದು ಕೂಗುವ ಮಾಲೀಕರೆದುರು, ಖುಲ್ಲಂ ಖುಲ್ಲಾ ಮೈದಾನದಲ್ಲಿ ಬೆತ್ತಲೆಯಾಗಿ ತೂಗು ಬಿದ್ದಿದ್ದವು. ಹೆಣ್ಮಕ್ಕಳ ಪರ್ಸಗಳು, ಹೆಗಲು ಚೀಲಗಳು, ನೇತಾಡುವ ಬ್ಯಾಗ್ ಗಳು ಊಂ ಒಂದೇ ಎರಡೇ ನೋಡೋಕೆ ನೂರು ಕಣ್ಣು ಸಾಲದು . ಕಾರವಾರದ ಚಪ್ಪಲಿ ಅಂಗಡಿಗಳಲ್ಲಿ ನೂರೈವತ್ತಕ್ಕೆ ಒಂದು ಎಂದು ಕರೆಸಿಕೊಳ್ಳುವ ಎಂಕಲ್ ಲೆಂಗ್ಥ ಕಾಲುಚೀಲಗಳು ನೂರಕ್ಕೆ ಮೂರು ಬಿಕರಿಯಲ್ಲಿತ್ತು. “ನಮ್ಮದು ಕ್ವಾಲಿಟಿ ಬೇರೆ ಎಂದು ನೀವೆಷ್ಟೇ ಬೊಮ್ಡಾ ಹೊಡೀರಿ ನಮ್ಗೆ ಮುಟ್ಟಿ ನೋಡಿದ್ರೆ ಗುತ್ತಾಗುದೆಲ್ಲ.?” ಹಾಗೆ ಹಾಯ್ದು ಹೋಗುವವರ್ಯಾರೋ ಅಂಗಡಿಕಾರರಿಗೆ ಬೈದುಕೊಳ್ಳುತ್ತಿದ್ದರು. ನಿಜಕ್ಕೂ ಕ್ವಾಲಿಟಿಯಲ್ಲಿ ಯಾವ ಬದಲಾವಣೆನೂ ಇರ್ಲಿಲ್ಲ.. ಈ ಸಸ್ತ ಚೀಪ್ (ಅಂದ್ರೆ ನಮ್ಮಮ್ಮನ ಕಾಲದ ಸೋವಿ, ಮತ್ತೆ ನಮ್ಮಜ್ಜಿಯ ಕಾಲದ ಅಗ್ಗ )ಅಂದ್ರೆ ಈ ಹೆಣ್ಮಕ್ಕಳು ಯಾವಥರ ಮೈಮೇಲೆ ಬಿದ್ಕೊಂಡು ಕೊಂಡ್ಕೊಳ್ತಾರೆ ಎಂಬುದನ್ನ ನೀನಲ್ಲಿ ನಿಂತು ನೋಡ್ಬೇಕಿತ್ತು. ಎಷ್ಟು ನೋಡಿದರೂ ಸಾಲದೆಂಬಂತೆ ಅಲ್ಲಿಗೆ ಅಂಟಿಕೊಂಡುಬಿಟ್ಟವಳನ್ನು ಗೆಳತಿ “ನಾಳೆ ಮತ್ತೆ ಬರೋಣ ಈಗ ಹೊತ್ತಾಯ್ತು ಬಾ ಮಾರಾಯ್ತಿ” ಎಂದು ಎಳ್ಕೊಂಡು ಬಂದಿದ್ದಳು. ಸ್ಟಾಲುಗಳ ಗೂಡಿನಿಂದ ಹೊರಬಿದ್ದರೆ ಹೈವೇ ತನಕ ಹಬ್ಬಿಕೊಂಡ ರಸ್ತೆಯಂಚಿನ ವ್ಯಾಪಾರಸ್ತರು ಆವೋ ದೀದಿ  ಆವೋ ಆಂಟಿ  ಎಂದು ತಮ್ಮತ್ತ ಗಿರಾಕಿ ಬಕ್ರಾಗಳನ್ನುಗಳನ್ನು ಸೆಳೆಯುತ್ತಲೇ ಇದ್ದರು.
