ನಾನು ಇ (ಸ್ಮಾಯಿಲ್)ರೂಪೇಶ್ ಅವರ ಹೊಸ ಕಥೆ

ಈ ಸಾಮಾಜಿಕ ಜಾಲತಾಣದಿಂದ ಯಾರ್‌ಯಾರಿಗೆ ಲಾಭ ಆಗಿದಿಯೋ ಇಲ್ಲವೋ…! ಗೊತ್ತಿಲ್ಲ, ನನಗಂತೂ ತುಂಬ ಲಾಭ ಅಗಿದೆ. ಇದರಿಂದಾಗಿಯೇ ಇವತ್ತು ನನ್ನ ಪ್ರೀತಿ ಗೆದ್ದು ಮುಂದಿನ ಹಂತಕ್ಕೆ ಹೋಗ್ತಿರೋದು. ಸಂಕ್ಷಿಪ್ತವಾಗಿ ಹೇಳೋದಾದ್ರೆ ನಾನಿವತ್ತು ಮದುವೆ ಅಗ್ತಿರೋದು ಈ ಸಾಮಾಜಿಕ ಜಾಲತಾಣದಿಂದಾನೇ. ಸುಮಾರು ಎರಡು ತಿಂಗಳ ನಮ್ಮ ಆನ್‌ಲೈನ್ ಪ್ರೀತಿ ಇವತ್ತು ಮದುವೆ ಹಂತಕ್ಕೆ ಬಂದು ನಿಂತಿದೆ. ಈ ಪ್ರೀತಿ-ಪ್ರೇಮ ಅಂದರೇನೇ ಹೀಗೆ; ಯಾವಾಗ, ಎಲ್ಲಿ, ಹೇಗೆ ಪ್ರಾರಂಭ ಆಗುತ್ತದೆಂದು ಗೊತ್ತಾಗುವುದಿಲ್ಲ. ಅದರಲ್ಲೂ ಈಗಿನ ಕಾಲದ ಈ ಆನ್‌ಲೈನ್ ಪ್ರೀತಿ ಬಗ್ಗೆ ಹೇಳಲಿಕ್ಕೇನೆ ಆಗುವುದಿಲ್ಲ. ನನ್ನ ಪ್ರೇಮ್ ಕಹಾನಿಯೂ ಹಾಗೆಯೇ. ಸ್ಟಾರ್ಟ್ ಆಗಿ, ಇವತ್ತು ಮದುವೆ ಆಗುತ್ತಿದ್ದೇನೆ. ಸದ್ಯಕ್ಕೀವಾಗ ಮದುವೆ ರಿಜಿಸ್ಟರ್ ಆಫೀಸ್‌ನ ಪಕ್ಕದಲ್ಲಿರುವ ಹೋಟೆಲ್ನಲ್ಲಿ ಅವಳಿಗಾಗಿ ಕಾಯ್ತಾ ಇದ್ದೇನೆ. ಅವಳು ಹೇಳಿದ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಬಂದಿದ್ದೇನೆ. ಏನೋ ಒಂತರ ಖುಷಿ, ಅವಳನ್ನು ನೋಡುವ ತವಕದಲ್ಲಿ ಮನೆ ಗಡಿಯಾರ ನೋಡ್ಲಿಕ್ಕೂ ಟೈಮ್ ಇರಲಿಲ್ಲ. ಸೀದಾ ಬಂದೆ. ಇಲ್ಲಿಗೆ ಬಂದ ಮೇಲೆ ಗೊತ್ತಾಯ್ತು, ನಾನು ಅರ್ಧ ಗಂಟೆ ಮುಂಚೆಯೇ ಬಂದಿದ್ದೇನೆಂದು!
                ಒಹ್..! ಒಂದು ಪ್ಯಾರ ಮುಗಿದ್ರೂ, ನನ್ನ ಪರಿಚಯ ಮಾಡ್ಲಿಲ್ಲ ಅಲ್ವಾ..? ಅಂದ ಹಾಗೆ, ನನ್ನ ಹೆಸರು ಇಸ್ಮಾಯಿಲ್. ವಯಸ್ಸು ನಲವತ್ತೊಂದು. ಕಸ್ಟ್ಂ ಆಫೀಸರ್ ಆಗಿ ಸರ್ಕಾರಿ ಹುದ್ದೆಯಲ್ಲಿದ್ದೇನೆ. ಬೇಗಂ ರುಬೀನ ಜೊತೆ ಮದುವೆಯಾಗಿ ಒಬ್ಬ ಮಗನಿದ್ದಾನೆ.
                ಅರೆ, ನನ್ನ ಪರಿಚಯ ಕೇಳಿ ಆಶ್ಚರ್ಯವಾಗಿರಬೇಕಲ್ಲ…! ಮೊದಲ ಪ್ಯಾರದಲ್ಲಿ ಪ್ರೀತಿ, ಪ್ರೇಮ, ಮದುವೆ ಬಗ್ಗೆ ಹೇಳಿದವನು, ಎರಡನೆಯ ಪ್ಯಾರದಲ್ಲಿ ಆಗಲೇ ಮದ್ವೆಯಾಗಿ ಮಗನಿದ್ದಾನೆಂದು ಹೇಳ್ತಿದ್ದಾನಲ್ಲಾ ಅಂತ ಸ್ವಲ್ಪ ಗೊಂದಲ ಆಗಿರ್ಬೇಕಲ್ಲ…!
                ಹೇಳ್ತೇನೆ, ಎಲ್ಲಾ ಹೇಳ್ತೇನೆ. ತುಂಬಾ ದೊಡ್ಡ ಕಥೆಯೇನು ಅಲ್ಲ. ಹೇಗೂ ಅವಳು ಬರಲಿಕ್ಕೆ ಸಮಯವಿದೆಯಲ್ಲ, ಅಷ್ಟರೊಳಗೆ ನನ್ನ ಮತ್ತು ಅವಳ ಪ್ರೇಮ್ ಕಹಾನಿ ಹೇಳ್ತೇನೆ. ಚಿಕ್ಕದಾದ ಚೊಕ್ಕದಾದ ನಮ್ಮ ಪ್ರೇಮ್ ಕಹಾನಿ.


 
                                                                                                *
 
                ನಾನು ಹುಟ್ಟಿದ್ದು ೧೯೮೦ ರಲ್ಲಿ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು, ವಿದ್ಯಾಭ್ಯಾಸ ಮುಗಿಸಿ ಸರ್ಕಾರಿ ಉದ್ಯೋಗಸ್ಥನಾದೆ. ಇಪ್ಪತ್ತೆನೆಯ ವಯಸ್ಸಲ್ಲಿ, ನನ್ನ ಅಬ್ಬಜಾನ್ ನಮ್ಮನ್ನು ಬಿಟ್ಟು ಪರಲೋಕಕ್ಕೆ ಪಯಣಿಸಿದರು. ಮನೆಯಲ್ಲಿ ಒಬ್ಬರೇ ಇದ್ದ ಅಮ್ಮಿಜಾನ್‌ಗೆ ಆಸರೆಯಾಗಲೆಂದು, ನನ್ನ ಇಪ್ಪತ್ತೇಳನೆಯ ವಯಸ್ಸಿನಲ್ಲೇ ರುಬೀನ ಜೊತೆ ಶಾದಿ ಮಾಡಿಸಿ ಬಿಟ್ಟರು. ಅಮ್ಮಿಜಾನ್‌ಗೆ ಮನೆಯಲ್ಲಿ ಬೇಜಾರಾಗಬಾರದೆಂದು, ಅವರ ಜೊತೆ ಕಾಲ ಕಳೆಯಲು, ಶಾದಿಯ ಮರು ವರ್ಷ ನಮ್ಮ ಮಗ ಆಧಿಲ್‌ನನ್ನು ಹುಟ್ಟಿಸಿದೆವು. ಸರ್ಕಾರಿ ನೌಕರಿಯಲ್ಲಿ ಕೈತುಂಬಾ ಅಲ್ಲದಿದ್ದರೂ, ಸಂಸಾರವನ್ನು ಸುಖ ಸಂತೋಷದಿಂದ ಸಾಗಿಸುವಷ್ಟು ಮಾಸಂತ್ಯದಲ್ಲಿ ಸಂಬಳ ಬರುತ್ತದೆ. ಇಡೀ ಸಂಸಾರದ ಹೊಣೆ ನನ್ನ ಒಬ್ಬನ ಮೇಲೆ ಇರೋದು. ಮನೆಯಲ್ಲಿ ಬೇರೆ ಯಾರೂ ಕೆಲಸಕ್ಕೆ ಹೋಗೊದಿಲ್ಲ. ರುಬೀನ ಮನೆ ಕೆಲಸ ಮತ್ತೆ ಮಗನನ್ನು ನೋಡುತ್ತ ನನಗೆ ಜೊತೆಯಾಗಿದ್ದವಳು. ಅವಳಿಗೆ ಹೊರಗಿನವರೊಂದಿಗೆ ಅಷ್ಟೊಂದು ಒಡನಾಟವಿಲ್ಲ. ತಾನಾಯಿತು ತನ್ನ ಸಂಸಾರವಾಯಿತೆಂದು ಇದ್ದಾಳೆ ನನ್ನ ರುಬೀನ. ಅಮ್ಮಿಜಾನ್‌ಗೆ ತನ್ನ ಮೊಮ್ಮಗನೊಂದಿಗೆ ಆಟವಾಡುತ್ತಾ ಕಾಲ ಕಳೆಯುವುದೇ ದಿನಚರಿಯಾಗಿದೆ. ಇಂತಹ ಪುಟ್ಟ ಸಂಸಾರದೊಂದಿಗೆ ವಾರಾಂತ್ಯಕ್ಕೆ ಸುತ್ತಾಟ, ಇದೇ ನನ್ನ ಸುಂದರ ಜೀವನವಾಗಿತ್ತು.
                ಈಗಿನ ಪೀಳಿಗೆಯವರಂತೆ ಕೈಯಲ್ಲೊಂದು ಮೊಬೈಲ್ ಹಿಡಿದ್ಕೊಂಡು, ಯಾವಾಗ್ಲೂ ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಜೀವನ ನಮ್ಮದಾಗಿರಲಿಲ್ಲ. ರುಬೀನಾಳಿಗಂತೂ ಅದರ ಬಗ್ಗೆ ಜ್ಞಾನನೂ ಇಲ್ಲ. ಯಾವುದಾದರೂ ಅವಶ್ಯಕತೆ ಇದ್ದಾಗ ಕರೆ ಮಾಡಲೆಂದು ಅವಳಿಗೆ ಒಂದು ಮೊಬೈಲ್ ಕೊಟ್ಟಿದ್ದೇನೆ. ಆದರೂ ಇಲ್ಲಿಯವರೆಗೆ ಅವಳಿಂದ ಅಂತಹ ಕರೆ ಬಂದಿರಲಿಲ್ಲ. ಮೊಬೈಲ್ ಎಂದರೆ ಅವಳಿಗೆ ಅಷ್ಟಕ್ಕಷ್ಟೆ. ನನಗೂ ಅಷ್ಟೊಂದು ಆಸಕ್ತಿ ಇರಲಿಲ್ಲ. ಹೌದು, ಈ ಜಾಲತಾಣದಿಂದ ದುನಿಯ ಚಿಕ್ಕದಾಗಿರಬಹುದು, ಆದರೆ ಇದೇ ಮೊಬೈಲ್ ಸಾಮಾಜಿಕ ಜಾಲತಾಣದಿಂದ ನಮ್ಮ ಹತ್ತಿರದಲ್ಲಿರುವವರೇ ನಮ್ಮಿಂದ ದೂರವಾಗಿರ್ತಾರೆ.


