ಪುಸ್ತಕ ಸಂಗಾತಿ
ಎನ್ ವಿ ರಮೇಶ್ ರವರ ಕೃತಿ
ಆರೋಗ್ಯದೇವಿಗೆ ಸಾಷ್ಟಾಂಗ ವಂದನೆ
ಲೇಖನಗಳ ಸಂಕಲನ-
ಅವಲೋಕನ
ಸುಜಾತಾ ರವೀಶ್
ಆರೋಗ್ಯದೇವಿಗೆ ಸಾಷ್ಟಾಂಗ ವಂದನೆ _ ಲೇಖನಗಳ ಸಂಕಲನ
ಲೇಖಕರು ಶ್ರೀ ಎನ್ ವಿ ರಮೇಶ್
ಪ್ರಕಾಶಕರು ಆಸಕ್ತಿ ಪ್ರಕಾಶನ ಮೈಸೂರು
ಮೊದಲ ಮುದ್ರಣ 2023
ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನ ಪೀಠಿಕೆಯಲ್ಲಿ ಕೊಟ್ಟಿರುವ ಆರೋಗ್ಯದ ವ್ಯಾಖ್ಯೆಯ ಕನ್ನಡದ ಅನುವಾದದಲ್ಲಿ “ಯಾವುದೇ ರೀತಿಯ ರೋಗರುಜಿನಗಳಿಲ್ಲದೆ ಅಂಗವೈಕಲ್ಯಗಳಿಲ್ಲದೆ ಒಬ್ಬ ವ್ಯಕ್ತಿ ಗಳಿಸಬಹುದಾದ ಅತ್ಯುತ್ತಮ ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಸ್ವಸ್ಥಸ್ಥಿತಿ”
ಎನ್ನಬಹುದು. ಸಿ ಆರ್ ಚಂದ್ರಶೇಖರ್ ಮತ್ತು ನಾ ಸೋಮೇಶ್ವರ ಅವರು ಸಂಪಾದಿಸಿರುವ ಸಮಗ್ರ ಆರೋಗ್ಯಕ್ಕೆ ಸಮೃದ್ಧ ವೈದ್ಯ ಸಾಹಿತ್ಯ ಕೃತಿಯ ಸಂಪಾದಕರ ಮಾತಿನ ಪ್ರಕಾರ ಶಾರೀರಿಕ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯ ಗಳಿಸಿದ ಮಾತ್ರಕ್ಕೆ ಪೂರ್ಣ ಆರೋಗ್ಯ ಎಂದು ಭಾವಿಸಲು ಸಾಧ್ಯವಿಲ್ಲ ಆರೋಗ್ಯದ ಈ ಮೂರು ಆಯಾಮಗಳ ಜೊತೆಯಲ್ಲಿ ಲೈಂಗಿಕ ಆರೋಗ್ಯ, ಔದ್ಯೋಗಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ ಎಂಬ ನಾಲ್ಕು ಐದು ಮತ್ತು ಆರನೆಯ ಆಯಾಮಗಳು ಬೇಕಾಗುತ್ತದೆ.
