ಮೀನಾಕ್ಷಿ ಹನುಮಂತ ಓಲೇಕಾರಅವರ ಸಂಕಲನ “ಕಲ್ಲು ಯಂತ್ರವಲ್ಲವದು ದೇಹ” ಒಂದು ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ

ಭಾವಕೋಶವನ್ನಾಳುವ ಕವಿತೆಗಳು ನಿಜಕ್ಕೂ ಆಕರ್ಷಣೀಯ ಹಾಗು ಅದ್ಭುತವಾಗಿದ್ದು, ಸೊಗಸಾದ ಪದಪುಂಜಗಳ ಮೂಲಕ ಅರ್ಥಪೂರ್ಣ ಸಾಲುಗಳಿಂದ ಮಿರುಗುತಿವೆ.ಅಂತಹ ಕವಿತೆಗಳನ್ನು ಕುಮಾರಿ ಮೀನಾಕ್ಷಿ ಹನುಮಂತ ಓಲೇಕಾರ ಅವರ ಕವನ ಸಂಕಲನದೊಳಗೆ ಓದಿದೆ.ಕವಿತೆಗಳು ಯಾರಲ್ಲೂ ಸುಮ್ಮ ಸುಮ್ಮನೆ ಹುಟ್ಟುವುದಿಲ್ಲ.
ಕವಿತೆಗಳು ಆವಿರ್ಭಸಲು ಹಲವಾರು ಕಾರಣಗಳಿರುತ್ತವೆ. ಏಕಾಗ್ರತೆ , ಆಸಕ್ತಿಯೊಂದಿಗೆ ಉದ್ಭವಿಸುವ ಸಾಲುಗಳಲ್ಲಿ ಅನೇಕ ಸಂದರ್ಭಗಳ ಅನಾವರಣವನ್ನು ಕಾವ್ಯದ ಸಾಲುಗಳಲ್ಲಿ ಕಾಣಬಹುದು.ನಮ್ಮೊಳಗಿನ ನೋವು-ನಲಿವುಗಳನ್ನು ಬಿತ್ತರಿಸಲು ಕೋಪ-ತಾಪಗಳನ್ನು ತೋರ್ಪಡಿಸಲು ದುಃಖ-ದುಮ್ಮಾನಗಳನ್ನು ವ್ಯಕ್ತಪಡಿಸಲು ಸಿಹಿ-ಕಹಿಗಳನ್ನು ಹಂಚಿಕೊಳ್ಳಲು ಬರಹಕ್ಕಿಂತ ಮಿಗಿಲಾದ ಮಾರ್ಗವಿಲ್ಲ. ಕವಿತೆ ಎಲ್ಲರೆದೆಯ ಬಯಲಿನಲೂ ಕೂಡ ಇರುವವು.ಆದರೆ ಅವುಗಳು ಸಮಯ ಸಂದರ್ಭಗಳಿಗನುಗುಣವಾಗಿಹೊರ ಚಿಮ್ಮುವವು.ಕ್ರಿಯಾಶೀಲ ಮನೋಭಾವ ಹೊಂದಿರುವ ಮೀನಾಕ್ಷಿಯವರು ತಮ್ಮ ಜೀವನದಲ್ಲಿ ಸ್ಫುರಿಸಿರುವ ಸಂದರ್ಭಗಳನ್ನು ಬಹಳ ಚನ್ನಾಗಿ ಬಳಸಿಕೊಂಡು ಅದಕ್ಕೊಂದು ಉತ್ತಮವಾದ ಚೌಕಟ್ಟನ್ನು ಒದಗಿಸಿಕೊಟ್ಟಿರುವುದನ್ನು ಅವರು ಬರೆದಿರುವ “ಕಲ್ಲು ಯಂತ್ರವಲ್ಲವದು ದೇಹ” ಎಂಬ ಕವನ ಸಂಕಲನದೊಳಗೆ ಕಾಣಬಹುದು.