                ಆದ್ರೆ ಆದ್ರೆ.. ಸುಮಾರು ಎರಡು ತಿಂಗಳ ಹಿಂದೆ ನಡೆದ ಒಂದು ಘಟನೆ ನನ್ನ ಲೈಫನ್ನೇ ಬದಲಾಯಿಸಿತು. ಆವತ್ತೂ ನಾನು ಎಂದಿನಂತೆ ಆಫೀಸಿಗೆ ಹೋಗಿದ್ದೆ. ಸಾಮಾನ್ಯವಾಗಿ ಹತ್ತು ಗಂಟೆಗೆ ನಮ್ಮ ಕೆಲಸ ಶುರುವಾಗುತ್ತದೆ. ಆದರೆ ನಾವೆಲ್ಲ ಒಂದತ್ತು- ಹದಿನೈದು ನಿಮಿಷ ಮುಂಚಿತವಾಗಿ ಬಂದಿರ್ತೇವೆ. ಸ್ವಲ್ಪ ಹೊತ್ತು ಹರಟೆ ಹೊಡೆದು ಆಮೇಲೆ ನಮ್ಮ ಆಫೀಸ್ ಕೆಲಸ ಶುರು ಮಾಡೋದು. ಹಾಗೆಯೇ ಆವತ್ತು ನಾವೆಲ್ಲರು ಮಾತುಕತೆ ಶುರು ಮಾಡಿದ್ದೆವು. ರಾಜಕೀಯದಿಂದ ಹಿಡಿದು, ಕ್ರೀಡಾ ಕ್ಷೇತ್ರದವರೆಗಿನ ಎಲ್ಲಾ ವಿಷಯಗಳು ನಮ್ಮ ಹರಟೆಯಲ್ಲಿ ಇರುತ್ತಿದ್ದವು. ಶುರುವಾದ ಮಾತು ಕೊನೆಗೆ, ಮೊಬೈಲ್ ವಿಷಯದಲ್ಲಿ ಬಂದು ನಿಂತಿತ್ತು.  ಅದು ನನಗೆ ಸಂಬಂದಿಸಿದ ವಿಷಯವಲ್ಲ ಅಂತ ಅಂದ್ಕೊಂಡು ಅಲ್ಲಿಂದ ಎದ್ದು ಹೋಗಿ ಕೆಲಸ ಪ್ರಾರಂಭಿಸಿದೆ. ಉಳಿದವರೆಲ್ಲಾ ಅದೇ ವಿಷಯದ ಮೇಲೆ ಚರ್ಚೆ ಮುಂದುವರೆಸಿದ್ದರು. ಮೊಬೈಲ್ ವಿಷಯದಲ್ಲಿ ನನ್ನ ಸಹದ್ಯೋಗಿ ರಮೇಶ್ ಉಳಿದವರಿಗಿಂತ ಸ್ವಲ್ಪ ಜಾಸ್ತಿನೇ ಪರಿಣತನಾಗಿದ್ದನೆಂದು ಹೇಳಬಹುದು. ಕೆಲಸದ ಹೆಚ್ಚಿನ ಸಮಯ ಮೊಬೈಲ್‌ನಲ್ಲೇ ಮುಳುಗಿರುತ್ತಾನೆ. ಯಾವಾಗ ನೋಡಿದ್ರೂ ಯಾರೊಂದಿಗಾದ್ರೂ ಚಾಟಿಂಗ್ ಮಾಡ್ತಾ ಇರುತ್ತಾನೆ. ಆವತ್ತು ಅವರೆಲ್ಲರ ಚರ್ಚೆ ಒಂದರ್ಧ ಗಂಟೆ ನಡೆದಿತ್ತು. ಮಾತುಕತೆ ಮುಗಿಸಿ ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿದರು. ರಮೇಶ್ ಇನ್ನೂ ಮೊಬೈಲ್ ಇಟ್ಕೊಂಡು ಅದೇನೋ ಮಾಡ್ತಾ ಇದ್ದ. ತುಂಬಾ ಖುಷಿ ಖುಷಿಯಾಗಿದ್ದ. ಯಾವತ್ತೂ ಅಷ್ಟೊಂದು ಖುಷಿಯಾಗಿ ಚಾಟ್ ಮಾಡಿದ್ದು ನಾನು ನೋಡಿರಲಿಲ್ಲ. ನನ್ನಿಂದ ಜಾಸ್ತಿ ಹೊತ್ತು ಅವನ ಖುಷಿ ನೋಡಲಾಗಲಿಲ್ಲ. ಕುತೂಹಲದಿಂದ ಅವನಲ್ಲಿ ಕೇಳಿಯೇ ಬಿಟ್ಟೆ. ಅದಕ್ಕವನು ಹೇಳಿದ್ದೇನೆಂದರೆ, ಅವನಿಗೆ ಯಾರೋ ಹೊಸ ಗೆಳತಿ ಸಿಕ್ಕಿದ್ದಾಳೆಂದು. ಅವನ ಮಾತು ಕೇಳಿ ನಾನು ಒಂದು ಕ್ಷಣ ಮೂಕಸ್ಮಿತನಾದೆ.
                ವಯಸ್ಸಲ್ಲಿ ನನಗಿಂತ ಎರಡು ವರ್ಷ ಹಿರಿಯ, ಮದುವೆಯಾಗಿ ಒಬ್ಬ ಮಗನಿದ್ದಾನೆ. ಈ ಪ್ರಾಯದಲ್ಲೂ ಅವನಿಗೆ ಇನ್ನೊಬ್ಬ ಗೆಳತಿಯಾ…! ಹುಡುಗಿಯ ಫೋಟೊ ತೋರಿಸಿದ. ಅವಳಿಗೆ ಸುಮಾರು ಇಪ್ಪತೈದು ಇಪ್ಪತ್ತೇಳು ವಯಸ್ಸಾಗಿರಬಹುದು. ನೋಡ್ಲಿಕ್ಕೆ ತುಂಬಾ ಸುಂದರವಾಗಿದ್ದಳು. ಅವನ ಮುಖಕ್ಕೆ ಅಂತಹ ಹುಡುಗಿ ಸಿಕ್ಕಿದ್ದಾಳೆಂದರೆ ತುಂಬಾ ಆಶ್ಚರ್ಯದ ವಿಷಯ. ನನಗೇನೋ ಸಂಶಯ ಬಂತು. ಒಂದು ಮೊಬೈಲ್‌ನಿಂದ ಇಷ್ಟೆಲ್ಲಾ ಆಗ್ಲಿಕ್ಕೆ ಸಾಧ್ಯನಾ..?
                ಆ ನನ್ನ ಸಂದೇಹ ಪರಿಹಾರಕ್ಕಾಗಿ ಅವನು ನೀಡಿದ ಉಪದೇಶ ನನ್ನ ಲೈಫನ್ನೇ ಬದಲಾಯಿಸಿತ್ತು. ಈ ಸಾಮಾಜಿಕ ಜಾಲತಾಣದ ವಿರುದ್ಧವಾಗಿದ್ದ ನನ್ನ ನಿಲುವನ್ನು ಬದಲಾಯಿಸಿ ಬಿಟ್ಟಿದ್ದ.
                ಜೀವನಲ್ಲಾದ ಅವನ ಆ ಏಳಿಗೆಯನ್ನು ನೋಡಿ ನನ್ನ ಮನಸ್ಸು ಚಂಚಲಗೊAಡಿತ್ತು. ಎಷ್ಟಾದರೂ ಗಂಡು ಮನಸ್ಸಲ್ಲವೇ? ಹೆಣ್ಣಿನ ವಿಷಯ ಬಂದಾಗ ನಮ್ಮಂತಹ ಪ್ರಾಯದವರೂ ಯೌವನಸ್ಥರಾಗುತ್ತಾರೆ. ಅದರಲ್ಲೂ ನನಗೆ ಕೇವಲ ನಲವತ್ತರ ಹರೆಯ, ಇನ್ನೂ ಮಧ್ಯವಯಸ್ಕ. ಅವನ ಕಥೆ ಕೇಳಿ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಆಸೆ ಹುಟ್ಟಿಕೊಂಡಿತ್ತು. ಆ ಆಸೆಯನ್ನು ಹೆಚ್ಚು ಹೊತ್ತು ಅದುಮಿ ಇಟ್ಟುಕೊಳ್ಳಲು ನನ್ನಿಂದಾಗಲಿಲ್ಲ. ಅಲ್ಲಿಯ ತನಕ ಯಾವ ವಸ್ತುವನ್ನು ಕಡೆಗಣಿಸುತ್ತಿದ್ದೇನೋ, ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು. ಆವತ್ತಿನ ಸರ್ಕಾರಿ ಕೆಲಸಗಳನ್ನು ಬದಿಗಿರಿಸಿ, ಅವನ ಹತ್ತಿರ ಮೊಬೈಲ್ ಜ್ಞಾನ ಪಡೆದುಕೊಳ್ಳಲು ಕುಳಿತೆ. ನನ್ನ ಆತುರತೆಯನ್ನು ಗಮನಿಸಿದ ಅವನು ಮೊದಲು ಸಾಮಾಜಿಕ ಜಾಲತಾಣದ ಬಗ್ಗೆ ವಿವರಿಸಿದ್ದ. ನಂತರ ನನ್ನ ಚಂಚಲ ಮನಸ್ಸಿನ ಅರಿವಾಗಿ, ಕೂಡಲೇ ನನ್ನ ಖಾತೆ ರೆಡಿ ಮಾಡಿ ಕೊಟ್ಟ.
                ಖಾತೆ ಓಪನ್ ಆದ ಮೊದಲ ಒಂದೆರಡು ದಿನ ಅದರ ಬಗ್ಗೆ ಅಷ್ಟೊಂದು ಗಂಭೀರವಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ನಿಜ ಹೇಳಬೇಕೆಂದರೆ ಆವಾಗ ಯಾರೊಬ್ಬರ ಫ್ರೆಂಡ್ ರಿಕ್ವೆಸ್ಟ್ ಬಂದಿರಲಿಲ್ಲ. ಮುಖ್ಯವಾಗಿ ರಿಕ್ವೆಸ್ಟ್ ಪಟ್ಟಿಯಲ್ಲಿ ಒಂದೇ ಒಂದು ಹುಡುಗಿಯ ಹೆಸರು ಕಾಣ್ತಾ ಇರಲಿಲ್ಲ. ಅದೊಂದು ರೀತಿಯ ಬೇಜಾರು ಮನಸ್ಸಿನ ಒಂದು ಮೂಲೆಯಲ್ಲಿದ್ದರೆ, ಇನ್ನೊಂದು ಮೂಲೆಯಲ್ಲಿ ಆ ರಮೇಶ್ ದಿನವಿಡೀ ತನ್ನ ಹೊಸ ಗೆಳತಿಯ ಜೊತೆ ಚಾಟಿಂಗ್ ಮಾಡ್ತಾ ಇರುವುದು ಇನ್ನೂ ಹೆಚ್ಚು ಬೇಜಾರು ಕೊಡುವ ವಿಚಾರವಾಗಿತ್ತು. ಇದೇ ರೀತಿ ಮುಂದಿನ ಎರಡು ಮೂರು ದಿನ ಕಳೆದಿರಬಹುದು, ಆಮೇಲೆ ಶುರುವಾಯಿತು ನೋಡಿ ನನ್ನ ಸಂತೋಷದ ದಿನಗಳು. ಯಾವಾಗ ನಾನು ಅವಳ ಫ್ರೆಂಡ್ ರಿಕ್ವೆಸ್ಟ್ ಒಪ್ಪಿದೆನೋ, ಆವತ್ತಿನಿಂದ ಇವತ್ತಿನವರೆಗೂ ನನ್ನ ಜೀವನದಲ್ಲಿ ಬೇಜಾರಿನ ದಿನಗಳು ಬಂದೇ ಇಲ್ಲ.
                ಆ ದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ತರಾತುರಿಯಲ್ಲಿದ್ದಾಗ, “ಜಾನು” ಎಂಬ ಹೆಸರಿನಿಂದ ಸಂದೇಶ ಬಂದಿತ್ತು. ಅದು ನನ್ನ ಜೀವನದಲ್ಲಿ ಒಬ್ಬ ಅಪರಿಚಿತ ಹುಡುಗಿಯಿಂದ ಬಂದ ಮೊದಲ ಸಂದೇಶವಾಗಿತ್ತು. ಮನೆಯಿಂದ ಹೊರಬಂದವನೇ ತಡಮಾಡದೆ ಅವಳಿಗೆ ಸಂದೇಶ ಕಳಿಸಿದ್ದೆ. ಆವಳಿಂದನೂ ಪ್ರತಿ ಉತ್ತರ ಬಂದಿತ್ತು. ಆ ದಿನ ನನ್ನ ಜೀವನದ ಮರೆಯಲಾರದ ದಿನ. ಮೊದಲ ಮೂರು ದಿನ ಕೇವಲ ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಶುಭಾಶಯಗಳು ರವಾನೆಯಾಗಿತ್ತು. ಆಮೇಲೆ ಬೆಳಗ್ಗಿನ ತಿಂಡಿ-ತಿನಿಸಿನವರೆಗೆ ಹೋದೆ. ತಿಂಡಿ ಮುಂದೆ ರಾತ್ರಿ ಊಟದ ತನಕ ಮುಂದುವರೆಯಿತು. ಅಲ್ಲಿಂದ ನಮ್ಮ ಪ್ರೀತಿಯ ಮಾತುಕತೆ ಶುರುವಾಗಿ ತುಂಬಾ ಆತ್ಮೀಯರಾಗಿ ಬಿಟ್ಟೆವು. ನಿಧಾನವಾಗಿ ಪ್ರಾರಂಭವಾದ ನಮ್ಮ ಪ್ರೇಮ್ ಕಹಾನಿ ಇವತ್ತಿನವರೆಗೂ ಬಂದಿದೆ.
 
