ಲೇಖನಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಒಂದು ಸಣ್ಣ ಬಿರುಕು ಸಾಲದೇ….
ಯೌವನದಲ್ಲಿ ಅವನು ಅವಳನ್ನು ಇಷ್ಟಪಟ್ಟು ಹಿರಿಯರನ್ನು ಎದುರು ಹಾಕಿಕೊಂಡು, ಪ್ರೇಮಿಸಿ, ಮದುವೆಯಾದ. ಆದರೆ ಆ ಸಂಬಂಧ ಬಹಳ ದಿನ ಉಳಿಯದೆ ಅವರಿಬ್ಬರ ನಡುವೆ ಯಾವುದೋ ಸಣ್ಣ ವಿಷಯಕ್ಕೆ ಮನಸ್ತಾಪವಾಗಿ ತಮ್ಮ ಮಕ್ಕಳಿಗೂ ವಂಚಿಸಿ ಅವರಿಬ್ಬರೂ ಬೇರ್ಪಟ್ಟರು.
“ಒಂದು ಸಂಸ್ಥೆ ಅವನಿಂದಲೇ ನಡೆಯುತ್ತದೆ, ಅವನಿದ್ದರೆ ತುಂಬಾ ಸಂಘಟನಾತ್ಮಕವಾಗಿ ಕಾರ್ಯ ಮಾಡಿಸುತ್ತಾನೆ ” ಎಂದು ಸದಾ ಪ್ರೋತ್ಸಾಹಿಸುತ್ತಿದ್ದ ಕಂಪನಿಯ ಮಾಲೀಕ, ಯಾಕೋ ಈಗೀಗ ಅವನ ಮೇಲೆ ರೇಗಾಡುತ್ತಾನೆ. ಅವನನ್ನು ಕಂಡರೆ ಆಗಲಾರದಷ್ಟು ದ್ವೇಷಿಸುತ್ತಾರೆ.
ಮೇಲಿನ ಎರಡು ಘಟನೆಗಳು ಮನುಷ್ಯನ ಸಂಬಂಧಗಳ ಪ್ರಭಾವವನ್ನು ಪರಿಚಯಿಸುತ್ತವೆ. ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಗಟ್ಟಿಯಾಗಿ ಬೆರೆಯಲು ಅತ್ಯಂತ ಆಪ್ತವಾದುದು ಮನಸ್ಸು. ಸಂಬಂಧ ಗಟ್ಟಿಗೊಳ್ಳಲು ಅನೇಕ ಕಾರಣಗಳಲ್ಲಿ ಆಪ್ತ ಬಾಂಧವ್ಯವೂ ಕೂಡ ಒಂದು. ಯಾವುದೋ ಒಂದು ಸೆಳೆತಕ್ಕೆ ಒಳಗಾಗಿ ಉಂಟಾದ ಅನುರುಕ್ತಿ, ಪ್ರೇಮಕ್ಕೆ ತಿರುಗಿ ಹೊಸ ಬದುಕಿನ ಸಂಬಂಧ ಬೆಳೆಯುತ್ತದೆ.
ಒಂದು ಕಾಲದಲ್ಲಿ ತನ್ನ ಕಂಪನಿಯ ನೌಕರರನ್ನು ಪ್ರೀತಿಯಿಂದ ಕಾಣುತ್ತಿದ್ದ ಮಾಲೀಕನು, ತನಗೆ ಬಂದ ಲಾಭದಲ್ಲಿ ಅವರಿಗೊಂದಿಷ್ಟು ಪಾಲು ನೀಡುತ್ತಿದ್ದನು. ಯಾವಾಗ ಅವನಲ್ಲಿ “ಇವರು ಚೆನ್ನಾಗಿ ದುಡಿಯುವುದಿಲ್ಲ, ಇವರು ಕಂಪನಿಯನ್ನು ಅವನತಿಯತ್ತ ಕೊಂಡೊಯ್ಯುತ್ತಾರೆ..” ಎನ್ನುವ ಸಣ್ಣ ಸಂಶಯ ಅವನ ತಲೆಯೊಳಗೆ ಹೊಕ್ಕಿತೋ.. ಅವನೊಳಗೆ ದ್ವೇಷದ ಕಾರಂಜಿ ಚಿಮ್ಮಿಬಿಡುತ್ತದೆ. ಅವನಿಗೆ ಮಾರುಕಟ್ಟೆ ವ್ಯವಸ್ಥೆ, ಕೊಂಡುಕೊಳ್ಳುವ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳದೆ, ತನ್ನ ನೌಕರರನ್ನು ಗುರಿ ಮಾಡಿಕೊಂಡು, ಸಂಶಯದಿಂದ ನೋಡಿ ತನ್ನ ಕಂಪನಿಯನ್ನು ಅವನತಿಯತ್ತ ಕೊಂಡೊಯ್ಯುವ ದುರಂತ ನಡೆದು ಬಿಡುತ್ತದೆ.
