ಕಥಾ ಸಂಗಾತಿ
ನಾಗರಾಜ ನಾಯ್ಕ
ಲಾಟೀನು ಬೆಳಕು
ಬೆಂಗಳೂರು ನಗರದ ಜಗಮಗಿಸುವ ವಿದ್ಯುತ್ ದೀಪಗಳ ನಡುವೆ ಸಣ್ಣ ದೊಂದು ರೂಮು. ಅದಕ್ಕೆ ಒಂದೇ ಕಿಟಕಿ. ತೆರೆದರೆ ಅರ್ಧ ಬೆಂಗಳೂರು ಕಾಣಿಸುತ್ತದೆಯೋ ಎನ್ನುವಂತೆ ತೋರುವಷ್ಟು ಸಲೀಸು ಅದರ ನೋಟ. ತುಂಬಾ ವರ್ಷಗಳಾಯಿತು ಅದಕ್ಕೆ. ಅಲ್ಲಿಗೆ ಬರುವವರೆಲ್ಲ ಹೆಚ್ಚಾಗಿ ಹೊಸದಾಗಿ ಉದ್ಯೋಗ ಅರಿಸಿ ಬರುವವರು. ಒಂದು ಹಂತ ತಲುಪುವವರೆಗೆ ಬಂದು ನಿಂತು ಕುಳಿತು ಅದೇ ಸ್ವರ್ಗವೆಂದು ಪರಿಭಾವಿಸಿ ಅಂತರ್ಯದಲ್ಲಿ ಹಲವು ದಿನ ದೂಡಿ ತನ್ನ ಹಳ್ಳಿಯನ್ನು, ಊರನ್ನು, ಮನೆಯನ್ನು ನೆನಪಿಸಿಕೊಂಡು ಬೆಂಗಳೂರು ಎನ್ನುವ ಪೇಟೆಯ ತುತ್ತ ತುದಿಗೆ ನಾನಿದ್ದೇನೆ ಎನ್ನುವ ಹಗುರ ಭಾವದಿ ಕರಗಿ ನಿದ್ದೆಗೆ ಜಾರಿದರೆ ಮತ್ತೆ ಬೆಳಗಿನ ತಂಗಾಳಿಗೆ ಹಾಕಿರುವ ಸಿಮೆಂಟ್ ಸೀಟಿನ ಕೆಳಗೆ ಬೀಸಿ ಬರುವ ವಾಹನಗಳ ಸದ್ದು, ಹಾಗೂ ಬಿಡುವಿರದ ಓಡಾಟದ ನಡುವೆ ಅವರ ದಿನ ಆರಂಭವಾಗುತ್ತಿತ್ತು. ಬದುಕೆಂದರೆ ಹೀಗೆ ಇರದ ಅನಿಸಿಕೊಂಡ ಹಾಗೆ ಆಗದ ಬರಿ ಉಳಿದು ಹೋಗುವ ನೆನಪಿಗಷ್ಟೇ ಸೀಮಿತವಾದರೂ ವಾಸ್ತವದ ಪರಿಭಾಷೆಯಲ್ಲಿ ಉಳಿದು ಲುಪ್ತವಾಗುವ ದಿನಗಳ ತಲ್ಲಣ. ಬಹುತೇಕ ಹೊಸಬರು ಹೊಟ್ಟೆಪಾಡಿಗಾಗಿ ಕಲಿತ ವಿದ್ಯೆಯ ಹಿಂದೆ ಬಂದು ಉಳಿದುಕೊಳ್ಳುವುದು ಇಲ್ಲಿಯೇ .ಅಂತಹ ಅದೆಷ್ಟು ಹೊಸಬರು ಈ ರೂಮಿನೊಳಗೆ ಬಂದು ಉಳಿದು ಹೋಗಿದ್ದರು. ಆರು ತಿಂಗಳು, ವರ್ಷಕ್ಕಿಂತ ಹೆಚ್ಚು ಇಲ್ಲಿ ಯಾರೂ ಉಳಿದಿಲ್ಲ. ಪ್ರತಿ ಹೊಸಬರು ಬಂದಾಗಲೂ ರೂಮು ತನ್ನ ಗೋಡೆಗಳಿಗೆ ಮೇಕಪ್ ಮಾಡಿಕೊಳ್ಳಲೇಬೇಕಿತ್ತು. ಹೊಸದಾಗಿ ಬಂದವರಿಗೆ ಕಡಿಮೆ ಹಣಕ್ಕೆ ಎಂತಹ ಚಂದದ ರೂಮು ಎನ್ನುವ ಧೀಮಂತ ಭಾವ ಸೃಷ್ಟಿಸಲಿಕ್ಕೆ ಮತ್ತೆ ಮತ್ತೆ. ಅಲ್ಲಿರುವುದು ಒಂದೇ ಒಂದು ಪುಟ್ಟ ರೂಮು. ಒಬ್ಬರು ಮಾತ್ರ ಉಳಿಯಬಹುದಾದಷ್ಟು ಚಿಕ್ಕದು. ದೊಡ್ಡ ಮನಸ್ಸು ಮಾಡಿ ಉಳಿಯುವವರಿಗೆ ಅಷ್ಟೇ ಆಪ್ತ ಅದರ ನಂಟು. ಈ ರೂಮಿನ ವಿಶೇಷತೆ ಎಂದರೆ ಬಂದವರೆಲ್ಲ ಒಂದು ಹೆಜ್ಜೆ ಮುಂದಕ್ಕೆ ಸಾಗಿ ವಿನೀತರಾಗಿ ಬದಲಾಗಿ ಹೋಗುವುದು ರೂಢಿ, ಹಾಗೆಯೇ ಹೊಸದಾಗಿ ಬೆಂಗಳೂರಿನಲ್ಲಿ ಒಂದು ಪುಟ್ಟ ಉದ್ಯೋಗ ಹುಡುಕಬೇಕು ಎನ್ನುವ ಕಲ್ಪನೆಯಿಂದ ಬಂದವ ವಸು. ಹಳ್ಳಿಯ ಅಪ್ಪಟ ಹಳ್ಳಿತನದ ನಡುವೆ ಕಲಿತದ್ದು. ಒಂದಿಷ್ಟು ಅಂಕಗಳನ್ನ ಹಿಡಿದು ಇಲ್ಲಿಗೆ ಬಂದವನು. ಊರಿಗೆ ಒಬ್ಬನೇ ಕಲಿತು ಮುಂದೆ ಬಂದಾಗ ಇಡಿ ಊರೇ ಅವನನ್ನ ತಿರುಗಿ ನೋಡಿತ್ತಂತೆ, ಹುಡುಗ ಅಂದ್ರೆ ಹುಡುಗ ಎಷ್ಟು ಚಂದ ಕಲ್ತಿದ್ದಾನೆ ನೋಡಿ ಎಂದು ಆಡಿಕೊಳ್ಳುವಂತೆ. ಇನ್ನೂ ಬದುಕಬೇಕು. ಹೊಸ ಬದುಕು ಕಲಿಯಬೇಕು. ಬದುಕು ಅರಿಯಬೇಕು ಎಂದು ಮನೆಯಲ್ಲಿ ಹೇಳಿ ಬಂದು ಮುಟ್ಟಿದ್ದು ಯಾರೋ ತೋರಿಸಿದ ಈ ರೂಮಿಗೆ. ಹಳ್ಳಿ ಮನೆಯ ಪರಿಸರ ಚಂದ ಎಂದು ಬದುಕಿದ ವಸುವಿಗೆ ನಗರ ಇಷ್ಟವಾಗಲಿಲ್ಲ ಮೊದಲು. ಕಿವಿ ಮುಚ್ಚಿಕೊಳ್ಳಬೇಕು ಎನಿಸಿತು. ಆದರೂ ತಡೆದುಕೊಳ್ಳಲೇಬೇಕು ಒಂದು ವಾಸ್ತವದ ನೆರಳಿಗೆ ಎಷ್ಟೆಲ್ಲಾ ಹೊದಿಕೆಗಳು ಈ ಬೆಂಗಳೂರಿನಲ್ಲಿ ಎನಿಸಿತು ಅವನಿಗೆ. ಅದೆಷ್ಟೋ ಜನರನ್ನ ಕಾಯ್ದಿದೆ ಈ ಬೆಂಗಳೂರು ಎನಿಸಿತು. ಬಂದಿಳಿದ ಬಸ್ಸು ನಿಲ್ದಾಣದಲ್ಲೂ ಅಷ್ಟೇ ಸಂಖ್ಯೆಯ ಜನ ಹತ್ತುತ್ತಿದ್ದರು…. ಇಳಿಯುತ್ತಿದ್ದರು. ಅವರೆಲ್ಲರ ಮನಸ್ಸಿನ ಬೆಂಗಳೂರು ಒಂದು ವಿಚಿತ್ರ ನಗರವಾಗಿ ಕಂಡಂತೆ ಅವರ ಕಣ್ಣುಗಳಲ್ಲಿ ಕಾಣಿಸುವುದು ವಸುವಿಗೂ ಕಾಣಿಸುತ್ತಿತ್ತು. ತನ್ನ ಶಾಲೆ ಸ್ನೇಹಿತರು, ಹಳ್ಳಿಯ ನೆನಪುಗಳು ಎಲ್ಲವೂ ಬಂದು ಹೋಗುತ್ತಿತ್ತು. ಓದಿರದೇ ಇದ್ದರೆ ಇಂತಹ ನಗರದ ಕಂಪನಿಗಳಲ್ಲಿ ಕೆಲಸ ಹುಡುಕಲು ಸಾಧ್ಯವಿತ್ತೇ ಎನ್ನುವ ವಿಚಾರವೂ ಸುಳಿದು ಹೋಗಿತ್ತು ಮನಸ್ಸಿಗೆ. ವಸು ಬೆಂಗಳೂರಿನ ಪುಟ್ಟ ಕಂಪನಿಯಲ್ಲಿ ಸಿಕ್ಕ ಕೆಲಸಕ್ಕೆ ನೂರು ಬಾರಿ ಧನ್ಯವಾದ ಹೇಳಿದ್ದ ಗೆಳೆಯನಿಗೆ. ಪ್ರತಿ ಬಾರಿ ತನ್ನ ಕೋಣೆಯ ಬಾಗಿಲು ತೆರೆದಾಗ ತನ್ನ ಹಳ್ಳಿಯ ನೆನಪು ಬರುತ್ತಿತ್ತು. ಕಂಪನಿ ಕೆಲಸವೂ ಅಂತಹ ಶ್ರಮದ್ದೂ ಏನೂ ಆಗಿರಲಿಲ್ಲ. ಗೇಟಿನೊಳಗೆ ಬರುವ ಅತಿಥಿಗಳ ವಿಶೇಷ ಮಾಹಿತಿ ಪಡೆದು ಒಳಗೆ ಬಿಡುವುದು ಅಷ್ಟೇ. ಅವರೊಡನೆ ಒಂದು ಕುಶಲದ ಮಾತು, ನಗು ಇಷ್ಟೇ ಅವನ ಕೆಲಸವಾಗಿದ್ದು ಸಂಬಳವೂ ಕಡಿಮೆಯೇ. ಈಗಲೇ ದೊಡ್ಡ ಕೆಲಸ ಸಿಗುವುದಿಲ್ಲ. ಈ ಕೆಲಸವನ್ನು ಆಪ್ತವಾಗಿ ಮಾಡಿ ಮುಗಿಸು. ಮುಂದೆ ನೋಡೋಣ ಎಂದು ಗೆಳೆಯ ಹೇಳಿ ಹೋಗಿದ್ದ. ಗೆಳೆಯನೆಂದರೆ ಎಲ್ಲೋ ಪರಿಚಯವಾದವನು. ಮಾತಿನಲ್ಲಿ ಹೇಗೂ ಒಳ್ಳೆಯವನು ಅನಿಸಿತು. ಹಾಗಾಗಿ ಪರಿಚಯಿಸಿಕೊಂಡಿದ್ದ ವಸು, ಈ ಕೆಲಸವು ವಸುವಿಗೆ ದೊಡ್ಡ ಕೆಲಸವೇ ಆಗಿತ್ತು. ಅಲ್ಲಿಗೆ ಬರುವ ಎಲ್ಲರನ್ನ ನಗುನಗುತ್ತ ಮಾತಾಡಿಸಬೇಕಿತ್ತು. ಅವರು ಕೇಳುವ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಬೇಕಿತ್ತು. ಒಂದು