ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ ಇಲ್ಲಿಂದ ಏನ್ ಹೊಯ್ವೆ ಮನವೆ.ತತ್ವ ಪದ ಗಾಯಕ ಯೋಗೇಂದ್ರ ದುದ್ದ ಇವರ ಪರಿಚಯ ಗೊರೂರು ಅನಂತರಾಜು

ತತ್ವ ಪದ ಗಾಯಕ
ಯೋಗೇಂದ್ರ ದುದ್ದ

   

ಹಾಸನ ನಗರದ ಹುಣಸಿನಕೆರೆ ಬೀದಿಯಲ್ಲಿ ಶ್ರೀ ಕಾಶಿ ವಿಶ್ವನಾಥ ದೇವಾಲಯವಿದೆ. ೯೦ ವರ್ಷಗಳ ಹಿಂದೆ ನಿರ್ಮಾಣಗೊಂಡ ದೇವಾಲಯವನ್ನು ಇತ್ತೀಚಿಗೆ ಸಾಕಷ್ಟು ಅಭಿವೃದ್ದಿಗೊಳಿಸಲಾಗಿದೆ. ದೇವಾಂಗ ಜನಾಂಗದ ಶೆಟ್ಟಿ ಯಜಮಾನರಾಗಿದ್ದ ದಿವಂಗತ ಮಾವತನಹಳ್ಳಿ ಶಂಕರಪ್ಪ ಎಂಬುವರು ೧೯೩೪ರಲ್ಲಿ ಕಾಶಿಯಿಂದ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸಿದ್ದಾರೆ ಎನ್ನಲಾಗಿದೆ.  ಶ್ರೀ ಕಾಶಿ ವಿಶ್ವನಾಥ ದೇವಾಲಯ ಜೀರ್ಣೋದ್ದಾರ ಸಮಿತಿ ಹಾಗೂ ಕನ್ನಡ ರತ್ನ ಯುವಕರ ಸಂಘ ಆಶ್ರಯದಲ್ಲಿ ಮಹಾಶಿವರಾತ್ರಿ  ಪ್ರಯುಕ್ತ ಶುಕ್ರವಾರ ೧೦೧ ಲೀ. ಹಾಲಿನ ಅಭಿಷೇಕ ಸಂಜೆ ಮಹಿಳೆಯರಿಂದ  ಭಜನೆ ಕಾರ್ಯಕ್ರಮ ಮತ್ತು  ಶನಿವಾರ ಅನ್ನ ಸಂತರ್ಪಣೆ  ನಡೆಯಿತು.
ಈ ದೇವಾಲಯದಲ್ಲಿ  ಈ ಹಿಂದೆ ಯೋಗೇಂದ್ರ ದುದ್ದ  ಒಂದು ಸೋಮುವಾರ ಭಜನೆ ಕಾರ್ಯಕ್ರಮದಲ್ಲಿ  ತತ್ವಪದಗಳನ್ನು ಹಾಡಿ ಭಕ್ತರ ಮನ ಸೆಳೆದಿದ್ದರು. ನನ್ನ ಮನಸ್ಸನ್ನು ಕೂಡ. ಇಂದು ಯೋಗೇಂದ್ರ ದುದ್ದ ತತ್ವಪದ ಗಾಯಕರಾಗಿ ಪ್ರಸಿದ್ಧರು. ಇವರ ತಂದೆ ಜಿ.ಹೊಂಗ್ಯಪ್ಪನವರು ಹೆಸರಾಂತ ತತ್ವಪದ ಗಾಯಕರಾಗಿ ದುದ್ದ ಗ್ರಾಮದ ಕರಿ ಬೀರೇಶ್ವರ ದೇವಸ್ಥಾನದ ಪೂಜಕರಾಗಿದ್ದರು. ಗುರು ಬೋಧನೆ ಪಡೆದಿದ್ದ ಇವರು ನೂರಾರು ಶಿಷ್ಯ ಪಡೆಯನ್ನು ಹೊಂದಿದ್ದರು. ಅವರಿಗೆಲ್ಲಾ ತತ್ವಪದ ಹೇಳಿ ಕೊಡುತ್ತಿದ್ದರು. ಹಾಡು ಹೇಳಿ ಅರ್ಥ ವ್ಯಾಖ್ಯಾನ ಮಾಡುತ್ತಿದ್ದರು. ಇದನ್ನೆಲ್ಲಾ ಬಾಲ್ಯದಿಂದಲೇ ಗಮನಿಸುತ್ತಾ ಬಂದ ನನಗೆ ತಂದೆಯೇ ಗುರುವಾದರು ಎನ್ನುತ್ತಾರೆ. ತಂದೆಯಿಂದ ಗುರುಬೋಧನೆ ಪಡೆದು ದೇವಾಲಯಗಳಲ್ಲಿ ಭಜನೆ ತತ್ವ ಪದ ಹಾಡುತ್ತಾ ಬಂದಿದ್ದಾರೆ.