ಇನ್ನೂ ಒಂದು ಕುಟುಂಬ ಅತ್ಯಂತ ಪ್ರತಿಷ್ಠಿತವಾಗಿ ಸಮಾಜದಲ್ಲಿ ಗುರುತಿಸಿಕೊಂಡು, ಬಡವರು, ಕೂಲಿಕಾರರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾ, ಇಡೀ ಗ್ರಾಮಕ್ಕೆ ಗ್ರಾಮವೇ ಕುಟುಂಬವನ್ನು ಕೊಂಡಾಡುವಂತೆ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ ಯಜಮಾನನನ್ನು ಪ್ರೀತಿಯಿಂದ ಕಾಣಬೇಕಾದ ಕುಟುಂಬದ ಸದಸ್ಯರು, ಕುಟುಂಬಕ್ಕಾಗಿ ಏನೆಲ್ಲ ತ್ಯಾಗ ಮಾಡಿದ್ದಾರೆ ಹಿರಿಯರು ಎನ್ನುವುದನ್ನು ಮರೆತು, “ಅಯ್ಯೋ ನಾವು ಕತ್ತೆ ತರಹ ದುಡಿಯುತ್ತೇವೆ, ಆತನು ಸಾಲ ಮಾಡುತ್ತಾ ಮಾಡುತ್ತಾ ಸ್ವಂತಕ್ಕಾಗಿ ಗಳಿಸುತ್ತಾನೆ…” ಎನ್ನುವ ಸಂಶಯದ ಸಣ್ಣ ಬಿರುಕು ಮೂಡಿದರೆ…!! ಆ ಮನೆ ಒಡೆದ ಹಾಲಿನಂತಾಗಿ ಬಿಡುತ್ತದೆ.
25 ವರ್ಷಗಳ ತುಂಬ ದಾಂಪತ್ಯವನ್ನು ಅನುಭವಿಸಿದ ಜೋಡಿಗಳು ಗಂಡನ ಬಗ್ಗೆ ಹೆಂಡತಿಯೋ, ಹೆಂಡತಿಯ ಬಗ್ಗೆ ಗಂಡನೋ ಯಾರೋ ಮಾತು ಕೇಳಿ ಸಂಶಯದ ಸುಳಿ ಅವರ ತಲೆಯೊಳಗೆ, ಮನದೊಳಗೆ ಹೊಕ್ಕರೇ ಮುಗಿಯಿತು..!! ಬಾಳ ಪಯಣದ ಹಡಗು ಅಲ್ಲೋಲಕಲ್ಲೋಲವಾಗಿ, ನೀರಿನಲ್ಲಿ ಹಡಗು ಯಾವ ರೀತಿಯ ಮುಳುಗುತ್ತದೆಯೋ ಅದೇ ರೀತಿ ‘ಡೈವರ್ಸ್’ ಎನ್ನುವ ನಿರ್ಧಾರ ಇಡೀ ಸಂಸಾರವನ್ನು , ಕುಟುಂಬವನ್ನು ನಾಶಮಾಡುತ್ತದೆ. ಆಗ ಮಕ್ಕಳು ಅನಾಥರಾಗುತ್ತಾರೆ.
ನಿಜ, ಸಮಾಜದಲ್ಲಿಯಾಗಲಿ, ಕುಟುಂಬದಲ್ಲಿಯಾಗಲಿ, ಕಂಪನಿಯಲ್ಲಿಯಾಗಲಿ… ಒಳಿತನ್ನು ಬಯಸುವುದಾದರೆ ಮೊದಲು ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಹಿರಿಯರಿಗೆ ಗೌರವ ಕೊಡುವ, ಅವರ ತ್ಯಾಗವನ್ನು ನೆನಪಿಸುವ ದೊಡ್ಡ ಮನಸ್ಸು ನಮ್ಮದಾಗಬೇಕು. ಆಗ ಆ ಕುಟುಂಬಕ್ಕೆ, ಕಂಪನಿಗೆ, ಸಮಾಜಕ್ಕೆ, ಸಂಸ್ಥೆಗೆ.. ಒಂದು ಹಿರಿಮೆಯಿರುತ್ತದೆ. ಯಜಮಾನನಾದವರು ಎಲ್ಲವನ್ನು ಕಳೆದುಕೊಂಡು, ನೋವುಗಳನ್ನು ಅನುಭವಿಸುತ್ತಾ, ತನಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವಾಗ ಯಾರಾದರೂ ಕೊಂಕು ಮಾತನಾಡಿದರೆ, ಮನಸ್ಸಿಗೆ ಘಾಸಿಯಾಗುತ್ತದೆ. ದಾಂಪತ್ಯದಲ್ಲಾಗಲಿ, ಆರ್ಥಿಕತೆಯಲ್ಲಾಗಲಿ ಅಥವಾ ಇನ್ಯಾವುದೇ ದೊಡ್ಡ ಕಾರ್ಯದಲ್ಲಿಯಾಗಲಿ “ಸಂಶಯ” ಎನ್ನುವ ಪಿಶಾಚಿ ತಲೆಯೊಳಗೆ ಹೊಕ್ಕರೆ ಬದುಕೆ ಅಲ್ಲೋಲಕಲ್ಲೋಲವಾಗಿ ಬಿಡುತ್ತದೆ.