   ಮೀನಾಕ್ಷಿಯವರ ಮಾತೃಭಾಷೆ ಮರಾಠಿಯಾದರು ಕನ್ನಡದಲ್ಲಿ ಸ್ಪಷ್ಟತೆಯನ್ನು ಹೊಂದಿದ್ದು,ಬರಹ ಮತ್ತು ಮಾತುಗಾರಿಕೆಯಲ್ಲಿ ನಿರರ್ಗಳತೆ ಹಾಗು ಸುಸ್ಪಷ್ಟತೆಯನ್ನು ಹೊಂದಿರುವವರು.ಈ ಮುಖೇನ
ಕನ್ನಡವನ್ನು ಕಲಿತು; ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಹೊಂದಿರುವರು.ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳಲ್ಲಿ ಉತ್ತಮವಾದ ಅಭಿಮತವಿದ್ದು, ಕನ್ನಡ ಸಾಹಿತ್ಯದ ತೇರನ್ನು ಎಳೆಯುತ್ತಿರುವುದನ್ನು ನೋಡಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ.ಕನ್ನಡದ ಮನೆಮಗಳಾಗಿ ,ಕನ್ನಡಕ್ಕಾಗಿ ತಮ್ಮೆದೆಯ ಒಲವನ್ನು ಹರಿಸುತ್ತಿರುವ ಮೀನಾಕ್ಷಿಯವರ ದೊಡ್ಡತನವೆಂದರೆ ತಪ್ಪಾಗಲಾರದು. ಹಾಗೆಯೆ ನಮ್ಮೆಲ್ಲರ ಉಸಿರಾಗಿರುವ ಕನ್ನಡತನವನ್ನು ಮೆರೆಯುತ್ತಿರುವುದಂತು ಖುಷಿಯ ಸಂಗತಿಯಾಗಿದೆ.

               ಯಾವುದೆ ಕವಿತೆಯನ್ನು ಸೃಜನಾತ್ಮಕವಾಗಿಕಟ್ಟಿಕೊಡುವ ಕಲೆ ಪ್ರತಿ ಬರಹಗಾರನಿಗೂ ಇರಬೇಕು.ಕವಿ/ಕವಯತ್ರಿಯರಿಗೆ ಕಾವ್ಯದೊನಲನು ಹರಿಸಲು ಸಂವೇದನಾಶೀಲತೆ ಇದ್ದರಷ್ಟೆ ಸಾಕು. ಅವುಗಳಿದ್ದರೂ ಕೂಡ ಅದನ್ನು ಮೀರಿ ಸೃಜಿಸುವುದೇ ನಿಜವಾದ ‘ಕವಿತೆ’.ಬರೆಯಲು ಹಲವಾರು ವೇದಿಕೆಗಳಿದ್ದರೆ ಸಾಕು ಕವಿತೆಗಳನ್ನು ರಚಿಸಲು; ಮನಸುಗಳು  ತಾವೇ  ತಾವಾಗಿ ಸಿದ್ಧವಾಗಬೇಕಷ್ಟೆ. ಈ ಮುಖಾಂತರ
ಕಾವ್ಯ ಕಾಜಾಣ, ಕಥಾ ಕಮ್ಮಟಗಳಲ್ಲಿ ಹೊಸ ಹೊಸ ಬಗೆಯ ಬರಹಗಳು ಸ್ಫುರಿಸುವವು.ಈ ಕಾರಣದಿಂದ ಎಲ್ಲಾ ವೇದಿಕೆಗಳು ಸಿಕ್ಕಿರುವುದು ಕವಿಗಳಿಗೆ ಕವನಗಳು ಹುಟ್ಟು ಹಾಕಲು ಸಹಕಾರಿಯಾಗಿದೆ.ಈ ಮುಖೇನ ಪ್ರತಿಯೊಬ್ಬರ ಚಿಂತನೆಗಳನ್ನು ಕೂಡ ನಿಕಷನಕ್ಕೊಳಪಡಿಸುತ್ತವೆ.

ಕವಿತೆಗಳೆಂದರೆ ನಮ್ಮೊಳಗೆ ಉಲ್ಲಾಸ, ಉತ್ಸಾಹ, ತರುವಂತಿರಬೇಕು.ಉತ್ತೇಜನ ಉತ್ಕೃಷ್ಟತೆಯಿಂದರಬೇಕು ಜೊತೆಗೆ ಕವಿತೆಗಳು ನವ್ಯ ಭಾವಾರ್ಥದೊಂದಿಗೆ ಸೃಷ್ಠಿ ,ವೃಷ್ಠಿ ಹರಿಸುವಂತಿರಬೇಕು.ಕವಿತೆಗಳನ್ನು ಓದುತ್ತಿದ್ದರೆ ಮತ್ತಷ್ಟು ಮಗದಷ್ಟು ಓದುವಂತಿರಬೇಕು.