                                                                                                *
 
                ಹೆಸರು ಎಷ್ಟು ಮುದ್ದಾಗಿದೆಯೋ ಅದಕ್ಕಿಂತನೂ ಮುದ್ದಾಗಿದ್ದಾಳೆ ನನ್ನ ಜಾನು. ಹೆಣ್ಣು ಮಕ್ಕಳ ವಯಸ್ಸು ಹೇಳಬಾರದು, ಆದರೂ ಅವಳದ್ದು ಇಪ್ಪತ್ತಾರರ ಆಸುಪಾಸು ಇರಬಹುದು. ಅಂದಾಜಿನ ಮೇಲೆ ಹೇಳಿದ್ದು. ಖಾಸಗಿ ಐ.ಟಿ. ಕಂಪೆನಿಯೊಂದರಲ್ಲಿ ಕೆಲಸ. ಜಾನು ತುಂಬಾ ಮಹತ್ವಾಕಾಂಕ್ಷಿಯುಳ್ಳ ಹುಡುಗಿ. ಜೀವನದಲ್ಲಿ ಅನೇಕ ದೊಡ್ಡ ದೊಡ್ಡ ಗುರಿ ಇಟ್ಟುಕೊಂಡು ಅದನ್ನು ತಲುಪುವ ದಾರಿಯಲ್ಲೇ ಮುನ್ನಡೆಯುತ್ತಿರುವ ಈಗಿನ ಕಾಲದ ಸುಂದರ ಹುಡುಗಿ. ದೇವರ ಸೃಷ್ಟಿಯಲ್ಲಿ ಜಾಣ್ಮೆ ಹಾಗೂ ಸೌಂದರ್ಯ ಒಟ್ಟಿಗೆ ಸಿಗುವುದು ಬಹಳ ಅಪರೂಪ. ನನ್ನ ಜಾನು ಅದೇ ಅಪರೂಪದ ಸೃಷ್ಟಿಯಾಗಿದ್ದಳು. ಹೆತ್ತವರಿಗೆ ಒಬ್ಬಳೆ ಮಗಳು. ಹೆಸರಿನಂತೆ ಅವಳು ಮನೆಯಲ್ಲಿ ಎಲ್ಲರಿಗೂ ಪ್ರೀತಿಯ ಮಗಳಾಗಿದ್ದಳು. ಒಬ್ಬಳೆ ಮಗಳೆಂದು ತುಂಬಾ ಮುದ್ದಾಗಿ ಬೆಳೆಸಿದ್ದರೂ, ಅವಳಿಗೆ ತನ್ನ ಜವಬ್ದಾರಿಯ ಅರಿವಿತ್ತು. ತಾನು ಒಂದು ಒಳ್ಳೆಯ ಕಂಪೆನಿಯಲ್ಲಿ, ಉತ್ತಮ ಹುದ್ದೆಯಲ್ಲಿ ಕೆಲಸ ಮಾಡಬೇಕು. ಕೈ ತುಂಬಾ ಸಂಬಳ ಬರಬೇಕು, ಅಷ್ಟೇ ಅಲ್ಲ ಸದ್ಯದಲ್ಲೆ ವಿದೇಶಕ್ಕೆ ಹೋಗಿ, ಅಲ್ಲೇ ನೆಲೆಸುವ ತೀರ್ಮಾನ ಮಾಡಿದ್ದಳು. ತನ್ನ ಹೆತ್ತವರನ್ನೂ ಅಲ್ಲೇ ಕರ್ಕೊಂಡು ಹೋಗಿ, ಅವರ ಸೇವೆ ಮಾಡುವ ಬಗ್ಗೆ ಯೋಚಿಸಿದ್ದಳು.
                ಇಂತಹ ಗುಣವಿರುವ ಜಾನು ನನ್ನ ಜೀವನದಲ್ಲಿ ಬಂದ್ಮೇಲೆ ಈ ಬಡಪಾಯಿಯ ಜೀವನ ಶೈಲಿಯೇ ಬದಲಾಗಿ ಬಿಟ್ಟಿತ್ತು. ಎಷ್ಟೋ ವರ್ಷ ಕಲರ್ ನೋಡದ ನನ್ನ ತಲೆಕೂದಲು, ಈವಾಗ ಬಣ್ಣ ಹಾಕಿಕೊಳ್ಳ ತೊಡಗಿದವು. ವರ್ಷಕ್ಕೊಮ್ಮೆ ಹೊಸ ಬಟ್ಟೆ ನೋಡುತ್ತಿದ್ದ ಈ ದೇಹ ಎರಡು ತಿಂಗಳಲ್ಲಿ ನಾಲ್ಕು ಜೊತೆ ಡ್ರೆಸ್ ನೋಡಿದ್ದವು. ಅದೂ ಹೆಸರಾಂತ ಕಂಪೆನಿಯ ಬಟ್ಟೆಬರೆಗಳು ನನ್ನ ಮನೆ ಸೇರಿದ್ದವು. ಸುಗಂಧ ದ್ರವ್ಯ ನನ್ನ ಮೈಯನ್ನು ತಾಕ ತೊಡಗಿದವು. ಎಲ್ಲವೂ ಈ ಸಾಮಾಜಿಕ ಜಾಲತಾಣದ ಮಹಿಮೆ. ಇಷ್ಟೆಲ್ಲ ನನ್ನ ಜೀವನದಲ್ಲಿ ನಡೆಯುತ್ತಿದ್ದರೂ, ಮನೆಯವರಿಗೆ ಸ್ವಲ್ಪನೂ ಸಂದೇಹ ಬಾರದ ಹಾಗೆ ಇರುತ್ತಿದ್ದೆ.                  
                ಕಪ್ಪು ಬಿಳುಪಿನ ನನ್ನ ಸರ್ಕಾರಿ ನೌಕರಿ ಜೀವನ ಅವಳು ಬಂದ ಮೇಲೆ ತುಂಬಾ ಕಲರ್‌ಫುಲ್ ಆಗಿದೆ. ಮೊದಲ ಒಂದು ವಾರದಲ್ಲೇ ನಾನು ಅವಳ ಪ್ರೀತಿಗೆ ಬಲಿಯಾಗಿದ್ದೆ. ಶುಭಮುಂಜಾನೆಯಿAದ, ಶುಭರಾತ್ರಿಯವರೆಗೆ ಮುಂದುವರೆದ ನಮ್ಮ ಸಂದೇಶ ರವಾನೆಯ ಆಟ, ಮುಂದೊAದು ದಿನ ಕಾಫಿಗೆ ಕರೆಯುವ ತನಕ ಹೋಯಿತು. ಆವತ್ತು ಬೆಳಗ್ಗೆ ಆಫೀಸಿಗೆ ಹೋದವನೇ ಅವಳಿಗೆ “ಜಾನು, ಸಂಜೆ ಸಮಯವಿದ್ದರೆ ಕಾಫಿ ಕುಡಿಯಲು ಕೆಫೆಗೆ ಬರುತ್ತೀಯಾ?” ಎಂದು ಸಂದೇಶ ಕಳಿಸಿದ್ದೆ. ಆ ಧೈರ್ಯ ಎಲ್ಲಿಂದ ಬಂತೆಂದು ಇವತ್ತಿಗೂ ಗೊತ್ತಾಗ್ಲಿಲ್ಲ. ಅದೇ ಧೈರ್ಯದಲ್ಲಿ ಅವಳನ್ನು ಭೇಟಿಯಾಗಲು ಹೋದೆ. ಮೊದಲ ಬಾರಿ ಅವಳನ್ನು ನೇರವಾಗಿ ನೋಡಿದಾಗ ನಾನು ಮೂಕಸ್ಮಿತನಾದೆ. ಜಾನು ಫೋಟೊದಲ್ಲಿ ಕಾಣುವುದಕ್ಕಿಂತ ಹೆಚ್ಚು ಸುಂದರವಾಗಿ ಕಾಣುತ್ತಿದ್ದಳು. ಅಂತ ಸೌಂದರ್ಯ ರಾಶಿಗೆ ಮರುಳಾಗದವನು ಯಾರೂ ಇರಲಿಕ್ಕಿಲ್ಲ. ಅಂತವಳು ನನ್ನ ಗೆಳತಿ ಎಂದು ಹೇಳಿಕೊಳ್ಳುವುದು ನನ್ನ ಹೆಮ್ಮೆಯ ವಿಷಯ. ಮೊದಲ ಭೇಟಿಯಲ್ಲಿ ಹೆಚ್ಚೇನು ಮಾತುಕತೆ ಆಗಲಿಲ್ಲ. ಅದು ನನ್ನ ಮೊದಲ ಡೇಟಿಂಗ್ ಆಗಿತ್ತು. ಅದಕ್ಕೆ ಬಹುಶಃ ಸ್ವಲ್ಪ ಒಳಗಿಂದೊಳಗೆ ಭಯಭೀತನಾಗಿದ್ದೆನೆಂದು ಅನಿಸುತ್ತಿತ್ತು. ಕೇವಲ ಇಪ್ಪತ್ತು ನಿಮಿಷದಲ್ಲಿ ಅಲ್ಲಿಂದ ಹೊರಗೆ ಬಂದಿದ್ದೆವು. ಆ ಇಪ್ಪತ್ತು ನಿಮಿಷದ ಭೇಟಿಯಲ್ಲಿ ನಾನು ಮಾತನಾಡಿದ್ದಕ್ಕಿಂತ ಅವಳ ಮಾತುಗಳನ್ನು ಕೇಳಿದ್ದೇ ಜಾಸ್ತಿ. ಅವಳ ಒಂದೊಂದು ಮಾತುಗಳು ಮುತ್ತಿನಂತೆ ಬಾಯಿಯಿಂದ ಹೊರ ಬರುತ್ತಿದ್ದವು. ಮಧುರ ಸ್ವರ ಕೇಳಿದಷ್ಟು ಕಡಿಮೆ ಅನಿಸುತ್ತಿತ್ತು. ಆವಳ ಆ ಕಣ್ಣುಗಳು, ರೇಷ್ಮೆಯಂತಹ ಕೇಶರಾಶಿ, ಅವಳ ಆ ನಗು, ಒಟ್ಟಾರೆಯಾಗಿ ಮೊದಲ ನೋಟದಲ್ಲೇ ಅವಳ ಪ್ರೀತಿಯ ಬಲೆಗೆ ಸಿಲುಕ್ಕಿದ್ದೆ.