ಕುದಿಯುತ್ತಿರುವ ಹಾಲನ್ನು ನಾವು ಅತ್ಯಂತ ಜಾಗರೂಕತೆಯಿಂದ ಕಾಯಿಸಬೇಕು. ಕೆನೆಗಟ್ಟುವಂತೆ ನೋಡಿಕೊಳ್ಳಬೇಕು. ಅದನ್ನು ಹಾಗೆ ಬಿಟ್ಟರೆ ಸೀದು ಹೋಗುತ್ತದೆ. ಹಾಗೆಯೇ ಕುಟುಂಬದಲ್ಲಿ ಪ್ರೀತಿ ಕೆನ್ನೆಗಟ್ಟುವಂತೆ ಇರಬೇಕು. ಆದರೆ ದ್ವೇಷವನ್ನು ಸಾಧಿಸುವಂತೆ ಇರಬಾರದು. ಅಂತಹ ಸಣ್ಣ ಬಿರುಕು ಸುಳಿದರೆ ಪ್ರಾರಂಭದಲ್ಲಿಯೇ ಅದನ್ನು ಮುಚ್ಚಿ ಸರಿಪಡಿಸಬೇಕು. ಇಲ್ಲದೇ ಹೋದರೆ ಬಿರುಕು ದೊಡ್ಡದಾಗುತ್ತದೆ. ಬೇರೆಯವರು ಬಂದು ತಮ್ಮ ಹಿರಿತನವನ್ನು ನಡೆಸುತ್ತಾ, ಕುಟುಂಬವನ್ನು ಒಡೆದು ಬಿಡುತ್ತಾರೆ. ಹಾಗೆಯೇ ಸಂಸ್ಥೆಯನ್ನು, ಕಂಪನಿಯನ್ನು ಬೇರೆಯವರ ಸುಪರ್ದಿಗೆ ಹೋಗಿ ಬಿಡುತ್ತದೆ. “ತಾನು ಕಟ್ಟಿದ ಒಂದು ಸಂಸ್ಥೆ ಹೀಗೆ ಹಾಳಾಯಿತಲ್ಲ” ಅನ್ನುವ ಕೊರಗು ಹಿರಿಯರ ಮನದಲ್ಲಿ ಮೂಡಿದರೆ ಅವರು ನೊಂದುಕೊಳ್ಳುತ್ತಾರೆ, ಎನ್ನುವ ಪ್ರಜ್ಞೆ ನಮ್ಮೊಳಗೆ ಇರಬೇಕು. ಆಗ ಮಾತ್ರ ‘ಅನುಮಾನ’ವೆಂಬ ಮತ್ತು ‘ಸಂಶಯ’ ವೆಂಬ ಸಣ್ಣ ಬಿರುಕು ದೊಡ್ಡದಾಗದಂತೆ ಅಥವಾ ಮೂಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿ ಸದಸ್ಯರ ಮೇಲೆ ಇರುತ್ತದೆ. ಹೆಂಡತಿಯ ಮೇಲೆ ಗಂಡನ ಜವಾಬ್ದಾರಿ, ಗಂಡನ ಮೇಲೆ ಹೆಂಡತಿಯ ಕಕ್ಕುಲತಿ ಮತ್ತು ದಂಪತಿಗಳು ಮಕ್ಕಳ ಮೇಲೆ ಹಾಗೇಯೇ ಮಕ್ಕಳು ದಂಪತಿಗಳ ಮೇಲೆ ಕಾಳಜಿಯಿರಬೇಕು. ಕುಟುಂಬದ ಯಜಮಾನನು ಸದಸ್ಯರ ಮೇಲೆ, ಸದಸ್ಯರು ಕುಟುಂಬದ ಯಜಮಾನನ ಮೇಲೆ, ಕಂಪನಿಯ ಬಾಸ್ ನೌಕರರ ಮೇಲೆ, ನೌಕರರು ಕಂಪನಿಯ ಬಾಸ್ ಮೇಲೆ ವಿಶ್ವಾಸವನ್ನು ಇಡಬೇಕು. ಪ್ರೀತಿಯನ್ನು ನೀಡಬೇಕು.
