ಆರೋಗ್ಯ ಸಂಗಾತಿ
‘ಅಧೋವಾಯು (Flatulence)’
ವೈದ್ಯಕೀಯ ಲೇಖನ
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಎಳೆ ವಯಸ್ಸಂತು ಆಗಿರಲಿಲ್ಲ. ಸುಮಾರು ಇಪ್ಪತ್ತೈದರ ಆಸುಪಾಸಿನ ಯುವಕ. ಆತನ ತಾಯಿ ನನ್ನ ಕ್ಲಿನಿಕ್ಕಿಗೆ ಅವನನ್ನು, ಬಹುಶಃ ಬಲವಂತದಿಂದ,
ಕರೆತಂದು, “ಸರ್…ನಿಮಗೆ ಹೇಗೆ ಹೇಳೋದೊ ಗೊತ್ತಾಗ್ತಿಲ್ಲ; ಸ್ವಲ್ಪ ಇರಿಸುಮುರಿಸು” ಎಂದು ಮಾತಿಗೆ ಆರಂಭಿಸಿದಾಗ, “ಹಾಗೇನು ಯೋಚಿಸಬೇಡಿ, ಅದೆಂಥ ವಿಷಯ ಆದರೂ ಪರವಾಗಿಲ್ಲ, ಒಬ್ಬ ಡಾಕ್ಟರರ ಸಂಗಡ ಹೇಳ್ಕೊಳ್ಳೋಕೆ ಮುಜುಗರ ಬೇಡಿ, ಹೇಳಿ ಅಮ್ಮ” ಎಂದು ಮುಗುಳುನಗೆಯ ಮೂಲಕ ಹುರಿದುಂಬಿಸಿದೆ. ಮಗನ ಮುಖದ ಕಡೆ ಒಮ್ಮೆ ನೋಡಿ, ಮತ್ತೆ ಸ್ವಲ್ಪ ತಡೆದು, “ಈ ನನ್ನ ಮಗ ಬಹಳ ಗ್ಯಾಸ್ ಬಿಡ್ತಾನೆ, ಅದಕ್ಕೆ ಏನಾದರೂ ಔಷಧ ಕೊಡಿ” ಎಂದು ಸ್ವಲ್ಪ ಸಂಕೋಚದಿಂದಲೆ ಆದರೂ, ಕಡ್ಡಿ ತುಂಡಾದ ರೀತಿ ಹೇಳುತ್ತ, “ನಾನು ಬೇಕಾದರೆ ಹೊರಗಡೆ ಇರ್ತೀನಿ, ನೀವು ಕೇಳೋದೇನಾದರು ಇದ್ದರೆ ಕೇಳಿ” ಎಂದು ಎದ್ದು ಹೊರನಡೆದೇ ಬಿಟ್ಟರು.
ಹೌದು, ಇಂಥ ತೊಂದರೆಯಿಂದ ಕ್ಲಿನಿಕ್ಕಿಗೆ ಬರುವ ರೋಗಿಗಳೂ ಇಲ್ಲದಿಲ್ಲ; ಆದರೆ ವಿರಳ.
ಅದಕ್ಕೆ ಕಾರಣ ಇಲ್ಲದಿಲ್ಲ. ಆ ವಿಷಯವೆ ಅಂಥದ್ದು: ಒಮ್ಮೆಲೆ ಮುಜುಗರ, ನಾಚಿಕೆ, ಅಸಹ್ಯ, ಹೇಸಿಗೆ, ಅಲ್ಲದೆ ನಗು ಅಥವ ಮಂದಹಾಸ ಮತ್ತು ಕುಹಕ ಮುಂತಾದ ಎಲ್ಲ ಸಂವೇದನೆಗಳಿಗು ಒಮ್ಮೆಲೆ ಈಡುಮಾಡುವ ಥಾಕತ್ತು ಉಳ್ಳಂಥದ್ದು. ಸಾಮಾಜಿಕವಾಗಿ ಕೂಡ ಸಹ್ಯವಲ್ಲದಂತಹ ವಿಚಾರ! ಆದರೆ ಎಲ್ಲ ಮಾನವನಲ್ಲಿ ದಿನನಿತ್ಯ ನಡೆವ ಕ್ರಿಯೆ ಮತ್ತು ಅವಶ್ಯ ತಿಳಿಯಬೇಕಾದ ವಿಷಯ.
ವಾಸ್ತವವಾಗಿ ನಮ್ಮ ಜೀರ್ಣಾಂಗಗಳಿಂದ ಈ ವಾಯು ಮೇಲಿಂದ ಬಂದು ಬಾಯಿ ಮೂಲಕ ಹೊರಹೊದರೆ ಅದಕ್ಕೆ ತೇಗು ಎನ್ನುತ್ತೇವೆ (belch, burp); ಬದಲಿಗೆ ಗುದದ್ವಾರದ ಮೂಲಕ ಅದು ಹೊರಹೋದರೆ ಅದನ್ನು ಅಧೋವಾಯು ಅಥವ ಅಪಾನವಾಯು (Flatulence) ಅಥವ ಜನಸಾಮಾನ್ಯರ ಭಾಷೆಯಲ್ಲಿ ಹೆಚ್ಚಾಗಿ ಕೇಳಿಬರುವ ಹೂಸು (fart) ಎಂದೆಲ್ಲ ಹೇಳುತ್ತೇವೆ. ಸದ್ಯ ಈ ಲೇಖನ ಎರಡನೆ ಅಂದರೆ ಅಧೋವಾಯು ಮತ್ತು ಅದರ ವಿವರಗಳ ಬಗ್ಗೆ ಮಾತ್ರ ಸಂಪೂರ್ಣವಾಗಿ ಕೇಂದ್ರೀಕರಿಸುತ್ತದೆ. ಮತ್ತು ಎಲ್ಲರಿಗೂ ಓದುವಾಗ ಸಹ್ಯ ಎನಿಸುವಂಥ ‘ಅಧೋವಾಯು’, ‘ವಾಯು’ ಅಥವ ಸಿಂಪಲ್ಲಾಗಿ ‘ಗಾಳಿ’ ಎಂಬ ಶಬ್ದಗಳನ್ನೆ ಇಡಿ ಲೇಖನದಲ್ಲಿ ಬಳಸಲಾಗುತ್ತದೆ.
ವೈದ್ಯಕೀಯ ತಾಂತ್ರಿಕ ಭಾಷೆಯಲ್ಲಿ ‘ಫ್ಲ್ಯಾಟ್ಯುಲೆನ್ಸ್’ ಎಂದರೆ ಕರುಳಿನ ವಾಯುವನ್ನು ಗುದದ ಮೂಲಕ ಹೊರಹಾಕುವುದು. ಹಾಗೆ ಉತ್ಪನ್ನವಾದ ವಾಯು ‘ಫ್ಲೇಟಸ್’ – ಕನ್ನಡಲ್ಲಿ ಅಧೋವಾಯು; ‘ಫಾರ್ಟಿಂಗ್’ ಎಂದರೆ ಹೂಸುವುದು.