ಈ ಪುಸ್ತಕದ ಲೇಖನಗಳಲ್ಲಿ ಈ ಆರು ಆಯಾಮಗಳ ಬಗ್ಗೆ ಲೇಖನಗಳನ್ನು ಬರೆದಿರುತ್ತಾರೆ ನಿಜಕ್ಕೂ ಸಮಗ್ರ ಎಂದೆನಿಸುತ್ತದೆ
ಮೊದಲಿಗೆ ಶಾರೀರಿಕ ಆರೋಗ್ಯ ಈ ವಿಚಾರವಾಗಿ ಸಕ್ಕರೆ ತಿಂದರೆ ಸಕ್ಕರೆ ರೋಗ ಬರುವುದೇ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾದಾಗ ಈ ಲೇಖನಗಳಲ್ಲಿ ಮಧುಮೇಹದ ಬಗ್ಗೆ ಮಾಹಿತಿ ದೊರಕಿಸಿಕೊಡುತ್ತಾರೆ . ಕಾಯಿಲೆ ತಂದವರು ಅಷ್ಟೇ ಅಲ್ಲದೆ ಮನೆಯ ಸದಸ್ಯರು ಅದರ ಬಗ್ಗೆ ಅಮೂಲ್ ಅಗ್ರ ತಿಳಿದು ತುರ್ತು ಪರಿಸ್ಥಿತಿಯಲ್ಲಿ ಹೇಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅರಿತಿರಬೇಕು ಎನ್ನುತ್ತಾರೆ ಲೇಖಕರ ಅನುಭವದ ಮಾತು ಇದು ಮಧುಮೇಹ ಅಥವಾ ಬಿಪಿ ಬಂದರೆ ಅದು ಪೂರ್ಣವಾಗಿ ದಿಢೀರ್ ಎಂದು ಮಾಯವಾಗುವ ಕನಸು ಕಾಣಬೇಡಿ ಇರುವುದರಿಂದ ಉತ್ತಮ ನಿರ್ವಹಣೆ ಮಾಡಲು ಕಲಿಯಿರಿ ಎಂಬುದೇ ನನ್ನ ಅನುಭವದ ಮಾತು ನಂತರ ಹೊಸ ವರ್ಷದ ಹೊಸಿಲಲ್ಲಿ ಬೇವು ಬೆಲ್ಲ ತಿಂದು ಆರೋಗ್ಯ ಸೂತ್ರಗಳನ್ನು ಜಪಿಸೋಣ ಏಪ್ರಿಲ್ ತಿಂಗಳಲ್ಲಿ ಬೇಸಿಗೆ ಬಿಸಿಲಿನ ತಾಪ ಹಾಗೂ ದೇಹ ಶಾಂತಿ ಮಾಡುವ ವಿಧಾನ ಮಳೆಗಾಲ ಬಂದಿದೆ ಆರೋಗ್ಯ ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸಿ ಎಲ್ಲ ಲೇಖನಗಳಲ್ಲಿ ವಹಿಸಬೇಕಾದ ಎಚ್ಚರಿಕೆ ಎದುರಿಸಬೇಕಾದ ಅಪಾಯಗಳು ಇವುಗಳ ಬಗ್ಗೆ ವಿವರಿಸುತ್ತಾರೆ ಕರುನಾಡು ಬಾ ಬೆಳಕೆ ಲೇಖನದಲ್ಲಿ ಗ್ಲುಕೋಮ ಕಾಯಿಲೆ ಕಾಯಿಲೆಯ ಬಗ್ಗೆ ಸವಿವರವಾಗಿ ಹೇಳುವುದಲ್ಲದೆ ತಮ್ಮ ಸಂಬಂಧಿ ಒಬ್ಬರು ಮಾಮಿ ರಾಜಲಕ್ಷ್ಮಿ ರಾಮಚಂದ್ರನ್ ಅವರ ವಿಷಯವನ್ನು ಉದಾಹರಣೆಯಾಗಿ ಹೇಳುತ್ತಾರೆ ಹಾಗೆ ಮಧ್ಯಮ ವಯಸ್ಸಿನವರ ಆಹಾರ ಕೆಲವು ವಿಚಾರಗಳು ಈ ಲೇಖನದಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾರೆ.
ಎರಡನೆಯದಾಗಿ ಮಾನಸಿಕ ಆರೋಗ್ಯದ ಬಗ್ಗೆ ಮಾನಸಿಕ ಆರೋಗ್ಯ ಲೇಖನದಲ್ಲಿ ಹೇಳುತ್ತಾರೆ ಹದಿಹರೆಯದ ವಿವರ ಜೀವನ ದತ್ತ ಒಂದು ಇಣುಕು ನೋಟ ಬೀರಿ ಏಳುಬೀಳು ಸವಾರಿ ದಾರಿಯಲ್ಲಿ ಪಾಲಕರು ವಹಿಸಬೇಕಾದ ಕಾಳಜಿಯನ್ನು ಎತ್ತಿ ಹಿಡಿಯುತ್ತಾರೆ
ನಾವು ವಾಸಿಸುವ ಸಮಾಜದ ಬಗ್ಗೆ ಖಂಡಿತ ನಿರ್ಲಕ್ಷ ಸಾಧ್ಯವಿಲ್ಲ ಅದರ ಮಧ್ಯೆ ನಮ್ಮ ಬದುಕು ಎಂದಾಗ ಅದರ ಬಗ್ಗೆ ನಾವು ಖಂಡಿತ ಕಾಳಜಿ ವಹಿಸಲೇಬೇಕು ಮೋಹಕ ಮೋಹಿನಿ ಕರಿಯುತ್ತಿದ್ದಾಳೆ ಎಚ್ಚರ ಎಂದು ಹೇಳುತ್ತಾ ಮಸಾಜ್ ಪಾರ್ಲರ್ ಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಹಾಗೂ ಅವರ ಜಾಲದಲ್ಲಿ ಬೀಳದಂತೆ ಸಲಹೆ ನೀಡುತ್ತಾರೆ. ಮಾದಕ ವಸ್ತುಗಳ ಬಳಕೆ ಹಾಗೂ ವಿಸ್ತರಣಾ ಜಾಲ ಎಂಬ ಲೇಖನದಲ್ಲಿ ಮಾದಕ ವಸ್ತುಗಳ ಬಳಕೆ ವಿರುದ್ಧ ಎಚ್ಚರಿಕೆ ಹಾಗೂ ಹೇಗೆ ಹಬ್ಬುತ್ತಿದೆ ಎಂಬುದರ ಬಗ್ಗೆ ವಿವರಣೆ ನೀಡಿ ಸಮಾಜಕ್ಕೆ ಸುತ್ತ ಎಚ್ಚರಿಕೆ ನೀಡುತ್ತಾರೆ
ಯುವ ಜನತೆಯನ್ನು ಸರಿಯಾದ ದಾರಿಯಲ್ಲಿ ನಡೆಸುವ ನಿಟ್ಟಿನಲ್ಲಿ ಲೈಂಗಿಕ ಆರೋಗ್ಯದ ಶಿಕ್ಷಣ ಹೆಚ್ಚಿನ ಮಹತ್ವ ಪಡೆಯುತ್ತದೆ. ಅತ್ಯಾಚಾರ ಪ್ರಕಟಣೆ ಪ್ರಕರಣಗಳ ಬಗ್ಗೆ ಜಾಗೃತಿ ವಹಿಸುವಂತಹ ಲೇಖನ ಲಜ್ಜೆಯಿಂದ ಕಾಮಾತುರದ ರೇಪ್ ಪ್ರಸಂಗಗಳು ನಿಲ್ಲುವವೇ ಎಂಬ ಪ್ರಶ್ನೆ ಎತ್ತುತ್ತಾರೆ.ನಂತರ ಹನಿ ಟ್ರ್ಯಾಪ್ ಬಗ್ಗೆಯೂ ಹೇಳಿ ಬಲೆಗೆ ಬೀಳಿಸುವವರ ಹಾಗೂ ಬಿದ್ದವರ ಅನುಭವಾಯಣವನ್ನು ನಮಗೆ ಸಾದರ ಪಡಿಸುತ್ತಾರೆ.