“ಅವರು ನಮ್ಮ ಕಂಪನಿಗಾಗಿ, ಕುಟುಂಬಕ್ಕಾಗಿ ಸದಾ ತ್ಯಾಗ ಮಾಡಿ, ಪರಿಶ್ರಮದಿಂದ ಬೆವರು ಹರಿಸಿ ದುಡಿಯುತ್ತಾರೆ” ಎನ್ನುವ ಸದಾಶಯ ಇಬ್ಬರೊಳಗೂ ಮೂಡಿದಾಗ ಅದ್ಯಾವ ವಿಘಟನೆಗೂ ಕಾರಣವಾಗುವುದಿಲ್ಲ. ಒಂದು ಸಣ್ಣ ಸಂಶಯದ ಬಿರುಕೊಂದು ಸಾಕಲ್ಲವೇ…? ಬದುಕು ಮುಗಿಯಲು…!! ಹಾಗಾಗದಂತೆ ನಾವು ನೀವು ಬದುಕನ್ನು ಕಟ್ಟಿಕೊಳ್ಳುತ್ತಲೇ, ಸ್ವೀಕರಿಸೋಣವೆಂದು ಸದಾಶಯ ಬಯಸುವೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸೂಪರ್ ಸರ್……
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು ತಮ್ಮ ಸದಾ ಅಭಿಪ್ರಾಯಕ್ಕೆ
ತುಂಬಾ ಚೆನ್ನಾಗಿ ಬರೆದಿರುವಿರಿ ಗುರುಗಳೇ ವಂದನೆಗಳು ಇಂದಿನ ಪರಿಸ್ಥಿತಿಗಳಲ್ಲಿ ನಂಬಿಕೆ ಎಂಬುದೇ ಬಲು ಅಪರೂಪದ ವಿಷಯ ವಸ್ತುವಾಗಿದೆ ಪರಸ್ಪರ ವಿಶ್ವಾಸ ಗೌರವ ಅಭಿಮಾನ ಇವುಗಳು ಇದ್ದಲ್ಲಿ ಬಿರುಕೆಗೆ ಅವಕಾಶ ಇರುವುದಿಲ್ಲ ಎಂಬುದು ನನ್ನ ಅನಿಸಿಕೆ ಅಲ್ಲವೇ ಗುರುಗಳೇ ತಮ್ಮ ಆಶಯವೂ ಸಹ ಇದೇ ಆಗಿದೆ ಎಂಬುದು ಸಂತಸದ ಸಂಗತಿ
ಸದೃಢತೆ ಇಲ್ಲದೆ ಸಂಬಂಧಗಳೇ ಸ್ವತ್ತು ಹೋಗುತ್ತಿರುವ ಪ್ರಸ್ತುತ ಕಾಲದಲ್ಲಿ ಅವುಗಳ ಗಟ್ಟಿ ಉಳಿವಿಗೆ ನಂಬಿಕೆ ಪ್ರೀತಿ ವಿಶ್ವಾಸಗಳೇ ಆಧಾರ. ಸಂಶಯ ಅನುಮಾನವೆಂಬ ಸಣ್ಣಕಿಡಿಯೊಂದು ಇಡೀ ಮನೆ(ಮನ)ಯನ್ನು ಸುಡಬಲ್ಲದು. ಸಂಶಯವೆಂಬ ಬಿರುಕು ಜೀವನವೆಂಬ ಗೋಪುರದಲ್ಲಿ ಮೂಡದಂತೆ ನೋಡಿಕೊಳ್ಳಬೇಕು ಎಂಬ ವಿಷಯ ವಿವಿಧ ಘಟನೆಗಳ ಮೂಲಕ ಚೆನ್ನಾಗಿ ಮೂಡಿಬಂದಿದೆ
ಅಭಿನಂದನೆಗಳು
ಅನುಮಾನಂ ಪೆಡಂಭೂತಂ ಎಂದು ದಾರ್ಶನಿಕರು ಹೇಳಿದ್ದಾರೆ. ನಂಬಿಕೆ ಇಲ್ಲದಾದಾಗ ಹೊಂದಾಣಿಕೆ ಕಷ್ಟ. ನಿಮ್ಮ ಲೇಖನ ವಾಸ್ತವದ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ. ಅಭಿನಂದನೆಗಳು.