ಕರುಳಿನ ವಾಯುವಿನಲ್ಲಿ ಸ್ವಲ್ಪ ಭಾಗ ವ್ಯಕ್ತಿಯು ನುಂಗಿದ ಹೊರ ಸನ್ನಿವೇಶದ ಗಾಳಿಯೂ ಆಗಿರುವುದರಿಂದ, ಉದರದ ಅಷ್ಟೂ ವಾಯು ಕರುಳು ಮತ್ತು ಜಠರದಿಂದ ಮಾತ್ರ ಉತ್ಪಾದನೆ ಆದದ್ದಲ್ಲ. ‘ಫ್ಲೇಟಾಲಜಿ’ ಎಂದರೆ ಉದರದೊಳಗಿನ ಅಧೋವಾಯುವಿನ ವೈಜ್ಞಾನಿಕ ಅಧ್ಯಯನ ಎಂದು.
ಅಧೋವಾಯುವನ್ನು ಕರುಳಿನ ಸ್ನಾಯುಗಳ ಒತ್ತಡದಿಂದ ದೊಡ್ಡ ಕರುಳಿನ ಅಂತ್ಯದ ‘ರೆಕ್ಟಮ್’ (rectum) ಅಥವ ‘ಗುದನಾಳ’ದ ಭಾಗಕ್ಕೆ ತರಲಾಗುವುದು. ಎಲ್ಲರೂ ಗಾಳಿ ಹೊರ ಬಿಡುವುದು ಅತ್ಯಂತ ಸಾಮಾನ್ಯ; ಆದರೆ ಯಾರು ಎಷ್ಟು ಬಾರಿ ಮತ್ತು ಯಾವ ಪ್ರಮಾಣದಲ್ಲಿ ವಾಯು ಹೊರ ಹಾಕುವರು ಎಂಬುದರಲ್ಲಿ ಮಾತ್ರ ಬಹಳಷ್ಟು ವ್ಯತ್ಯಾಸ ಇರಬಹುದು. ಹಾಗೂ ಕೆಟ್ಟ ವಾಸನೆಯ ಗಾಳಯೂ ಸಹ ಸಹಜ; ಅದು ಕೆಲವೊಮ್ಮೆ ತೀವ್ರ ಕೂಡ ಆಗಿರಬಹುದು. ಬಾಯಲ್ಲಿ ಊದುವ ವಾದ್ಯಗಳ ಮಾದರಿಯಲ್ಲಿ, ಗುದ ಹಾಗು ಕುಂಡೆಗಳ ಯುಗಳ ಕ್ರಿಯೆಯಿಂದ ಅಧೋವಾಯು ಶಬ್ದಸಹಿತ ಹೊರಬರುವುದು ಎಂದು ತಿಳಿದಿದೆ. ವಾಯುವಿನ ಸದ್ದು ಮತ್ತು ದುರ್ವಾಸನೆ ಎರಡೂ ಸಹ ಅತಿ ಮುಜುಗರ ತರುವುದೂ ಕೂಡ ಸ್ವಾಭಾವಿಕ. ಅಷ್ಟೆ ಅಲ್ಲದೆ ಕಿರಿಕಿರಿಗೆ ಅಥವ ತಮಾಷೆಗೆ ಸಹ ಕಾರಣ ಆಗಬಹುದು – ಪರಿಸ್ಥಿತಿಯ ಅನುಸಾರ. ಕೆಲವು ಸಮಾಜಗಳಲ್ಲಿ ವಾಯು ಹೊರಹಾಕುವುದು ನಿಷಿದ್ಧ. ಹಾಗಾಗಿ ಅನೇಕರು ಗಾಳಿಯನ್ನು ಸದ್ದಿಲ್ಲದೆ ಬಿಡುವ ಹರಸಾಹಸ ಕೂಡ ಮಾಡುವರು ಅಥವ ಕಷ್ಟಪಟ್ಟು ತಡೆಹಿಡಿಯುವರು. ಆದರೆ ಹಾಗೆ ತಡೆಯುವುದೂ ಖಂಡಿತ ಆರೋಗ್ಯಕರ ಅಲ್ಲ.
ಕರುಳಿನ ವಾಯು ಮತ್ತು ಉಬ್ಬರ ಮತ್ತು ಉದರವನ್ನು ದೊಡ್ಡ ಗಾತ್ರ ಮಾಡುವುದಲ್ಲದೆ, ಹೊಟ್ಟೆಯಲ್ಲಿ ನೋವು ಸಹ ಕಾಣಿಸಬಹುದು. ಹೆಚ್ಚು ವಾಯು ತುಂಬುವುದು, ದುರ್ನಾತವಾಗುವುದು, ಹಾಗು ಅನೇಕ ಸಲ ವ್ಯಕ್ತಿಯ ಅರಿವಿಲ್ಲದೆ ಹೊರ ಸೋರುವುದು (incontinence) ಮುಂತಾಗಿ ಕೂಡ ಸಾಧ್ಯ. ಅದೇ ರೀತಿಯಲ್ಲಿ ಕರುಳಿನ ವಾಯು ತೇಗಿನ ಮೂಲಕ ಸಹ ಆಚೆ ಬರಬಹುದು. ಅಧಿಕ ವಾಯು ಮತ್ತು ದುರ್ವಾಸನೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬರುವುದೂ ಸಾಧ್ಯ; ಉದಾಹರಣೆಗೆ ‘ಕೆರಳು (ಕೆರಳಿದ) ಕರುಳು ಲಕ್ಷಣಗಳು’
(irritable bowel syndrome),
ಸೀಲಿಯಾಕ್ ಡಿಸೀಸ್ ಮತ್ತು ಲ್ಯಾಕ್ಟೋಸ್ ಅಸಹಿಷ್ಣುತೆ (lactose intolerance).
ಲಕ್ಷಣಗಳು:
ಪ್ರಮುಖವಾಗಿ ಕರುಳಿನ ವಾಯು ನಾಲ್ಕು ರೀತಿಯ ತೊಂದರೆಗಳಿಗೆ ಕಾರಣವಾಗಬಹುದು. ಒಬ್ಬ ವ್ಯಕ್ತಿಯಲ್ಲಿ ಎಲ್ಲ ತೊಂದರೆಗಳೂ ಒಟ್ಟಾಗಿಯೂ ಇರಬಹುದು ಅಥವ ಒಬ್ಬೊಬ್ಬರಲ್ಲಿ ಒಂದೋ ಅಥವ ಎರಡೋ ತೊಂದರೆ ಮಾತ್ರ ಕೂಡ ಕಾಣಿಸಿಕೊಳ್ಳಬಹುದು.
