‘ಮತ್ತೆ ಬರಬಾರದೇ ಆ ದಿನಗಳು’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ಈ ಜೀವನ ಒಂದು ನಿರಂತರ ಪಯಣ. ಬದುಕಿನ ಈ ಪಯಣ ಏಕಮುಖಿಯಾಗಿದ್ದು ಹಿಂದಿರುಗಿ ಹೋಗುವ ಪ್ರಶ್ನೆಯೇ ಇಲ್ಲ.. ಮುಂದೆ ಮುಂದೆ ಸಾಗುತ್ತಲೇ ಇರಬೇಕು. ಆದರೂ ಬದುಕಿನ ಕೆಲ ಸವಿ ಘಳಿಗೆಗಳ ನೆನಪಿನ ಬುತ್ತಿ ಕಟ್ಟಿಕೊಂಡು ಹೊರಡುವ ಈ ಪಯಣದಲ್ಲಿ ಬಾಲ್ಯ, ಯೌವ್ವನ, ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು, ಪಾಲನೆಯ ಜವಾಬ್ದಾರಿ, ಮಧ್ಯವಯಸ್ಸು ವೃದ್ಧಾಪ್ಯ ಹೀಗೆ ಹತ್ತು ಹಲವು ತಂಗುದಾಣಗಳಲ್ಲಿ ನಿಂತು ಜೊತೆಗೂಡುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾ, ಪಯಣ ಮುಗಿಸಿದ ಜೊತೆಗಾರರನ್ನು ಬೀಳ್ಕೊಡುತ್ತ ಸಾಗುವುದೇ ಬದುಕು.

ಆದ್ದರಿಂದಲೇ ಡಿವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು
ಮದುವೆಗೂ ಮಸಣಕೋ ಹೋಗೆಂದ ಕಡೆಗೋಡು
ಪದ ಕುಸಿಯೇ ನೆಲವಿಹುದು ಮಂಕುತಿಮ್ಮ

ಎಂದು ಹೇಳಿದ್ದಾರೆ.

ಇದರ ತಾತ್ಪರ್ಯ ಬದುಕು ಎಂಬ ಜಟಕಾ ಬಂಡಿಯನ್ನು ಕವಿ ಹೇಳುವ ಸೊ ಕಾಲ್ಡ್ ವಿಧಿ ಇಲ್ಲವೇ ದೇವರು ನಡೆಸುತ್ತಾನೆ. ಮನುಷ್ಯ ಕೇವಲ ನಿಮಿತ್ತ ಮಾತ್ರವಾದ ಕುದುರೆಯಂತೆ. ಆ ವಿಧಿ ಹೇಳಿದಂತೆ ನಾವು ಬದುಕು ತೋರಿದತ್ತ ಸಾಗಬೇಕು, ಅದು ಸಂಭ್ರಮದ ಮದುವೆ ಮನೆಗಾದರೂ ಇರಬಹುದು, ಇಲ್ಲವೇ ಸಾವಿನ ಸೂತಕದ ಮನೆಗಾದರೂ ಇರಬಹುದು. ಪದ ಕುಸಿಯೇ ಅಂದರೆ ದೇಹವು ಕುಸಿದಾಗ(ಮರಣ ಹೊಂದಿದಾಗ) ಮತ್ತೆ ಭೂಮಿ ತಾಯಿಯ ಮಡಿಲು ನಮಗಾಗಿ ಇರುವುದು ಅಂದರೆ ಮರಳಿ ಮಣ್ಣಿಗೆ ಸೇರುತ್ತೇವೆ ಎಂದು.

 ವಿಪರ್ಯಾಸವೆಂದರೆ ಬದುಕಿನ ಈ ಪಯಣದಲ್ಲಿ ಬಾಲ್ಯದಲ್ಲಿ ಯೌವನವನ್ನು, ಯೌವ್ವನದಲ್ಲಿ ಬಾಲ್ಯವನ್ನು, ಮಧ್ಯ ಮತ್ತು ಮುಪ್ಪಿನ ವಯಸ್ಸಿನಲ್ಲಿಯೂ ಹಿಂದಿನ ದಿನಗಳ ಕನವರಿಕೆಯಲ್ಲಿ ನಾವು ಬದುಕನ್ನು ಸವೆಸುತ್ತೇವೆ.