ಬೆವರಹನಿಗಳನು ಕೆಳಗಿಳಿಸಿ ಮನಸ್ಸಿಗೆ ಹೊಸಗಾಳಿ, ಬೆಳಕು, ತೃಪ್ತಸ್ಥಿತಿ ತಂದು ಕೊಡುವಂತಿರಬೇಕು.
ಪರಿಸರ ಪ್ರಜ್ಞೆಯ ಅರಿವನ್ನು ಮೂಡಿಸುವಂತಿರಬೇಕು.ಯಾಕೆ ಈ ಮಾತನ್ನ ಹೇಳ್ತಿದಿನಿ.? ಅನ್ಕೊಂಡ್ರಾ..! ಯಾಕೆಂದರೆ; ನಾನು ಓದುತ್ತಿರುವಂತಹ “ಕಲ್ಲು ಯಂತ್ರವಲ್ಲವದು ದೇಹ”ಎಂಬ ಕವನ ಸಂಕಲನ ನಿಜಕ್ಕೂ ಓದಿ ಅರ್ಥೈಸಿಕೊಳ್ಳಲು ಸೊಗಸಾಗಿದ್ದು ತುಂಬ ಸರಳವಾಗಿ ಮೂಡಿಬಂದಿದೆ. ಕವಿತೆ ಎಂದರೆ ಹೇಗಿರಬೇಕು ಎಂಬ ಸಾಲುಗಳಂತೆಯೆ ಈ ಸಂಕಲನದೊಳಗಿರುವ ಕವಿತೆಗಳು ಮೂಡಿ ಬಂದಿರುವುದನ್ನು ನೋಡಬಹುದಾಗಿದೆ.