ನೋವು ಮತ್ತು ಉದರದುಬ್ಬರ:
ಒಂದೊಮ್ಮೆ ಕರುಳಿನಲ್ಲಿ ಬಂಧಿಯಾದ ಗಾಳಿಯಿಂದ ಹೊಟ್ಟೆ ಊದಿಕೊಂಡು ಉಬ್ಬರವಾದಾಗ, ಅದು ಅಧಿಕ ವಾಯು ತುಂಬಿರುವ ಕಾರಣ ಎನ್ನಲಾಗುತ್ತಿತ್ತು. ಆದರೆ ಕೆಲವು ಪ್ರಮುಖ ಪುರಾವೆಗಳ ಮೂಲಕ ಅದು ಹಾಗಲ್ಲ ಎಂಬುದು ಸಾಬೀತಾಗಿದೆಯಂತೆ. ಮೊದಲನೆಯದಾಗಿ, ಆರೋಗ್ಯವಂತ ವ್ಯಕ್ತಿಗಳ ಸಣ್ಣ ಕರುಳಿಗೆ ಅತ್ಯಧಿಕ ಪ್ರಮಾಣದ ವಾಯುವನ್ನು ಹರಿಸಿದಾಗ, ಅವರಲ್ಲಿ ಅದರಿಂದ ನೋವಿಗಾಗಲಿ ಅಥವ ಉಬ್ಬರಕ್ಕಾಗಲಿ ಕಾರಣ ಆಗದೆ, ಅಷ್ಟೂ ವಾಯು ನಿರುಪದ್ರವಿ ಗಾಳಿಯಾಗಿ ಹೊರಹಾಕಲ್ಪಟ್ಟಿತು. ಎರಡನೆಯದಾಗಿ, ಕೆರಳು ಕರುಳ ಲಕ್ಷಣಗಳಿಂದ (irritable bowel syndrome) ಬಳಲುವಂತಹ ರೋಗಿಗಳು ಒಟ್ಟಾರೆ ಎಷ್ಟು ವಾಯು ಉತ್ಪತ್ತಿಸುತ್ತಾರೆ ಎಂಬುದನ್ನು ಅಂದಾಜಿಸಿ, ಅದನ್ನು ಆರೋಗ್ಯಕರ ವ್ಯಕ್ತಿಯ ವಾಯು ಉತ್ಪತ್ತಿಯ ಪ್ರಮಾಣಕ್ಕೆ ತುಲನೆಮಾಡಿದಾಗ ವ್ಯತ್ಯಾಸ ಕಂಡುಬರಲಿಲ್ಲ ಎಂಬ ಸತ್ಯ. ಆದರೆ ರೋಗಿಯ ವಾಯುವಿನಲ್ಲಿ ಆರೋಗ್ಯಕರ ವ್ಯಕ್ತಿಗಿಂತ ಹೆಚ್ಚು ಪ್ರಮಾಣದ ಜಲಜನಕ ಇರುವುದು ತಿಳಿದುಬಂದಿದೆಯಾದರೂ ಒಟ್ಟು ವಾಯುವಿನ ಪ್ರಮಾಣದಲ್ಲಿ ವ್ಯತ್ಯಾಸ ಅಲ್ಲ. ಮೂರನೆಯದಾಗಿ, ಕೆರಳು ಕರುಳ ಲಕ್ಷಣಗಳ ರೋಗಿಯಲ್ಲಿ ಇರುವಷ್ಟು ವಾಯು ನೋವು ಮತ್ತು ಉದರದ ಉಬ್ಬರಕ್ಕೆ ಕಾರಣ ಆದರೂ, ಆರೋಗ್ಯಕರ ವ್ಯಕ್ತಿಯು ಅಷ್ಟೇ ಪ್ರಮಾಣದ ವಾಯುವಿನಿಂದ ನೋವು ಮತ್ತು ಉಬ್ಬರ ಅನುಭವಿಸುವುದಿಲ್ಲ.
ಇಷ್ಟಲ್ಲದೆ ಆರೋಗ್ಯಕರ ವ್ಯಕ್ತಿಯ ಉದರದೊಳಗೆ ಇರುವ ಒಟ್ಟು ವಾಯು ಎಲ್ಲ ಕಡೆ ಸಮನಾಗಿ ಹಂಚಿಕೆಯಾಗಿರುವುದು; ಆದರೆ ರೋಗಿಯ ಉದರದಲ್ಲಿ ಅದು ಅಲ್ಲಲ್ಲಿ ಸಣ್ಣಸಣ್ಣ ವಿಭಾಗವಾಗಿ ಹಂಚಿಹೋಗಿ, ನೋವಿಗೆ ಮತ್ತು ಉಬ್ಬರಕ್ಕೆ ಕಾರಣವಾಗುವುದು.
ಪ್ರಮಾಣ:
ಸಾಮಾನ್ಯ ವ್ಯಕ್ತಿಗಳಲ್ಲಿ ವಾಯುವಿನ ಒಟ್ಟು ಪ್ರಮಾಣದ ವ್ಯಾಪ್ತಿಯಲ್ಲಿ ಅಗಾಧ ವ್ಯತ್ಯಾಸ ಕಂಡುಬರುತ್ತದೆ: 24 ಘಂಟೆಗೆ ಅಂದಾಜು 475 ರಿಂದ 1500 ಮಿಲಿಲೀಟರ್. ಅಲ್ಲದೆ, ವ್ಯಕ್ತಿಯ ಒಟ್ಟು ವಾಯುವಿನಲ್ಲಿ ಸ್ವಲ್ಪ ಭಾಗ ಪರಿಸರದ ಗಾಳಿಯನ್ನು ನುಂಗಿದ್ದುದಾದರೆ, ಇನ್ನಷ್ಟು ಭಾಗ ಆಹಾರ ಮತ್ತು ಪಾನೀಯದೊಳಗೆ ಅಡಕವಾಗಿದ್ದದ್ದು ಮತ್ತು ಮೂರನೆಯದ್ದು ಕರುಳಿನ ಹುದುಗುವಿಕೆಯಿಂದ ಉತ್ಪಾದಿತವಾದದ್ದು (gut fermentation). ನಮ್ಮ ಆಹಾರ ಮತ್ತು ಪಾನೀಯ ಸೇವನೆ ಸಮಯದಲ್ಲಿ ಸ್ವಲ್ಪ ಸ್ವಲ್ಪ ಪ್ರಮಾಣದ ಪರಿಸರದ ವಾಯುವನ್ನು ನುಂಗುವುದು ಸಹಜ. ಅತಿಯಾಗಿ ಹೀಗೆ ಪರಿಸರದ ವಾಯು ನುಂಗುವುದಕ್ಕೆ ಏರೋಫೇಜಿಯ (Aerophagia) ಎಂದು ಹೇಳುವರು. ಏರೋಫೇಜಿಯ ಕಾರಣದಿಂದ ನುಂಗಿದ ಗಾಳಿಯು ಕೆಲವೊಮ್ಮೆ ಅಧೋವಾಯುವಿನ ಪ್ರಮಾಣ ಹೆಚ್ಚಿಸಬಹುದು – ಆದರೆ ಇದು ವಿರಳ. ಹಾಗೆ ನುಂಗಿದ್ದು ತೇಗುವುದರ ಮೂಲಕ ಹೊರಕ್ಕೆ ಹೋಗುವುದೂ ಸಹಜ. ಅದೇ ರೀತಿಯಲ್ಲಿ ಆಹಾರ ಹಾಗು ಪಾನೀಯಗಳ ಆಂತರ್ಯದಲಿದ್ದ ಗಾಳಿ ಸಹ ತೇಗಿನ ಮೂಲಕ ಹೊರಹೋಗುವುದು. ಆದರೆ ಕರುಳಿನ ಒಳಗೇ ಉತ್ಪತ್ತಿಯಾಗುವ ವಾಯು ಶೇಕಡ 74ರಷ್ಟು ಮತ್ತು ಅದು ವಾಸ್ತವವಾಗಿ ಅಧೋವಾಯುವಿಗೆ ಕಾರಣ.
