ಕವಿ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಬೇಂದ್ರೆಯವರ ಮಾನವೀಯ ಮುಖ.
ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ತಮ್ಮ ‘ನಾಕುತಂತಿ’ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಮಾನವೀಯ ಗುಣಗಳ ಆಗರವಾಗಿದ್ದರು. ತನ್ನೊಂದಿಗೆ ಒಡನಾಡುವ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಮಾನವೀಯ ಪ್ರಜ್ಞೆ ಅನನ್ಯ, ಅದ್ಭುತ.
ಬಹುಶಹ ಡಿವಿಜಿಯವರು ಬರೆದ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಕಗ್ಗದ ಸಾಲುಗಳು ಬೇಂದ್ರೆಯವರಿಗೆ ನೂರು ಪ್ರತಿಶತ ಒಪ್ಪುವ ಮಾತುಗಳಾಗಿವೆ. ತನ್ನ ದೈನಂದಿನ ಬದುಕಿನಲ್ಲಿ ಬಂದು ಹೋಗುವ ಎಲ್ಲರೊಂದಿಗೆ ಅತ್ಯಂತ ಆತ್ಮೀಯ ಬಂಧವನ್ನು ಹೊಂದಿದ್ದರು ಬೇಂದ್ರೆ. ಅವರ ಅಕ್ಕರೆಯ ಸಕ್ಕರೆಮಾತುಗಳು ನೊಂದ ಮನಕ್ಕೆ ತಂಪನೆರೆಯುತ್ತಿದ್ದವು.
ಬೇಂದ್ರೆಯವರ ಅಂತಹ ಮಾನವೀಯ ಅಂತಕರಣದ ಕೆಲ ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳುವ ಸದವಕಾಶ ನನ್ನದು.
ವರ್ಷಕ್ಕೊಮ್ಮೆ ತನ್ನ ಮನೆಗೆ ಬಂದು ಭಿಕ್ಷೆ ಬೇಡುತ್ತಿದ್ದ ಓರ್ವ ಭಿಕ್ಷುಕ, ಆ ದಿನ ತನ್ನ ಮನೆ ಬಾಗಿಲಿಗೆ ಬಂದು ಕುಳಿತಾಗ ಕಳೆದ ಎರಡು ವರ್ಷಗಳಿಂದ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು ಬೇಂದ್ರೆ. ಅದಕ್ಕೆ ಆ ಭಿಕ್ಷುಕ ಕಳೆದ ವರ್ಷ ತನ್ನ ತಾರುಣ್ಯದ ಮಗನನ್ನು ಕಳೆದುಕೊಂಡದ್ದಾಗಿಯೂ ಅದೇ ನೆವದಲ್ಲಿ ತನ್ನ ಪತ್ನಿಯು