ಆವತ್ತು ರಾತ್ರಿ ಇಡೀ ನಿದ್ದೆ ಇರಲಿಲ್ಲ. ನನ್ನ ಪರಿಸ್ಥಿತಿ ಮನೆಯಲ್ಲಿ ಯಾರಲ್ಲೂ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ಬಹುಶಃ ನಿಜವಾದ ಪ್ರೀತಿ ಎಂದರೆ ಇದೇ ಇರಬೇಕು. ಈ ಪ್ರೀತಿ ಪ್ರೇಮ ಯಾರಿಗೂ, ಯಾವ ಪ್ರಾಯದಲ್ಲೂ ಆಗಬಹುದೆಂಬುದ್ದಕ್ಕೆ ನಾನೇ ಉತ್ತಮ ಉದಾಹರಣೆ. ನನ್ನ ಹದಿನೈದು ವರ್ಷದ ಸರ್ವಿಸ್‌ನಲ್ಲಿ ಯಾವತ್ತು ವಿನಃ ಕಾರಣ ರಜೆ ಹಾಕದವನು, ಜಾನು ಗೆಳೆತನ ಆದ್ಮೇಲೆ ಎರಡು ತಿಂಗಳಲ್ಲಿ ನಾಲಕ್ಕು ಐದು ಬಾರಿ ರಜಾ ಹಾಕಿದ್ದೆ. ಅವಳನ್ನು ಭೇಟಿಯಾಗಲು ಸುಳ್ಳು ನೆಪ ಹೇಳಿ ಅದೇ ಕೆಫೆಗೆ ಹೋಗುತ್ತಿದ್ದೆ. ಪ್ರತಿಬಾರಿ ಹೋಗುವಾಗ ನನ್ನಲ್ಲಿ ಹುಟ್ಟಿದ್ದ ಪ್ರೀತಿಯನ್ನು ಅವಳ ಮುಂದೆ ಇಡಬೇಕೆಂದು ತೀರ್ಮಾನಿಸಿ ಹೋಗುತ್ತಿದ್ದೆ. ಆದರೆ ಇವತ್ತಿನವರೆಗೂ ನನ್ನಲ್ಲಿ ಆ ಧೈರ್ಯ ಬಂದಿರಲಿಲ್ಲ.
ಆದರೆ ನಿನ್ನೆ ಮಾತ್ರ ಮನೇಲಿ ದೊಡ್ಡ ರಾದ್ಧಂತವೇ ನಡೆಯಿತು. ಕಾರಣ ನಿನ್ನೆ ಬೆಳಗ್ಗೆ ಆಫೀಸ್‌ನಲ್ಲಿ ನಡೆದ ಘಟನೆ…
ಎಂದಿನಂತೆ ನಿನ್ನೇನೂ ಸುಮಾರು ಹತ್ತು ಗಂಟೆಯ ಆಸುಪಾಸಿನಲ್ಲಿ ಕೆಲಸಕ್ಕೆ ಹೋಗಿದ್ದೆ. ಜಾನುಗೆ ಒಂದು ಶುಭಮುಂಜಾನೆ ಸಂದೇಶ ಕಳುಹಿಸಿ ಕೆಲಸ ಶುರು ಮಾಡುವುದು ನನ್ನ ಇತ್ತೀಚಿಗಿನ ಹೊಸ ಅಭ್ಯಾಸ. ಹಾಗೆ ಕೆಲಸ ಶುರು ಮಾಡಿ ಸುಮಾರು ಒಂದು ತಾಸು ಆಗಿರಬಹುದು, ಜಾನು ಅಚಾನಕ್ಕಾಗಿ ನಮ್ಮ ಆಫೀಸಿಗೆ ಬಂದು ಬಿಡೋದಾ? ಅವಳು ತುಂಬಾನೆ ಖುಷಿಯಾಗಿದ್ಲು… ಖುಷಿಗಿಂತಲೂ ಹೆಚ್ಚು ತುಂಬ ಆತುರದಲ್ಲಿದ್ದಳು ಅಂತಾನೆ ಹೇಳಬಹುದು.
                ಬಂದವಳೇ “ನಾನೀಗ ಸೀದಾ ವಿಷಯಕ್ಕೆ ಬರ್ತೀನಿ. ನಾಳೆ ನಮ್ಮ ಮದುವೆ”.
                ಆ ಮಾತು ಕೇಳುತ್ತಲೆ ನನಗೆ ನನ್ನ ಕಾಲ ಕೆಳಗಿನಿಂದ ಭೂಮಿಯೇ ಜಾರಿದಂತಾಗಿತ್ತು. ಸ್ವರ್ಗಕ್ಕೆ ಮೂರೇ ಗೇಣು ದೂರದಲ್ಲಿದ್ದಂತಾಯಿತು. ಆ ಮಾತನ್ನು ಜೀರ್ಣಿಸಿಕೊಳ್ಳೋದ್ರಲ್ಲಿ ಅವಳ ಮಾತು ಮುಂದುವರಿದಿತ್ತು.
                “ನಮ್ಮ ಮನೆಯವರಿಗೆ ನಮ್ಮ ವಿಷಯ ಗೊತ್ತಾಗಿ ಹೋಯ್ತು. ಎಲ್ಲರೂ ಸೇರಿ ಬಹಳ ಗಲಾಟೆ ಮಾಡಿದ್ರು… ಆದರೆ, ನಾನೂ ಹಠ ಮಾಡಿ ಅವರನ್ನು ಒಪ್ಪಿಸಿದೆ. ನಾಳೆ ರಿಜಿಸ್ಟರ್ ಆಫೀಸಿನಲ್ಲಿ ನಮ್ಮ ಮದುವೆ. ಕ್ಷಮಿಸಿ ಇದೆಲ್ಲಾ ಫೋನಿನಲ್ಲಿ ಹೇಳಲಿಕ್ಕಾಗಲಿಲ್ಲ. ಖುಷಿಯಲ್ಲಿ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ನೀವು ಹೇಗಾದ್ರೂ ಮಾಡಿ ನಿಮ್ಮ ಮನೆಯವರನ್ನು ಒಪ್ಪಿಸಿ ಕರ್ಕೊಂಡು ಬನ್ನಿ. ನಾನಿನ್ನು ಬರ್ತೀನಿ…ತುಂಬಾ ಕೆಲಸ ಇದೆ”.
                ಅಷ್ಟು ಹೇಳಿ ಹೋಗಿಬಿಟ್ಟಳು. ಅಲ್ಲಿ ಅಷ್ಟು ಹೊತ್ತು ಏನಾಯಿತೆಂದು ಗೊತ್ತೇ ಆಗಲಿಲ್ಲ. ಆ ಶಾಕನ್ನು ಸುಧಾರಿಸಲು ನನಗೆ ಒಂದರ್ಧ ಗಂಟೆ ಬೇಕಾಯಿತು. ಒಂದು ಕಡೆ ಖುಷಿ, ಇನ್ನೊಂದು ಕಡೆ ಟೆನ್ಶನ್. ಜಾನು ಇಷ್ಟು ಬೇಗ ನನ್ನ ಜೀವನ ಸಂಗಾತಿಯಾಗುತ್ತಾಳೆಂಬ ಖುಷಿಯಾದರೆ, ರುಬೀನಳನ್ನು ಹೇಗೆ ಒಪ್ಪಿಸೋದು ಅನ್ನೊ ತಲೆಬಿಸಿ. ನನ್ನ ಸಂತೋಷವನ್ನು ನೋಡಿ, ನನಗಿಂತ ಹೆಚ್ಚು ತಲೆ ಹೊಡೆದುಕೊಂಡದ್ದು ಆ ರಮೇಶ. ತನ್ನಿಂದ ಮೊಬೈಲ್ ಜ್ಞಾನ ಪಡೆದುಕೊಂಡು, ತನಗಿಂತ ಮೊದಲೇ ಒಬ್ಬ ಸುಂದರ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದಾನಲ್ಲಾ…! ಎಂಬ ಹೊಟ್ಟೆಕಿಚ್ಚು ಆತನದು.