ಮುಂದಾಲೋಚನೆ ಇಲ್ಲದೆ ಹಾಳುಗೆಡಹುತ್ತಿರುವ ಪರಿಸರ ಮನುಷ್ಯನ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಹಾಗಾಗಿ ಔದ್ಯೋಗಿಕ ಆರೋಗ್ಯ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ವಿಷಯದ ಬಗ್ಗೆ ಬೆಳಕು ಚೆಲ್ಲುವ ಪಳೆಯುಳಿಕೆ ಇಂಧನ ಮತ್ತು ಹಸಿರು ಜಲಜನಕ ಹಾಗೂ ಆರೋಗ್ಯ ದರ್ಶನ ಮಾಲಿಕೆ ಮತ್ತು ಆರೋಗ್ಯವಾರ್ ಶಿಕ್ಷಣ ವಾರ್ತೆ ಇವುಗಳಲ್ಲಿ ಸಣ್ಣ ಸಣ್ಣ ವಿಚಾರಗಳ ಬಗ್ಗೆಯೂ ಕೊಡುವ ವಿವರಣೆಗಳು ನಿಜಕ್ಕೂ ಬಹಳಷ್ಟು ಉಪಯುಕ್ತ ಹಾಗೂ ಮಾಹಿತಿ ಪೂರ್ಣ
ಹೆಚ್ಚುತ್ತಿರುವ ದುಶ್ಚಟಗಳು, ಮರೆಯಾಗುತ್ತಿರುವ ಕುಟುಂಬ ಪರಿಕಲ್ಪನೆ, ಹಿರಿಯ ನಾಗರೀಕರ ಸಮಸ್ಯೆಗಳು ಇವೆಲ್ಲವುಗಳಿಂದ ಮನುಷ್ಯ ಏಕಾಂಗಿ ಆಗುತ್ತಿದ್ದಾನೆ .ಹಾಗಾಗಿ ಆಧ್ಯಾತ್ಮಿಕ ಆರೋಗ್ಯದ ಅರಿವು ಅತ್ಯಗತ್ಯವಾಗುತ್ತಿದೆ. ಆಧ್ಯಾತ್ಮಿಕ ಆರೋಗ್ಯವೆಂದರೆ ದೇವರು ಮತ್ತು ಧರ್ಮಕ್ಕೆ ಮಾತ್ರ ಸಂಬಂಧಪಡದೆ ಮನುಷ್ಯ ತನ್ನನ್ನು ತಾನು ಅರ್ಥ ಮಾಡಿಕೊಂಡು ಪ್ರಕೃತಿಯೊಡನೆ ಸಮಾಜದೊಡನೆ ಸಾಮರಸ್ಯ ಸಾಧಿಸಿ ಸಮಚಿತ್ತ ಹಾಗೂ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದೇ ಆಗಿದೆ. ಇಲ್ಲಿನ ಲೇಖನಗಳು ಅಷ್ಟೇ ವ್ಯಕ್ತಿಯ ಬಗ್ಗೆ ಸೂಕ್ಷ್ಮ ನೋಟ ನೀಡುವ ಆರೋಗ್ಯ ವಿಚಾರಗಳಷ್ಟೇ ಅಲ್ಲದೆ ಸಮಾಜದ ಬಗ್ಗೆ ಸಮಗ್ರ ದೃಷ್ಟಿಕೋನದ ಸಂಪೂರ್ಣ ಆರೋಗ್ಯದ ಸಮ್ಯಕ್ ದರ್ಶನವನ್ನು ನೀಡುವುದರಿಂದ ಆಧ್ಯಾತ್ಮಿಕ ಆರೋಗ್ಯದ ಮಹತ್ವವನ್ನು ಎತ್ತಿ ಹಿಡಿಯಲು ಇಲ್ಲಿ ಸಾಧ್ಯವಾಗಿದೆ
ಈ ರೀತಿ ಆರೋಗ್ಯದ ಬಗೆಗಿನ ಅರಿವು ಕುಟುಂಬದಲ್ಲಿ ಜನ್ಮಜಾತವಾಗಿ ನಂತರ ನಾವು ಪಡೆಯುವ ಶಿಕ್ಷಣದ ಮೂಲಕ ಪಡೆಯಬಹುದಾದರೂ ವಿದ್ಯುನ್ಮಾನ ಮಾಧ್ಯಮಗಳಾದ ರೇಡಿಯೋ ದೂರದರ್ಶನ ಇವುಗಳ ಮೂಲಕ ಸಹ ಆರೋಗ್ಯದ ಅರಿವು ಜಾಗೃತಿ ಮೂಡಬಹುದಾದರೂ ಜನಪ್ರಿಯ ಸಾಹಿತ್ಯದ ಮುದ್ರಣ ಮಾಧ್ಯಮ ತುಂಬಾ ಪ್ರಮುಖವೆನಿಸುತ್ತದೆ. ಅಲ್ಲದೆ ಸಂಗ್ರಹಿಸಲ್ಪಟ್ಟು ಆಗಾಗ ಅವುಗಳನ್ನು ಓದಿ ಮನನ ಮಾಡಲೂ ಅನುಕೂಲ.