ಬಾಲ್ಯದ ಆಟ ಪಾಠಗಳು ಸ್ನೇಹಿತರ ಒಡನಾಟಗಳು ಸಣ್ಣಪುಟ್ಟ ಹೊಡೆದಾಟಗಳು, ಹೈಸ್ಕೂಲಿಗೆ ಬರುವ ವೇಳೆಗಿನ ಬೆಚ್ಚಗಿನ ಪ್ರೀತಿಯ ಮೊದಲ ಪಾಠಗಳು, ಓದು, ಬರಹ ಪರೀಕ್ಷೆಗಳು, ರಜೆ ಬಂತೆಂದರೆ ಅಜ್ಜಿ ತಾತಂದಿರ ಬಳಿ, ಅತ್ತೆ ಮಾವಂದಿರ ಬಳಿ, ಸಂಬಂಧಿಕರ ಮನೆಗೆ ದೌಡು, ಕಡ್ಡಾಯ ನಿರಾತಂಕದ ರಜಾ ಸವಿಯುವ ಆ ದಿನಗಳು. ಹೊಳೆಯಲ್ಲಿ ಈಜು, ಮಾವಿನ ತೋಟ, ತೆಂಗಿನ ತೋಟ, ಹೊಲಗದ್ದೆಗಳಲ್ಲಿ ಓಡಾಟ. ಈ ಸಮಯದಲ್ಲಿ ಬರುವ ಜಾತ್ರೆಗಳಲ್ಲಿ ದೇವರ ದರ್ಶನದ ಜೊತೆ ಜೊತೆಗೆ ಬೇಕು ಬೇಕಾದ್ದು,ಬೇಡಿದ್ದು ಖರೀದಿಸುವ ಚಪಲ. ಸಣ್ಣ ಪುಟ್ಟ ಪ್ರವಾಸಗಳು. ಊರಿಗೆ ಮರಳಿ ಬರುವಾಗ ಕೊಡಿಸುವ ಹೊಸ ಬಟ್ಟೆಗಳು ಕೈಯಲ್ಲಿ ಇಡುವ ಐದು ಹತ್ತು ರೂಪಾಯಿಗಳು.. ಅಬ್ಬಾ ಅವು ಕೊಡುವ ಸಂತಸವನ್ನು ಇಂದಿನ ಲಕ್ಷಾಂತರ ದುಡಿಮೆಯೂ ಕೊಡಲಾರದು. ಅದೆಂತಹ ಕೇರ್ ಫ್ರೀ ದಿನಗಳು. ಬಾಲ್ಯದ ಒಡನಾಟ, ಹುಡುಗಾಟ, ಕಾದಾಟ ಇವೆಲ್ಲದರ ನಡುವೆಯೂ ಇದ್ದ ಸಮರಸದ ಬದುಕು ವರ್ಣನೆಗೆ ನಿಲುಕದ್ದು. ಮರಳಿ ಊರಿಗೆ ಒಲ್ಲದ ಮನಸ್ಸಿನಿಂದ ಪಯಣಿಸಿ ಮತ್ತೆ ಹೊಸ ತರಗತಿಗೆ ಸೇರಿ ಹೊಸ ಸ್ನೇಹಿತರ ಒಡನಾಟ, ಪಾಠ ಪ್ರವಚನಗಳತ್ತ ಚಿತ್ತ ಹೀಗೆ ಹತ್ತು ಹಲವು ನೆನಪುಗಳು ಮನದಲ್ಲಿ ಮನೆ ಮಾಡಿ ಕುಳಿತಿದ್ದು ನಮಗೆ ಹಿಂದಿನ ದಿನಗಳನ್ನು ಇನ್ನಿಲ್ಲದಂತೆ  ನೆನಪಿಸುತ್ತ ಮನದ ಮೂಲೆಯ ಕದ ತೆರೆದು ಪಿಸುಗುಡುತ್ತವೆ.. ಮತ್ತೆ ಬರಬಾರದೆ ಆ ದಿನಗಳು ಎಂದು.