                ಆದರೆ ರುಬೀನಳನ್ನು ಹೇಗೆ ಒಪ್ಪಿಸೋದು ಎಂಬುದೇ ಆ ಸಮಯದಲ್ಲಿ ನನ್ನ ಮನದಲ್ಲಿ ಓಡುತ್ತಿದ್ದ ದೊಡ್ಡ ಪ್ರಶ್ನೆಯಾಗಿತ್ತು. ನಮ್ಮಲ್ಲಿ ಮೂರು ಬಾರಿ ತಲಾಕ್ ಅಂತ ಹೇಳಿದರೆ ಸಾಕು, ಆಮೇಲೆ ಸ್ವತಂತ್ರ ಜೀವಿ. ಆದರೆ ಅದನ್ನು ಹೇಳುವುದಾದರೂ ಹೇಗೆ? ಇಷ್ಟು ವರುಷದ ನಮ್ಮ ವೈವಾಹಿಕ ಜೀವನದಲ್ಲಿ, ಆ ಒಂದು ಪದ ಹೇಳುವಂತಹ ಪ್ರಸಂಗ ಬಂದಿರಲಿಲ್ಲ. ನಿನ್ನೆ ಆ ಪರಿಸ್ಥಿತಿ ಬಂದಿತ್ತು. ನಾನು ನೇರವಾಗಿ ರುಬೀನಳ ಬಳಿ ಹೋಗಿ, ನನಗೆ ಇನ್ನೊಂದು ಮದುವೆ ಆಗುವ ಅವಕಾಶ ಬಂದೊದಗಿದೆ, ಅದಕ್ಕಾಗಿ ನಿನ್ನೊಂದಿಗೆ ತಲಾಕ್ ಅಂತ ಹೇಳಿಬಿಡಲೇ? ಎಂಬ ಯೋಚನೆ ಬಂತು. ಆದರೆ ಅದು ಆಷ್ಟೊಂದು ಸಮಂಜಸವಾದ ಕಾರಣವಾಗುವುದಿಲ್ಲ.
                ಇಡೀ ದಿನ ತಲಾಕ್ ಬಗ್ಗೆ ಯೋಚಿಸಿ, ಯೋಚಿಸಿ ನನ್ನ ತಲೆ ಚಿಟ್ಟು ಹಿಡಿದು ಹೋಗಿತ್ತು. ಅದೇ ಬಿಸಿಯನ್ನು ತಲೆಯಲ್ಲಿ ಇಟ್ಟುಕೊಂಡು ಮನೆಗೆ ಹೋದೆ. ಸ್ವಲ್ಪ ಹೊತ್ತಲ್ಲಿ, ರುಬೀನ ಬಂದು ಒಂದು ಲೋಟ ಕಾಫಿ ಕೊಟ್ಟು ಅಡುಗೆ ಮನೆ ಕಡೆ ಹೋದಳು. ಎಷ್ಟು ವೇಗದಲ್ಲಿ ಒಂದು ಗುಟುಕು ಬಾಯಿ ಒಳಗೆ ಹೋಗಿತ್ತೋ, ಅದಕ್ಕಿಂತ ಎರಡು ಪಟ್ಟು ವೇಗದಲ್ಲಿ ಅದು ಬಾಯಿಯಿಂದ ಹೊರಗಡೆ ಬಂದಿತ್ತು. ಮೊದಲೇ ಟೆನ್ಶನ್‌ನಲ್ಲಿದ್ದ ನನ್ನಿಂದ, ಕೈಯಲ್ಲಿದ್ದ ಲೋಟ ನೆಲಕ್ಕೆ ಅಪ್ಪಳಿಸಿತ್ತು. ಆ ಸದ್ದಿಗೆ ಒಳಗಿದ್ದ ರುಬೀನ ಮತ್ತು ಅಮ್ಮಿ ದಡಬಡನೆ ಓಡೋಡಿ ಬಂದರು. ಆಷ್ಟೋತ್ತಿಗೆ ನನ್ನ ಸಿಟ್ಟು ನೆತ್ತಿಗೇರಿತ್ತು. ತಲೆಯಲ್ಲೊಂದು ಉಪಾಯನೂ ಹೊಳೆದಿತ್ತು. ಇದೇ ಸರಿಯಾದ ಸಮಯ, ರುಬೀನಳಿಗೆ ತಲಾಕ್ ನೀಡಲು ತಕ್ಕ ಸನ್ನಿವೇಶ ಒದಗಿ ಬಂದಿದೆ.
 “ಬೇಗಮ್ ರುಬೀನಾ, ಇದೇನಿದು? ಕಾಫಿಯಾ ಅಥವಾ ಕಷಾಯವೋ? ಸ್ವಲ್ಪನೂ ರುಚಿ ಇಲ್ಲ. ಸ್ವಲ್ಪನೂ ಬುದ್ದಿ ಇಲ್ಲ ನಿನಗೆ. ಮಿಯಾ ಕೆಲಸದಿಂದ ಆಯಾಸಗೊಂಡು ಬರುವಾಗ, ಆತನಿಗೆ ರುಚಿಯಾದ ಕಾಫಿ ಕೊಡುವುದನ್ನು ಬಿಟ್ಟು, ಈ ರೀತಿಯಾದ ಸಪ್ಪೆ ಕಾಫಿ ಕೊಡ್ತಾರಾ? ಎಷ್ಟು ವರುಷ ಅಂತ ಸಹಿಸಿಕೊಳ್ಳಲಿ? ಎಲ್ಲದ್ದಕ್ಕೂ ಒಂದು ಮಿತಿ ಇರುತ್ತದೆ. ಇನ್ನು ನನ್ನಿಂದ ನಿನ್ನೊಟ್ಟಿಗೆ ಬಾಳಲು ಆಗುವುದಿಲ್ಲ. ನಿನಗೆ ತಲಾಕ್ ಕೊಡಬೇಕೆಂದಿದ್ದೇನೆ. ತಲಾಕ್… ತಲಾಕ್… ತಲಾಕ್”.
“ಯಾ, ಖುಧಾ..! ಏನಿದು ನಿನ್ನ ಆಟ. ಬೇಟಾ, ಇಸ್ಮಾಯಿಲ್ ಇದೇನಿದು ಹೇಳುತ್ತಿದ್ದೀಯಾ ನೀನು? ಕೇವಲ ಒಂದು ಕಾಫಿಗಾಗಿ, ಅವಳಿಗೆ ತಲಾಕ್ ಕೊಡುತ್ತಿದ್ದೀಯಾ? ತಮಾಷೆಗೂ ಈ ರೀತಿ ಮಾತನಾಡಬೇಡ ಮಗಾ.. ಇವಳಂತ ಹೆಂಡತಿ, ನನ್ನ ಸೊಸೆ ಎಲ್ಲಿ ಸಿಗುತ್ತಾಳೆ? ಬೇಡ ಬೇಟಾ, ಬೇಡ..ನಿನ್ನ ಮಾತನ್ನು..”
ನನ್ನಮ್ಮನ ಮಾತನ್ನು ಅರ್ಧದಲ್ಲಿ ನಿಲ್ಲಿಸಿ, ರುಬೀನ ಮಾತು ಆರಂಭಿಸಿದಳು. “ಅಮ್ಮಿಜಾನ್, ನೀವೇನು ಮಾತನಾಡಬೇಡಿ. ಈಗ ಅವರಿಗೆ ನನ್ನ ಮೇಲೆ ಸಿಟ್ಟು ಬಂದ ಹಾಗೆ ಕಾಣುತ್ತಿದೆ. ನಾಳೆ ಸರಿಯಾಗುತ್ತಾರೆ. ರೀ, ನನ್ನನ್ನು ಕ್ಷಮಿಸಿ. ಅತ್ತೆಗಂತ ಇಟ್ಟ ಕಾಫಿ ನಿಮಗೆ ಕೊಟ್ಟಿದ್ದು ನನ್ನ ತಪ್ಪಾಯಿತು. ಇನ್ನು ಮುಂದೆ ಹಾಗಾಗುವುದಿಲ್ಲ. ಬನ್ನಿ, ಊಟ ಬಡಿಸುತ್ತೇನೆ”.
ಅವಳ ಆ ಶಾಂತ ಉತ್ತರಕ್ಕೆ ಒಂದು ಕ್ಷಣ ನನ್ನ ಮನಸ್ಸು ಕರಗಿತ್ತು. ಆದರೆ ಜಾನುಳ ಮುಖ ನೆನಪಾದಾಗ, ನಾನು ಅದೇ ರೂಪ ತಾಳಿದೆ. ನಾನು ನನ್ನ ಪಟ್ಟು ಬಿಡಲಿಲ್ಲ. ಸಿಕ್ಕಿದ ಒಂದು ಚಾನ್ಸ್ ಹೇಗೆ ಬಿಟ್ಟು ಕೊಡಲಿ.
 