ದಿನಕ್ಕೆ ತುಂಬಾ ಜನ ಬರುವವರು ಅಲ್ಲಿಗೆ. ಅದರಲ್ಲಿ ಹಲವು ಮುಖಗಳ ಗುರುತು ಸಹ ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ತರೇವಾರಿ ಮಾತುಗಳು, ಪ್ರಶ್ನೆಗಳು ಭಾವನೆಗಳು, ಭಾವಗಳು ಅವರ ಮುಖದಲ್ಲಿನ ಭಿನ್ನತೆ ಅರಿತಿದ್ದ. ಆದರೆ ಭಾವಗಳಲ್ಲಿ ಪ್ರಶ್ನೆಗಳ ಭಿನ್ನತೆ ಅರಿತಷ್ಟು ತಾನು ಚಿಕ್ಕವನಾದೆ ಎನಿಸುತ್ತಿತ್ತು. ಹೊಸದಾಗಿ ಬಂದಾಗ ಜೊತೆಯಿದ್ದ ನಿಮ್ಮಿ ಕೆಲಸದ ಬಗ್ಗೆ ಪರಿಚಯಿಸಿ ಹೇಳಿಕೊಡುತ್ತಿದ್ದಳು . ಈಗ ಅವಳು ಬಾರದಿರುವುದರಿಂದ ಎಲ್ಲವನ್ನು ವಸು ಒಬ್ಬನೇ ಮಾಡಬೇಕಿತ್ತು. ಒಮ್ಮೊಮ್ಮೆ ಫೋನ್ ಮಾಡಿ ಹೇಗಿದ್ದೀಯಾ? ಎಂದು ವಿಚಾರಿಸಿ ನಿಮ್ಮಿ ತನ್ನ ಕಂಪನಿಯ ಬಗ್ಗೆ ಹೇಳಿ ಫೋನ್ ಇಡುತ್ತಿದ್ದಳು. ಹೇಗೋ ಪರಿಚಯದ ಒಂದು ಆಪ್ತತೆ ಬಹು ಕಾಲದ ವಾಸ್ತವದ ನೆರಳಾಗುತ್ತದೆ. ಜೊತೆ ಇರುತ್ತದೆ. ಅವಳೂ ಅಷ್ಟೇ ಆತ್ಮೀಯತೆಯಿಂದ ಮಾತನಾಡಿದಾಗ ತುಂಬಾ ಖುಷಿ ಎನಿಸುತ್ತಿತ್ತು. ಮಾತು ಬದುಕಿಗೆ ಬೇಕು. ಪರಿಚಯದ ಮಾತು ಅನುಭವವ ಕಟ್ಟಿಕೊಡುತ್ತದೆ ಎನ್ನುವ ಮಾತು ನಿಮ್ಮಿಗೆ ಅನ್ವಯವಾಗುತ್ತಿತ್ತು. ಬೆಳಗ್ಗೆ ತಿಂಡಿ ಮಾಡಿ ಊಟ ಕಟ್ಟಿಕೊಂಡು ಹೊರಟರೆ ಕಾಣುವುದು ಓಡುವ ಬಸ್ಸು. ಅದರಲ್ಲಿನ ಜನರನ್ನು ಕಂಡ ವಸುವಿಗೆ ಅನಿಸುತ್ತಿತ್ತು ಇಲ್ಲಿ ಮನುಷ್ಯರಷ್ಟೇ ಓಡುವುದಿಲ್ಲ ಅವನ ನಿದ್ದೆ, ನೆಮ್ಮದಿ,ನೆನಪು, ಆರೋಗ್ಯ ,ಕೋಪ, ಕುಟುಂಬಗಳು ಓಡುತ್ತವೆ ದಿನವೂ ಎಂದು ಅನ್ನಿಸಿದೆ. ಇನ್ನು ಬಸ್ಸಿಗೇರಿದರೆ ಒಳಗಡೆ ಮುಖದ ಭಾವಗಳು ಅವನಿಗೂ ಒಮ್ಮೊಮ್ಮೆ ನಗು ತರಿಸಿದರೆ ಒಮ್ಮೊಮ್ಮೆ ಗಂಭೀರವಾಗಿಸಿದೆ. ಸುಮ್ಮನೇ ಸ್ತಬ್ಧ ಭಾವನೆ ಕುಳ್ಳುವಂತೆ ಮಾಡಿದೆ ಎನಿಸುತ್ತಿತ್ತು. ಬೇರೆ ಅನಿಸುತ್ತಿದ್ದರೂ ಹಳ್ಳಿಗಳಲ್ಲಿ ಪರಿಚಿತ ಮುಖಗಳು ಸಿಕ್ಕಲ್ಲಿ ಆಡುವ ಮಾತುಗಳು ಬದುಕಿನ ಖುಷಿ ಎನ್ನಿಸಿತು. ಇಂಥದ್ದೇ ವಿಷಯ ಎಂಬುದಿರದ ಬದುಕುವ ಪ್ರೀತಿ ಮಾತ್ರ ತುಂಬಿರುವ ಮಾತುಗಳು ಎನಿಸುತ್ತಿತ್ತು. ಸಾರಿಗೆ ಉಂಬುಕೆ ಎಂತದ್ದೋ? ಎಂಬ ಮಾತಿನಿಂದ ಆರಂಭವಾಗಿ ಎಲ್ಲಿಗೋ ಹೋಗಿ ಕೊನೆಯಾಗುತ್ತಿತ್ತು. ಸ್ಥಳ ಬಂದಾಗ ಮಾತು ನಿಲ್ಲುತ್ತಿತ್ತು. ಬಸ್ಸು ಒಂದು ಮಾತಿನ ಜನಪದರ ಜಾತ್ರೆಯಂತೆ ಕಾಣಿಸುತ್ತಿತ್ತು. ಹಳ್ಳಿಗಳಲ್ಲಿನ ಮಾತುಗಳಲ್ಲಿ ಪ್ರೀತಿ ಇತ್ತು. ಕಾಳಜಿ ಇತ್ತು .