ಹೀಗೆಯೇ ಹೈಸ್ಕೂಲ್ ಮುಗಿಸಿ ಕಾಲೇಜ ಸೇರಿದಾಗ ಮತ್ತೆ ಹೊಸ ಸ್ನೇಹಿತರು ಸ್ನೇಹಿತೆಯರು, ಅಂತರ ಕಾಲೇಜು ಡಿಬೇಟುಗಳು ಕ್ರೀಡಾಕೂಟಗಳು ಚರ್ಚಾ ಸ್ಪರ್ಧೆಗಳು ಪಾಠದ ಜೊತೆಗೆ ಪಠ್ಯೇತರ ವಿಷಯಗಳು ಕಾಲೇಜಿನ ಮುಕುಟಮಣಿಯಾಗಿ ಸ್ನೇಹಿತರೊಂದಿಗೆ ಓಡಾಡುವ ಸಮಯ. ಬಾಲ್ಯದ ಸ್ನೇಹಿತರೇ ಕಾಲೇಜಿನಲ್ಲಿಯೂ ದೊರೆತರೆ ಅದೆಷ್ಟು ಮುದದ ದಿನಗಳು ನೋಡ ನೋಡುತ್ತಲೇ ವಿದ್ಯಾಭ್ಯಾಸ ಮುಗಿಸಿ ನೌಕರಿಗೆ ಅಲೆದಾಟ ಒಂದು ಉದ್ಯೋಗ ದೊರೆತು ಇನ್ನೇನು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಸಮಯದಲ್ಲಿಯೇ ಸೂಕ್ತ ಸಂಗಾತಿಯ ಹುಡುಕಾಟ ಮದುವೆಯಲ್ಲಿ ಪರ್ಯವಸಾನವಾಗುತ್ತದೆ.  ಮುಂದೆ ಸಂಗಾತಿಯೊಂದಿಗೆ ಒಡನಾಟ, ಓಡಾಟ ಪ್ರೀತಿ ಹುಸಿಮುನಿಸು, ಸಣ್ಣಪುಟ್ಟ ಕಿತ್ತಾಟಗಳು ಮತ್ತೆ ಮಕ್ಕಳು, ಅವರ ಬಾಲ ಲೀಲೆಗಳು, ಸಣ್ಣಪುಟ್ಟ ಪ್ರವಾಸಗಳು, ಪಾರ್ಟಿಗಳು, ಉದ್ಯೋಗದಲ್ಲಿ ಪ್ರಗತಿ ಒಂದೇ ಎರಡೇ ಜೀವನದ ಹಲವು ಮೊದಲುಗಳನ್ನು ಈ ಹತ್ತು ವರ್ಷಗಳಲ್ಲಿ ತಲುಪುವ ಏಕೈಕ ಮಾರ್ಗ. ಯವ್ವನದ ದಿನಗಳಿಂದ ಹಿಡಿದು ಮಕ್ಕಳನ್ನು ಶಾಲೆಗೆ ಸೇರಿಸುವವರೆಗಿನ 20 ರಿಂದ 30ರ ವಯೋಮಾನದ ಈ ಹಂತ ಬದುಕಿನಲ್ಲಿ ಅತ್ಯಂತ ಮುದ ನೀಡುವ ಸಮಯವಾಗಿರುತ್ತದೆ. ಈ ಸಮಯದಲ್ಲಿ ಬಾಲ್ಯದ ಕನವರಿಕೆಗಳು ಇನ್ನೂ ಹೆಚ್ಚು. ನಮ್ಮ ತಂದೆ ತಾಯಿ ನಮ್ಮ ಮಕ್ಕಳ ಆಟ ಪಾಠಗಳನ್ನು ನೋಡುತ್ತಾ ಸಂತಸ ಪಡುತ್ತಲೇ ನಮ್ಮ ಬಾಲ್ಯದ ದಿನಗಳನ್ನು ನೆನೆಸಿ ಹೋಲಿಸುತ್ತಾ ಎಲ್ಲರೂ ಆನಂದದಲ್ಲಿ ಮುಳುಗೇಳುವ ಕಾಲ…. ಮುಂದಿನ ಜೀವನದ ಪಯಣದಲ್ಲಿ ಸುಂದರ ನೆನಪುಗಳನ್ನು ಉಳಿಸುವ ಈ ಕಾಲವನ್ನು ಕಂಡು ಮನ ಕನವರಿಸುತ್ತದೆ….. ಮತ್ತೆ ಬರಬಾರದೆ ಆ ದಿನಗಳು.

ಮೂವತ್ತರ ಸಮಯಕ್ಕೆ ಸಂಗಾತಿ, ಮಕ್ಕಳು ಎಂದು ಸೆಟಲ್ ಆಗುವ ಸಮಯಕ್ಕೆ ನನ್ನದೇ ಆದ ಪುಟ್ಟ ಗೂಡಿರಬೇಕೆಂಬ ಆಲೋಚನೆ ದಂಪತಿಗಳಲ್ಲಿ ಬಂದು ಚಿಕ್ಕ ಪುಟ್ಟ ಊರುಗಳಲ್ಲಿ ಸ್ವಂತದೊಂದು ಜಾಗವನ್ನು ಖರೀದಿಸಿ ಅದರಲ್ಲಿ ತಮಗಿಷ್ಟ ಬಂದಂತೆ ಮನೆ ಕಟ್ಟಿಸಿ, ದೊಡ್ಡ ದೊಡ್ಡ ಶಹರಗಳಲ್ಲಾದರೆ ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಮನೆಯನ್ನು ಅಪಾರ್ಟ್ಮೆಂಟ್ಗಳಲ್ಲಿ ಖರೀದಿಸಿ ಗೃಹಪ್ರವೇಶ ಮಾಡಿ ಸಂತಸಪಡುತ್ತ, ಪ್ರತಿ ತಿಂಗಳು ಮನೆಯ ಕಂತನ್ನು ಕಟ್ಟುತ್ತಾ ಹೊಸ ಕಾರು, ಮಕ್ಕಳ ಹೊಸ ಹೊಸ ವಿಷಯಗಳ ಕಲಿಕೆಗೆ ಹಣ ಖರ್ಚು ಮಾಡುತ್ತಾ ಅಬ್ಬ! ಅದೆಷ್ಟು ದುಡಿದರೂ ಸಾಲದು ಇಂದಿನ ಕಾಲಕ್ಕೆ ಎಂದು ಹಲುಬುತ್ತಾ ಮುಂದಿನ ಹತ್ತರಿಂದ ಹದಿನೈದು ವರ್ಷಗಳನ್ನು ಕಳೆಯುತ್ತೇವೆ. ನಾವು ಚಿಕ್ಕವರಿದ್ದಾಗ ಕೂಡ ನಮ್ಮ ಅಪ್ಪ ಅಮ್ಮ ಅವರ ಮಧ್ಯ ವಯಸ್ಸಿನಲ್ಲಿ ಹೀಗೆಯೇ ಮನೆಯ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗುವಲ್ಲಿ ಒದ್ದಾಡುತ್ತಿದ್ದ ನೆನಪುಗಳು ಬಂದು ಎಲ್ಲರ ಬಾಳಿನಲ್ಲಿಯೂ ಇದು ಸಹಜವಾದ ಪ್ರಕ್ರಿಯೆ ಎಂಬ ನಿರ್ಲಿಪ್ತತೆಯು ಮೈಗೂಡುತ್ತದೆ. ನೋಡ ನೋಡುತ್ತಲೇ ಮಕ್ಕಳು ಬೆಳೆದು ದೊಡ್ಡವರಾಗಿ ಶಾಲಾ ಹಂತವನ್ನು ದಾಟಿ ಕಾಲೇಜು ಕಲಿಕೆಗೆ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಕ್ಕಳ ಯೌವನದ ಸಮಸ್ಯೆಗಳಿಗೆ ನಮ್ಮ ಯೌವನದ ಜೀವನದ ಅನುಭವಗಳು ನೀಡಿದ ಪರಿಹಾರಗಳನ್ನು ಅವರಿಗೆ ಸೂಚಿಸುತ್ತಾ, ಅವರ ಮುಂದೆ ನಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಹೇಳತೊಡಗಿದರೆ ಮನಸ್ಸು ಮುದಗೊಂಡು ಹೇಳುತ್ತದೆ…. ಮತ್ತೆ ಬರಬಾರದೆ ಆ ದಿನಗಳು ಎಂದು.