     ನಿತ್ಯ ಮುಸ್ಸಂಜೆ ವಾಕ್ ಗೆ ಶೂಸು ಕಟ್ಟಿಕೊಂಡು ಹೊರಡುವ ನಾನು ಎಷ್ಟು ತರತುರಿಯಲ್ಲಿ ವಾಪಾಸ್ ಬರ್ತೇನೆ  ಅಂದ್ರೆ ತಲೆತುಂಬಾ ದೇವರಿಗೆ ದೀಪ ಇಡಬೇಕು, ಇಡ್ಲಿಗೆ ಉದ್ದಿನಬೇಳೆ  ರುಬ್ಕೊಳ್ಳಬೇಕು,  ಒಂದಷ್ಟು ಪಾತ್ರೆಗಳು ಬಿದ್ದಿವೆ ತೊಳೀಬೇಕು ಎಂದುಕೊಳ್ಳುತ್ತ ಕೆಲಸಗಳ ಚಕ್ರವ್ಯೂಹದಲ್ಲಿ ಸಿಕ್ಕುಕೊಂಡು ಆಚೆ ಈಚೆ ನೋಡದೆ ನಡೆದು ಅನ್ನೋಕಿಂತ ಓಡಿಕೊಂಡೇ ಮನೆ ತಲುಪುತ್ತೇನೆ..  ಮುಸ್ಸಂಜೆ ಕೆಲಸಗಳು ಬೇಗ ಮುಗಿದರೆ ಒಂದಷ್ಟು ಟಿವಿ ಸೀರಿಯಲ್ಗಳ ಹೆಂಗಸರ ಜೊತೆ ಕಲೆತು ಬೆರೆತು ಒಂಟಿತನ ಮರೆತು ಬಿಡಬಹುದೆಂಬ ಆತುರ ಅಷ್ಟೇ… ಮತ್ತೇನು ಕೊಳ್ಳೆ ಹೋಗುವ ವಿಷಯ ಇಲ್ಲ ಬಿಡು.  ಯಾಕೋ ಮಾರನೇದಿನದಿಂದ ವಾಕ್ ಉಗಿಸಿ ಬರುವಾಗ ಈ ಸ್ಟಾಲುಗಳನ್ನು ಒಮ್ಮೆ ಹಾಗೇ ಸುತ್ತಿ ಬರುವದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಹಾಗೇ ಬರುವಾಗ ಮೊದಲನೇ ದಿನ ಹೆಂಡ್  ಪರ್ಸ್ ಖರೀದಿಸಿದೆ. ಬರ್ತಿದ್ದ ಹಾಗೆ ಶೂ ಬಿಚ್ಚಿ ಎಸೆದು ಒಳಬಂದು ಮಾಡಿದ ಮೊದಲ ಕೆಲಸವೆಂದರೆ ತಂದ ಪರ್ಸಿನ ಫೋಟೋ ಕ್ಲಿಕ್ಕಿಸಿ ಗೆಳತಿಯರಿಗೆ ಕಳಿಸಿದ್ದು … ಗೆಳತಿಯರಿಂದ ಬರೀ ನೂರೈವತ್ತಾ…?  ತುಂಬಾ ಚೆನ್ನಾಗಿದೆ ಎಂಬ ಇಮೋಜಿಗಳು ಬಂದಾಗ ಮಾರನೇ ದಿನ ಹೆಂಗಿಂಗ್ ಪರ್ಸ ತಂದೆ. ಅದರಾಚೆ ದಿನ  ಗೆಳತಿ ವಿದ್ಯಾ ಜೊತೆಯಾದಳು. ಒಂದಷ್ಟು ಗಾರ್ಡನ್ನಿಗೆ ಇರಲಿ ಅಂತ ಕುಂಡಗಳನ್ನು ತಂದಿದ್ದಾಯ್ತು.. ಇನ್ನೇನು ಸೆಕೆ ಶುರುವಾಗೇ ಬಿಡ್ತು ಅಂದುಕೊಂಡು ಒಂದಷ್ಟು ಕ್ರೊಪ್ ಟೊಪ್ಸ್, ಬಾಟಮ್ ಮುಟ್ಟಿಮುಟ್ಟಿ ನೋಡಿದರೆ ಜೊತೆಗಿದ್ದ ಗೆಳತಿ ನನ್ನ ಮೇಲಿಂದ ಕೆಳತನಕ ನೋಡಿ “ಇದ್ನೂ ಹಾಕೊಂತೀಯಾ? ಎಂದ್ಳು. “ಸುಮ್ನೆ ಒಂದೆರಡು ಇರ್ಲಿಬಿಡೆ ಆವಾಗವಾಗ ಮುಟ್ಟಿಮುಟ್ಟಿ ನೋಡಿ ಖುಷಿ ಪಡೋಕೆ” ಎಂದೆ. ಪಾಗಲ್ ಎಂದು ನಕ್ಕು ಆಚೆಗೆ ಎಳೆದುಕೊಂಡು ಹೋದಳು. .. ಇವತ್ತೇನು ತಕೊಳ್ಳಲ್ಲ… ಸುಮ್ನೆ ಸುತ್ಕೊಂಡು ಮನೆಗೆ ಹೋಗ್ತೇನೆ ಸಾಯ್ಲಿ ಎಂದ್ಕೊಂಡು ಆ ಕಡೆ ಕಾಲೆಳೆದು ಹಾಕಿದರೆ ನಮ್ಮ ಜಯಾ ಸಿಕ್ಕಿದ್ರು. ಹಾಗೇ ಹಾದು ಹೋಗುತ್ತಾ ಸೊಕ್ಸ ಚೆನ್ನಾಗಿದೆ ಅಲ್ಲಾ ?… ನೂರಕ್ಕೆ ಮೂರು…. ನೂರ್ರುಪಾಯ್ಗೆ ಈಗೆಂತ ಬತ್ತದೆ…?” ಎಂದ್ಕೊಳ್ತಾ ಅದನ್ನು ಬಾಚಿಕೊಂಡಾಯ್ತು.. “ಅಬ್ಬಾ ಈ ಸಸ್ತಾ ಅಂದ್ರೆ ಈ ಹೆಂಗಸರು ಏನ್ ಸಾಯ್ತಾರೋ….” ಎಂದು ನಿನ್ನ ಓದುಗರು ಅಂದ್ಕೊಂತಾರೇನೋ… ನೋಡಿ ಸ್ವಾಮಿ ನಾವಿರೋದೆ  ಹೀಗೆ. ಜಯಲಲಿತಾ ಮನೆಮೇಲೆ ಐಟಿ ದಾಳಿ ಆದಾಗ ಸಿಕ್ಕಿದ್ದು ಆರ್ನೂರು ಹೊತೆ ಚಪ್ಪಲಿಗಳು…. ಈ ಹೆಂಗಸರ ಕೊಳ್ಳುಬಾಕತನದಿಂದ ಯಾರೂ ಹೊರತಲ್ಲ.. ಎಲ್ಲೋ ಸುಧಾಮೂರ್ತಿಯಂತ ಬೆರಳೆಣಿಕೆಯನ್ನು ಬಿಟ್ಟರೆ.


     ಒಂದೇ ಒಂದು ಬೇಜಾರು ಅಂದ್ರೆ ಅಂಗಡಿಕಾರರು ಸಾಮಾನು ತುಂಬಿಕೊಡುತ್ತಿದ್ದ ಪ್ಲಾಸ್ಟಿಕ್ ಚೀಲಗಳದ್ದು . ಎಲ್ಲೆಂದರಲ್ಲಿ ತೂರಿ ಬಿದ್ದ ಚೀಲಗಳು  ಕಡಲ ಗಾಳಿಗೆ ಗಾಳಿಪಟದಂತೆ ಹಾರಾಡುತ್ತಿದ್ದವು ತೀರಾ ಕಳಪೆ ಮಟ್ಟದ ಪ್ಲಾಸ್ಟಿಕ್ ಚೀಲಗಳು ಅವು. ಸ್ಟಾಲ್ಗಳನ್ನು ಬಾಡಿಗೆಗೆ ಕೊಟ್ಟ ಸಂಬಂಧಪಟ್ಟ ಇಲಾಖೆ ಅವರಿಗೆ ಅರಿವು ಮೂಡಿಸುವದು ಹಾಳಾಗ್ಲಿ ಒಂದೇ ಒಂದು ಕಸದ ಡಬ್ಬಿಯನ್ನು ಕೂಡ ಅಲ್ಲಿ ಇಡುವ ದೊಡ್ಡ ಮನಸ್ಸು ಮಾಡದೇ ಇರೋದು ದು:ಖದ ಸಂಗತಿ.  ಇಲ್ಲೆಲ್ಲ ಬ್ಯಾನ್  ಎಂದು ಬೆಳಗ್ಗೆ ಒದರುತ್ತಾ ಬರುವ ಮುನಸಿ ಪಾಲಿಟಿ ಕಸದ ಗಾಡಿಯವರು ಆಗಾಗ ತಲೆಗೇರತೊಡಗಿದ್ದರಿಂದ ವಾಕಿಂಗ್ ಹೋಗುವಾಗ ಪಾಜಾಮಾ ಕಿಸೆಯಲ್ಲೊಂದು ಚಂದದ ಕಾಟನ್ ಕೈಚೀಲ ತುರುಕಿಕೊಳ್ಳುವದನ್ನು ಅಭ್ಯಾಸ ಮಾಡಿಕೊಂಡೆ.


     ಕೇಳಿ ತೂಕಡಿಸುವಂತಾದಾಗ “ಇದೇನು ನೀವು ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರಿ ಇನ್ನೂ ವಿಷಯಕ್ಕೇ ಬರ್ಲಿಲ್ಲ‌… ” ಎಂದು ರಾಗವೆಳೆದೆ.. ಇದೋ ಬಂದೇಬಿಟ್ಟೆ.  ಏನಿಲ್ಲ  ಆದಿನ ಹಾಗೇ ನಾನು ನನ್ನ  ಗೆಳತಿ ಸ್ಟಾಲ್ಗಳ ನಡುವಿನ ಕಿರು ದಾರಿಯಲ್ಲಿ ಕಾಲೆಳೆಯುತ್ತಾ ಬರುತ್ತಿದ್ದೆವು. ಪಕ್ಕದ ಅಂಗಡಿಯಿಂದ ಪುಟ್ಟ ಜಟಾಪಟಿ ಕೆಳಿಸ್ತಾ ಇತ್ತು. ಒಂದಷ್ಟು ಕಾಲೇಜು ಹುಡುಗಿಯರು ಅಲ್ಲಿ ಸೇರಿದ್ದರು. ಬಹುಶ: ಮೆಡಿಕಲ್ ಕಾಲೇಜು ಹುಡುಗಿಯರಿರಬಹುದು.  ಸುಮಾರು 19 -20 ರ ಒಳಗಿನ ಒಬ್ಬ ಚಂದದ ಹುಡುಗ ಇಂದಿನ ಹೊಚ್ಚ ಹೊಸ ಫ್ಯಾಶನ್ ಆದ  ಹುಡುಗಿಯರ ‘ಎಲಿಫಂಟಾ ಜೀನ್ಸ್’ ಪಾಜಾಮ ಸ್ಟಾಲ್ ನ ಒಳಗೆ ನಿಂತಿದ್ದ.. ಅವನ ಅಂಗಡಿಯಿಂದ ಈ ಹುಡುಗಿಯರು ಅದನ್ನ ಖರೀದಿಸುವವರಿದ್ದರು .. ಅದನ್ನು ಒಯ್ಯುವದಕ್ಕೆ ಪ್ಲಾಸ್ಟಿಕ್ ಚೀಲ ಬೇಕೆಂದು ಕೇಳುತ್ತಿದ್ದರು.. ಹುಡುಗ ಚೀಲ ನೀಡುವದಕ್ಕೆ ನಿರಾಕರಿಸುತ್ತಿದ್ದ …‌ “ಕಪಡೆ ಹಾಥ ಮೇ ಲೇಕೆ ಜಾನಾ ಹೈ ಕ್ಯಾ?” ಎಂದು ಹುಡುಗಿಯರು ಅವನನ್ನು ತರಾಟೆಗೆ ತೆದುಕೊಳ್ಳುತ್ತಿದ್ದರು. ಹುಡುಗ ನೇರವಾಗಿ “ಆಪಕೋ ಚಾಹಿಯೇ ಹೋತೋ ಲೇಕೆ ಜಾಯಿಯೆ… ಅಗರ ನಹಿ ಹೈ ತೋ ರಖ ಕೆ ಜಾಯಿಯೇ …. ಕೋಯಿ ಬಾತ್ ನಹಿ” ಎಂದು ಕಡ್ಡಿ ಮುರಿದಿಟ್ಟಂತೆ ಹಠ ಹಿಡಿದಿದ್ದ… ಹುಡುಗಿಯರು “ಅರೇ ಭಾಯಿ ಅಗರ ತೇರೆ ಪಾಸ್ ಥೈಲಿ ನಹಿ ಹೋತೋ ವೋ ಬಾಜು ಕಾ ದುಕಾನ್ ಸೇ ಲೇಕೆ ಹಮೆ ದೇನಾ ” ಎಂದು ಹುಡುಗನನ್ನು ಒತ್ತಾಯಿಸುತ್ತಿದ್ದರು.. ಹುಡುಗನದು ಒಂದೇ ಹಠ “ಮೈ ಥೈಲಿ ನಹಿ ದೇತಾ.. ”  ಅಬ್ಬಾ ನಮಗೂ ಒಂಚೂರು ಸೋಜಿಗ .. ಏಳೆಂಟು ಹುಡುಗಿಯರು ಅಲ್ಲಿ ನೆರೆದಿದ್ದರು.. ಎಲ್ಲರೂ ಒಂದೊಂದು ಪಾಜಾಮ ಕರಿದಿಸುವವರಿದ್ದರು. ಪಾಜಾಮಗಳನ್ನು ಅಲ್ಲಿಯೇ ಬಿಟ್ಟು ಅಂಗಡಿಗೆ ಬೆನ್ನು ಮಾಡಿ ಹೊರಟಿತು ಹುಡುಗಿಯರ ದಂಡು..  ಈ ಹುಡುಗ ಸುಮ್ನೆ ಲುಕ್ಸಾನು ಮಾಡ್ಕೊಂತಿದ್ದಾನಲ್ಲ.. ಎಂದು ಹೊಟ್ಟೆ ಚುರ್ ಚುರ್ ಗುಟ್ಟಿತು. ಕ್ಯೋಂ ಐಸಾ ಕಿಯಾ? ತುಮ್ಹೆ ಥೈಲಿ ದೇನಾ ಚಾಹಿಯೇ ಥಾ ನಾ? ಎಂದು ಅವನನ್ನು ಮಾತುಗೆಳೆದೆ ..‌ “ನಹಿ ಮೆಮ್.. ಮೇರಿ ಚೀಜೆ ಬಿಕಾ ನಹೀ ತೊ ಭಿ ಚಲೇಗಾ, ಲೇಕಿನ್ ಮೈ ಪ್ಲಾಸ್ಟಿಕ್ ಥೈಲಿ ದೇಕೆ   ಪರ್ಯಾವರಣ ದೂಷಿತ್ ನಹೀಂ ಕರೂಂಗಾ ” ಎಂದ ..”ಇದರ್ ಸಬ್ ವಹೀ ಕರ್ ರಹಾ ಹೈ ನಾ ಬೇಟಾ ” ಅಂದೆ … “ಕೋಯಿ ಭಿ ಕರೇ.. ಮೈ ನಹೀ ಕರೂಂಗಾ..” ಎಂದ ಅವನ ಮಾತಿನಲ್ಲಿ ಛಲವಿತ್ತು. ಇನ್ನೂ ಹರೆಯದ ಹುಡುಗಾಟಿಕೆ ಮಾಸದ  ಹುಡುಗ ಅಬ್ಬಾ… ಯಾಕೋ ನನ್ನೆದೆಯೊಳಗೆಲ್ಲೋ ವಾತ್ಸಲ್ಯದ ಝರಿ ಉಕ್ಕಿ ಹೊರಳಿದಂತಿತ್ತು.‌ ನನ್ನಲ್ಲಿನ ಮಾತುಗಾರ್ತಿ ಮೌನಕ್ಕೆ ಶರಣಾಗಿದ್ದಳು… ನಾನೊಂದು ಎಲಿಫಂಟಾ ಪಾಜಾಮ‌ ಎತ್ತಿಕೊಂಡೆ.. “ಪೆಹಲೆ ಬೋಲ್ ರಹಾಹೂಂ ಮೆಮ್ ಮೈ ಥೈಲಿ ನಹಿ ದೂಂಗಾ “ಎಂದ. ಬೇಡ ಬಿಡಪ್ಪಾ ಎಂದು ನನ್ನ ಪಾಜಾಮಾದ ಕಿಸೆಯಲ್ಲಿದ್ದ ಕೊಟನ್ ಚೀಲ ಹೊರತೆಗೆದೆ… ಪಕ್ಕದಲ್ಲಿದ್ದ ಗೆಳತಿ ಅದ್ಯಾಕೆ ಬೇಕು ನಿನಗೆ ಎಂಬಂತೆ ಮಿಕಿಮಿಕಿ ಮುಖ ನೋಡಿದಳು… “ಇರಲಿಬಿಡು ವಾರ್ಡರೋಬಿನ ಯಾವುದೋ ಮೂಲೇಲಿ ಬಿದ್ದಿರುತ್ತೆ. ನಾನೇನು ಅದ್ನ ಹೊತ್ಕೊಂಡು ತಿರುಗ್ತೇನಾ?” ಎಂದೆ… ಅವಳು ಹಣೆ ಹಣೆ ಗಟ್ಟಿಸಿಕೊಂಡಳು…  “ಫೋನ್ ಪೇ ಕರ್ತಿ ಹೂಂ” ಎಂದೆ ಬಹೊತ್ ಅಚ್ಛಾ ಹೈ ಮೆಮ್ ಅಂದ.  ಅರೇ ಇವ್ನಾ…. ಇವನೊಬ್ಬ ವಿಚಿತ್ರ ಇದ್ದಾನಲ್ಲಾ ಎಂದು ಅವನನ್ನೇ ನೋಡಿದೆ… ಯಾಕಂದರೆ ಇಲ್ಲೆಲ್ಲ ಅಂಗಡಿಕಾರರು ಫೋನ್ ಪೇ‌ ಅಂದಾಕ್ಷಣ ಗೊಣಗುತ್ತಿದ್ದರು. ಕೆಲವರು ಬೈಕೊಂಡಿದ್ರು. ಇನ್ನು ಕೆಲವರು ಇಟ್ಟು ಮುಂದಕ್ಕೆ ಹೋಗ್ರಿ ಎಂದಿದ್ದರು. ಹೆಚ್ಚು ಕಡ್ಮೆ ಎಲ್ಲ ಕಡೆ ಫೋನ್ ಪೇ ಅಂದಾಕ್ಷಣ ಕೆಟ್ಟ ಅನುಭವಗಳೇ ಆಗಿದ್ದು.  ಫೋನ್ ಪೇ ಮಾಡಿ ಹೊರ ಬಂದರೆ ಅವನ ಹೆಸರು ನನ್ನ ಮೆಸೆಂಜರ್ ಒಳಗೆ ಕಾಣಿಸಿಕೊಂಡಿತ್ತು ‘ಹೈದರ್ ‘..  ಒಂಚೂರು ಹೆಸರು ಮಾಡಿದವರು ಕಂಡ್ರೆ ಸಾಕು ಅವರೊಂದಿಗೆ ಸೆಲ್ಫಿ  ತೆಗೆಸಿಕೊಳ್ಳಲು ಮುಗಿಬೀಳುವ ಜನರನ್ನು ಕಂಡು ಏನ್ ಸಾಯ್ತಾರೋ ಎಂದು ಮೂಗು ಮುರಿವ ನನಗೆ ಮೊದಲ ಬಾರಿಗೆ ಆ ಪುಟ್ಟ ಹುಡುಗನ ಜೊತೆಗೊಂದು ಸೆಲ್ಫಿ ತೆಗೆಸಿಕೊಳ್ಳುವ ಮನಸಾಯ್ತು . ಹಿಂತಿರುಗಿ ನೋಡಿದೆ.. ತನ್ನ ಕೆಲಸದಲ್ಲಿ ಮಗ್ನನಾಗಿದ್ದ ಹುಡುಗ . ಅನಿಗೆ ಯಾರ ಹೊಗಳಿಕೆ, ಶಾಬ್ಬಾಸಗಿರಿ ಬೇಕಿರಲಿಲ್ಲ. ಮತ್ತೆ ಸೆಲ್ಫಿ ತೆಗೆಸಿಕೊಳ್ಳುವ ನನ್ನ ಆಸೆ ಹತ್ತಿಕ್ಕಿ ಈಚೆ ಬಂದೆ. 
     ನನ್ನ‌ ತಿಂಗಳ ಪಾಕೀಟ್ ಮನಿಗೆಂದು ನನ್ನ ಸಂಗಾತಿ ಕಟ್ಟಿಸಿಕೊಟ್ಟ ಪುಟ್ಟ ಬಾಡಿಗೆ ಮನೆ.. ಅದನ್ನು ಕೇಳ್ಕೊಂಡು ಬರೋವವರೆಲ್ಲ  ಕೇಳ್ತಿದ್ರು ಮೇಡಮ್ ಯಾರುಗಾದ್ರೂ  ಬಾಡಿಗೆ ಕೊಡ್ತೀರಾ ? ಅವರ ಅರ್ಥದಲ್ಲಿ ಯಾವ, ಮತ ಯಾವ ಧರ್ಮದವರಿಗೂ ಅಂತ .. ನಾನು “ಓಓಓ ಮನುಷ್ಯರಾದ್ರೆ ಆಯ್ತು.. ನನಗೆ ಬಾಡಿಗೆ ಬಂದರಾಯ್ತು” ಅಂತಿದ್ದೆ ಅಷ್ಟೇ.  ನೀನಂದುಕೊಳ್ತೀಯಾ ನಾನು ಸುಮ್ನೆ ಬುರುಡೆ ಬಿಡ್ತೇನೆ ಅಂತ ನಂಗೆ ಗೊತ್ತು….  ಖಂಡಿತ ನಾನು ಬಬುರುಡೆ ಬಿಡ್ತಾ ಇಲ್ಲ…  ಈ ಹದಿನೈದು ವರ್ಷದ ಅನುಭವದಲ್ಲಿ ಬಾಡಿಗೆ ಕೇಳ್ಕೊಂಡು ಬಂದವರ ಜಾತಿ ಧರ್ಮ ಯಾವುದೆಂದು ಕೇಳಿದ್ದೇ ಇಲ್ಲ … ಅಮ್ಮನಾಣೆ… ಯಾಕೋ ಈ ಬಾರಿ ನನ್ನ ಹಿತೈಷಿಗಳ್ಯಾರೋ ಮುಸ್ಲಿಮ್ ಜನ ಬಂದ್ರೆ ಮನೆ ಕೊಡ್ಬೇಡ್ರಿ….  ಮನೆ ತುಂಬಾ ಗಲೀಜು ಮಾಡಿ ಹೋಗಿಬಿಡ್ತಾರೆ ಎಂದು ತಮ್ಮ ಅನುಭವವನ್ನು ನನ್ನ ತಲೆಗೆ ತುಂಬಿದ್ರು.. ಓ… ಹೌದಾ…. ಅಂತ ನಾನು ಚಿಂತೆಗೆ ಬಿದ್ದಿದ್ದೆ.. ದೇವ್ರೆ ಆ ಸಮುದಾಯದವರು ಮನೆ ಕೇಳ್ಕೊಂಡು ಬರ್ದೇ ಇರ್ಲಿ ಎಂದು ಕಾಣದ ದೇವರಲ್ಲಿ ಒಂದು ಮೌನದ ಅರ್ಜಿ ಗುಜರಾಯಿಸಿದ್ದೂ ಇದೆ..ಯಾಕಂದ್ರೆ ನಿಮ್ಗೆ ಕೊಡೋದಿಲ್ಲ ಅಂತ ಹೇಗೆ ಹೇಳೋದು ಹೇಳು.?. ಯಾಕೋ ಈ ಹುಡುಗನ ನೋಡಿದ ಮೇಲೆ ಹಾಗೆ ಬೇಡಿಕೊಂಡ ನನ್ನ ಮನಸಿನ ಮೊಖಕ್ಕೆ ಒಂದು ತಪರಾಕಿ ಹಾಕಿಬಿಡಬೇಕು ಅನ್ನಿಸ್ತು.. ಈ ನೆಲ ಇಲ್ಲಿನ ಪರಿಸರದ ಬಗ್ಗೆ ಎಲ್ಲಿಂದಲೋ ಬಂದ ಈ ಹುಡುಗನಿಗೆ  ಎಷ್ಟೊಂದು ಕಾಳಜಿ … ನನ್ನೊಳಗಿನ ಉಸಿರ ಮಿಡಿತವೊಂದು ತಣ್ಣಗೆ ಗುನುಗುತ್ತಿತ್ತು..‌ “ನಿನಗೆ ನನ್ನ ಸಲಾಮು ಕಂದಾ…” ಅವಳು ಕಥೆ ಮುಗಿಸಿ  ಭಾರದ ಶರೀರ ಹೊರಳಿಸುತ್ತ ಸರಿ ನಾನಿನ್ನು ಬರ್ತೇನೆ ಎಂದು ಎದ್ದು ನಡೆದಳು..
        ಹೌದಾ….? ನಾನು ನನ್ನ ನೆನಪು ಕೆದಕಿದೆ….. ಒಂದು ಕೈಲಿ ಹೊಗೆಯಾಡುವ ಚಾ, ಬಾಯಲ್ಲಿ  ಬೆಂಕಿಯುಗುಳುವ ಬೀಡಿ ಕಚ್ಕೊಂಡು ಕೂತ ತೀರಾ ಈಗಿನ್ನೂ ಹರೆಯಕ್ಕೆ ಕಾಲಿಟ್ಟ ಹಿಂಡು ಹಿಂಡು ಹುಡುಗರನ್ನು ನಾನಲ್ಲಿ ಕಂಡಿದ್ದೆ.. ಕುಡಿದು ಮುಗಿಸಿದ ಪ್ಲಾಸ್ಟಿಕ್ ಕಪ್ಪು , ಸೇದಿ ಮುಗಿಸಿದ ಬೀಡಿ ಮೋಟುಗಳನ್ನು ಬೇಕಾಬಿಟ್ಟಿ ಎಸೆದು ತಮ್ಮ ಅಂಗಡಿಗಳ ಕಡೆಗೆ ಓಡುತ್ತಿದ್ದರು. ಅದನ್ನ ಕಂಡು  ಅಯ್ಯೋ ಎಂದು ಕ್ಷಣ ತಳಮಳಗೊಂಡಿದ್ದು ಇದೆ ..‌ಸುಮಾರು 40-50 ವರ್ಷಗಳ ಹಿಂದೆ ನಮ್ಮಜ್ಜವ್ವ ಒಂದು ಮಾತು ಹೇಳ್ತಿದ್ದಳು..” ಮೀಸಿ ಬರುವಾಗೆ ದೇಸ(ದೇಶ) ಕಾಂಬುದೆಲ್ಲ, ಮೊಲೆ ಚಿಗ್ರುವಾಗೆ ನೆಲ ಕಾಂಬುದೆಲ್ಲ ಮಗ್ನೆ… ನಿಮ್ಮ ತಪ್ಪೆಲ್ಲ ಇದ್ರಗೆ… ನಿಮ್ಮ ಪಾರಾಯದ(ಪ್ರಾಯ) ತಪ್ಪು”  ಅಂತ. ನಿಜ ಉಕ್ಕುವ ಹರೆಯ ನನ್ನದು ತನ್ನದು ಎಂಬ ಅಭಿಮಾನ ಅಂತ:ಕ್ಕರಣಕ್ಕಿಂತ ನಾನೆಂಬ ಅಹಮಿಕೆಯಲ್ಲಿ ಆಕಾಶಕ್ಕೆ ಕಾಲು ಚಾಚುತ್ತದೆ.  ಅದಕ್ಕಿಂತ ತೀರಾ ಭಿನ್ನವಾದ ಈ  ಹುಡುಗ ಇವಳ ಕಣ್ಣಿಗೆ ಬಿದ್ದಿದ್ದು ಹೇಗೆ? ಒಮ್ಮೆ ನಾನೂ ನೋಡಬಹುದಿತ್ತು ಅಂದ್ಕೊಂಡೆ..  ಏನೇ ಇರಲಿ ಆ ಹುಡುಗನಿಗೆ  ನನ್ನದೂ ಒಂದು ಆಲೇಕೋ ಸಲಾಂ ಎಂದು ಮನದಲ್ಲೇ ಮಣಿದೆ…


3 thoughts on “ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ

  1. ಕಥೆ ತುಂಬಾ ಚೆನ್ನಾಗಿದೆ ಮೇಡಂ ನಮ್ಮ ವೈಯಕ್ತಿಕ ಅನುಭವವನ್ನೇ ಪದದಲ್ಲಿ ಜೋಡಿಸಿಟ್ಟಂಗಿದೆ ಶಾಪಿಂಗ್ ಇತ್ಯಾದಿಗಳ ಅನುಭವ ಹೇಳಿಸಿ ಬರೆದಹಾಗಿದೆ. ಹಾಗೆ ಅದು ಕೊಡುವ ಸಂದೇಶವು ಅತ್ಯಂತ ಮನನಾಟುವಂತಿದೆ. ಕಂಡ ಒಂದು ಸಾಂದರ್ಭಿಕ ಘಟನೆಯನ್ನು ಇಷ್ಟು ರೋಚಕವಾಗಿ ಬರೆದಿರುವ ನಿಮಗೆ ಒಂದು ಸಲಾಂ.

    1. ನಾನು ಪದ್ಮಜಾ ಎಸ್ ಜೋಯ್ಸ್. ನಿಮ್ಮ ಈ ಲೇಖನದ ಕಲೆ ನೋಡಿ ತುಂಬಾ ಖುಷಿಯಾಯಿತು .ಮತ್ತಷ್ಟು ನಿಮ್ಮಿಂದ ಇಂತಹ ಲೇಖನಗಳನ್ನು ಅಪೇಕ್ಷಿಸುವ ನಿಮ್ಮ ಪದ್ಮಜಾ.

Leave a Reply

Back To Top