        “ಬೆಳೆಯುವ ಪೈರು ಮೊಳಕೆ”ಯಲ್ಲಿ ಎಂಬಂತೆ ಕಾಲೇಜು ದಿನಗಳಲ್ಲೆ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಂಡು ಕನ್ನಡಿಗರ ಮನವನ್ನು ಗೆದ್ದಿರುವ ಮೀನಾಕ್ಷಿಯವರ ಬರಹಗಳು ತುಂಬಾ ಸೊಗಸಾಗಿ ಮೂಡಿಬಂದಿವೆ.ಒಂದು ಹಂತದಲ್ಲಿ ನೋಡುವುದಾದರೆ ಇವರೆಲ್ಲಾ ಕವನಗಳು ಅರ್ಥಪೂರ್ಣವಾಗಿ ಮೂಡಿಬಂದಿರುವುದನ್ನು ನೋಡಬಹುದಾಗಿದೆ.ಬರಹಗಳಿಗೆ ಹೆಸರಂತೆ ಅವರ ಶೀರ್ಷಿಕೆಯು ಕೂಡ ತುಂಬಾ ಚಂದವಾಗಿದೆ.ಇವರ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕವಯತ್ರಿಯು ಹಲವಾರು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಎಂಬ ಸಂಗತಿ ತಿಳಿಯುವುದು.
ಮತ್ತಂದಷ್ಟು ಈ ಸಂಕಲನವನ್ನು ಅವಲೋಕಿಸಿದಾಗ ನೋವು ,ನಲಿವು ,ಬಂಧ ಅನುಬಂಧಗಳು ,ಒಲವ ದಿಬ್ಬಣ,ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುವಂತಹ ವಿಚಾರಧಾರೆಗಳು,ಬದಲಾವಣೆಯ ಪರ್ವದೋಕಳಿ ,ಸರಸ ವಿರಸಗಳ ದೃಶ್ಯಾವಳಿ, ಹಬ್ಬದಾಚರಣೆಗಳು ಯುಗಾದಿಯ ಹಸಿರು ತೋರುಣ,ರಮ್ಯಮನಮೋಹಕ ನಿಸರ್ಗ, ಪ್ರಕೃತಿಯ ವೈಯ್ಯಾರ,ಕಡಲಬ್ಬರದ ದೃಶ್ಯಗಳು, ಮೌನ ಮಾತುಗಳ ನಡುವಿನ ಮಂಟಪ.ಮಂಗಳಮುಖಿಯ ಜೀವನಯಾನ,ಮಳೆಯ ಅಬ್ಬರ ಮಹಾಮಾರಿ ಕೋವಿಡ್ನ ಆರ್ಭಟ, ಬಾಳಿನ ಅರ್ಥ ,ಬದುಕಿನ ಬಗೆಗಿನ ಕಾಳಜಿ, ಮಾಗಿದ ಮನಸ್ಸು ,ಕಮರಿದ ಕನಸ್ಸುಗಳಿಂದ ತೊಳಲಾಟ, ಅಲೆದಾಟ ,ಹೊಯ್ದಾಟಗಳನ್ನು ಇಲ್ಲಿ ಕವಯತ್ರಿಯವರು ತಮ್ಮದೆ ಅನುಭವಗಳನ್ನು ನೇರವಾಗಿ ಹೇಳಲಾಗದ ವಸ್ತುವಿಷಯಗಳಿಗೆ ಬರೆಹ ರೂಪ ನೀಡಿ ತಮ್ಮ ಫ್ರೌಡಿಮೆಯನ್ನು ಮೆರೆದಿದ್ದಾರೆ.
ತಮ್ಮ ಮಾತೃಭಾಷೆ ಮರಾಠಿಯಾದರು ಕನ್ನಡದಲ್ಲಿ ಭಾಷೆಯ ಮೇಲಿನ ಹಿಡಿತವನ್ನು ಸಾಧಿಸುತ ಉತ್ತಮ ರಚನೆಗಳನ್ನು ಮಾಡಿರುವುದು ಶ್ಲಾಘನೀಯ.ಜೊತೆಗೆನೋವಿನಿಂದಾಗುವ ಹತಾಶೆ ,ನಿರಾಸೆ ದಿಗ್ರ್ಭಮೆಗಳ ಪರಿ ,ಆದರ್ಶ ,ಧೋರಣೆಗಳಲ್ಲಿನ ಅಪನಂಬಿಕೆಗಳ ಸೆರೆ ಸೂಕ್ಷ್ಮವಾಗಿ ತೆರೆದಿದ್ದಾರೆ.ಕುಡಿತದ ಅಮಲಿನಲ್ಲಿ ಆಡುವ ಅವತಾರಗಳು, ಭಾವನೆಗಳನ್ನು ಬೆನ್ನೇರಿದ ಪರಿ, ಬೆಳದಿಂಗಳ ಬಾಲೆಯ ಹೊಳಪು,ಹೆಣ್ಣು ,
ಹೆಣ್ಣಿಗೆ ಸಿಗುತ್ತಿರುವ ಗೌರವಾಧಾರಗಳು,ಹಬ್ಬಗಳ ಸುಗ್ಗಿ ,ಸುಗ್ಗಿ ಸಂಕ್ರಾಂತಿ, ಪ್ರಕೃತಿಯ ಸೌಂದರ್ಯ ವರ್ಣನಾತೀತವಾದುದ್ದು.ಮನುಷ್ಯನ ಕ್ಷಣಭಂಗುರ ,ದುಃಖ ,ಘನಿತ ಬಾಳಿನ ಚಿತ್ರಣಗಳನ್ನು ಮಾರ್ಮಿಕವಾಗಿ ಕವಯತ್ರಿ ತಮ್ಮ ಕವನಗಳಲ್ಲಿ ಬಿತ್ತರಿಸಿರುವರು.ಪ್ರತಿಯೊಬ್ಬರ ಕಲಿಕೆ ,ಪ್ರಕೃತಿ ,ಹಿನ್ನೋಟ, ಮುನ್ನೋಟಗಳನ್ನು ಹಾಗು ಸಾಮಾಜಿಕ, ನೈತಿಕ ,ತಾರ್ಕಿಕ ಚಿಂತನೆಗಳನ್ನು ಸ್ಪಷ್ಟಪಡಿಸಿರುವರು.ತಮ್ಮ ಜೀವನದ ಸಾರ್ಥಕತೆಯನ್ನು ಈ ಕವನ ಸಂಕಲನದಲ್ಲಿ ತೆರೆದಿರುವು ಶ್ಲಾಘನೀಯವಾಗಿದೆ.

ಕವಯತ್ರಿ ಮೀನಾಕ್ಷಿಯವರ ಕವನಗಳ ಆಳಕ್ಕಿಳಿದಾಗ…..

ಗುರುದೇವ…….