ಮಧ್ಯ ವಯಸ್ಸು ನಿರಾಳವಾದ ಮನಸ್ಸು… ನೌಕರಿಯಲ್ಲಿ ಭದ್ರತೆ ಇದೆ, ಮನೆ ಕಟ್ಟಿಸಲು ಮಾಡಿದ ಸಾಲದ ಕೊನೆಯ ಕಂತು ತೀರಿದೆ, ಮಕ್ಕಳ ವಿದ್ಯಾಭ್ಯಾಸ ಮುಕ್ತಾಯದ ಹಂತದಲ್ಲಿದೆ. ಎಲ್ಲ ಜವಾಬ್ದಾರಿಗಳು ಒಂದೊಂದೇ ತೀರುತ್ತಿರುವಾಗ ಕೊಂಚ ಮನಸ್ಸು ನಿರಾಳತೆಯನ್ನು ಅನುಭವಿಸುತ್ತಿರುವುದರ ಸಂಕೇತವಾಗಿ ದೇಹ ಕೊಂಚ ಸ್ತೂಲವಾದರೆ, ಕಣ್ಣಿಗೆ ಕನ್ನಡಕ, ತಲೆಯಲ್ಲಿ ಬೆಳ್ಳಿ ಕೂದಲು ಮುಖದಲ್ಲಿ ಕೊಂಚ ಮುದುರು, ದೇಹ ತುಸು ಕುಗ್ಗಿದಂತೆ ತೋರುತ್ತದೆ. ವೃದ್ಧ್ಯಾಪ್ಯದ ಮೊದಲ ಮೆಟ್ಟಿಲು ಏರುತ್ತಿದ್ದು ನಿಧಾನವಾಗಿ ಒತ್ತಡ ಭರಿತ ಜೀವನದ ಫಲವೋ ಇಲ್ಲವೇ ವಯೋ ಸಹಜವಾದ ರಕ್ತದೊತ್ತಡ, ಮಧುಮೇಹ, ಥೈರಾಯಿಡ್ ನಂತಹ ಕಾಯಿಲೆಗಳು ತಮ್ಮ ಪ್ರತಾಪವನ್ನು ತೋರಲು ದೇಹವೆಂಬ ದೇಗುಲದ ಹೊಸ್ತಿಲಲ್ಲಿ ಹೊಂಚು ಹಾಕುತ್ತಿರುತ್ತವೆ. ಒಮ್ಮಿಂದೊಮ್ಮೆಲೆ ನಿಧಾನವಾಗುವ ನಡಿಗೆ, ಚಕ್ಕನೆ ಹಿಡಿದುಕೊಳ್ಳುವ ಮೊಣಕಾಲು, ಆಗಾಗ ಕಾಡುವ ಬೆನ್ನು ಮತ್ತು ಸೊಂಟ ನೋವುಗಳು ಇನ್ನು ಮೊದಲಿನಂತೆ ಓಡಾಡಲು ಸಾಧ್ಯವಿಲ್ಲ ಎಂದು ಇಶಾರೆ ಮಾಡಿ ನಗುತ್ತವೆ. ಆಗೆಲ್ಲ ಈ ಹಿಂದೆ ಬಾಲ್ಯದಲ್ಲಿ, ಯೌವ್ವನದಲ್ಲಿ ಓಡಾಡಿದ ಕುಣಿದಾಡಿದ ಎರಡೆರಡು ಮೆಟ್ಟಿಲು ಒಟ್ಟಿಗೆ ಏರಿದ, ನಾಲ್ಕು ನಾಲ್ಕು ಮೆಟ್ಟಿಲುಗಳನ್ನು ಹಾರಿ ಇಳಿದ ನೆನಪು ಮರುಕಳಿಸಿ ಮನ ಮತ್ತೆ ಮತ್ತೆ ಬಯಸುತ್ತದೆ…. ಮರಳಿ ಬರಬಾರದೇ ಆ ದಿನಗಳು ಎಂದು.

50ರ ನಂತರ ಮಕ್ಕಳ ಮದುವೆಯ ಸಂಭ್ರಮ, ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಸಂತಸ, ಮೊಮ್ಮಕ್ಕಳೊಂದಿಗೆ ತಾವು ಮಕ್ಕಳಂತೆ ಆಡಿ ನಲಿದಾಡುವ, ಅವರ ಆಟ ಪಾಠಗಳಲ್ಲಿ ಜೊತೆಯಾಗಿ ಆ ಮಕ್ಕಳ ಸಣ್ಣಪುಟ್ಟ ಕೆಲಸಗಳನ್ನು  ನಿರ್ವಹಿಸುತ್ತಾ ರಿಟೈರ್ ಆಗುವ ಹೊತ್ತಿಗೆ ಸಂಜೆ ಸಂಗಾತಿಯೊಂದಿಗೆ ಒಂದು ವಾಕಿಂಗ್, ದೇವಸ್ಥಾನ, ಸ್ನೇಹಿತರೊಂದಿಗೆ ಹರಟೆ, ಪುರಾಣ, ಪ್ರವಚನಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದು. ಮಕ್ಕಳನ್ನು ಶಾಲೆಗೆ ಕಳಿಸುವುದು, ಕರೆತರುವುದು, ಮನೆಗೆ ತರಕಾರಿ ತಂದು ಕೊಡುವುದು ಮುಂತಾದ ಕೆಲಸಗಳು ಗಂಡಸರ ಪಾಲಿಗೆ, ಹೆಣ್ಣು ಮಕ್ಕಳಾದರೆ ಅಡುಗೆ ಮನೆಯಲ್ಲಿ ಸೊಸೆಗೆ ಸಹಾಯ ಮಾಡುವುದು ಮೊಮ್ಮಕ್ಕಳ ಪಾಲನೆಯಲ್ಲಿ ಸೊಸೆಗೆ ಜೊತೆಗೂಡುವುದು, ಪುಟ್ಟ ಕೈದಾಟ ಮಾಡಿಕೊಂಡು ಹೂವು ಮತ್ತು ತರಕಾರಿಯ ಗಿಡಗಳನ್ನು ಬೆಳೆಸುವುದು,ಹಾಡು, ಹಸೆ, ಪೂಜೆ ಪುನಸ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಹೀಗೆ ಹತ್ತು ಹಲವು ಕೆಲಸಗಳನ್ನು ನಿರ್ವಹಿಸುತ್ತಾ ಸಂಜೆಯಾದರೆ ನೀಟಾಗಿ ತಲೆ ಬಾಚಿ ಮುಖ ತೊಳೆದು ಕೊಂಚ ಕ್ರೀಮ್ ಹಚ್ಚಿ ಪೌಡರ್ ಹಾಕಿ ದೇವರಿಗೆ ದೀಪ ಮುಡಿಸಿ ಪತಿಯ ಬರುವಿಗಾಗಿ ಕಾಯುವುದು, ಬಂದೊಡನೆ ಚಹಾ ಕಾಫಿ ಮಾಡಿಕೊಡುತ್ತಾ ಅಂದಿನ ದಿನದ ಕುರಿತು ಮಾತನಾಡುವುದು. ಮತ್ತೆ ಮಕ್ಕಳು ಮೊಮ್ಮಕ್ಕಳ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ತಮ್ಮ ಮೊಮ್ಮಕ್ಕಳ ಮುಂದೆ ತಮ್ಮ ಮಕ್ಕಳು ಮಾಡುತ್ತಿದ್ದ ಬಾಲ್ಯದ ಚೇಷ್ಟೆಗಳನ್ನು, ಆಟ ಹುಡುಗಾಟಗಳನ್ನು ನೆನಪಿನ ಪದರಗಳಿಂದ ಹೊರತೆಗೆದು ಕಣ್ಣರಳಿಸಿ ಹೇಳುತ್ತಾ ಹೋದರೆ ಮತ್ತೆ ಮತ್ತೆ ಮನಸ್ಸಿಗೆ ಬರುವುದು ಒಂದೇ ….ಮರಳಿ ಬರಬಾರದೇ ಆ ದಿನಗಳು ಎಂದು.

ಸ್ನೇಹಿತರೆ, ಪ್ರತಿಯೊಬ್ಬರ ಜೀವನವೂ ವಿಶಿಷ್ಟ. ಈ ಸೃಷ್ಟಿಯ ಯಾವುದೇ ಒಂದು ಜೀವಿಯು ಯಕಶ್ಚಿತ್ ಅಲ್ಲ. ಅವರವರ ಜೀವನ ಅವರವರಿಗೆ ಮಹತ್ತರವಾದದ್ದು. ನಮ್ಮ ನಮ್ಮ ಜೀವನದ ಬಹುಮುಖ್ಯ ಆಗುಹೋಗುಗಳಿಗೆ ನಾವು ಮಾತ್ರ ಕಾರಣ. ಹುಟ್ಟಿನಿಂದ ಸಾಯುವವರೆಗೆ ನಮ್ಮೊಡನೆ ಇರುವುದು ನಾವು ಮಾಡಿದ ಕಾರ್ಯಗಳು, ಅವುಗಳ ಫಲಿತಾಂಶ ಮತ್ತು ಅವುಗಳ ನೆನಪುಗಳು. ಆ ನೆನಪುಗಳು ನಮ್ಮನ್ನು ಚೇತೋಹಾರಿಯಾಗಿಸುವಂತೆ
ಬದುಕುವ ಜವಾಬ್ದಾರಿ ಮತ್ತು ಕರ್ತವ್ಯಗಳು ನಮ್ಮವು. ನಮ್ಮ ಹಿಂದಿನ ದಿನಗಳನ್ನು ನೆನೆದು ಸಂತಸಪಟ್ಟು ಮತ್ತೆ ಮರಳಿ ಆ ದಿನಗಳು ಬರಬಾರದೇ ಎಂದು ಆಶಿಸುವಂತಹ ಜೀವನ ನಮ್ಮೆಲ್ಲರದೂ ಆಗಿರಲಿ ಎಂಬ ಆಶಯದೊಂದಿಗೆ


Leave a Reply

Back To Top