ಪ್ರಸ್ತುತ ದಿನಗಳಲ್ಲಿ ಈ ರೀತಿ ಆರೋಗ್ಯ ವೈದ್ಯಕೀಯ ಸಾಹಿತ್ಯದ ಬೆಳವಣಿಗೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ತುಂಬಾ ಸಂತೋಷದ ವಿಷಯ. ವೈದ್ಯರು ತಮ್ಮ ಅನುಭವಗಳನ್ನು ಹಾಗೂ ಸಲಹೆಗಳನ್ನು ಕೊಟ್ಟು ಬರೆಯುವ ಪುಸ್ತಕಗಳು ಒಂದೆಡೆಯಾದರೆ ತಮ್ಮ ಅಥವಾ ತಮ್ಮ ಮನೆಯ ಸದಸ್ಯರ ಆರೋಗ್ಯದ ಅನುಭವಗಳನ್ನು ತಾವು ಅನುಸರಿಸುತ್ತಿರುವ ವಿಧಾನಗಳನ್ನು ಜನಸಾಮಾನ್ಯರು ತಮ್ಮ ದೃಷ್ಟಿಯಿಂದ ಬರೆಯುವ ಸಾಹಿತ್ಯವು ಗಮನಾರ್ಹ. ಮಹಿಳೆಯರ ಸ್ವಾಸ್ಥ್ಯ ವಿಚಾರವಾಗಿ ಡಾಕ್ಟರ್ ಅನುಪಮಾ ನಿರಂಜನ್ ಡಾಕ್ಟರ್ ಗಿರಿಜಮ್ಮ ಇವರುಗಳ ಲೇಖನ ಮಾಲಿಕೆಗಳು ಉಪಯುಕ್ತವೆನಿಸಿದ್ದವು. ಡಾಕ್ಟರ್ ನಾ ಸೋಮೇಶ್ವರ ಡಾ. ಗೋಪಾಲಕೃಷ್ಣರಾವ್ ಇವರೇ ಮುಂತಾದವರುಗಳ ರಚನೆಗಳು ಮಾರ್ಗದರ್ಶಿಗಳಾಗಿವೆ. ಇನ್ನು ಮಾನಸಿಕ ಆರೋಗ್ಯದ ವಿಷಯದಲ್ಲಿ ಡಾಕ್ಟರ್ ಸಿಆರ್ ಚಂದ್ರಶೇಖರ್, ಡಾ. ಪವಿತ್ರ ಡಾ.ಅಶೋಕ ಪೈ ಮೊದಲಾದವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಕೊರವಂಜಿ ಪತ್ರಿಕೆಯ ರಾಶಿ ಅವರ ಕಾಣಿಕೆಯೂ ಉಲ್ಲೇಖನಾರ್ಹ.
ವೈದ್ಯರಲ್ಲದಿದ್ದರೂ ಆರೋಗ್ಯ ಸಾಹಿತ್ಯದ ವಿಚಾರದಲ್ಲಿ ಈಗಾಗಲೇ ೧೫ ಪುಸ್ತಕಗಳನ್ನು ಪ್ರಕಟಿಸಿರುವ ಶ್ರೀ ಎನ್ ವಿ ರಮೇಶ್ ಅವರು ತಮ್ಮನ್ನು ತಾವೇ ಡಾಕ್ಟರ್ ಅಲ್ಲದ ಆಕ್ಟರ್ ಎಂದು ಕರೆದುಕೊಳ್ಳುವ ಲೇಖಕರು. ಆರೋಗ್ಯ ಶಿಕ್ಷಣಕ್ಕೆ ಶ್ರವಣ ಹಾಗೂ ಮುದ್ರಣ ಮಾಧ್ಯಮದ ಮೂಲಕ ತಮ್ಮನ್ನು ತಾವೇ ಸಮರ್ಪಿಸಿಕೊಂಡವರು. ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮಾಧ್ಯಮದ ಮೂಲಕ ಅನೇಕ ಗುರುತರ ಆರೋಗ್ಯ ಕಾರ್ಯಕ್ರಮಗಳನ್ನು ಕೈಗೊಂಡು ಶಿಬಿರಗಳನ್ನು ನಡೆಸಿದ್ದಾರೆ . ಆರೋಗ್ಯ ನಾಟಕಗಳನ್ನು ಬರೆದು ನಿರ್ದೇಶಿಸಿ ಆಡಿಸಿ ಜನ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಕ್ಲಬ್ ಹೌಸ್ ವೇದಿಕೆಯಲ್ಲೂ ಆರೋಗ್ಯ ಕುರಿತಾದ ತಮ್ಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಈಗ ಮುದ್ರಣ ಮಾಧ್ಯಮದಲ್ಲಿ ಪುಸ್ತಕಗಳನ್ನು ಬರೆದಿರುವುದಲ್ಲದೆ “ವೈದ್ಯಲೋಕ” ಎಂಬ ಕನ್ನಡ ಹಾಗೂ ಹೆಲ್ತ್ ವಿಷನ್ ಎಂಬ ಇಂಗ್ಲಿಷ್ ನಿಯತಕಾಲಿಕೆಗಳಲ್ಲಿ ಡಾಕ್ಟರ್ ಅಲ್ಲ ಆಕ್ಟರ್ ನ ಲೇಖನಿ ಇಂದ ಎಂಬ ಅಂಕಣ ಮಾಲಿಕೆಯನ್ನು ಏಳು ವರ್ಷಗಳಿಂದ ಬರೆಯುತ್ತಿದ್ದಾರೆ .ಹೀಗೆ ವೈದ್ಯಲೋಕ ಆರೋಗ್ಯ ಮಾಸಿಕದಲ್ಲಿ ಪ್ರಕಟವಾದ ಆರೋಗ್ಯ ಅಂಕಣಗಳ ಸಂಕಲನವೇ ಈ “ಆರೋಗ್ಯ ದೇವಿಗೆ ಸಾಷ್ಟಾಂಗ ವಂದನೆ”. ಶೀರ್ಷಿಕೆಯೇ ತುಂಬಾ ಕಲಾತ್ಮಕವಾಗಿ ಅರ್ಥಪೂರ್ಣವಾಗಿ ಕಂಡುಬರುತ್ತದೆ.
ಆರೋಗ್ಯ ಸಾಹಿತ್ಯದ ಆಶಯ ಪ್ರತಿಯೊಬ್ಬ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ತಾನೇ ಅರಿವನ್ನು ಹೊಂದಿರುವುದಕ್ಕೆ,ತನ್ನ ಕುಟುಂಬದವರ ಆರೋಗ್ಯ ಅಥವಾ ರೋಗಗಳು ಬಂದಿದ್ದರೆ ಅದರ ನಿಯಂತ್ರಣದ ಬಗ್ಗೆ ತಿಳಿವು ಹಾಗೂ ಇವೆಲ್ಲವುಗಳ ಬಗ್ಗೆ ವೈದ್ಯ ಹಾಗೂ ವೈದ್ಯೇತರ ಸಿಬ್ಬಂದಿಗಳಿಂದ ಸಾಕಷ್ಟು ಮಾಹಿತಿಗಳನ್ನು ಪಡೆಯುವುದಕ್ಕೆ ನಿಟ್ಟಿನಲ್ಲಿ ಸಹಕರಿಸುವುದೇ ಆಗಿದೆ. ಈ ಆಶಯ ಈ ಲೇಖಕರ ಪುಸ್ತಕದಲ್ಲಿ ತುಂಬಾ ಸಮರ್ಪಕವಾಗಿ ನೆರವೇರಿದೆ. ಸರ್ವೇಸಾಮಾನ್ಯ ಎನಿಸಿರುವ ಸಕ್ಕರೆ ಕಾಯಿಲೆಯಿಂದ ಹಿಡಿದು ಮಾನಸಿಕ ಆರೋಗ್ಯ ಯಕೃತ್ತಿನ ಉರಿಯೂತ, ಡೆಂಗು ಇಂತಹ ರೋಗಗಳ ಬಗ್ಗೆ ಉಪಯುಕ್ತ ಮಾಹಿತಿ, ತಡೆಯುವ ನಿವಾರಣೋಪಾಯಗಳು, ಬಂದಾಗ ಅನುಸರಿಸಬೇಕಾದ ವಿಧಾನಗಳು ಇವೆಲ್ಲವೂ ಇವರ ಲೇಖನದಲ್ಲಿದೆ. ಲೈಂಗಿಕ ಆರೋಗ್ಯದ ಬಗ್ಗೆ, ಹನಿ ಟ್ರ್ಯಾಪ್ ಹಾಗೂ ಮಸಾಜ್ ಪಾರ್ಲರ್ಗಳ ಬಗ್ಗೆ ಎಚ್ಚರಿಕೆಯ ಕರೆಗಂಟೆಯೂ ಇಲ್ಲಿ ಮೊಳಗಿದೆ. ಮಾದಕ ವಸ್ತುಗಳ ಬಳಕೆ ವಿಸ್ತರಣಾ ಜಾಲಗಳ ಬಗ್ಗೆ ಮಾಹಿತಿ ಇದೆ .ಇಂಧನ ಉಪಯೋಗ ಪರಿಸರ ಮಾಲಿನ್ಯ ಆಯಾ ಋತುಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ನಿಯಮಗಳು ಎಲ್ಲವನ್ನು ಇಲ್ಲಿ ಹೇಳಿದ್ದಾರೆ. ವಿಶಿಷ್ಟವೆಂದರೆ ಇವರು ಆಕರ್ಷಣೀಯವಾಗಿ ಕೊಡುವ ಕೆಲವು ಶೀರ್ಷಿಕೆಗಳು “ಚಲೇಜಾವ್ ಚಳಿ ಜ್ವರ”, “ನುಂಗಲು ಬಂದ ಡೆಂಗು ಜ್ವರವೇ ದೂರ ಹೋಗು” “ಮೋಹಕಮಾನಿನಿ ಕರೆಯುತ್ತಿದ್ದಾಳೆ ಎಚ್ಚರ” ಮುಂತಾದವು. ಪ್ರತಿ ತಿಂಗಳಿನಲ್ಲೂ ಆರೋಗ್ಯದ ಬಗ್ಗೆ ಸಂಬಂಧಿಸಿದಂತೆ ಆಚರಿಸುವ ವಿಶಿಷ್ಟ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳ ಬಗ್ಗೆ ಮಾಹಿತಿ ನೀಡಿರುವುದು ಇಲ್ಲಿನ ಲೇಖನಗಳ ವೈಶಿಷ್ಟ್ಯ. ಆರೋಗ್ಯ ಶಿಕ್ಷಣ ವಾರ್ತೆ ಎಂದು ಸಣ್ಣದಾಗಿ ಕೆಲವೊಂದು ವಿಷಯಗಳ ಬಗ್ಗೆ ವಿವರ ನೀಡುತ್ತಾರೆ. ತಾವು ನಿರ್ವಹಿಸಿದ ಶಿಬಿರಗಳು ನಡೆಸಿದ ಆರೋಗ್ಯ ಆಂದೋಲನಗಳ ಬಗ್ಗೆ ಮಾಹಿತಿ ಇದೆ . ಮನೆಯ ಒಬ್ಬ ಊರಣದ ಬಗ್ಗೆ ಇರಲಿ ಸಣ್ಣಪುಟ್ಟ ಮನೆ ವೈದ್ಯಗಳ ಬಗ್ಗೆ ಇರಲಿ ಇವರು ಕೊಟ್ಟಿರುವ ಸಲಹೆ ಮತ್ತು ಔಷಧಿಗಳು ನಿಜಕ್ಕೂ ತುಂಬಾ ಉಪಯುಕ್ತ.ಮನೆಯನ್ನು ವ್ಯಕ್ತಿಯಂತೆ ಪರಿಗಣಿಸಿ ಅದರ ಶುಭ್ರತೆ ಕಾಯ್ದಿಟ್ಟುಕೊಳ್ಳಬೇಕಾದ ರೀತಿ ವಹಿಸಬೇಕಾದ ಎಚ್ಚರಿಕೆ ಇವುಗಳನ್ನು ಒಂದು ಕವನ ರೂಪದಲ್ಲಿ ಹೇಳಿದ್ದಾರೆ. ಈ ಸುಧೀರ್ಘ ಕವನದಲ್ಲಿ ನನ್ನ ಮನಸ್ಸಿಗೆ ತಟ್ಟಿದ ಈ ಸಾಲುಗಳು ನಿಮ್ಮ ಗಮನಕ್ಕೂ ತರುತ್ತಿದ್ದೇನೆ