ನಮ್ಮ ಕರುಳಿನ ಸೂಕ್ಷ್ಮಜೀವಾಣುಗಳ ಸಂಯೋಜನೆ ಕೂಡ ವಾಯು ಪ್ರಮಾಣಕ್ಕೆ ಕಾರಣ ಮತ್ತು ಅದು ಎಲ್ಲರಲ್ಲೂ ಒಂದೇಸಮನಾಗಿ ಸಹ ಇರುವುದಿಲ್ಲ. ಕೆಲವರಲ್ಲಿ ಅವರವರ ಸೂಕ್ಷ್ಮ ಜೀವಾಣುಗಳ ವೈವಿಧ್ಯತೆಯಿಂದ ಪೂರ್ವಭಾವಿಯಾಗಿ ಆಂತರಿಕ ವಾಯುವಿನ ಉತ್ಪಾದನೆ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ದೊಡ್ಡ ಕರುಳಿನಲ್ಲಿ ಮಾತ್ರ ಎಲ್ಲ ಸೂಕ್ಷ್ಮಜೀವಾಣುಗಳ ವಾಸ ಕೇಂದ್ರೀಕೃತ ಆಗಿರುವುದು. ಆ ಒಂದು ವಿಷಯದಲ್ಲಿ ಸಣ್ಣ ಕರುಳು ಬರಡು ಎಂದೇ ಹೇಳಬಹುದು. ಅಲ್ಲದೆ ಕರುಳು ಸಂಪೂರ್ಣ ಹೀರಿಕೊಳ್ಳದೆ ಉಳಿಕೆಯಾದ ಆಹಾರ ಕೂಡ ದೊಡ್ಡ ಕರುಳಿನಲ್ಲಿ ಹುದುಗುವಿಕೆಗೆ ಗುರಿಯಾಗುವುದು. ಹಾಗಾಗಿ, ಸೂಕ್ಷ್ಮಜೀವಿಗಳ ಸಂಯೋಜನೆಗಿಂತ ಹೆಚ್ಚಾಗಿ ಪಚನವಾಗದ ಆಹಾರದ ಉಳಿಕೆಯಿಂದ ಕೂಡ ವಾಯು ಅಧಿಕ ಉತ್ಪತ್ತಿಯಾಗುತ್ತದೆ. ಉದಾಹರಣೆಗೆ, ಹುದುಗುವಿಕೆ ಕಡಿಮೆ ಇರುವ ಆಹಾರ (less fermentable food) ಸೇವನೆಯಿಂದ ವಾಯು ಪ್ರಮಾಣವನ್ನೂ ಕಡಿಮೆಮಾಡಬಹುದು. ಇಷ್ಟೇ ಅಲ್ಲದೆ, ಸಾಮಾನ್ಯ ವ್ಯಕ್ತಿಗಳಲ್ಲಿ ಅಧಿಕವಾದ ಕರುಳಿನ ವಾಯು, ನೋವು ಮತ್ತು ಉಬ್ಬರಕ್ಕೆ ಕಾರಣ ಆಗುವುದಿಲ್ಲ. ಬದಲಿಗೆ, ವಾಯುವಿನ ಅಸಾಮಾನ್ಯ ಕ್ರಿಯಾಶೀಲತೆಯು(abnormal intestinal gas dynamics) ನೋವು, ಉಬ್ಬರ ಮತ್ತು ಉದರದ ಹಿಗ್ಗುವಿಕೆಗಳಿಗೆ ಕಾರಣ – ವಾಯುವಿನ ಒಟ್ಟು ಪ್ರಮಾಣ ಹೆಚ್ಚು ಅಥವ ಕಡಿಮೆ ಇಲ್ಲಿ ಮುಖ್ಯ ಅಲ್ಲ.
ವಾಸನೆ:
ಸಹಜವಾಗಿ ಅಧೋವಾಯು ಸ್ವಲ್ಪ ವಾಸನೆಗೆ ಕಾರಣವಾದರು, ಕೆಲವೊಮ್ಮೆ ಆ ವಾಸನೆ ಅತಿ ಹೆಚ್ಚಾಗಿ ದುರ್ಗಂಧವಾದಾಗ ಅಂಥ ವ್ಯಕ್ತಿಗೆ ಮುಜುಗರ ಮತ್ತು ಸಾಮಾಜಿಕ ಸಂಕಟ ಖಂಡಿತ ಆಗುವುದು. ಇತ್ತೀಚಿನ ತಿಳಿವಳಕೆ ಪ್ರಕಾರ, ವಾಯುವಿನ ದುರ್ವಾಸನೆ ಹಾಗು ಅತಿಶಬ್ದ ಮತ್ತು ಅದರ ತೇವಾಂಶ ಗಳಿಗೂ ಪರಸ್ಪರ ಸಂಬಂಧ ಇದೆಯಂತೆ.
ಹತೋಟಿರಹಿತ ವಾಯುವಿನ ಸೋರಿಕೆ (incontinence of gas) ಕೂಡ ವ್ಯಕ್ತಿಯ ಅತಿ ಮುಜುಗರಕ್ಕೆ ಕಾರಣವಾಗುವುದುಂಟು. ವಾಯು ಹೊರಹೋಗದ ಹಾಗೆ ತಡೆದು ಹಿಡಿದಿಡುವ ಕರುಳ ಸ್ನಾಯುವಿನ ತೊಂದರೆಗಳಿಂದ ಈ ರೀತಿ ಹತೋಟಿಯಿಲ್ಲದೆ ವಾಯುವಿನ ಜಿನುಗುವಿಕೆ ಉಂಟಾಗುವುದು.