ನಗುವ ಮಾತುಗಳಲ್ಲಿ ನೆಮ್ಮದಿ ಇತ್ತು. ಬಸ್ಸು ಸಾಗುತ್ತಿದ್ದರೆ ತುಂಬಿದಷ್ಟು ಜನರು ಬೇರೆ ಇಲ್ಲಿ ಅನಿಸುತ್ತಿತ್ತು. ಆಪ್ತವಾದ ನೋಟ ಸಲಿಗೆ ಯಾರಲ್ಲಿಯೂ ಇರುತ್ತಿರಲಿಲ್ಲ . ಬಿಗಿದ ಮುಖದ ಮುರಿದ ಭಾವಗಳೇ ಕಾಣಿಸುತ್ತಿದ್ದವು . ಮನುಷ್ಯ ಸಂಬಂಧದ ಪರಿಚಯದ ಎಳೆಗಳಿಲ್ಲದಿದ್ದರೆ ಅನಾಥ ಎನಿಸುತ್ತಿತ್ತು. ಕೆಲಸವನ್ನು ನಗುತ್ತಲೇ ಮಾಡುವುದು ವಸುವಿಗೆ ಅಭ್ಯಾಸ. ಮನಸ್ಸಿನ ಗೆಲುವು ಅವನ ಅರಿವಿನ ಜೊತೆ ಇರಬೇಕು ಎಂದುಕೊಂಡವನು ವಸು. ಎಷ್ಟು ಕಷ್ಟವಾದರೂ ಸಹ ಅದನ್ನು ಮಾಡಲೇಬೇಕು. ಆಗ ಮಾತ್ರ ಒಂದು ಪರಿಣಾಮ ಸಾಧ್ಯ ಎಂದು ಅರಿತಿದ್ದ. ಕಂಪನಿಯ ಒಳಗಡೆ ನೂರಾರು ಉದ್ಯೋಗಿಗಳು ಇದ್ದರು. ಅವರೆಲ್ಲರ ಪರಿಚಯ ವಸುವಿಗೆ ಇರಲಿಲ್ಲ. ಯಾರೋ ಹಾಯ್ ಎನ್ನುತ್ತಿದ್ದರು. ಇವನೂ ಹಾಯ್ ಎಂದು ಸುಮ್ಮನಾಗುತ್ತಿದ್ದ. ತುಂಬಾ ದಿನಗಳು ಕಳೆದು ವರ್ಷಗಳು ಕಳೆದವು. ಅದೇ ಕೆಲಸವೀಗ ಸಲೀಸು. ಒಂದಿಷ್ಟು ನೆಮ್ಮದಿಯ ಜೊತೆಗೆ ಅನುಭವ.ಈಗ ಅವನಿಗೆ ಕೆಲಸದಲ್ಲಿ ಹಿಡಿತ ಸಿಕ್ಕಿತ್ತು. ಆಲೋಚನೆಗೆ ಅವನದೇ ಉತ್ತರ ಸಿಕ್ಕಿತು. ಮನುಷ್ಯ ಬದಲಾಗುವುದು ಮಾಡುವ ಕೆಲಸಗಳ ಆಪ್ತತೆಯಿಂದ ಎಂದುಕೊಂಡ ವಸು. ಒಂದು ದಿನ ಇದ್ದಕ್ಕಿದ್ದಂತೆ ಕಂಪನಿಯ ಒಳಗಡೆಯಿಂದ ಒಂದು ಕರೆ. ಒಂದು ಗಂಟೆಗೆ ಊಟಕ್ಕೆ ಹೊರಗಡೆ ಹೋಗಬೇಕು ಸಿದ್ಧವಾಗಿರಿ ಎಂದು. ವಸುವಿಗೆ ಏನು ಹೇಳುವುದು ತೋಚಲಿಲ್ಲ. ಮಧ್ಯಾಹ್ನದ ಸಮಯಕ್ಕೆ ತುಂಬಾ ಜನರು ಬರುತ್ತಾರೆ. ಹಾಗಾಗಿ ಇನ್ನೊಮ್ಮೆ ಬರಲೇ ಎಂದ. ಜನರಿಗೆ ತೊಂದರೆ ಆಗಬಾರದು ಮತ್ತು ಕಂಪನಿಗೂ ಎಂದ. ಅದಕ್ಕೆ ಬೇರೆ ವ್ಯವಸ್ಥೆ ಆಗಿದೆ. ನೀವು ಸಿದ್ಧವಾಗಿರಿ ಎಂದು ಫೋನ್ ಕಟ್ ಆಯಿತು. ವಸುವಿನ ಮನಸ್ಸು ಮಧ್ಯಾಹ್ನದತ್ತ ಸಾಗುತ್ತಲೇ ಇತ್ತು . ಕಂಪನಿಯ ಮುಖ್ಯಸ್ಥರು ಅವರಿಗೇಕೆ ನನ್ನೊಡನೆ ಊಟ. ಎನ್ನುವ ವಿಚಾರದೊಳಗೆ ಉಳಿದು ಹೋದ ವಸು. ಮಾಡುವ ಕೆಲಸದಲ್ಲಿ ನಿರ್ಲಕ್ಷ್ಯ ಮಾಡಿರುವೆನಾ ? ಎಂದು ಯೋಚಿಸಿದ. ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಕಪ್ಪು ಕಾರು ಒಂದು ಹೊರಬಂದು ಗೇಟ್ ನ ಸಮೀಪ ಬಂದು ನಿಂತಿತು. ವಸು ಕಾರಿನ ಸಮೀಪ ಹೋಗಿ ನಿಂತ. ಬಾಗಿಲು ತೆರೆಯಿತು. ಹತ್ತಿ ಕುಳಿತ .ಮುಂದಿನ ಸೀಟಿನಲ್ಲಿ ಒಬ್ಬ ಮಹಿಳೆ ಕುಳಿತಿದ್ದಳು. ಕಣ್ಣಿಗೆ ಕಪ್ಪು ಕನ್ನಡಕ ಹಾಕಿದ್ದಳು. ಮುಖ ಕನ್ನಡಿಯಲ್ಲಿ ಕಾಣಿಸುತ್ತಿತ್ತು. ನೋಟ ಗಂಭೀರವಾಗಿತ್ತು. ಚಲಿಸುವಾಗ ರಸ್ತೆಯ ಮೇಲಿತ್ತು ಗಮನ.ವೇಗ ಸಾಧಾರಣವಾಗಿತ್ತು. ಎದುರು ಬರುವ ಕಾರು ವಾಹನಗಳ ಸರಾಗ ಓಡಾಟ ಕಾಣಿಸುತ್ತಿತ್ತು. ಏನು ಮಾತನಾಡುವುದು ಎಂದು ಅರಿಯದೇ ಸುಮ್ಮನೆ ಹೋಗಿ ಕುಳಿತ . ನೋಟ ಹೊರಗಡೆ ಪಕ್ಕಕ್ಕೆ ಚೆಲ್ಲಿದ ಅವಳು ನಿಮ್ಮ ಹೆಸರು ಎಂದಳು …..ನೋಡಿದ ಮುಂದಿನ ಸೀಟಿನಲ್ಲಿ ಕುಳಿತ ಗಂಭೀರ ಮುಖವ……ವಸು ಎಂದ… ಓದಿದ್ದು ?ಬಿ.ಎ, ಎಂ.ಎ ಎಂದ. ಊರು ? ಎಂದಳವಳು ಹಳ್ಳಿ ಅದಷ್ಟೇ ಹೇಳಿದ. ನಾಳೆಯಿಂದ ನೀವು ಕೆಲಸಕ್ಕೆ ಬರುವುದು ಬೇಡ ಎಂದು ಆ ಮಹಿಳೆ ಹೇಳಿ ಸುಮ್ಮನಾದಳು. ವಸುವಿನ ಮುಖ ಬೆವರಿತ್ತು. ಆ ಕ್ಷಣಕ್ಕೆ ಕಾಲುಗಳು ಅಲ್ಲಾಡಿಸಲು ಆಗಲಿಲ್ಲ. ಅಯ್ಯೋ ಹೊಟ್ಟೆಗೆ ,ನಾಳೆಗೆ ಏನು ಮಾಡಲಿ ಎಂಬ ಪ್ರಶ್ನೆಗೆ ಉತ್ತರಿಸದಾದ ವಸು.ಅವಳು ಅದೇ ಸಮಾಧಾನ ಸ್ಥಿತಿಯಲ್ಲಿ ಕಾರು ಚಲಾಯಿಸುತ್ತಿದ್ದಳು. ವಸು ಗಟ್ಟಿಯಾಗಿ ಇರಬೇಕು ಎಂದುಕೊಂಡ. ಈ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಏನು ಕಡಿಮೆ ಎಂದುಕೊಂಡ. ಮಾತನಾಡದೇ ಸುಮ್ಮನಾದ. ಮುಂದಿನ ಮಾತು ಏನಿರಬಹುದು ಎಂಬ ನಿರೀಕ್ಷೆಯಿತ್ತು ವಸುವಿಗೆ. ಆದರೆ ಯಾವ ಮಾತು ಅವಳಿಂದ ಹೊರಬರಲಿಲ್ಲ. ಸಹಜವಾಗಿ ರಸ್ತೆ ಬದಿ ಕಾರು ನಿಲ್ಲಿಸಿ ಸ್ವಲ್ಪ ಹಣ್ಣು ಖರೀದಿಸಿ ನಾಲ್ಕಾರು ಹಣ್ಣುಗಳನ್ನು ಕೊಟ್ಟು ಸಾಗಿದಳು. ಕಾರು ಮುಂದಕ್ಕೆ ಹೊರಟಿತ್ತು ನಿಮ್ಮ ಮುಂದಿನ ನಿರ್ಧಾರ ಕೇಳಿದಳು ಅವಳು. ಅವನು ನಗುತ್ತಾ ಅಂದ ಈ ಕಂಪನಿ ನನಗೆ ಎಲ್ಲವೂ ಕೊಟ್ಟಿದೆ ಆದರೆ ಅದಕ್ಕೆ ಪ್ರತಿಯಾಗಿ ನಾನು ದುಡಿದಿರುವೆ ದಣಿದಿರುವೆ. ನನ್ನ ಮುಂದೆ ನಿರೀಕ್ಷೆಗಳಿಲ್ಲ ಆದರೆ ಭರವಸೆ ಇದೆ. ಇದಕ್ಕಿಂತ ಚೆನ್ನಾಗಿರುವ ಕಂಪನಿ ಒಂದು ದಿನ ನನಗೆ ಸಿಗಬಹುದು ಎಂದು ಅಂದ. ತಕ್ಷಣ ಪಕ್ಕಕ್ಕೆ ಕಾರು ನಿಲ್ಲಿಸಿ ಅದೇಗೆ ನಿಮಗೆ ನಿಮ್ಮ ಮೇಲೆ ಎಷ್ಟು ಭರವಸೆ ಎಂದಳು. ಅವನು ಮರ ನೋಡಿ ಎಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಅಲ್ಲವೇ ಆದರೆ ಅದು ನಿಂತಿರುವುದು ಆಳದಲ್ಲಿರುವ ಬೇರಿನಿಂದ. ಬೇರು ಒಂದು ಕಾಣದ ಕೈ. ಆದರೆ ಇಡೀ ಮರಕ್ಕೆ ಆಧಾರ ಅದರ ನಿಲುವು. ಅವನ ಮಾತಿಗೆ ಅವಳು ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ಮಾತು ಒಂದು ಅಭಿವ್ಯಕ್ತಿ. ಇಷ್ಟು ಚೆನ್ನಾಗಿ ಮಾತನಾಡಲು ಎಲ್ಲಿ ಕಲಿತಿರಿ ? ಅಪ್ಪಟ ಮಣ್ಣಿನ ಭಾಷೆಯನ್ನು ಎಂದಳವಳು. ಧನ್ಯವಾದಗಳು ಎಂದು ಸುಮ್ಮನಾದ.