ಕಿಟಕಿ ಬಾಗಿಲಿಗೆ ಗೆದ್ದಲು ಹತ್ತಿದರೆ ಸೂಕ್ತ ಔಷಧಿ ಹಾಕಿ
ಮನೆ ಸ್ವಂತವಿರಲಿ ಬಾಡಿಗೆ ಇರಲಿ ಮನೆಯಲ್ಲಿ ನೆಮ್ಮದಿ ಸಾಕಿ
ಸಮಯ ಹಣದ ಖರ್ಚು ಚಿಂತೆ ಬಿಡಿ ಮುಂದಾಲೋಚನೆಗೆ ಮನ ನೂಕಿ
ಚಂದ್ರಪ್ಪನಂತಹ ತಜ್ಞರ ಕೇಳಿ ಶಾಶ್ವತ ಪರಿಹಾರ ಖುಷಿ ಪಟ್ಟ ಉಮೇಶ ಜಾಕಿ
ಹೇಳುವ ರೀತಿಯಲ್ಲಿ ನೇರ ದಿಟ್ಟ ನಿರಂತರ ಎನ್ನುವಂತೆ ನಾಟಕೀಯತೆ ಇರದ ಪ್ರಾಮಾಣಿಕತೆ ಇದೆ. ಆಪ್ತಮಿತ್ರನೊಬ್ಬನ ಸಲಹೆಯಂತೆ ಆತ್ಮೀಯವಾಗಿದೆ. ಒಂದು ರೀತಿಯಲ್ಲಿ ಸಂಪೂರ್ಣ ಆರೋಗ್ಯ ಕೈಪಿಡಿ ಎಂಬುದು ನಿರ್ವಿವಾದ. ಪ್ರತಿಯೊಂದು ಗ್ರಂಥಾಲಯದಲ್ಲಿ ಆಸ್ಪತ್ರೆಗಳಲ್ಲಿ ಶಾಲೆಗಳಲ್ಲಿ ಇರಲೇಬೇಕಾದಂತಹ ಪುಸ್ತಕ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಅನ್ನ ದಾಸೋಹ ಅಕ್ಷರ ದಾಸೋಹಗಳಂತೆ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಈ ಆರೋಗ್ಯ ದಾಸೋಹವೂ ಇಂದಿನ ಈ ಯುಗದಲ್ಲಿ ಅತ್ಯಂತ ಅವಶ್ಯಕ
ನಿರಂತರ ಉತ್ಸಾಹದ ಚಿಲುಮೆಯಾಗಿರುವ ಸಾಮಾಜಿಕ ಕಾಳಜಿ ಹೊಂದಿರುವ ಸ್ನೇಹಜೀವಿ, ನಿಸ್ವಾರ್ಥದಿಂದ ಸಂಘಟನಾ ಕಾರ್ಯದಲ್ಲಿ ಎಲ್ಲರನ್ನೂ ತನ್ನೊಂದಿಗೆ ಕರೆದೊಯ್ಯುವಂತಹ ಸಂಘ ಜೀವಿ ಆತ್ಮೀಯ ಸಹೋದರ ಶ್ರೀ ಎನ್ ವಿ ರಮೇಶ ಅವರ ಈ ಆರೋಗ್ಯ ದಾಸೋಹದ ಕೈಂಕರ್ಯ ಸದಾ ಸಹಕಾರ ತೋರುತ್ತಿರುವ ಸಹಧರ್ಮಿಣಿ ಉಮಾ ಅವರ ಸಾಂಗತ್ಯದಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿರಲಿ ಅವರ ಕಾರ್ಯಗಳಲ್ಲೆಲ್ಲಾ ಯಶಸ್ಸು ದೊರೆಯಲಿ ಎಂದು ಆಶಿಸುವೆ.
ಸುಜಾತಾ ರವೀಶ್