ಮಾನಸಿಕವಾಗಿ ಕೊರಗಿ ಆರು ತಿಂಗಳ ಹಿಂದೆ ತೀರಿಕೊಂಡಳು, ತೀವ್ರವಾಗಿ ನೊಂದ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿ ಅದನ್ನು ಕಾರ್ಯಗತಗೊಳಿಸುವಾಗ ಬಿದ್ದು ಪೆಟ್ಟು ಮಾಡಿಕೊಂಡೆ. ಆದ್ದರಿಂದ ಮನೆಯಲ್ಲಿ ಉಳಿಯಬೇಕಾಯಿತು ಎಂದು ತನ್ನ ಅಸಹಾಯಕತೆಯನ್ನು ಹೇಳಿದನು. ಇದನ್ನು ಕೇಳಿದ ಬೇಂದ್ರೆಯವರು “ಅವರವರ ಪಾಳಿ ಬಂದಾಗ ಅವರವರು ಹೋಗ್ತಾರ ಹುಚ್ಚಪ್ಪ!!… ನಮ್ ಪಾಳಿ ಬಂದಾಗ ನಾವು ಹೋಗೂದ. ಬದುಕು ಭಾಳ ದೊಡ್ಡದು. ಆತ್ಮಹತ್ಯೆ ಮಾಡ್ಕೋತೀನಿ ಅನ್ನೋ ವಿಚಾರ ಬಹಳ ಸಣ್ಣದು. ಇನ್ನೊಮ್ಮೆ ಹಿಂಗ ಮಾಡಬ್ಯಾಡ” ಎಂದು ತಿಳಿ ಹೇಳಿ ಆತನಿಗೆ ಏನು ಬೇಕೆಂದು ಕೇಳಿದರು. ಅದಕ್ಕೆ ಆ ಭಿಕ್ಷುಕ ಪ್ರತಿವರ್ಷದಂತೆ ತನಗೆ 5 ರೂಗಳನ್ನು ಕೊಡಬೇಕು ಎಂದು ಹೇಳಿದಾಗ ಮನೆಯ ಒಳಗೆ ಹೋದ ಬೇಂದ್ರೆ ಅವರು ಹತ್ತು ರೂಗಳನ್ನು ತಂದು ಆತನ ಕೈಗಿಟ್ಟು ನೀನು ಎರಡು ವರ್ಷ ಬಂದಿಲ್ಲ ಅದಕ್ಕ ಎರಡು ವರ್ಷದ ಬಾಬತ್ತು ಹತ್ತು ರೂಪಾಯಿ ತಗೋ… ಇನ್ನು ಮ್ಯಾಲೆ ಸಾಯೋ ಯೋಚನಿ ಮಾಡಬ್ಯಾಡ ಎಂದು ಹೇಳಿ ಕಳುಹಿಸಿದರು(ಆ ಸಮಯದಲ್ಲಿ ಬೇಂದ್ರೆಯವರು ನಿರುದ್ಯೋಗಿಯಾಗಿದ್ದು ಅತ್ಯಂತ ಸಂಕಷ್ಟಕರ ಜೀವನವನ್ನು ಸಾಗಿಸುತ್ತಿದ್ದರು)
ಮತ್ತೊಂದು ಪ್ರಕರಣದಲ್ಲಿ ರಸ್ತೆಯಲ್ಲಿ ಸಾಗುವಾಗ ಹರಿದ ತನ್ನ ಚಪ್ಪಲಿಯನ್ನು ರಿಪೇರಿ ಮಾಡಿಸಲು ರಸ್ತೆಯ ಆ ಬದಿಯಲ್ಲಿ ಕುಳಿತ ಚಪ್ಪಲಿ ರಿಪೇರಿಯವನ ಬಳಿ ಬಂದ ಬೇಂದ್ರೆಯವರು ತಮ್ಮ ಚಪ್ಪಲಿ ರಿಪೇರಿ ಮಾಡಲು ಕೊಟ್ಟು ಲೋಕಾಭಿರಾಮವಾಗಿ ಆತನ ಜೊತೆ ಮಾತನಾಡಲಾರಂಭಿಸಿದರು. ರಿಪೇರಿಯವನ ಮನೆ, ಹೆಂಡತಿ, ಮಕ್ಕಳು, ವ್ಯಾಪಾರ ಮತ್ತು ದಿನದ ಸಂಪಾದನೆಯ ಕುರಿತು ಆತನೊಂದಿಗೆ ಮಾತನಾಡಿದರು. ಅದುವರೆಗೂ ಬಿಸಿಲಿಗೆ ಕಾಲು ಸುಡಬಾರದೆಂದು ಚಪ್ಪಲಿ ರಿಪೇರಿಯವನು ಬೇಂದ್ರೆಯವರಿಗೆ ಕೊಟ್ಟ ಬೇರೊಂದು ಜೋಡಿ ಚಪ್ಪಲಿಯನ್ನು ಮೆಟ್ಟಿ ನಿಂತಿದ್ದ ಬೇಂದ್ರೆಯವರು ಚಪ್ಪಲಿ ರಿಪೇರಿ ಮಾಡುತ್ತಿದ್ದ ಆತನ ತಲೆಯ ಮೇಲೆ ತಮ್ಮ ಛತ್ರಿಯನ್ನು ಬಿಡಿಸಿ ಹಿಡಿದಿದ್ದರು. ಹೀಗೇಕೆ ಮಾಡುತ್ತಿರುವಿರಿ ಎಂದು ರಿಪೇರಿಯಾತನ ಪ್ರಶ್ನೆಗೆ ಹೆಂಡ್ರು ಮಕ್ಕಳು ಇರಾಂವ ಈ ಬಿಸಿಲಾಗ ನೀ ಕೆಲಸ ಮಾಡಕ್ಕತ್ತಿ.. ಹಿಂಗ್ ಬಿಸಲಾಗ ಕುಂತ್ ಕೆಲ್ಸ ಮಾಡಿದ್ರ ನಿನ್ ಪರಿಸ್ಥಿತಿ ಏನಾಕ್ಕತಿ ಎಂದು ಕಕ್ಕುಲಾತಿಯಿಂದ
ಕೇಳಿದ್ದಲ್ಲದೆ, ಆ ದಿನದ ಆತನ ಸಂಪಾದನೆ 10 ರೂಗಳನ್ನು ಆತನ ಕೈಗಿಟ್ಟು…. ಇಗೋ ನಿನ್ನ ಈ ದಿನದ ಸಂಪಾದನೆ ಜಲ್ದಿ ಮನೀಗೆ ಹೋಗಿ ಛತ್ರಿ ತಗೊಂಡು ಬಂದು ಕುಂತ್ಕೋ ಎಂದು ಪ್ರೀತಿ ಪೂರ್ವಕ ಒತ್ತಾಯ ಮಾಡಿದರು. ಜೊತೆಗೆ ಕುಡಿದು ಹಣವನ್ನು ಹಾಳು ಮಾಡಬೇಡ ಎಂದು ಆಗ್ರಹಿಸಿದರು.
ಮತ್ತೊಂದು ಬಾರಿ ತನ್ನ ಪಿ ಹೆಚ್ ಡಿ ಯ ಥೀಸಿಸ್ ಅನ್ನು ಯುನಿವರ್ಸಿಟಿಗೆ ಸಬ್ಮಿಟ್ ಮಾಡಿದ ವ್ಯಕ್ತಿಯೊಬ್ಬರು ಹಲವಾರು ತಿಂಗಳುಗಳೆ ಕಳೆದರೂ ಪ್ರಬಂಧ ಮಂಡನೆ ನಂತರ ಯಾವುದೇ ಪ್ರಗತಿ ಯಾಗಿಲ್ಲ ಎಂದು ಡಿಪಾರ್ಟ್ಮೆಂಟಿನ ಹೆಡ್ ಅವರನ್ನು ಕೇಳಿದಾಗ ಅವರಿಗೆ ಗೊತ್ತಾದದ್ದು ಅದನ್ನು ಅನುಮೋದಿಸಲಿದ್ದ ಬೇಂದ್ರೆಯವರು ಇನ್ನು ವಿಶ್ವವಿದ್ಯಾನಿಲಯಕ್ಕೆ ಆ ಥೀಸಿಸ್ ಅನ್ನು ಅನುಮೋದಿಸಿ ಮರಳಿ ಕಳುಹಿಸಿಲ್ಲ ಎಂದು.