ಏಕೆ ಮಾತನಾಡುತ್ತಿಲ್ಲ ಎಂದಳವಳು. ಹಳ್ಳಿ ನೆನಪಾಯಿತು. ನಮ್ಮ ಹಳ್ಳಿಯಲ್ಲಿ ನಾನು ಓದುವಾಗ ಕರೆಂಟ್ ಇರಲಿಲ್ಲ .ಅಪ್ಪ ಪೇಟೆಯಿಂದ ಒಂದು ಲಾಟೀನ್ ತಂದಿದ್ದರು. ಕತ್ತಲಾದರೆ ಸಾಕು ಅಪ್ಪ ಪೇಟೆಯಿಂದ ತಂದ ಲಾಟೀನ್ ಹಚ್ಚುತ್ತಿದ್ದರು. ನಾವು ಅದರ ಸುತ್ತಲೂ ಕುಳಿತು ನೋಡುತ್ತಿದ್ದೆವು .ಅದರ ಸುತ್ತಲೂ ಕುಳಿತು ಓದುತ್ತಿದ್ದೆವು. ಸುಮಾರು ಹೊತ್ತು ಓದು ಮುಗಿದ ಮೇಲೆ ಮತ್ತೆ ಊಟ. ಆದರೆ ಆ ಲಾಟೀನು ಮಾತ್ರ ನಮಗೆ ಸೋಜಿಗವಾಗಿತ್ತು. ಅದು ಹೇಗೆ ಉರಿಯುತ್ತದೆ ಎಂಬುದು ಪ್ರಶ್ನೆಯಾಗಿತ್ತು. ಪ್ರತಿದಿನ ಅಪ್ಪ ಅದೇ ಲಾಟೀನು ಹಚ್ಚುತ್ತಿದ್ದ ನಮ್ಮನ್ನು ಓದಿಸಲು ಮತ್ತು ಎಂತಹ ಗಾಳಿ ಬಂದರೂ ಆರಿ ಹೋಗದ ಲಾಟೀನು ಬೆಳಕಿನ ಬಗ್ಗೆ ಅಪ್ಪನಿಗೆ ಹೆಮ್ಮೆ ಇತ್ತು. ಲಾಟೀನು ಬೆಳಕು ತೋರಿಸಿ ಸದಾ ಹೇಳುತ್ತಿದ್ದ ಮಗ ಎಂಥ ಪರಿಸ್ಥಿತಿಯಲ್ಲಿ ಸೋಲಬಾರದು ಎಂದು. ಈಗ ಅಪ್ಪನ ಮಾತಿನ ನೆನಪಾಯಿತು. ಲಾಟೀನು ಬೆಳಕು ಮತ್ತೆ ನೆನಪಾಯಿತು ಎಂದ. ಸನ್ನಿವೇಶದ ವ್ಯಾಪ್ತಿಯನ್ನು ಅರ್ಥೈಸಿಕೊಂಡು ಅವಳು ಸುಮ್ಮನಾದಳು. ಬಹು ಸಮಯದ ನಂತರ ಒಂದು ಪ್ರತಿಷ್ಠಿತ ಹೋಟೆಲ್ ನ ಸಮೀಪ ಕಾರು ಬಂದು ನಿಂತಿತು. ಇಳಿಯಿರಿ ಎಂದಳು ಊಟ ಮಾಡಿ ಹೋಗೋಣ ಎಂದಳು. ಇಬ್ಬರು ಒಳಗೆ ಹೋಗಿ ಕುಳಿತರು. ಇಂತಹ ಹೋಟೆಲ್ ಅವನು ನೋಡಿರಲೇ ಇರಲಿಲ್ಲ. ಕಂಪನಿಯ ಒಡತಿ ಇರಬಹುದು ಎಂದುಕೊಂಡ. ಸರಳವಾದ ಮಾತು ಅವಳ ನಡೆ ಆಪ್ತವೆನಿಸಿತು. ಅವರೆಲ್ಲಿ ನಾನೆಲ್ಲಿ ಎಂದು ಸುಮ್ಮನೇ ಕುಳಿತ. ಅವಳು ಮೊಬೈಲ್ನಲ್ಲಿ ತನ್ನ ಕೆಲಸ ಮಾಡುತ್ತಿದ್ದಳು. ಊಟವನ್ನು ನೀವೇ ಆರ್ಡರ್ ಮಾಡಿ ಎಂದಳು. ಇಲ್ಲ ನೀವೇ ಮಾಡಿ ಎಂದ. ಅವಳು ಸುಮ್ಮನೆ ಇಬ್ಬರಿಗೂ ಒಂದೇ ಬಗೆಯ ಊಟ ಎಂದು ಹೇಳಿ ತರಿಸಿದಳು. ಊಟ ಮಾಡಿ ಎಂದಳು…… ಮಾಡಿದ ಊಟ ಮುಗಿಯಿತು….. ಇದೊಂದು ಹೊಸ ಸನ್ನಿವೇಶ ವಸುವಿಗೆ. ಒಂದು ಊಟದ ಋಣ ಹೀಗಿರಬಹುದು ಅಂದುಕೊಂಡಿರಲಿಲ್ಲ. ಊಟ ಮುಗಿಯಿತು……ಬಿಲ್ ನೀಡಿದರು. ಊಟ ಮುಗಿಸಿ ಹೊರಡೋಣ ಎಂದಳು. ಇಬ್ಬರು ಹೊರಟರು ಕಾರಿನಲ್ಲಿ…….ಅವಳು ಕಂಪನಿಯ ಒಡತಿ . ತಾನು ಒಬ್ಬ ಸಾಮಾನ್ಯ ನೌಕರ…..