*
 
ಈ ವಿಷಯದಲ್ಲಿ ನಿನ್ನೆ ರಾತ್ರಿ ಮಹಾ ರಾದ್ಧಂತವೇ ನಡೆದಿತ್ತು. ಕೊನೆಗೂ ನಾನೇ ಜಯಭೇರಿ ಬಾರಿಸಿದ್ದೆ. ರುಬೀನಳಿಗೆ ತಲಾಕ್ ಕೊಟ್ಟು ಈವಾಗ ಇಲ್ಲಿ ನನ್ನ ಜಾನುಗಾಗಿ ಕಾಯುತ್ತಾ ಇದ್ದೇನೆ. ಇದೇ ನನ್ನ ಪ್ರೇಮ್ ಕಹಾನಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ಮದುವೆ.
ಒಹ್..ಜಾನು ಬಂದೆ ಬಿಟ್ಟಳು. ಸರಿಯಾದ ಸಮಯಕ್ಕೆ ಬಂದಿದ್ದಾಳೆ. ನನ್ನ ಪ್ರೇಮ್ ಕಹಾನಿ ಖತಂ, ಇವಳು ಹಾಜರ್. ಅರೇ, ಜೊತೆಗೆ ಯಾರನ್ನೋ ಕರ್ಕೊಂಡು ಬಂದಿದ್ದಾಳಲ್ಲ..! ಬಹುಷಃ ಅಣ್ಣನಂತ ಗೆಳೆಯನಿರಬೇಕು. ಮದುವೆಗೆ ಸಾಕ್ಷಿ ಬೇಕಲ್ಲ.ಇನ್ನು ಮದುವೆ ಕೆಲಸ ತುಂಬಾನೆ ಇದೆ.
“ಅಂಕಲ್, ಹೈ…”
ಅಂಕಲ್ಲಾ..!! ಇಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ವಲ್ಲ. ಮತ್ತೆ ಯಾರನ್ನು ಕರೆಯುತ್ತಿದ್ದಾಳೆ?
“ನಮಸ್ತೆ, ಇಸ್ಮಾಯಿಲ್ ಅಂಕಲ್”
“ಹೇ ಖುಧಾ…! ಕ್ಯಾ ಸುನ್ ರಹಾ ಹುಂ ಮೈ? ನನ್ನನ್ನು ಮದುವೆ ಆಗುವ ಹುಡುಗಿ, ನನ್ನನ್ನೇ ಅಂಕಲ್ ಅಂತ ಕರೆಯುತ್ತಿದ್ದಾಳೆ”.
“ಅಂಕಲ್, ಇವರು ಹ್ಯಾರಿಸ್ ಅಂತ. ನಾನು ನಿನ್ನೆ ಹೇಳಿದ್ದೆನಲ್ಲ ನಮ್ಮ ಮದುವೆ ಅಂತ, ಇವರೇ ಆ ಹುಡುಗ… ಹ್ಯಾರಿಸ್ ದಿಸ್ ಇಸ್ ಇಸ್ಮಾಯಿಲ್ ಅಂಕಲ್…”
ಮೊದಲ ಬಾರಿ ನನ್ನ ಹೆಸರಲ್ಲಿದ್ದ ಸ್ಮಯಿಲ್ ನನ್ನ ಮುಖದಲ್ಲಿರಲಿಲ್ಲ. ಮನಸ್ಸು ಬೇಡ ಬೇಡವೆಂದರೂ, ನನ್ನ ಕೈ ಅವನ ಕೈ ಕುಲುಕಿಸಲು ಮುಂದೆ ಚಾಚಿತ್ತು. ಅವಳ ಮಾತು ಮುಂದುವರೆದಿತ್ತು…
“ಅಂಕಲ್, ಮನೆಯವರು ಎಲ್ಲಿ? ನನ್ನ ಕಡೆಯಿಂದ ನಿಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಅಂತ ಹೇಳಿದ್ದೇನಲ್ಲಾ. ಮತ್ಯಾಕೆ ಕರ್ಕೊಂಡು ಬಂದಿಲ್ಲ. ಅವರೂ ಒಪ್ಪಲಿಲ್ಲವೇ? ನೀವ್ಯಾಕೆ ಒಪ್ಪಿಸಲಿಲ್ಲ? ಸಾಕ್ಷಿಗೆ ಬೇರೆ ಯಾರು ಇದ್ದಾರೆ?”
ಅವಳ ಪ್ರಶ್ನೆಯಲ್ಲಿ ಬೇಸರದ ಚಿಹ್ನೆ ಅಡಗಿಕೊಂಡಿತ್ತು. ಇವಳ ಪ್ರಶ್ನೆಗೆ ಹೇಗೆ ಉತ್ತರ ನೀಡಲಿ?
“ನೀನ್ಯಾವಗ ಹೇಳಿದ್ದೆ ಮನೆಯವರನ್ನು ಸಾಕ್ಷಿಗೆ ಕರ್ಕೊಂಡು ಬನ್ನಿ ಎಂದು? ಸಿಂಪಲ್ಲಾಗಿ, ಮನೆಯವರನ್ನು ಒಪ್ಪಿಸಿ, ನಾಳೆ ನಮ್ಮ ಮದುವೆ ಅಂತ ಹೇಳಿ ದರಬರನೆ ಹೋಗಿದ್ದಿ. ನನಗೇನು ಗೊತ್ತಿತ್ತು, ಆ ನಿನ್ನ “ನಮ್ಮ ಮದುವೆ” ಪದದಲ್ಲಿ ನಾನಲ್ಲ, ಇವನಿದ್ದಾನೆಂದು. ನಿನ್ನ ಮಾತನ್ನು ನಂಬಿ ನನ್ನ ಮನೆಯವರನ್ನೇನೋ ಒಪ್ಪಿಸಿದ್ದೇನೆ.. ಆದರೆ ಈಗ ನನ್ನ ಲೈಫಲ್ಲಿ ನ ಬೇಗಮ್ ಹೈ, ನಾಹಿ ಜಾನು” ಇಷ್ಟೆಲ್ಲಾ ನನ್ನ ಮನದೊಳಗೆ ಹೇಳ್ಕೊಂಡು ಅಳ್ತಾ ಇದ್ದೆ.
“ಆಂ.. ತೊಂದರೆ ಇಲ್ಲ. ನಾನು ಮರೆತೇ ಹೋಗಿದ್ದೆ. ನನ್ನ ಗೆಳತಿಯೊಬ್ಬರು ಬಂದಿದ್ದಾರೆ. ಅವರನ್ನೇ ಸಾಕ್ಷಿಗೆ ಸಹಿ ಹಾಕಲು ಕೇಳುತ್ತೇನೆ. ಅಲ್ಲಿ ಆಫೀಸ್ ಹೊರಗಡೆ ಕೂತಿದ್ದಾರೆ. ಬನ್ನಿ ಹೋಗೋಣ. ಅಂದ ಹಾಗೆ ರಿಜಿಸ್ಟರ್ ಆಫೀಸರ್ ಕರೀತಿದ್ದರು. ಅಂಕಲ್, ಹ್ಯಾರಿಸ್ ಕೆನಡಾದಲ್ಲಿ ಇರೋದು. ಇದೇ ತಿಂಗಳ ಕೊನೆಯಲ್ಲಿ ವಾಪಸ್ ಹೋಗ್ತಾ ಇದ್ದಾರೆ. ಅದಕ್ಕೆ ಇಷ್ಟೊಂದು ಅವಸರವಸರವಾಗಿ ಮದುವೆ ಆಗ್ತಿರೋದು.”
“ಇಷ್ಟೆಲ್ಲಾ ವಿವರಣೆ ಬೇಕಾ ತನ್ನ ಮದುವೆ ಮತ್ತು ಮದುಮಗನ ಬಗ್ಗೆ. ಅವನು ಹೋದರೆ ಹೋಗಲಿ. ಈ ಪ್ರಪಂಚದಲ್ಲಿ ಬೇರೆ ಯಾರೂ ಗಂಡಸರಿಲ್ಲವಾ ನಿನ್ನನ್ನು ಮದುವೆಯಾಗಲು? ಯಾಕೆ ನಾನೇ ಇಲ್ಲವಾ? ನಾನು ಒಬ್ಬ ಗಂಡಸೇ…!” ಅಂತ ಹೇಳಬೇಕೆಂದುಕೊಂಡೆ. ಮಾತು ಗಂಟಲಲ್ಲೇ ಸಿಕ್ಕಿ ಬಿಡ್ತು. ಬಲವಂತದ ನಗುವನ್ನು ಮುಖದಲ್ಲಿಟ್ಟು ಅವರಿಬ್ಬರ ಹಿಂದೆ ಹಿಂದೆ ರಿಜಿಸ್ಟರ್ ಆಫೀಸ್ ಕಡೆ ಹೋದೆ.
“ಅಂಕಲ್, ಇವರೆ ನನ್ನ ಗೆಳತಿ, ರುಬೀನಾ” ಜಾನುವಿನ ಮುಂದಿನ ಮಾತು ಅಸ್ಪಷ್ಟವಾಗಿತ್ತು.
ಈಗ ಎರಡನೇ ಬಾರಿ ನನ್ನ ಹೆಸರಲ್ಲಿದ್ದ ಸ್ಮಯಿಲ್ ನನ್ನ ಮುಖದಿಂದ ಮಾಯವಾಗತೊಡಗಿತ್ತು.. ರುಬೀನಾ, ನನ್ನ ಬೇಗಮ್..! ಸ್ವಲ್ಪ ಸುಧಾರಿಸಿಕೊಂಡೆ. ಹೇ ಖುಧಾ, ನೀನಿವತ್ತು ಇನ್ನೂ ಎಷ್ಟೊಂದು ಅಚ್ಚರಿಗಳನ್ನು ನನ್ನ ಮುಂದೆ ಇಡಲಿದ್ದೀಯಾ? ಜಾನು, ರುಬೀನಾ ಜೊತೆ ಮಾತಾಡಿ ಅವಳನ್ನು ಸಾಕ್ಷಿಗೆ ಒಪ್ಪಿಸಿದಳು.
“ಪಾಪದ ಮಹಿಳೆ ಇವಳು ಅಂಕಲ್. ನಿನ್ನೆ ರಾತ್ರಿ ಇವರ ಪತಿ ಇವರಿಗೆ ತಲಾಕ್ ಕೊಟ್ಟರಂತೆ. ಅವರ ಮದುವೆ ಮುರಿದು ಹೋದರೂ ಪರವಾಗಿಲ್ಲವೆಂದು, ನನ್ನ ಮದುವೆಗೆ ಸಾಕ್ಷಿಯಾಗಲು ಒಪ್ಪಿದ್ದಾಳೆ. ಆ ಪಾಪಿಗೆ ಹೇಗೆ ಮನಸ್ಸು ಬಂದಿರುತ್ತಾ…! ಇಂತಹ ಮುಗ್ಧ ಮನಸ್ಸಿನವರಿಗೆ ಮೋಸ ಮಾಡಲು. ನೀವೇ ಹೇಳಿ ಅಂಕಲ್, ಯಾರದ್ರೂ ಒಬ್ಬರು ಕೇವಲ ಕಾಫಿ ಸರಿಯಾಗಿ ಮಾಡ್ಲಿಲ್ಲ ಅಂತ ತಲಾಕ್ ಕೊಡ್ತಾರಾ? ಅದೂ ತನ್ನ ಅತ್ತೆಗೆ ಕೊಡಬೇಕಾಗಿದ್ದ ಕಾಫಿಯನ್ನು, ಅವಸರದಲ್ಲಿ ತನ್ನ ಪತಿಗೆ ಕೊಟ್ಟಳಂತೆ. ಅಷ್ಟಕ್ಕೇ ತಲಾಕ್ ಕೊಡಬಹುದೇ? ಎಂತೆAಥಾ ಪಾಪಿಗಳು ಈ ಪ್ರಪಂಚದಲ್ಲಿ ಇದ್ದಾರೆ..!” ನನ್ನ ಎದುರೇ ನನ್ನ ಆರೋಪದ ಪಟ್ಟಿ ಮಾಡುತ್ತಾ ಇದ್ದಾಳೆ.