ಕಾರಣ:
ಮೊದಲೆ ತಿಳಿದುಕೊಂಡ ಹಾಗೆ ಕರುಳಿನ ವಾಯು ಅಂತರ್ವರ್ಧಕ ಮತ್ತು ಬಹಿರ್ವರ್ಧಕ ಎಂಬ ಎರಡು ಭಾಗಗಳ ಸಂಯುಕ್ತದಿಂದ ಕೂಡಿದೆ. ಬಹಿರ್ವರ್ಧಕ ಅಂದರೆ ಹೊರಗೆ ಉತ್ಪತ್ತಿಯಾಗುವಂಥ ವಾಯು — ಒಂದನೆಯದಾಗಿ ನಾವು ಊಟ ಮಾಡುವಾಗ ಹಾಗು ಪಾನೀಯ ಕುಡಿಯುವಾಗ ಜೊತೆಯಲ್ಲಿ ನುಂಗುವ ಗಾಳಿ ಮತ್ತು ಎರಡನೆಯದಾಗಿ ಓಕರಿಕೆ ಬರುವಂತಹ ಕೆಲವು ಸಂದರ್ಭಗಳಲ್ಲಿ ಅಧಿಕ ಜೊಲ್ಲು ಉಂಟಾಗಿ ಹೆಚ್ಚುಹೆಚ್ಚು ಗಾಳಿ ನುಂಗುವುದರಿಂದ ಉತ್ಪತ್ತಿಯಾಗುವುದು.
ಅಂತರ್ವರ್ಧಕ ಅಥವ ದೇಹದ ಒಳಗೆ ಉತ್ಪತ್ತಿಯಾಗುವ ಗಾಳಿ — ಕೆಲವು ಆಹಾರ ಪದಾರ್ಥಗಳ ಪಚನಕ್ರಿಯೆಯ ಕಾರಣ ಉಂಟಾಗುವ ವಾಯು ಅಥವ ಅಪೂರ್ಣ ಜೀರ್ಣಕ್ರಿಯೆಯಿಂದ ಸಹ ಉಂಟಾಗುವ ಗಾಳಿ (ಉದಾಹರಣೆಗೆ ಮಲವಿಸರ್ಜನೆಯ ಸಮಯದಲ್ಲಿ ಅದರ ಸಂಗಡ ಅತ್ಯಧಿಕ ಪ್ರಮಾಣದ ಕೊಬ್ಬನ್ನು ವಿಸರ್ಜಿಸುವ ‘ಸ್ಟಿಯಟೋರಿಯ’ ಎಂಬ ತೊಂದರೆಯಿದ್ದಾಗ). ಯಾವುದೆ ಕಾರಣದಿಂದಾಗಿ ಜಠರ ಹಾಗು ಕರುಳಿನಲ್ಲಿ ಸಂಪೂರ್ಣ ಜೀರ್ಣವಾಗದ ಆಹಾರದ ಉಳಿಕೆಗಳು ದೊಡ್ಡ ಕರುಳನ್ನು ತಲಪಿದಾಗ, ಅಲ್ಲಿ ಹುದುಗುವಿಕೆಗೆ (ಈಸ್ಟ್ ಮುಂತಾದ ಕಾರಣ) ತುತ್ತಾಗಿ ಅಧೋವಾಯುವಿನ ಉತ್ಪತ್ತಿ ಆಗುವುದು.
ಪಾಲಿಸ್ಯಾಕರೈಡ್ ಎಂಬ ಅಂಶದಿಂದ ಕೂಡಿದ ಕೆಲವು ಆಹಾರ ಪದಾರ್ಥಗಳು ಸಹ ಹೆಚ್ಚು ವಾಯು ಉತ್ಪಾದನೆಗೆ ಕಾರಣ. ಉದಾಹರಣೆಗೆ, ಬೀನ್ಸ್, ಈರುಳ್ಳಿ, ವಸಂತದ ಈರುಳ್ಳಿ ಅಥವ ಈರುಳ್ಳಿ ಹೂವು, ಬೆಳ್ಳುಳ್ಳಿ, ಅನೇಕ ರೀತಿಯ ಬೇಳೆಗಳು, ಮೂಲಂಗಿ,ಆಲುಗೆಡ್ಡೆ, ಗೆಣಸು, ಗೋಡಂಬಿ, ಓಟ್ಸ್, ಗೋಧಿ, ಬ್ರೆಡ್ಡುಗಳಲ್ಲಿರುವ ಈಸ್ಟ್, ಹೂಕೋಸು, ಎಲೆಕೋಸು, ಬ್ರೊಕ್ಕೊಲಿ ಮುಂತಾದವು ಕೇವಲ ವಾಯುವಿನ ಪ್ರಮಾಣ ಮಾತ್ರ ಅಲ್ಲದೆ ವಾಸನೆಯ ತೀವ್ರತೆಯನ್ನೂ ಸಹ ಹೆಚ್ಚಿಸುವುದು ತಿಳಿದುಬಂದಿದೆ. ಬೀನ್ಸ್ ಗಳಲ್ಲಿರುವ ವಿಶೇಷ ಅಂಶವಾದ ಕಾರ್ಬೊಹೈಡ್ರೇಟನ್ನು ಸಸ್ತನಿಗಳು (mammals) ಜೀರ್ಣಿಸಿಕೊಳ್ಳುವುದು ಕಷ್ಟ; ಆದರೆ ನಮ್ಮ ಕರುಳ ಬ್ಯಾಕ್ಟೀರಿಯಗಳು ಅವುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ. ಅಲ್ಲದೆ ಅಂತಹ ಕಾರ್ಬೊಹೈಡ್ರೇಟುಗಳು ಸ್ವಲ್ಪವೂ ಬದಲಾಗದೆ ಸಣ್ಣ ಕರುಳಿನ ಮೂಲಕ ದೊಡ್ಡ ಕರುಳನ್ನು ತಲಪಿದಾಗ, ಅಲ್ಲಿನ ಬ್ಯಾಕ್ಟೀರಿಯಾಗಳು ಅವುಗಳನ್ನು ಅತಿ ಸುಲಭವಾಗಿ ಹುದುಗುವಿಕೆಗೆ ಒಳಪಡಿಸುವುದರಿಂದ ನಮ್ಮ ದೊಡ್ಡ ಕರುಳಿನಲ್ಲಿ ಅಧಿಕವಾಗಿ ವಾಯು ಉತ್ಪತ್ತಿಯಾಗುತ್ತದೆ.
ಅಧಿಕವಾದ ಮತ್ತು ಅತಿ ದುರ್ನಾತದಿಂದ ಕೂಡಿದ ವಾಯು ಕೆರಳು ಕರುಳಿನ ಲಕ್ಷಣಗಳಂಥ ಕೆಲವು ಕಾಯಿಲೆಗಳಿಂದ ಬರುವ ಸಾಧ್ಯತೆಯ ಜೊತೆಗೆ, ಕೆಲವು ಔಷಧಗಳಿಂದಲೂ ಬರಬಹುದು – ಉದಾಹರಣೆಗೆ ಐಬುಪ್ರೊಫೆನ್ (ನೋವು/ಜ್ವರದ ಮಾತ್ರೆ), ಮಲಬದ್ಧತೆಯ ಔಷಧಗಳು, ಕೊಲೆಸ್ಟಿರಾಲ್ ಹತೋಟಿಗೆ ಉಪಯೋಗಿಸುವ ಸ್ಟ್ಯಾಟಿನ್ ಔಷಧಗಳು ಮುಂತಾಗಿ.
99% ರಷ್ಟು ಅಧೋವಾಯು ಆಮ್ಲಜನಕ, ಸಾರಜನಕ, ಜಲಜನಕ, ಇಂಗಾಲದ ಡೈಯಾಕ್ಸೈಡ್ ಮತ್ತು ಮೀಥೇನ್ ಎಂಬ ವಾಸನೆ ಇಲ್ಲದ ಅನಿಲಗಳಿಂದ ಕೂಡಿದೆ. ಸಾರಜನಕವು ಕರುಳಿನಲ್ಲಿ ತಯಾರಾಗುವುದಿಲ್ಲ; ಬದಲಿಗೆ ಅದು ಪರಿಸರದ ಗಾಳಿಯ ಒಂದು ಅಂಶವಾಗಿದೆ. ಹಾಗಾಗಿ, ಸಾರಜನಕ ಹೆಚ್ಚಿರುವಂಥ ವಾಯು ಕೆಲವು ರೋಗಿಗಳ ಕರುಳಲ್ಲಿ ಇದ್ದರೆ, ಅದು ಅವರ ಏರೋಫೇಜಿಯಾ ತೊಂದರೆಯ ಕಾರಣದಿಂದ (ಅಧಿಕ ಗಾಳಿ ನುಂಗುವುದರಿಂದ ಬಂದದ್ದು). ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ, ಮೀಥೇನ್, ಜಲಜನಕ ಮತ್ತು ಇಂಗಾಲದ ಡೈಯಾಕ್ಸೈಡ್ ಮೂರೂ ಒಟ್ಟು ಸೇರಿ ಶೇಕಡ 75 ಪ್ರಮಾಣದಷ್ಟಿದ್ದು, ಅದಷ್ಟೂ ಕರುಳಿನಲ್ಲೆ ಉತ್ಪತ್ತಿಯಾಗುವುದು. ಇದೆ ಸಂದರ್ಭ ಇನ್ನೊಂದು ವಿಷಯ ತಿಳಸಲೇಬೇಕು; ಅದೇನೆಂದರೆ ಒಬ್ಬ ವ್ಯಕ್ತಿಯ ಅಧೋವಾಯುವನ್ನು ಹೊತ್ತಿಸಿ ಉರಿಸಬಹುದು! ಇದನ್ನು ಕೇಳಿಸಿಕೊಂಡವರಿಗೆ ಒಮ್ಮೆಲೆ ತಮಾಷೆ ಅಥವ ಜೋಕ್ ಅನ್ನಿಸಬಹುದಾದರೂ, ಹೌದು, ಮೀಥೇನ್ ಮತ್ತು ಜಲಜನಕ ಎರಡೂ ಸಹ ದಹನಕ್ರಿಯೆಗೆ ಒಳಗಾಗಬಲ್ಲ ಅನಿಲಗಳಾದ್ದರಿಂದ, ಅಧೋವಾಯುವನ್ನು ಉರಿಸಬಹುದು.
ಒಬ್ಬ ವ್ಯಕ್ತಿಯ ವಾಯುವಿನಲ್ಲಿ ಜಲಜನಕಕ್ಕಿಂತ ಮೀಥೇನ್ ಅನಿಲ ಹೆಚ್ಚಿದ್ದರೆ ಮನುಷ್ಯ ಬೊಜ್ಜಿನ ವ್ಯಕ್ತಿ ಆಗಿರಬಹುದು ಅಥವ ಆತನಿಗೆ ಮಲಬದ್ಧತೆಯ ತೊಂದರೆ ಇರಬಹುದು. ಅಂತಹ ವ್ಯಕ್ತಿಗಳ ಕರುಳಿನಲ್ಲಿ ಸೂಕ್ಷ್ಮಜೀವಿಗಳು ಜಲಜನಕವನ್ನು ಮೀಥೇನ್ ಅನಿಲವಾಗಿ ಬದಲಾಯಿಸುವುದರಿಂದ, ಆ ವ್ಯಕ್ತಿಯ ಆಹಾರದ ಕೊಬ್ಬನ್ನು ಆತನ ಕರುಳು ಹೆಚ್ಚು ಹೀರಿಕೊಳ್ಳುವಂತಾಗಿ ಬೊಜ್ಜು ಹೆಚ್ಚಾಗುವುದು. ಹಾಗಂತ ಎಲ್ಲ ಮಾನವರ ವಾಯುವಿನಲ್ಲೂ ಮೀಥೇನ್ ಅನಿಲ ಇದ್ದೆ ಇರುವುದೂ ಇಲ್ಲ.
ಇನ್ನುಳಿದ 1% ರಷ್ಟು ಸಂಯುಕ್ತಗಳು (compounds) ವಾಯುವಿನ ವಾಸನೆಗೆ ಕಾರಣ; ಅವು ಇಂಡೋಲ್, ಸ್ಕ್ಯಾಟೋಲ್, ಅಮೋನಿಯ ಮುಂತಾಗಿ. ಗಂಧಕದ (sulfur compounds) ಸಂಯುಕ್ತಗಳಿಂದ, ಅದರಲ್ಲಿಯೂ ಹೈಡ್ರೊಜನ್ ಸಲ್ಫೈಡ್ ಎಂಬುದರಿಂದ, ಅತಿಯಾದ ವಾಸನೆ ಉಂಟಾಗುವುದೆಂದು ತಿಳಿದುಬಂದಿದೆ. ಅಷ್ಟಲ್ಲದೆ, ಕರುಳಿನಲ್ಲಿರುವ ಸೂಕ್ಷ್ಮಜೀವಿಗಳೂ ಸಹ ವಾವನೆಗೆ ಕಾರಣ. ದೊಡ್ಡ ಕರುಳಿನ ರೆಕ್ಟಮ್ (ಗುದನಾಳ) ಭಾಗದಲ್ಲಿ ಮಲ ಶೇಖರವಾಗಿರುವುದೂ ವಾಸನಗೆ ಕಾರಣ. ಪ್ರೋಟೀನ್ ಆಹಾರ, ಅದರಲ್ಲೂ ಗಂಧಕಯುಕ್ತ ಪ್ರೋಟೀನ್ ಸೇವನೆ ಅಧಿಕ ವಾಸನೆಗೆ ಕಾರಣ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ 24 ಘಂಟೆಗೆ 475 ರಿಂದ 1490 ಮಿಲಿಲೀಟರಿನಷ್ಟು ಗಾಳಿ ಉತ್ಪತ್ತಿಯಾಗುವುದಂತೆ. ಅದರಲ್ಲಿ ವ್ಯಕ್ತಿ ವ್ಯಕ್ತಿಯ ಆಹಾರ ಸೇವನೆಯ ಮೇಲೆ ಎಷ್ಟೆಷ್ಟು ಗಾತ್ರ ಎಂಬುದು ಬದಲಾಗುವುದು. ಹಾಗೆಯೆ ಒಂದು ದಿನಕ್ಕೆ ಎಂಟರಿಂದ ಇಪ್ಪತ್ತರವರೆಗೆ ಒಬ್ಬ ವ್ಯಕ್ತಿ ವಾಯು ಬಿಡಬಹುದು. ಮತ್ತು, ಪ್ರತಿ ಸಲದ ವಾಯುವಿನ ಘನ ಅಳತೆ 5 ರಿಂದ 375 ಮಿಲಿಲೀಟರ್ ಅಂದಾಜು ಇರುವುದಂತೆ. ಈ ವಿಷಯದಲ್ಲಿ, ಮಹಿಳೆ ಮತ್ತು ಪುರುಷರಲ್ಲಿ ಹೆಚ್ಚು ವ್ಯತ್ಯಾಸ ಕಂಡುಬರುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣದ ವಾಯುವಿನ ಪ್ರಮಾಣ ಇನ್ನುಳಿದ ಇಡೀ ದಿನದ ವಾಯು ಪ್ರಮಾಣಗಳಿಗಿಂತ ಹೆಚ್ಚಿರುವುದಂತೆ. ಇದಕ್ಕೆ ಕಾರಣ ರಾತ್ರಿ ಮಲಗಿದ್ದಾಗ ದೊಡ್ಡ ಕರುಳಿನಲ್ಲಿ ಗಾಳಿಯು ಹೆಚ್ಚಾಗಿ ಸಂಗ್ರಹ ಆಗುವುದು; ಅಲ್ಲದೆ ಬೆಳಗ್ಗೆ ಎದ್ದ ತಕ್ಷಣದ ಕೆಲವು ಘಂಟೆಗಳ ಕಾಲ ಹೆಚ್ಚಾದ ಕರುಳಿನ ಸಂಚಲನದಿಂದ (peristaltic activity) ಕೂಡ. ವಿಶೇಷ ಎಂದರೆ, ಒಬ್ಬ ವ್ಯಕ್ತಿಯು ನಿಂತಿರುವ ಸ್ಥಿತಿಯಲ್ಲಿ ಕರುಳ ವಾಯು ಹೆಚ್ಚು ಸಮರ್ಥವಾಗಿ ರವಾನೆಯಾಗುವಷ್ಟು, ಮಲಗಿದ ಸ್ಥಿತಿಯಲ್ಲಿ ಆಗುವುದಿಲ್ಲ ಎಂದು ಗೊತ್ತಾಗಿದೆ.
ಇನ್ನು ವಾಯು ಹೊರಹೋಗುವಾಗ
ಆಗುವ ಶಬ್ದ, ಒಂದನೆಯದಾಗಿ ವಾಯುವಿನ ಒಟ್ಟು ಪ್ರಮಾಣದ ಮೇಲೆ ಮತ್ತು ಎರಡನೆಯದಾಗಿ ಗಾಳಿಯು ಹೊರ ಹೋಗುವ ದ್ವಾರದ ಅಳತೆ ಮತ್ತು ಸೆಳೆತ (tension) ಹಾಗು ವಾಯು ಹೊರಬರುವ ಶಕ್ತಿ ಮತ್ತು ವೇಗದ ಮೇಲೆ ಅವಲಂಬಿಸಿದ್ದು, ಅದಕ್ಕೆ ತಕ್ಕಂತೆ ಬದಲಾಗುವುದು. ಇನ್ನು ಕೆಲವು ಸಲ ಕೆಮ್ಮಿದಾಗ ಅಥವ ಸೀನು ಬಂದಾಗ ಇದ್ದಕ್ಕಿದ್ದಂತೆ ವ್ಯಕ್ತಿಗೆ ಅರಿವಿಲ್ಲದೆ ಗಾಳಿ ಹೊರಬಂದು, ಅದರಲ್ಲೂ ಜನಗಳ ನಡುವೆ ಬಂದಾಗ, ಸಾಕಷ್ಟು ಮುಜುಗರ ಸಹ ಸಾಧ್ಯ.
ಜಗತ್ತಿನ ಅನೇಕ ಸಮಾಜಗಳಲ್ಲಿ ಸಾರ್ವಜನಿಕವಾಗಿ ವಾಯು ಹೊರ ಹರಿಸುವುದು ಅತಿ ಮುಜುಗರಕ್ಕೆ ಕಾರಣ. ಹಾಗಾಗಿ ಅಂತಹ ಸ್ಥಳಗಳಲ್ಲಿ ಜನರು ವಾಯು ಹೋಗದಂತೆ ತಡೆಯುವ ಪ್ರಯತ್ನ ಮಾಡುವುದುಂಟು; ಅಥವ ನಿಶಬ್ದವಾಗಿ ಹೊರಬಿಡಲು ಪ್ರಯತ್ನ ಮಾಡುವರು. ಇನ್ನು ಕೆಲವೆಡೆ ಕೆಮ್ಮಿಗೆ ಇದ್ದಷ್ಟೆ ಮುಜುಗರ ಮಾತ್ರ ಅಧೋವಾಯುವಿಗೂ ಇದೆ ಎಂದರೆ ಅಚ್ಚರಿ ಪಡಬೇಕಾಗಿಲ್ಲ.
ಜಾನುವಾರುಗಳ ಅಧೋವಾಯು ಹಾಗು ತೇಗಿನಿಂದ ಬರುವ ಮೀಥೇನ್ ಅನಿಲದಿಂದ ಜಗತ್ತಿನಲ್ಲಿ ‘ಹಸಿರುಮನೆ ಅನಿಲ’ಗಳು ಅಧಿಕವಾಗಿ ಹವಾಮಾನದ ವೈಪರೀತ್ಯಕ್ಕೆ ಕಾರಣ ಎಂಬ ಕೂಗಿದೆ. ನ್ಯೂಜಿಲೆಂಡ್ ದೇಶದಲ್ಲಿ ಕೃಷಿ ಉತ್ಪನ್ನ ಅತಿ ಹೆಚ್ಚಿರುವುದರಿಂದ, ಅಲ್ಲಿಯ ಸರ್ಕಾರ ಹಸಿರುಮನೆ ಅನಿಲಗಳನ್ನು ಕಡಿಮೆಗೊಳಿಸುವ ಸಾಕಷ್ಟು ಕ್ರಮಕ್ಕೆ ತೊಡಗಿದ್ದು, ಅದಕ್ಕಾಗಿ ‘ಕೃಶಿ ಉತ್ಸರ್ಜನ ಸಂಶೋಧಕ ತೆರಿಗೆ’ (agricultural emissions research levy) ವಿಧಿಸಲು ಚಿಂತಿಸಿದಾಗ, ಅದನ್ನು “ಹೂಸು ತೆರಿಗೆ” ಎಂದು ಲೇವಡಿ ಮಾಡಿ, ರೈತರು ಹಾಗು ವಿರೋಧ ಪಕ್ಷದ ರಾಜಕಾರಿಣಿಗಳು ಪ್ರತಿಭಟಿಸಿದ್ದರು.
ಈ ಜಗತ್ತು ಎಂಥ ವಿಚಿತ್ರ ಎಂದರೆ, ಬೇರೆಯವರ ವಾಯುವಿಗೆ ಅಸಹ್ಯಪಡುವ ಅನೇಕರು, ತಮ್ಮದೆ ವಾಯುವಿಂದ ತಬ್ಬಿಬ್ಬಾಗುವುದಿರಲಿ, ವಾಸ್ತವವಾಗಿ ಆನಂದ ಪಡುವರು ಎಂದು ತಿಳಿದುಬಂದಿದೆ.
ವೃದ್ಧರಲ್ಲಿ ವಾಯು ಹೆಚ್ಚಾಗಲು ಕಾರಣ, ಅವರಲ್ಲಿ ಚಯಾಚಪಚಯ (metabolism) ಕಡಿಮೆ ಆಗುವುದರಿಂದ ಎಂದು ತಿಳಿದಿದೆ. ಅವರ ಜೀರ್ಣಾಂಗ ವ್ಯವಸ್ಥೆಯಲ್ಲೆ ಆಹಾರ ಹೆಚ್ಚು ಹೊತ್ತು ಕೂತುಕೊಂಡಿರುವ ಕಾರಣ ಹೆಚ್ಚಾದ ವಾಯು ಉತ್ಪತ್ತಿಯಾಗುವುದು ಎಂದು ಹೇಳಲಾಗಿದೆ. ಅಲ್ಲದೆ ಅವರ ಜಠರ ಪಚನಕ್ರಿಯೆಗೆ ಅವಶ್ಯವಾದ ಆಮ್ಲವನ್ನು ಕಡಿಮೆ ಉತ್ಪತ್ತಿ ಮಾಡುವುದೂ ಸಹ ಕಾರಣ. ಇದರ ಜೊತೆಗೆ, ನಮ್ಮ ಜೀರ್ಣಾಂಗಗಳು ಸ್ನಾಯುಗಳಿಂದ ಮಾಡಲ್ಪಟ್ಟಿವೆ. ವಯಸ್ಸಾದ ಹಾಗೆ ಈ ಸ್ನಾಯುಗಳ ಸಾಮರ್ಥ್ಯ ಕಡಿಮೆಯಾಗಿ, ಪಚನಕ್ರಿಯೆ ಮತ್ತಷ್ಟು ಕುಗ್ಗಿದಂತಾಗುವುದರಿಂದ ಹೆಚ್ಚು ವಾಯು ಉಂಟಾಗುತ್ತದೆ. ಇನ್ನುಳಿದ ಕಾರಣಗಳಲ್ಲಿ, ವಯಸ್ಸಾದ ಹಾಗೆ ಜೀರ್ಣಕಾರಿ ಕಿಣ್ವಗಳ ಉತ್ಪತ್ತಿ ಸಹ ಕಡಿಮೆಯಾಗುವುದರಿಂದ ಹೆಚ್ಚಿನ ವಾಯು ಆಗುವುದು. ಲ್ಯಾಕ್ಟೇಸ್ ಎಂಬ ಕಿಣ್ವ ಕಮ್ಮಿಯಾದಾಗ ಚೀಸ್, ಹಾಲು ಮತ್ತು ಇತರೆ ಹಾಲಿನ ಉತ್ಪನ್ನಗಳ ಜೀರ್ಣ ಸಹ ಕುಗ್ಗಿ ಹೆಚ್ಚು ವಾಯು ಆಗುವುದು. ಮಲಬದ್ಧತೆ ಹಾಗು ಉದರ ಉಬ್ಬರ ಮಾಡುವಂತಹ ಕೆಲವು ಔಷಧ ಕೂಡ ಹೆಚ್ಚಿನ ವಾಯುಕಾರಕ.
ಕೊನೆಯಲ್ಲಿ ಔಷಧೋಪಚಾರ ಅಲ್ಲದೆ, ಅಧೋವಾಯು ಕಡಿಮೆಮಾಡಲು ಕೆಲ ಇತರೆ ಸಲಹೆಗಳು:
… ಹೆಚ್ಚು ನೀರು ಕುಡಿಯುವುದರಿಂದ ಮಲಬದ್ಧತೆ ಇಲ್ಲವಾಗಿ ವಾಯು ಉತ್ಪತ್ತಿ ಸಹ ಕಡಿಮೆಯಾಗುವುದು.
… ಹೈನೋತ್ಪನ್ನಗಳನ್ನು ಆಹಾರದಲ್ಲಿ ಕಡಿತ ಅಥವ ಕಡಿಮೆಗೊಳಿಸುವುದು.
… ಬ್ರೊಕ್ಕೊಲಿ, ಕೋಸು, ಹೂಕೋಸು, ಮೊಳಕೆಗಳು ಮುಂತಾದ ವಾಯುಕಾರಕ ತರಕಾರಿಗಳಿಂದ ದೂರ ಉಳಿಯುವುದು.
… ಸೋಡ ಮುಂತಾದ ಎಲ್ಲ ಥರದ ಕಾರ್ಬೊನೇಟೆಡ್ ಪಾನೀಯಗಳನ್ನು ತ್ಯಜಿಸುವುದು.
… ಹುದುಗಿಸಿದ ಆಹಾರ ಪದಾರ್ಥ ತ್ಯಾಜ್ಯ (fermented foods)
… ಸಾವಧಾನದಿಂದ ಚೆನ್ನಾಗಿ ಅಗಿದು ತಿನ್ನುವುದು ಮುಂತಾದುವುಗಳ ಅಳವಡಿಕೆಯಿಂದ “ವಾಯು ನೈರ್ಮಲ್ಯ” ವ್ಯಕ್ತಿ ಎನ್ನಿಸಿಕೊಳ್ಳಿ!
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ನಿಮ್ಮ flatulence ಬಗ್ಗೆ ಲೇಖನ ಚೆನ್ನಾಗಿದೆ. ( ಈ ಅಧೋ ವಾಯು ಪದವೇ ನನಗೆ ಗೊತ್ತಿರಲಿಲ್ಲ) ನಿಜಕ್ಕೂ ಒಂದೊಳ್ಳೆಯ, ತುಂಬಾ ಸಾಮಾನ್ಯವಾದ ವಿಷಯವನ್ನು ಅಸಮಾನ್ಯವಾಗೇ ತಿಳಿಸಿದ್ದೀರ.
Congratulations