ಆದರೂ ಅವಳ ಈ ಆಪ್ತ ನಡೆ ತುಂಬಾ ಖುಷಿಕೊಟ್ಟಿತು ವಸುವಿಗೆ……ಮತ್ತೆ …..ಮಾತಿರಲಿಲ್ಲ ಇಬ್ಬರಿಗೂ….. ಸುಮ್ಮನೆ ಕಾರು ಚಲಿಸುತ್ತಿತ್ತು. ಕಾರಿನ ಒಳಗಡೆ ಹಾಡಿನ ಪೆಟ್ಟಿಗೆಯಿಂದ ಚಿಕ್ಕದಾಗಿ ಹಾಡು ಮಾತ್ರ ಕೇಳಿಸುತ್ತಿತ್ತು ಅವನಿಗೆ. ಕೊನೆಗೆ ಕಂಪನಿ ಹತ್ತಿರ ಕಾರು ಬಂದು ತಲುಪಿತು. ವಸು ಕಾರಿನಿಂದ ಕೆಳಗಿಳಿದ. ಸಿಗೋಣ ಮತ್ತೆ ಎನ್ನುತ್ತಾ ಕಾರು ಮುಂದಕ್ಕೆ ಸಾಗಿತು. ಅಷ್ಟರಲ್ಲಿ ಮೊಬೈಲ್ನಲ್ಲಿ ಇಟ್ಟಿದ್ದ ಅಲಾರಾಂ ಧ್ವನಿಸಿತು. ತಡಬಡಿಸಿ ಎದ್ದ. ತಾನು ಈ ವರೆಗೆ ಕಂಡಿದ್ದು ಕನಸೇ ಎಂದು ತನ್ನನ್ನು ತಾನು ಮುಟ್ಟಿ ನೋಡಿಕೊಂಡ.ಛೇ ಎಂಥಾ ಕನಸು ಎನಿಸಿತು ಅವನಿಗೆ ಸುಮ್ಮನಾದ. ತನ್ನ ಊಟ ಸಿದ್ದಪಡಿಸಿಕೊಂಡು ಮತ್ತೆ ಅದೇ ರೂಮಿನಿಂದ ಆಫೀಸು ತಲುಪಿದ. ದಾರಿ ಉದ್ದಕ್ಕೂ ಅವನಿಗೆ ಅದೇ ಕನಸು ಕಣ್ಣಿಗೆ ಕಟ್ಟುತ್ತಿತ್ತು. ತಲುಪಿದ ಹತ್ತು ನಿಮಿಷಕ್ಕೆ ಒಳಗಿನಿಂದ ಕರೆ ಬಂತು. ಇಂದಿನಿಂದ ನಿಮ್ಮನ್ನು ಮ್ಯಾನೇಜರ್ ಕೆಲಸಕ್ಕೆ ನಿಯೋಜಿಸಲಾಗಿದೆ. ನಿಮ್ಮ ಕೆಲಸವನ್ನು ಈಗ ಬೇರೆಯವರಿಗೆ ನೀಡಲಾಗಿದೆ ಎಂಬ ಸೂಚನೆಯಿತ್ತು. ಅವನಿಗೆ ಹಳ್ಳಿಗಳಲ್ಲಿ ಪುಟ್ಟ ಸಂಭ್ರಮವೂ ದೊಡ್ಡ ಸಂಭ್ರಮವಾಗಿ ತುಂಬಾ ಖುಷಿ ಕೊಟ್ಟಿತು . ಲಾಟೀನು ಬೆಳಕು ಅದು ಬೆಳಕನ್ನು ಮಾತ್ರ ನೀಡುತ್ತಿರಲಿಲ್ಲ ಬದುಕಿಗೆ ಒಂದು ಖುಷಿಯನ್ನು ನೀಡಿತ್ತು. ಜೊತೆಗೆ ಆ ದೀಪದ ಬೆಳಕಲ್ಲಿ ಮುಖಗಳು, ಮುಖದ ಭಾವಗಳು ಸುಂದರವಾಗಿ ಕಂಡಂತಿದೆ. ಮತ್ತೆ ನೆನಪಾಯಿತು ಹಳ್ಳಿ ,ಗದ್ದೆ, ಬಯಲು ,ಅಪ್ಪ, ಅಮ್ಮ ಸಂಬಂಧಗಳು ಅದರ ಸೂಕ್ಷ್ಮತೆ ಎಲ್ಲವ ನೆನಪಾಯಿತು. ತಾನಿಗ ಮ್ಯಾನೇಜರ್ ಈ ಕಂಪನಿಯ ಕೆಲಸಕ್ಕೆ ಆಯ್ಕೆ ಆಗಿದ್ದೇನೆ ಎಂದಾಗ ಖುಷಿ ಪಡಬೇಕೆನಿಸಿತು ಅವನಿಗೆ. ಮಾಡುವ ಕೆಲಸಗಳ ಮಾಡುತ್ತಾ ಹೋದರೆ ಒಂದು ಸಂತೃಪ್ತಿ ಸಿಗುತ್ತದೆ .ಅದು ಇನ್ನೇನನ್ನು ಕೊಡುತ್ತಾ ಹೋಗುತ್ತದೆ ಬದುಕಿಗೆ. ಒಂದಿಷ್ಟು ತಾಳ್ಮೆ ಒಂದಿಷ್ಟು ಖುಷಿ ಆಗುತ್ತದೆ. ನಮ್ಮ ಬಗ್ಗೆ ನಮ್ಮ ಕೆಲಸದ ಬಗ್ಗೆ ನಾವು ಭರವಸೆ ಇಟ್ಟುಕೊಂಡರೆ ನಾವೆಲ್ಲಿಗೋ ಸಾಗಿ ಬಿಡುತ್ತೇವೆ ಎಂದು ಅನಿಸಿತವನಿಗೆ. ಇದು ಕನಸೋ ನನಸೋ ಎಂಬ ಪ್ರಶ್ನೆ ಮಾತ್ರ ವಸುವಿನ ಮುಖದಲ್ಲಿ ಮಿಂಚಿ ಮರೆಯಾಯಿತು. ಬದುಕಿನ ಸಂಭ್ರಮ ಮಾತ್ರ ಮುಖದಲ್ಲಿ ಲಾಟೀನು ಬೆಳಕಿನಂತೆ ಕಾಣಿಸುತ್ತಿತ್ತು ಮತ್ತೆ ಮತ್ತೆ…..