ಶಿಕ್ಷಣ ಸಾಗರದ ದೋಣಿ ನೀವು
ಕೈ ಹಿಡಿದು ನಡೆಸುವಿರಿ ಕಾಣದ ಗುರಿಯೆಡೆಗೆ
ಮತ್ತೆ ಬಂದು ನಿಲ್ಲುವಿರಿ
ನಿಸ್ವಾರ್ಥ ಮನೋಭಾವದ ದಡದೆಡೆಗೆ
ಇನ್ನೊಂದು ದೋಣಿಯ ನಿರೀಕ್ಷೆದೆಡೆಗೆ…

ಶಿಕ್ಷಣವೆಂಬ ಅಗಾಧ ಸಾಗರವನ್ನು ಕೈ ಹಿಡಿದು ನಡೆಸುತ್ತಿರುವ ಮಹಾನ್ ಗುರುಗಳ ಬಗ್ಗೆ ತುಂಬ ಸೊಗಸಾಗಿ ಬರೆದಿರುವರು.ವಿವಿಧ ವಿಷಯಗಳನ್ನು ನಿಸ್ವಾರ್ಥಿತನದಿಂದ ಕಲಿಸಿ ನಮ್ಮನ್ನು ಪ್ರಗತಿ ಪಥದಲ್ಲಿ ಕರೆದುಕೊಂಡು ಹೋಗುವ ನಮ್ಮ ಶಿಕ್ಷಕರನ್ನು ಗೌರವಿಸುವ ಸಾಲುಗಳು ಅದ್ಭುತವಾಗಿ ಮೂಡಿಬಂದಿವೆ.ಮನುಷ್ಯನಲ್ಲಿರುವ ದುರ್ಗುಣಗಳನ್ನು ತೊಡೆದುಹಾಕಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಈ ಗುರುಗಳ ಪಾತ್ರವನ್ನು ವಿವರಿಸುತ್ತ ಜೀವನದಲ್ಲಿ ಅಚಲವಾದದ್ದನ್ನು ಸಾಧಿಸಲು ಪ್ರತಿಯೊಬ್ಬರಲ್ಲೂ ಗುರಿ ಇರಬೇಕು. ಆ ಗುರಿ ತಲುಪಲು ಗುರುವಿನ ಮಾರ್ಗದರ್ಶನ ಪಡೆದರೆ ಯಶಸ್ಸು ಖಚಿತ. ಹಾಗಾಗಿ ಎಲ್ಲರು ಗುರುವಿನ ಮಾರ್ಗದರ್ಶನದಲ್ಲೆ ಸಾಗಬೇಕು.ಏಕೆಂದರೆ ಗುರುಗಳು ನಮ್ಮ ಹಿಂದೆ ಇದ್ದು ನಮಗೆ ಸರಿಯಾದ ಮಾರ್ಗ ತೋರುತ್ತಾರೆ. ಗರುವಿನ ಮಾತು ತಪ್ಪಿ ನಡೆದರೆ ಸಾಧನೆ ಶೂನ್ಯ. ಬದುಕಿನ ದಾರಿ ಕಂಡುಕೊಳ್ಳಲು ಪ್ರತಿಯೊಬ್ಬರಿಗೂ ಗುರು ಮುಖ್ಯವಾಗಿರುತ್ತಾರೆ.ಈ ಮುಖೇನ ನಮ್ಮನ್ನು ನಿಸ್ವಾರ್ಥ ಮಾರ್ಗದೆಡೆ ಕೊಂಡೊಯ್ಯುವ ಸಾರಥಿ ಎಂದೂ ಗುರುವಿನ ಮಹತ್ವವನ್ನು ತಮ್ಮ ಕವನದ ಸಾಲುಗಳಲ್ಲಿ ತಿಳಿಸಿರುವರು.

ರವಿಮೂಡಿದನು ಪೂರ್ವದಲ್ಲಿ….

ಕಂಪಿಸುವ ಚಳಿಯಲಿ
ಪಿಸುಗುಟ್ಟುತಿವೆ ಗಿಡಮರಬಳ್ಳಿ
ಹೊರಹೊಮ್ಮಿತು ಹಕ್ಕಿಯ ನಾದ ಚಿಲಿಪಿಲಿ
ರವಿ ಮೂಡಿದನು ಪೂರ್ವದಲಿ
ಬೆಳಗಾಯಿತು ಎದ್ದೇಳಿ..!

ಮೂಡಣದಲಿ ರವಿಯು ರಂಗೇರಿ ಹೊನ್ನ ಉಂಡೆಯಂತೆ ಬರುವಾಗ ಧರೆಯೊಳಗೆ ಹಕ್ಕಿಗಳ ಚಿಲಿಪಿಲಿಯ ನಾದ ಮೈದುಂಬುವ ಸುಪ್ರಭಾತದಂತೆ ಕೇಳಿ ಬರುತಿಹುದು.ಸುತ್ತ ಮುತ್ತಲಿನ ಗಿಡಮರಬಳ್ಳಿಗಳಲ್ಲಿ ತುಹಿನ ಹನಿಗಳು ಎಲೆಗಳಿಗೆ ಮುತ್ತಿಕ್ಕುವಂತೆ ರಮ್ಯಮನೋಹರವಾಗಿದೆ ಹೂಗಳ ಮಧ್ಯೆದಲ್ಲಿ ದುಂಬಿಗಳ ಸರಸ ಸಲ್ಲಾಪ,ಜೊತೆಗೆ
ಸಂತಸದಲ್ಲಿ ಚಿಗುರೊಡೆಯುತ್ತಿರುವ ಗಿಡಮರಗಳ ರಾಗಾವಳಿಯನ್ನು ಬಹಳ ಸುಂದರವಾಗಿ ವರ್ಣಿಸುತ್ತ;
ರವಿಯು ಮೂಡುವಾಗ ಮೂಡಣದಲ್ಲಿನ ಮುಂಜಾನೆಯ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಚಿತ್ರಿಸಿರುವ ಪರಿ ಚಂದವಿದೆ.

ಹೆಣ್ಣು…..

ನೀನಿಲ್ಲದಿರೆ ಒಂಟಿ ಮನೆಯ ಅಂಗಳ
ಆಗುವುದು ತಂಗಳ
ರಂಗೋಲಿ ಇಲ್ಲದಿರೆ
ಹೊಳೆವುದೇ? ಫಳಫಳ…..

ಮನೆ ಮನವನ್ನು ಬೆಳಗುವ ನಂದಾದೀಪ ಈ ಹೆಣ್ಣು. ಅವಳಿಲ್ಲದಿದ್ದರೆ ಅದೊಂದು ಮನೆ ಅನ್ನಿಸಿಕೊಳ್ಳಲಾರದು.ಇರುಳಿಗೆ ಚಂದಿರ ಹೇಗೆ ಶೋಭೆಯೊ ಹಾಗೆ ಮನೆಗೆ ಹೆಣ್ಣೆ ಭೂಷಣ.ಮನೆಯ ಮುಂದೆ ರಂಗೋಲಿ ಇಲ್ಲದಿದ್ದರೂ ಆ ಮನೆಗೆ ಲಕ್ಷಣವೆ ಇಲ್ಲ.ಹಾಗಾಗಿ ಪ್ರತಿಮನೆಯ ಹೆಣ್ಣು ಕಣ್ಣಾಗಿರುವರು. ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬಂತೆ.! ಹೆಣ್ಣು ಸಾಕ್ಷರಳಾಗಿದ್ದರೆ ಒಂದು ಶಾಲೆಯನ್ನೆ ತೆರೆದಂತೆ ಜ್ಞಾನ ಬೆಳೆಯುವುದು. ನಿಜಕ್ಕೂ ಹೆಣ್ಣು ತನ್ನ ಸುತ್ತಮುತ್ತಲಿನ ಅನಕ್ಷರತೆಯನ್ನು ಕ್ಷಣಮಾತ್ರದಲ್ಲಿ ಓಡಿಸಬಲ್ಲಳು.ಮಹಿಳೆ ಮತ್ತು ಇಳೆ ಎರಡರಲ್ಲೂ ಕೂಡ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಇದೆ.ಮಹಿಯಂತೆಯೆ ಸಹನೆಮಯಿ.
ಕ್ಷಮಯಾಧರಿತ್ರಿಯಾಗಿ ಮನೆಯ ಎಲ್ಲಾ ಕಷ್ಟ ಸುಖಗಳನ್ನು ಸಮತೆಯಿಂದ ನಿಭಾಯಿಸಿಕೊಂಡು ಹೋಗುವಳು. ಮಹಿಳೆ ತನ್ನ ಉದಾತ್ತ ಚಿಂತನೆಗಳ ಮೂಲಕ ಎಲ್ಲರ ಮನ ಪರಿವರ್ತನೆ ಮಾಡುತ್ತಾ ಮುಂದೆ ಸಾಗುವಳು ತಾನೂ ಬೆಳೆದು ಇತರರನ್ನು ಬೆಳೆಸುವ ಗುಣವನ್ನು ಪಡೆದುಕೊಂಡಿರುವಳು.
ತಾಯಿ, ಮಗಳು, ಸಹೋದರಿ, ದೊಡ್ಡಮ್ಮ ,ಚಿಕ್ಕಮ್ಮ, ಅಜ್ಜಿ ,ಅತ್ತೆ ಹೀಗೆ ಜೀವನದ ಪ್ರತಿಯೊಂದು ಮಜಲುಗಳಲ್ಲೂ ಸದಾ ಸೇವೆ ಮಾಡುತ್ತಾ ತನ್ನ ಗುರಿ ಕಡೆಗೂ ನುಗ್ಗುತ್ತಾ ಸಾರ್ಥಕತೆಯ ಕಡೆಗೆ ಪಯಣಿಸುವ ಹೆಣ್ಣು ಪ್ರತಿಮನೆಯಲ್ಲಿದ್ದರೆ ಚಂದ ಎನ್ನುವ ಮಾತನ್ನು ಈ ಪದ್ಯದಲ್ಲಿ ಹೇಳುತ್ತಿದ್ದಾರೆ.

ಮಗು…..

ಅರಳುವ ಹೂವು ಬಾಡಿತಲ್ಲ ಅರಳುವ ಮುನ್ನ
ತಂಗಾಳಿಯಲಿ ತೇಲುವ ಮುನ್ನ ಸಿಲುಕಿತಲ್ಲ ಬಿರುಗಾಳಿಗೆ
ಆಡಿನಲಿದಾಡುವ ಮಗುವೊಂದು ಸೇರಿತಲ್ಲ ಶಾಲೆಗೆ…

ಮನೆಯಂಗಳದಲ್ಲಿ ಆಡಿ ನಲಿಯಬೇಕಾಗಿರುವ ಮಗುವಿನ ಬಗ್ಗೆ, ಅದರ ಸ್ವತಂತ್ರವನ್ನು, ಅದರ ಖುಷಿಯನ್ನ ಶಾಲೆಗೆ ಸೇರಿಸುವುದರ ಮೂಲಕ ಆ ಮಗುವನ್ನು ಮನೆಯ ವಾತಾವರಣದಿಂದ ಕಟ್ಟಿಹಾಕುವ ಕೆಲಸ ಮಾಡುತ್ತಿರುವ ಬಗ್ಗೆ ವಿವರಿಸಿರುವರು.ನಿಜ ಈಗಿನ ಕಾಲದಲ್ಲಂತು ಕೇವಲ ಎರಡು, ಮೂರು ವರ್ಷಗಳಿಗೆ ಶಿಶುವಿಹಾರ, ಡೇ ಕೇರ್ ಗಳಲ್ಲಿ ಮಕ್ಕಳನ್ನು ಬಿಡುತ್ತಿರುವುದು. ಹಕ್ಕಿಯಂತೆ ಹಾರಬೇಕಾಗಿರುವ ಮಗು ಬಾಡಿದ ಹೂವುಗಳಂತಾಗುತ್ತಿವೆ.ಆ ಡೇ ಕೇರ್ ಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಇರಬೇಕಾಗಿದೆ.ಅಜ್ಜ ,ಅಜ್ಜಿಯ ಪ್ರೀತಿ, ವಾತ್ಸಲ್ಯಗಳಿಂದ ವಂಚಿತವಾಗಿರುವಂತಹ ಮಗು ಅಮ್ಮ, ಅಪ್ಪನ ಒತ್ತಡದ ಜೀವನದ ನಡುವೆ ತಾನು ಒಂಟಿಯಾಗಿ ಮುದುಡಿದ ಹೂವಂತೆ ಕಾಲಕಳೆಯುವ ಬಗ್ಗೆ ಕವಯತ್ರಿ ವಿವರಿಸಿರುವರು.
ಸತ್ಯ.! ಪ್ರಸ್ತುತ ಕಾಲಮಾನದಲ್ಲಿ ಇದೆ ರೀತಿಯ ಜೀವನವೆ !..ಮಕ್ಕಳನ್ನು ಸೆರೆಮನೆಯಲ್ಲಿ ಕೂಡಿಹಾಕಿದಂತೆ. ಕೇವಲ ಎರಡು ಮೂರು ವರ್ಷಗಳಿಗೆ ಶಾಲೆಗೆ ಹಾಕುತ್ತಿರುವುದು ಬೇಸರದ ಸಂಗತಿ.ವಿಧಿಯಿಲ್ಲ ಪೋಷಕರಿಬ್ಬರು ಕೆಲಸಕ್ಕೆ ಹೋದರೆ ಮಕ್ಕಳಿಗೆ ಹೀಗಾಗುವುದು ಸಹಜವಾಗಿದೆ ಎಂಬಂತೆ ತುಂಬ ಮಾರ್ಮಿಕವಾಗಿ ಹೇಳಿರುವರು.

ಹೀಗೆ ಕವಯತ್ರಿಯು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಾಗೆಯೆ ಪರಿಸರ, ಪ್ರಕೃತಿ, ಊರು ಹಾಗೆಯೆ ಬಾಂಧವ್ಯಕೆ ಸಂಬಂಧಿಸಿದಂತೆ ಸುಮಾರು ೭೦ ಕವನಗಳನ್ನು  ರಚಿಸಿದ್ದಾರೆ.ಒಂದೊಂದು ಶೀರ್ಷಿಕೆಗಳು ಕೂಡ ಒಂದೊಂದು ವಿಷಯಾಂಶಗಳನ್ನು ಆಧರಿಸಿ ಅರ್ಥಪೂರ್ಣವಾಗಿವೆ.ಈ ಒಂದು ಸಂಕಲನಕ್ಕೆ ಶ್ರೀ ಭರಮಪ್ಪ ಪರಸಾಪೂರರವರು ತುಂಬ ಚನ್ನಾಗಿ ಮುನ್ನುಡಿಯನ್ನು ಬರೆದಿರುವರು ಹಾಗೆಯೆ ಹುಸೇನಸಾಬ ವಣಗೇರಿಯವರು ಅರ್ಥಪೂರ್ಣ ಹಾಗು ಶುಭ ಹಾರೈಕೆಯ ನುಡಿಯನ್ನು ಬರೆದದ್ದು, ಶ್ರೀ ನಾಗೇಶ್ ಜೆ ನಾಯಕರವರು ಬೆನ್ನುಡಿಯನ್ನು ಬರೆಯುವುದರ ಮೂಲಕ ಶುಭಾಶಯವನ್ನು ಕೋರಿರುವರು..

ಹೀಗೆಯೆ ನಿಮ್ಮ ಸಾಹಿತ್ಯ ಕೃಷಿ ಮುಂದುವರಿಯಲಿ; ಮಾತೃಭಾಷೆ ಮರಾಠಿಯಾದರೂ ಕನ್ನಡದ ಬಗೆಗಿನ ನಿಮ್ಮ ಪ್ರೀತಿ ಹಾಗು ಆಸಕ್ತಿಗೆ ಹೆಮ್ಮೆ ನನಗೆ ಎನಿಸುತಿದೆ.ತಾವು ಕಂಡಂತಹ ಅನುಭವಗಳನ್ನು ತಮ್ಮ ಪ್ರತಿಭೆಯ ಮೂಸೆಯಲ್ಲಿ ಅಕ್ಷರ ರೂಪದ ಮೂಲಕ ಸೃಜನಶೀಲ ಕವಿತೆಗಳನ್ನು ರಚಿಸಿರುವ ನಿಮಗೆ ನನ್ನ ಕಡೆಯಿಂದಲೂ ಕೂಡ ಆತ್ಮೀಯವಾದಂತಹ ಶುಭಾಶಯಗಳು.ನಿಮ್ಮ ಮುಂದಿನ ಕವನಗಳಲ್ಲಿ ಇನ್ನು ಹೆಚ್ಚಿನ ಅರ್ಥಪೂರ್ಣ ಬರಹಗಳಿರಲಿ, ಲಯಬದ್ಧತೆಯಿರಲಿ.ಬರಹಗಳು ಅರ್ಥಪೂರ್ಣವಾಗಿದ್ದರು; ಹಾಡಲು ಯುಕ್ತವಾಗಿದ್ದರೆ ಮತ್ತಷ್ಟು ಸೊಗಸಾಗಿರುತ್ತವೆಂಬುದು ನನ್ನ ಅಭಿಲಾಷೆ.ಈ ಮೂಲಕ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತಮ್ಮದೆ ಆದ ವಿಶೇಷ ಕೊಡುಗೆಯಾಗಲಿ.ಜಗನ್ಮಾತೆಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಇರಲೆಂದು ಹಾರೈಸುತ್ತ….
ಧನ್ಯವಾದಗಳೊಂದಿಗೆ….



Leave a Reply

Back To Top