“ಪಾಪಿ ಅಲ್ಲಮ್ಮಾ… ಪಾಪು, ನಿನ್ನ ಮಾತನ್ನು ಕೇಳಿಯೇ ಆ ಪಾಪು ಇಂತಹ ಪಾಪದ ಕೆಲಸ ಮಾಡಿದ್ದು. ನಿನಗೇನು ಗೊತ್ತು ಅವನ ಈಗಿನ ಪರಿಸ್ಥಿತಿ.. ದೋಬಿ ಕಾ ಕುತ್ತಾ ನ ಘರ್ ಕಾ ನ ಘಾಟ್ ಕಾ ಅಂತಾಗಿದೆ. ಇಷ್ಟು ವರುಷ ಜೊತೆಗಿದ್ದ ರುಬೀನಳನ್ನು ನಾನೇ ದೂರ ಮಾಡಿದ್ದೆ, ಈಗ ಜಾನು ನನ್ನ ಕೈ ಜಾರಿ ಹೋಗಿದ್ದಾಳೆ. ಅವರಿಬ್ಬರ ಮುಂದೆ ಇಂಗು ತಿಂದ ಮಂಗನಂತೆ ನಿಂತಿದ್ದೆ. ಆ ಪಾಪಿ ನಾನೇ, ಆ ಪಾಪದ ಕೆಲಸ ಮಾಡಿದವನು ನಾನೆ ಅಂತ ನಿನ್ನ ಹತ್ತಿರ ಹೇಳಲಿಕ್ಕೂ ಇಲ್ಲ, ಸುಮ್ಮನೆ ನಿಲ್ಲಲಿಕ್ಕೂ ಇಲ್ಲ”
ಈ ಇಸ್ಮಾಯಿಲ್ ಮುಖದಲ್ಲಿ ಇನ್ನೊಮ್ಮೆ ಸ್ಮಯಿಲ್ ಬರಬೇಕೆಂದರೆ ನಾನೇ ಏನಾದ್ರು ಮಾಡಬೇಕು. “ಯಾ ರಬ್ಬಾ, ಏನಾದ್ರು ರಾಸ್ತಾ ತೋರಿಸಪ್ಪಾ..!”
ಇಷ್ಟೆಲ್ಲಾ ಯೋಚನೆ ನನ್ನ ಮನದಲ್ಲಿ ಬರುತ್ತಿರುವಾಗ ರುಬೀನಾ ನನ್ನನ್ನು ನೋಡಿದಳು. ಆಶ್ಚರ್ಯ ಅವಳ ದುಃಖ ಭರಿತ ಮುಖದಲ್ಲಿ ಕಾಣುತ್ತಿತ್ತು. ಅವಳು ಬಾಯಿ ಬಿಡುವ ಮೊದಲು ನಾನೇ ಏನಾದ್ರು ಮಾಡಬೇಕು.
“ರುಬೀನಾ…! ನೀನು ಹೇಳಲೇ ಇಲ್ಲ, ಇವಳು ನಿನ್ನ ಗೆಳತಿಯೆಂದು” ಪರಿಸ್ಥಿತಿ ಹದಗೆಡುವ ಮೊದಲು ಹತೋಟಿಗೆ ತರಲು ಅಡಿಪಾಯ ಹಾಕಲು ಪ್ರಯತ್ನಿಸುತ್ತಿದ್ದೆ. ಆದರೆ…
“ನಾನು ನಿಮಗೆ ನಿನ್ನೆನೇ ಹೇಳಬೇಕೆಂದಿದ್ದೆ. ಆದರೆ ನೀವು, ಒಂದು ಸಣ್ಣ ಕಾರಣಕ್ಕಾಗಿ ನನ್ನನ್ನು ದೂರ ಮಾಡಿದ್ರಿ. ತಲಾಕ್ ಕೊಟ್ಟು ಈವಾಗ ಹೀಗೆ ಮಾತನಾಡುತ್ತಿದ್ದೀರಾ?” ಅವಳಿಂದ ಇಂತಹ ಉತ್ತರ ಬರುತ್ತದೆಂದು ನಾನು ಯೋಚಿಸಿರಲಿಲ್ಲ.
“ಹೇ ಖುಧಾ, ನನ್ನ ಜಾನುಗೆ… ಛೆ.! ಇನ್ನೆಲ್ಲಿ ನನ್ನ ಜಾನು.. ಆ ಜಾನುಗೆ ನನ್ನೆಲ್ಲಾ ವಿಷಯ ಗೊತ್ತಾಗಿ ಬಿಡ್ತಾ? ಆ ಪಾಪಿ ನಾನೇ ಅಂತ ಹೇಳಿದ್ಲಲ್ಲಾ ಈ ರುಬೀನಾ..” ಇಬ್ಬರ ಮುಖ ನೋಡ್ಲಿಕ್ಕೆ, ಅಲ್ಲಲ್ಲ ಅವರಿಬ್ಬರಿಗೆ ಮುಖ ತೋರಿಸ್ಲಿಕ್ಕೆ ನನ್ನಿಂದಾಗುತ್ತಿಲ್ಲ. ಈ ಚಳಿಗಾಲದಲ್ಲೂ ಬೆವರು ಹಣೆಯಿಂದ ನದಿ ನೀರಿನಂತೆ ಹರಿಯುತ್ತಿದೆಯಲ್ಲಾ..! ಕರ್ಚೀಫ್ ಎಲ್ಲಿ? ನನ್ನ ಕರ್ಚೀಫ್ ಎಲ್ಲಿ? ಭಗವಂತ ನೀನು ಎಲ್ಲಿ ಹೋದೆ?
ಅರೆ ಇದೇನಿದು..! ಉಂಗುರ ನನ್ನ ಪ್ಯಾಂಟ್ ಕಿಸೆಯಲ್ಲಿ..! ಒಹ್, ನನ್ನ ಜಾನುಗೆ ತಂದದಲ್ವಾ..! ಇದರಿಂದ ಇನ್ನೇನು ಉಪಯೋಗ?
“ಇಸ್ಮಾಯಿಲ್ ಅಂಕಲ್…. ನೀವೇನಾ ಇವರ ಪತಿ..! ನೀವ್ಯಾಕೆ ಇಂತಹ ಪಾಪದ ಕೆಲಸ ಮಾಡಿದ್ರಿ? ಇಂತಹ ಮುಗ್ಧ ಮನಸ್ಸಿನ ಹೆಂಡತಿಗೆ ತಲಾಕ್ ಕೊಡ್ಲಿಕ್ಕೆ ನಿಮಗೆ ಹೇಗಾದ್ರೂ ಮನಸ್ಸು ಬಂತು?….ಛೀ…” ಅವಳ ಭೈಗುಳಗಳ ಸುರಿಮಳೆ ಪ್ರಾರಂಭವಾದವು. ಒಂದು ಕೈಯಲ್ಲಿ ಉಂಗುರ, ಇನ್ನೊಂದು ಕೈಯಲ್ಲಿ ಕರ್ಚೀಫ್ ಹಿಡಿದುಕೊಂಡು ಇಬ್ಬರ ಮುಖ ಮುಖ ನೋಡುತ್ತಾ ಬೆಪ್ಪು ತಕ್ಕಡಿಯಂತೆ ನಿಂತಿದ್ದೆ. ಉಂಗುರ ನೋಡುತ್ತಲೇ, ಸಡನ್ನಾಗಿ ಈ ಟ್ಯೂಬ್ ಲೈಟ್ ತಲೆಯಲ್ಲಿ ಎಲ್ಲಿಂದಲೋ ಮಿಂಚಿನAತೆ ಐಡಿಯಾ ಬಂತು.
“ರುಬೀನಾ ಬೇಗಮ್… ನೀನು ನನ್ನನ್ನು ಇಷ್ಟು ವರ್ಷದಿಂದ ಇಷ್ಟೇನಾ ಅರ್ಥ ಮಾಡಿಕೊಂಡಿದ್ದು? ನಮ್ಮಿಬ್ಬರ ಪ್ರೀತಿ ಇಷ್ಟೇನಾ? ಇಲ್ಲಿ ನೋಡು, ಈ ಉಂಗುರ ನಿನಗಾಗಿ ತಂದಿದ್ದು. ಇವತ್ತು ರಾತ್ರಿ ಮನೆಯಲ್ಲಿ ನಿನಗೆ ಸರ್‌ಪ್ರಾಯಿಜ್ ಕೊಡುವಂತ ಇದ್ದೆ. ಅಲ್ಲ, ಸರ್ಕಾರನೇ ಮೂರು ತಲಾಕ್ ರಿವಾಜ್ ತೆಗೆದುಹಾಕಿರುವಾಗ, ನಾನು ಹೇಗೆ ನಿನಗೆ ತಲಾಕ್ ಕೊಡ್ಲಿಕ್ಕೆ ಸಾಧ್ಯ? ನಿನ್ನೆ ಮನೇಲಿ ಮಾಡಿದ್ದು ಒಂದು ನಾಟಕ ಅಷ್ಟೆ.. ಎಲ್ಲಾ ತಮಾಷೆಗೆ ಮಾಡಿದ್ದು. ಇವತ್ತು ನಿನಗೆ ಈ ಉಂಗುರ ಉಡುಗೊರೆಯಾಗಿ ಕೊಡುವಂತ ಪ್ಲಾನ್ ಮಾಡಿದ್ದೆ.” ರುಬೀನಳ ಮೇಲೆ ಡೈಲಾಗ್ ಸುರಿಮಳೆ ಸುರಿಸಿದೆ. ಇನ್ನು ಜಾನು ಕಡೆ ಭಾವನಾತ್ಮಕ ಮಾತಿನ ಬಾಣ ಬಿಡೋಣ.
“ಜಾನು, ನೀವೂ ನನ್ನನ್ನು ನಂಬಲಿಲ್ಲವೇ? ನಮ್ಮ ಗೆಳೆತನದ ಬೆಲೆ ಇಷ್ಟೇನಾ? ನನ್ನನ್ನು ಇಷ್ಟೇನಾ ಅರ್ಥ ಮಾಡಿಕೊಂಡಿದ್ದು? ಈ ಪ್ರಾಯದಲ್ಲಿ ನಾನು ಹೆಂಡತಿಗೆ ತಲಾಕ್ ಕೊಟ್ಟು ಯಾರ ಜೊತೆ ಇರಲಿ? ನಾನು ನಿಮ್ಮ ಮದುವೆಗೆ ಸಾಕ್ಷಿ ನೀಡಿ, ಇವಳಿಗೆ ಈ ಉಂಗುರ ಉಡುಗೊರೆ ಕೊಡುವ ಅಂತ ಪ್ಲಾನ್ ಮಾಡಿದ್ದೆ. ಎಲ್ಲಾ ಉಲ್ಟಾ ಅಯಿತು”
ಈವಾಗ ಮೌನವಾಗಿ ನಿಲ್ಲುವ ಸರದಿ ಅವರಿಬ್ಬರದ್ದಾಗಿತ್ತು. ಇಂತಹ ಸನ್ನಿವೇಶದಲ್ಲೂ ಈ ರೀತಿಯ ಡೈಲಾಗ್ ನನ್ನಿಂದ ಬರುತ್ತದೆಂದು ನಾನೂ ಊಹಿಸಿರಲಿಲ್ಲ. ಏನೇ ಆಗಲಿ ಈ ನನ್ನ ಸಮಯಪ್ರಜ್ಞೆಯಿಂದ ಉತ್ತಮ ಫಲಿತಾಂಶ ದೊರಕಿತ್ತು. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡೆ. ಸತ್ಯ ಪ್ರಸಂಗ ನನಗೊಬ್ಬನಿಗೆ ಗೊತ್ತಿರೋದು. ಈವಾಗ ಉಂಗುರದ ಸರದಿ.. ಅದು ಜಾನು ಬೆರಳು ಸೇರಬೇಕಿತ್ತು, ಆದರೆ ಅದೀಗ ನನ್ನ ಬೇಗಮ್ ಕೈಯಲ್ಲಿತ್ತು.
ಕೊನೆಗೂ ಉಂಗುರದಿಂದ ಈ ಇಸ್ಮಾಯಿಲ್ ಮುಖದಲ್ಲಿ ಮತ್ತೆ ಸ್ಮಯಿಲ್ ಬಂತು.
 