ಮುಂದೆ ಕಾರ್ಯನಿಮಿತ್ತ ಬೇಂದ್ರೆಯವರು ವಾಸಿಸುತ್ತಿದ್ದ ಸೊಲ್ಲಾಪುರಕ್ಕೆ ಭೇಟಿ ನೀಡಿದ ಆ ವ್ಯಕ್ತಿ ಬೇಂದ್ರೆಯವರ ಮನೆಗೆ ಭೇಟಿ ನೀಡಿ ತಾನು ಧಾರವಾಡದಿಂದ ಬಂದಿದ್ದೇನೆ ಎಂದು ಹೇಳುತ್ತಲೇ ಆತನನ್ನು ಒಳ ಕರೆದು ಸಾಕಷ್ಟು ಮಾತನಾಡಿದರು ಬೇಂದ್ರೆ. ಕಡೆಗಳಿಗೆಯಲ್ಲಿ ಅತ್ಯಂತ ಸಂಕೋಚದಿಂದ ಆ ವ್ಯಕ್ತಿ ತನ್ನ ಪ್ರಬಂಧದ ಕುರಿತು ವಿಚಾರಿಸಿದಾಗ ಅಯ್ಯೋ!! ಈಗಾಗಲೇ ಅದನ್ನು ಯುನಿವರ್ಸಿಟಿಗೆ ಮರಳಿ ಕಳುಹಿಸಿದ್ದೇನಲ್ಲ…. ಅವರಿಗಿನ್ನೂ ತಲುಪಿಲ್ಲನು ಹಂಗಾರ? ನೋಡೋಣ ಬರ್ರೀ ಎಂದು ತಮ್ಮ ಕೋಣೆಗೆ ಕರೆದೊಯ್ದು ಹುಡುಕಲಾರಂಭಿಸಿದರು. ಬಹಳಷ್ಟು ಸಮಯದ ನಂತರ ಹಲವಾರು ಪುಸ್ತಕಗಳ ಅಡಿಯಲ್ಲಿ ದೊರೆತ ಅವರ ಪ್ರಬಂಧದ ಪ್ರತಿಯನ್ನು ಅಯ್ಯೋ ಇಲ್ಲೇ ಐತೆ ನೋಡರಿ… ಹಂಗಾರ ನಾ ಕಳ್ಸಿಲ್ಲೇನು ಎಂದು ಹೇಳುತ್ತಾ ಇದನ್ನು ನೀವೇ ಖುದ್ದಾಗಿ ಪೋಸ್ಟ್ ಆಫೀಸಿಗೆ ಹೋಗಿ ರಿಜಿಸ್ಟರ್ ಪೋಸ್ಟ್ ಮೂಲಕ ಯುನಿವರ್ಸಿಟಿಗೆ ಕಳುಹಿಸಿ…. ಮತ್ ನಾ ಮರೆತುಬಿಟ್ಟೇನು ಎಂದು ಅವರಿಗೇ ಆ ಪ್ರತಿಯನ್ನು ಮರಳಿಸಿದರು. ಇದು ಅವರ ಸರಳತೆ. ಬಿಂಕ ಬಿಗುಮಾನಗಳಿಲ್ಲದೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ನಿಸ್ಪ್ರಹತೆ ಬೇಂದ್ರೆ ಅವರದಾಗಿತ್ತು.
ಬೇಂದ್ರೆ ಅವರ ಬದುಕೇ ಒಂದು ಸರಳ ಜೀವನ ಗಾಥೆ. ಅಂತಹ ಅದ್ಭುತ ವ್ಯಕ್ತಿ ಈ ಶತಮಾನದಲ್ಲಿ ಬದುಕಿದ್ದರು ಮತ್ತು ಎಲ್ಲಾ ಕಷ್ಟಗಳ ನಡುವೆಯೇ ನಗುನಗುತ್ತಾ ಇರಬೇಕು
‘ನಕ್ಕು ಸಾಯಿರಿ.. ನಕ್ಕು ಸತ್ತರೆ ನಕ್ಷತ್ರ ಆಕ್ಕಿರೀ ‘
ಎಂದು ಹೇಳಿ ಅಂತೆಯೇ ಬದುಕನ್ನು ಸಾಗಿಸಿದ ಬೇಂದ್ರೆಯವರ ಬದುಕು ಅನುಕರಣೀಯ.
ವೀಣಾ ಹೇಮಂತ್ ಗೌಡ ಪಾಟೀಲ್