ಪ್ರತಿ ತಿಂಗಳು ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ಹಾಸನ ತಾ. ಬೂದೇಶ್ವರ ಮಠದಲ್ಲಿ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ತಪ್ಪಿಸುವುದಿಲ್ಲ. ನಮ್ಮ ಮನೆ ಹತ್ತಿರದ  ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲೂ ಇವರ ಭಜನೆ ಕಾರ್ಯಕ್ರಮ ನೆಡೆದಿದೆ. ೨೦೦೭ರಲ್ಲಿ  ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವಿನಲ್ಲಿ ಇವರ ಶ್ರೀ ಬೂದೇಶ್ವರ ಕಲಾ ಸಂಘದ ಜನಪದ ಹಾಡುಗಾರಿಕೆಯನ್ನು ಆಲಿಸಿ ಆಗಲೇ ಪತ್ರಿಕೆಗಳಲ್ಲಿ ಬರೆದಿದ್ದೆ.
ಶ್ರೀ ಶಂಕರಾನಂದ ಯೋಗೀಶ್ವರ ವಿರಚಿತ ಕೈವಲ್ಯ ನವನೀತವು (ಪರಿಶೋಧಕರು ಬ್ರಹ್ಮಶ್ರೀ ಶಿವರಾಮ ಶಾಸ್ತಿಗಳು) ಕೃತಿಯಿಂದ ಆಯ್ದ ಭಕ್ತಿ ಪಂಚರತ್ನ ಗೀತೆ ಮಾತು ಮಾತಿಗೆ ಶಂಕರ ಶ್ರೀ ಗುರುವೇ ಸರ್ವೋತ್ತಮ  ನೆನಬಾರದೆ…… ಕಲ್ಯಾಣ  ರಾಗ ಆಟತಾಳದಲ್ಲಿ ಕೇಳಿ ಬಂದ ಶಿವಸ್ತುತಿ ಕಣ್ಮಣಿ. ಈ ಕೃತಿಯಲ್ಲಿರುವ ಎಲ್ಲಾ ಗೀತೆಗಳನ್ನು ಅಭ್ಯಾಸ ಮಾಡಿರುವ ಯೋಗೇಂದ್ರ  ಕೃತಿಯಲ್ಲಿ ತಿಳಿಸಿರುವಂತೆ ಆಯಾಯ ರಾಗ ತಾಳದಲ್ಲಿ ಹಾಡುವುದನ್ನು ರೂಢಿಸಿಕೊಂಡಿದ್ದಾರಂತೆ.! ಇವರ ಹಾಡುಗಾರಿಕೆಗೆ ಹಾರ‍್ಮೋನಿಯಂ ನುಡಿಸುವ ಸೊಪ್ಪಿನಹಳ್ಳಿ ಪಾಪಣ್ಣನವರು ಕೂಡ ಯೋಗೇಂದ್ರ  ತಂದೆಯ ಶಿಷ್ಯರೆ.! ಹಿರಿಯರಾದ ಇವರು ಹೇಳುವಂತೆ ಇವರ ತಂದೆ ಅದ್ಭುತ ತತ್ವಪದ ಗಾಯಕರು.
ತಂದೆಯಿಂದ ಬಳುವಳಿಯಾಗಿ   ದೊರೆತ ಜನಪದ ಕಲೆಯನ್ನು ಮೈಗೂಡಿಸಿಕೊಂಡು ಹಾಡುತ್ತಾ ಬಂದಿರುವ ಯೋಗೇಂದ್ರ ೧೫ನೇ ವಯಸ್ಸಿನಲ್ಲೇ ಹಾಡುಗಾರಿಕೆಗೆ ಇಳಿದು ಇಂದಿಗೂ ಇಳಿ ವಯಸ್ಸಿನಲ್ಲೂ ಅದೇ ಉತ್ಸವ ಉಳಿಸಿಕೊಂಡಿದ್ದಾರೆ. ಇವರು ಹುಟ್ಟಿದ ದಿನಾಂಕ ೧೨-೧೦-೧೯೫೭. ನನಗೆ ಇವರ ಹಾಡುಗಾರಿಕೆಯಲ್ಲಿ ತುಂಬಾ ಇಷ್ಟವಾದದ್ದು ಸಿದ್ಧಾರೂಢ ಗುರುಗಳ  ಮೇಲೆ ಬರೆದ ತತ್ವಪದ. ಇದರಲ್ಲಿ ಬದುಕಿನ ಏಳು ಬೀಳುಗಳ ಸಾರವಿದೆ. ಅದು ಹೀಗೆ..ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ ಇಲ್ಲಿಂದ ಏನ್ ಹೊಯ್ವೆ ಮನವೆ.. ಇದನ್ನು ನಾನು ಹಲವಾರು ವೇದಿಕೆಗಳಲ್ಲಿ ಕರೆದುಕೊಂಡುಹೋಗಿ ಹಾಡಿಸಿದ್ದೇನೆ. ಬದುಕಿನ  ಇನ್ನೂ ಹುಟ್ಟಿ ಬಂದೆ ಎಲ್ಲವ್ವ ನಿನ್ನ ಮದುವೆ ಮಾಡಿ ಕೊಟ್ಟಾರವ್ವ ಜಮಾದಗ್ನಿಗೆ.. ಚೌಡಿಕೆ ಪದವಂತೂ ಇವರ ಕಂಚಿನ ಕಂಠ ಸಿರಿಯಿಂದ  ಮೈಕ್‌ನಲ್ಲಿ ಊರಿಗೆಲ್ಲಾ  ಕೇಳಿ ಜನ ಮೆಚ್ಚಿದ್ದನ್ನು ಮೊನ್ನೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇವರ  ವತಿಯಿಂದ ಹಾಸನ ತಾ. ವಳಗೇರಹಳ್ಳಿ ಗ್ರಾಮದಲ್ಲಿ ನಡೆದ ಎನ್‌ಎಸ್‌ಎಸ್ ಕ್ಯಾಂಪ್‌ನಲ್ಲಿ ಕಂಡಿದ್ದೇನೆ. ಇವರಿಗೆ ಹಾಸನ ಜಿಲ್ಲಾಡಳಿತ ೨೦೧೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.  ಈವರೆಗೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಆ ಪಟ್ಟಿ ಬಹಳ ದೊಡ್ಡದಿದೆ. ಯಾರ ಮನೆಗಳಲ್ಲಾದರೂ ಸಾವು ಸಂಭವಿಸಿದಾಗ ವಿಶೇಷವಾಗಿ ಗುರು ಬೋಧನೆ ಪಡೆದವರು ನಿಧನರಾದಾಗ ಇವರನ್ನು ಕರೆಸಿ ರಾತ್ರಿಯೆಲ್ಲಾ ಭಜನೆ ಹಾಡುಗಾರಿಕೆ ಮಾಡಿಸುತ್ತಾರೆ. ಬಸವ ಟಿ.ವಿ.ಯಲ್ಲಿ ಇವರ ತತ್ವಪದಗಳು ಬಸವಣ್ಣನವರ ವಚನಗಳು  ಪ್ರಸಾರವಾಗಿವೆ. ನಾನು (ಗೊರೂರು ಅನಂತರಾಜು) ಯುವಜನ ಮೇಳದಲ್ಲಿ ಹಾಡಲೆಂದು  ಬರೆದಿದ್ದ ಸುಗ್ಗಿ ಹಾಡು, ಪರಿಸರ ಗೀತೆ, ಭಾವಗೀತೆಗಳನ್ನು ಯೋಗೇಂದ್ರ ಹಾಡಿ ಅವು ಪೇಸ್ ಬುಕ್. ಯೂ ಟ್ಯೂಬ್‌ಗಳಲ್ಲಿ ಜನಪ್ರಿಯವಾಗಿವೆ.  ಹಾಸನದಲ್ಲಿ ಮೊನ್ನೆ ಪ್ರಗತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರನ್ನು ಸನ್ಮಾನಿಸಿತು.  


Leave a Reply

Back To Top