————————————————–


 
 

5 thoughts on “ನಾನು ಇ (ಸ್ಮಾಯಿಲ್)ರೂಪೇಶ್ ಅವರ ಹೊಸ ಕಥೆ

  1. ಚಂದದ ತಿರುವು ಪಡೆದುಕೊಂಡ ಕತೆ. ಇಷ್ಟವಾಯಿತು.

  2. ತುಂಬ ಚೆನ್ನಾಗಿ ಕತೆ ಬರೆಯುತ್ತೀರಿ. ಅಭಿನಂದನೆ. ಕುತೂಹಲ ಮತ್ತು ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಗುಣ ಕತೆಯಲ್ಲಿದ್ದರೆ ಅದೇ ಬರಹಗಾರನ ಯಶಸ್ಸು. ಜೊತೆಗೆ ಹಾಸ್ಯರಸವಿರುವುದು ನಿಮ್ಮ ಕತೆಯ ವೈಶಿಷ್ಟ. ಅಭಿನಂದನೆಗಳು. ಬರವಣಿಗೆ ನಿರಂತರವಾಗಿರಲಿ

  3. ಒಳ್ಳೆ ಫಜೀತಿ ಆಯ್ತು… ಸ್ಮೈಲ್…no smile E smail ದು!
    ಬೇರೆ ಯಾವ ವಿಷದಲ್ಲಾದರು experiment ಮಾಡಬಹುದು…
    ಆದ್ರೆ ಪ್ರೀತಿ ಪ್ರೇಮದ ವಿಷಯದಲ್ಲಿ ಮಾತ್ರ experiments…
    ಸಕ್ಸೆಸ್ ಆಗುವದಕ್ಕಿಂತ failure ಜಾಸ್ತಿ ಅನಿಸ್ತು
    Vidyagayatri joshi
    Bengaluru

Leave a Reply

Back To Top