ನಾಗರಾಜ ಬಿ.ನಾಯ್ಕ
ಕತೆ ಚೆನ್ನಾಗಿದೆ
ಧನ್ಯವಾದಗಳು
ಕಥೆ ಚೆನ್ನಾಗಿದೆ ಸರ್.
ಕಥೆ ಇಷ್ಟವಾಯಿತು ಸರ್.ಸಹಜವಾಗಿ ನಿಮ್ಮದೇ ಆದ ಶೈಲಿಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ನಗರದ ಯಾಂತ್ರಿಕ ಜೀವನದ ಮಧ್ಯದಲ್ಲೂ, ನಗರದ ಝಗಮಗಿಸುವ ಬೆಳಕಿನ ನಡುವೆಯೂ, ತಾನು ಹುಟ್ಟಿ ಬೆಳೆದ ಹಳ್ಳಿಯನ್ನು, ತನಗೆ ಬೆಳಕು ನೀಡಿದ ಲಾಟಿನನ್ನು ಮರೆಯದ ಒಂದು ಜೀವ. ಆ ಜೀವ ನನಗೆ ತೀರ ಪರಿಚಯವಿರುವಂತಹ ಒಂದು ಪಾತ್ರ ಎಂಬ ಅನ್ನಿಸಿಕೆ ಹೃದಯದಲ್ಲಿ ಹಾಗೆಯೇ ನಿಂತಿದೆ.
ಕಥೆ ಇಷ್ಟವಾಯಿತು ಸರ್. ಸಹಜವಾದ ನಿಮ್ಮದೇ ಆದ ಶೈಲಿಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ನಗರದ ಯಾಂತ್ರಿಕ ಜೀವನದ ಮಧ್ಯದಲ್ಲೂ, ನಗರದ ಝಗಮಗಿಸುವ ಬೆಳಕಿನ ನಡುವೆಯೂ, ತಾನು ಹುಟ್ಟಿ ಬೆಳೆದ ಹಳ್ಳಿಯನ್ನು, ತನಗೆ ಬೆಳಕು ನೀಡಿದ ಲಾಟಿನನ್ನು ಮರೆಯದ ಒಂದು ಜೀವ. ಆ ಜೀವ ನನಗೆ ತೀರ ಪರಿಚಯವಿರುವಂತಹ ಒಂದು ಪಾತ್ರ ಎಂಬ ಅನ್ನಿಸಿಕೆ ಹೃದಯದಲ್ಲಿ ಹಾಗೆಯೇ ನಿಂತಿದೆ.
ಧನ್ಯವಾದಗಳು
ಕತೆ ಓದದೆ ತುಂಬಾ ದಿನಗಳಾಗಿದ್ದವು. ಇದನ್ನೂ ಓದಿಲ್ಲಾ. ಓದಿಸಿಕೊಂಡು ಹೋಯ್ತು. ಕಣ್ಣಮುಂದೆ ನಡೆಯುವ ಘಟನೆಯಂತೆ. ಸರಾಗ,ಸರಳ, ಸುಂದರ ಶೈಲಿ.ಬೆಳವಣಿಗೆಯ ಎಲ್ಲಾ ಬೀಜಗಳೂ ಇಲ್ಲಿವೆ. ಒಟ್ಟಿನಲ್ಲಿ ಲಾಟೀನು ಆಕರ್ಷಕ ಕಥೆ.
ರಾಮಮೂರ್ತಿ ನಾಯಕ, ಅಂಕೋಲಾ.
ಕಥೆ ತುಂಬಾ ಚೆನ್ನಾಗಿದೆ ಸರ್. ಮಾಡುವ ಕೆಲಸದಲ್ಲಿನ ಶ್ರದ್ದೆ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ ಎನ್ನುವುದಕ್ಕೆ ಕಥೆಯ ನಾಯಕ ಸಾಕ್ಸಿಯಾಗಿದ್ದಾನೆ. ಸೂಪರ್ ಸರ್ .
ಕಥೆ ಇಷ್ಟವಾಯಿತು. ಅಭಿನಂದನೆಗಳು
ಕಥೆ ಪ್ರಕಟಿಸಿದ ಸಂಗಾತಿ ಬಳಗಕ್ಕೆ ತುಂಬಾ ಧನ್ಯವಾದಗಳು……
ಕಥೆ ಓದಿ ಅಭಿಮಾನದಿಂದ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದಗಳು