ಕಾವ್ಯ ಸಂಗಾತಿ
ಸವಿತಾ ಮುದ್ಗಲ್
ನೀನ್ಯಾರಿಗಾದೆಯೊ ಎಲೆ ಮಾನವ!
ಮನಸ್ಸಿಗೆ ತಕ್ಕಂತೆ ತನ್ನೆಲ್ಲ ವಾಂಛೇಗಳನು ಮೀರಿ ಜೀವನವನ್ನು ನಡೆಸುವ , ಅತೀಕ್ರಮಣದ ಬುದ್ಧಿ, ಎಲ್ಲವನು ಸಾಧಿಸಿ ಬಿಡುವೆನೆಂಬ ಹಂಬಲ ಇವೆಲ್ಲಾ ತನ್ನ ಒಡಲೋಗೆ ತುಂಬಿಕೊಂಡು ಓಡುವ ಕುದುರೆಯೇರಿ ತಾನು ತನ್ನವರೇಂಬುದ ಅರಿವೆ ಇಲ್ಲದೆ ಜೀವನ ಸಾಗಿಸುತ್ತಿರುವವರು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕಂಡು ಬರುತ್ತಾರೆ. ಭಾಂಧವ್ಯಕೆ ಬೆಲೆ ಇಲ್ಲ,ಎಲ್ಲದಕ್ಕೂ ಲೆಕ್ಕಾಚಾರ, ಲಾಭ ನಷ್ಟ ಹುಡುಕುವ ಮನೋಭಾವನೆ ಇವೆಲ್ಲದರ ನಡುವೆ ಭಾವನೆ ತುಂಬಿದ ಮನಸ್ಸುಗಳಿಗೆ ಇಲ್ಲಿ ನಿಜಕ್ಕೂ ಆತ್ಮವಂಚನೆ ಆಗೋದು ಅಷ್ಟೇ ಸತ್ಯ.
ಬಂಧಗಳಲ್ಲಿ ಕಳೆಗುಂದಿದ ಶಕ್ತಿ, ಹಿರಿಯರು ಕಿರಿಯರು ಅನ್ನುವ ಮನೋಭಾವ ಕಡಿಮೆ, ಎಲ್ಲರೂ ನಾವೇ ಹೆಚ್ಚು, ನಮ್ಮದೇ ಸರಿ ಅನ್ನುವ ಮನಸ್ಥಿತಿ, ಅಸಹನೆ ತುಂಬಿದ ಮನಸ್ಸುಗಳು ಸಮಾಜದ ಉನ್ನತಿಗೆ ಅಡ್ಡಿಯಾಗಲು ಬಹುದೊಡ್ಡ ಬೇಲಿ ಇದ್ದಂತೆ.ಒಂದು ಅಳಿಲು ತಾನು ಮಾಡಿದ ಚಿಕ್ಕ ಸೇವೆಗೆ ರಾಮನ ಅನುಗ್ರಹದಿಂದ ಇಂದಿಗೂ ಅದರ ಬಗ್ಗೆ ಮಾತಾಡುತ್ತೇವೆ.ಕಾರಣ ಕೃತಜ್ಞತೆ ಮನೋಭಾವನೆ ರಾಮನಲ್ಲಿ ಇರುವುದೇ ಇದಕ್ಕೆ ಕಾರಣ. ಯಾವುದೇ ವ್ಯಕ್ತಿ ಸಹಾಯ ಮಾಡಿದಾಗ ಅದನ್ನ ನೆನಪಿನಲ್ಲಿ ಉಳಿಸಿಕೊಂಡು ಕೃತಜ್ಞತೆ ತಿಳಿಸಬೇಕು ಹೊರತು, ಅದನ್ನ ಅವರಿಂದ ನಾನೇನು ಮಹಾ ಪಡೆದುಕೊಂಡಿದ್ದು? ಇಂತಹ ಸಹಾಯ ಯಾರು ಬೇಕಾದ್ರು ಮಾಡುವರು, ಇದು ಅವರಿಂದ ಮಾತ್ರವೇ? ಅನ್ನುವ ಕೃತಘ್ನ ಮನೋಭಾವ ಹೊಂದಿದವರು ಜೀವನದಲಿ ಮುಂದುವರಿಯಲು ಸಾಧ್ಯವಿಲ್ಲ.ಪ್ರಕೃತಿಯಲ್ಲಿ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪ್ರತಿಯೊಂದನ್ನು ಬಳಸಿಕೊಂಡು ವಾಯು,ನೆಲ,ಜಲ ಇವೆಲ್ಲವನ್ನು ತನ್ನ ಹುಟ್ಟಿನಿಂದ ಅಂತ್ಯದವರೆಗೂ ಬಳಸಿಕೊಂಡು ಕೊನೆಗೆ ಪ್ರಕೃತಿಗೆ ಅತಿರಿಕ್ತ ಪರಿಣಾಮ ಬೀರುವಂತೆ ಮಾಡುತ್ತಾನೆ.
ಒಂದು ಸಣ್ಣ *ಬೀಜವು ಧರೆಗೆ ಬಿದ್ದಾಗ, ಮಳೆ ಬಂತು ಸಸಿ ಮೂಡಿ ಬೆಳೆದು ಹೆಮ್ಮರವಾಗಿ ತನ್ನ ಬಳಿ ಬಂದವರಿಗೆ ನೆರಳು ನೀಡುತ್ತಾ, ಪ್ರಾಣಿ ಪಕ್ಷಿಗಳಿಗೆ ವಾಸವಾಗಲು, ಸಿಹಿಯಾದ ಫಲಗಳನ್ನು ನೀಡಿ ತನ್ನ ನಿಸ್ವಾರ್ಥ ಜೀವನವನ್ನು ತೋರಿಸಿಕೊಡುತ್ತೆ. ಆದರೆ ಇಲ್ಲಿ ಮಾನವನು ಎಲ್ಲದರ ಉಪಯೋಗವನ್ನು ಪಡೆದುಕೊಂಡು ಪುನಹ ಬುಡಕ್ಕೆ ಕೊಡಲಿ ಏಟನ್ನು ಹಾಕಿ ಅದನ್ನು ನಾಶ ಮಾಡುತ್ತಾನೆ.
ಸಣ್ಣ ಜೇನೊಂದು ಪ್ರಕೃತಿಯಲ್ಲಿ ಎಲ್ಲಾ ಹೂಗಳನ್ನು ಹುಡುಕಾಡಿ ರಸವನ್ನು ಹೀರಿ ಒಂದೆಡೆ ಶೇಖರಿಸಿ ಸವಿಜೇನನ್ನು ಉತ್ಪಾದಿಸುತ್ತದೆ ಆದರೆ ಇದೇ ಮಾನವ ಅದನ್ನು ತೆಗೆದುಕೊಂಡು ನಾಶ ಮಾಡುತ್ತಾನೆ.
ರೇಷ್ಮೆ ಹುಳುವನ್ನು ಬಿಸಿನೀರಲ್ಲಿ ಕುದಿಸಿ ಅದರಿಂದ ಬರುವ ನಾರಿನಿಂದ ಹೊಳೆಯುವ ರೇಷ್ಮೆ ಬಟ್ಟೆ/ವಸ್ತ್ರ ತಯಾರಿಸಿ ನಾವೇ ಶ್ರೇಷ್ಠರು ಎಂಬಂತೆ ಬಿಂಬಿಸುವ ಮನುಷ್ಯ ಯಾವುದನ್ನು ಹಾಗೆ ಬಿಡೋದಿಲ್ಲ.
ಅವನೇ ಜಗತ್ತಿನಲ್ಲಿ ಯೋಚನೆ ಹೊಂದಿರುವ ಏಕೈಕ ಪ್ರಾಣಿ ಆಗಿದ್ದಕ್ಕೆ ಇಷ್ಟೆಲ್ಲ ಪ್ರಕೃತಿಯಲ್ಲಿ ದೊರೆಯುವ ಪ್ರತಿಯೊಂದನ್ನು ಬಳಸಿ ಅವುಗಳನ್ನು ಉಳಿಸುವ ಪ್ರಯತ್ನ ಮಾಡದೆ ಪ್ರಕೃತಿಯನ್ನು ಅಳಿವಿನ ಹಂಚಿಗೆ ತಂದೊಡ್ಡಿದ್ದಾನೆ.
ನೀರನ್ನು ಸಹ ಅತೀ ಬಳಕೆಯಿಂದ ಜೊತೆಗೆ ಅಭಿವೃದ್ಧಿ ಮಾಡುವ ಪರಿಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನಾಗಿ ಮಾಡಿ ಅದರಿಂದ ಬರುವ ತ್ಯಾಜ್ಯವನ್ನು ಕುಡಿಯುವ ನದಿಗಳಿಗೆ ಸೇರಿಸುವುದರಿಂದ ಜಲ ಚರಗಳಿಗೂ ಅಪಾಯ ಉಂಟಾಗಿ ಸಾವಿಗೀದಾಗೋದೆ ಹೆಚ್ಚು.
ಇನ್ನು ವಾಹನ ಬಳಸುವ ಮಿತಿ ಇತ್ತೀಚಿಗೆ ಪ್ರತಿಯೊಂದು ಮನೆಯಲ್ಲಿ ಹೆಚ್ಚಾಗಿದೆ ಇದರಿಂದ ವಾಯು ಮಾಲಿನ್ಯ ಕೂಡ ಉಲ್ಬಣಗೊಂಡು ಬಿಸಿಲಿನ ತಾಪಕ್ಕೆ ಇದು ಒಂದು ಮುಖ್ಯ ಕಾರಣವೆ. ಇದನ್ನು ನಿಯಂತ್ರಣ ಮಾಡಲು ಹಸಿರನ್ನ ಉಳಿಸಲು ನಾವೆಲ್ಲರೂ ಸೇರಿ ಇದಕ್ಕೆ ಪ್ರಾಮುಖ್ಯತೆ ಕೊಟ್ಟು ಗಿಡ ಮರಗಳ ನೆಡಲು ಮುಂದಾಗಬೇಕು. ತಿಳಿದು ನಾವೇ ಇದರ ಬಗ್ಗೆ ಯೋಚಿಸದೆ ಗಂಭೀರವಾಗಿ ತೆಗೆದುಕೊಳ್ಳದೆ ಇದ್ದರೆ ಮುಂದಿನ ಪೀಳಿಗೆಗೆ ನಮ್ಮಿಂದ ಆಗುವ ಅನಾಹುತಕ್ಕೆ ದಾರಿ ನಾವೇ ತೋಡಿಕೊಟ್ಟಂತೆ ಆಗುತ್ತದೆ.
ಮೇಲಿನ ವಿಷಯಕ್ಕೆ ಬರೆಯಲು ಈ ಕೆಳಗಿನ ಪದ್ಯವೆ ಕಾರಣ ಏಕೆಂದರೆ ಪ್ರಕೃತಿ ಹಾಗೂ ಇಲ್ಲಿರುವ ಪ್ರಾಣಿ ಪಕ್ಷಿಗಳು ನಮಗೆ ಅನುಕೂಲ ಮಾಡಿಕೊಡುವ ಜೊತೆಗೆ ಪರಿಸರಕ್ಕೆ ಸ್ವಲ್ಪವು ಅಡ್ಡಿಯನ್ನುಂಟು ಮಾಡೋದಿಲ್ಲ ಆದರೆ
ನೀನ್ಯಾರಿಗಾದೆಯೊ ಎಲೆ ಮಾನವ ಅನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಈ ಕವನದ ಕತೃ ಎಸ್ ಜಿ. ನರಸಿಂಹಚಾರ್ಯರು. ನಿಮ್ಮೆಲ್ಲರ ನೆನಪಿಗಾಗಿ ಮತ್ತೊಮ್ಮೆ ಓದಿ ಕೊಂಡು ಹಾರೈಸಿ.
ನೀನಾರಿಗಾದೆಯೋ ಎಲೆ ಮಾನವಾ ಗೋವಿನ ಕುರಿತು ಈ ಒಂದು ಅದ್ಭುತ ಕವನ ಬರೆದ ಕವಿ ಎಸ್. ಜಿ. ನರಸಿಂಹಾಚಾರ್ಯರು. ಕೃತಘ್ನ ಮನುಷ್ಯರಿಗೂ ಈ ಕವನ ಸಂಬಂಧಿಸುತ್ತದೆ.
ನೀನಾರಿಗಾದೆಯೋ ಎಲೆ ಮಾನವಾ
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ..
ಹರಿ ಹರೀ ಗೋವು ನಾನು|| ೧||
ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ,
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ||೨||
ಉಳುವೆ ನಾ ಭೂಮಿಯನು, ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ನಾ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ||೩||
ಹಾಯೆ ಹರಿಗೋಲಾದೆ, ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ||೪||
ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ||೫||
ಸವಿತಾ ಮುದ್ಗಲ್
ಪ್ರಕಟಣೆ ಮಾಡಿದ ಸಂಗಾತಿ ಸಂಪಾದಕರಾದ ಮದುಸೂದನ್ sir ಗೆ ಹೃತ್ಪೂರ್ವಕ ಧನ್ಯವಾದಗಳು sir