ಕೊರೋನಾ ನಂತರದಲ್ಲಿ ಬದಲಾದ ಆತಂಕಕಾರಿ ಜೀವನ ಶೈಲಿ!ಸುವಿಧಾ ಹಡಿನಬಾಳ ಅವರ ವಿಶೇಷ ಲೇಖನ

ಲೇಖನ ಸಂಗಾತಿ

ಕೊರೋನಾ ನಂತರದಲ್ಲಿ

ಬದಲಾದ ಆತಂಕಕಾರಿ

ಜೀವನ ಶೈಲಿ!

ಸುವಿಧಾ ಹಡಿನಬಾಳ

ಕೊರೋನಾ ಕೇವಲ ಮೂರ್ನಾಲ್ಕು ವರ್ಷದಲ್ಲಿ ನಿರ್ದಯವಾಗಿ ಲಕ್ಷಾಂತರ ಜನರನ್ನು ಸಾವಿನ ಮನೆಗೆ ಅಟ್ಟುವುದರೊಂದಿಗೆ ಜಗತ್ತಿಗೆ ಮಾನವೀಯತೆಯ ಒಂದು ಹೊಸ ಪಾಠ ಕಲಿಸಿರಬಹುದೆಂಬ ನಿರೀಕ್ಷೆಯಿತ್ತು ;ಆದರೆ ಹಾಗೇನು ಆದಂತಿಲ್ಲ . ಮತ್ತದೇ ಹಳೆಯ ಸಾಮಾಜಿಕ ವಿಘಟನೆಗಳು, ಪರಿಸರ ಮಾಲಿನ್ಯ, ದೌರ್ಜನ್ಯಗಳು ಎಲ್ಲವೂ ಹಿಂದಿನಂತೆಯೇ ಮುಂದುವರಿದಿವೆ.ಮರೆವು ಮನುಷ್ಯನ  ಸಹಜ ಗುಣ ತಾನೆ? ಇದಕ್ಕಿಂತ ಮಿಗಿಲಾಗಿ ನಮ್ಮ ಜೀವನ ಶೈಲಿ ಒಂದು ಅರ್ಥದಲ್ಲಿ ಅತ್ಯಂತ ಕ್ಷಿಪ್ರಕಾಲದಲ್ಲಿ ಒಂದು ಆತಂಕಕಾರಿ ಹೊಸ ಬದಲಾವಣೆಗೆ ತೆರೆದುಕೊಂಡಿದೆ!   ಬದಲಾವಣೆ ಆಶಾದಾಯಕ ಆಗಿರದೆ ಆತಂಕಕಾರಿ ಆಗಿರುವುದು ವಿಷಾದನೀಯ.

ಅತ್ಯಂತ  ಆಘಾತಕಾರಿ ಎಂದರೆ ಹೆಚ್ಚುತ್ತಿರುವ ಹೃದಯಘಾತಗಳು. ಅದರಲ್ಲಿಯೂ ಅತ್ಯಂತ ಚಿಕ್ಕ ಪ್ರಾಯದಲ್ಲಿ ಮದುವೆ ಮಂಟಪದಲ್ಲಿ, ಆಟದ ಮೈದಾನದಲ್ಲಿ  ಬಸ್ಟ್ಯಾಂಡಿನಲ್ಲಿ ,ಚಲಿಸುತ್ತಿದ್ದ ಬಸ್ಸಿನಲ್ಲಿ, ಮಲಗಿದಲ್ಲಿಯೇ ಏಕಾಏಕಿ ಚಿರ ನಿದ್ರೆಗೆ ಜಾರುತ್ತಿರುವ ಅಂಕಿ ಸಂಖ್ಯೆಗಳು ನಿಜಕ್ಕೂ ನಿದ್ದೆಗೆಡಿಸುತ್ತವೆ .ಹಿಂದೆಯೂ  ಹೃದಯಘಾತಗಳು ನಡೆದಿಲ್ಲವೆಂದಲ್ಲ ಆದರೆ ಕರೋನ ನಂತರದಲ್ಲಿ   ಯುವ ಜನಾಂಗದಲ್ಲಿ ಈ ಪ್ರಮಾಣ  ಹೆಚ್ಚುತ್ತಿರುವುದು ಆತಂಕಕಾರಿ… ವಜ್ರಕಾಯದಂತ ಯುವಕರೂ ಸಹ ಯಾವ ಸಣ್ಣ ಸುಳಿವನ್ನು ನೀಡದೆ ಏಕಾಏಕಿ  ರಾತ್ರಿ ಮಲಗಿದವರು ಬೆಳಗ್ಗೆ ಏಳದೆ ಹೊರಟು ಹೋಗುವುದೆಂದರೆ ಅದೆಂತ ದುರಂತ!  ಈ ಬಗ್ಗೆ ಅತ್ಯಂತ  ಕೂಲಂಕಶವಾದ ಅಧ್ಯಯನ ಸಂಶೋಧನೆ ಅಗತ್ಯ ಎಂದೆನಿಸುತ್ತದೆ.

 ಕೊರೊನ ಕಾಲದಲ್ಲಿ ಬಹುಶಹ ಮೊಬೈಲ್ ಅನ್ನುವ ಮಾಯಾಂಗನೆಯ ಅವಲಂಬನೆ ಅತಿ ಹೆಚ್ಚಾಗಿದ್ದಿದ್ದಂತೂ ಸುಳ್ಳಲ್ಲ… ಆ ಸಂಧಿಗ್ಧ ಕಾಲದಲ್ಲಿ ಮೊಬೈಲ್ ಇಲ್ಲದಿದ್ದರೆ ಜನಸಾಮಾನ್ಯರ ಮನಸ್ಥಿತಿ ಸ್ಥಿಮಿತದಲ್ಲಿರುತ್ತಿರಲಿಲ್ಲವೇನೋ!  ಬಹುತೇಕ ಮನೆಯಲ್ಲಿ ಕುಳಿತ ಅನೇಕರಿಗೆ ಕುಳಿತಲ್ಲಿಯೇ ಎಲ್ಲವನ್ನು ತೆರೆದಿಟ್ಟ ಮೊಬೈಲ್ ಆಕರ್ಷಣೆ ಅತಿ ಹೆಚ್ಚಾಗಿದ್ದು ಸಹಜವೇ. ಹಿಂದೆಲ್ಲ ಮನೆಯಲ್ಲಿ ಯಜಮಾನ, ಕಾಲೇಜು ಹಂತದ ವಿದ್ಯಾರ್ಥಿಗಳ ಕೈಗೆ ಮಾತ್ರ ಸಿಗುತ್ತಿದ್ದ ಮೊಬೈಲ್ ಇಂದು ಎಳೆ ಬಾಲರ ಕೈಗೂ ಸಿಗುವಂತಾಗಿದೆ. ಆನ್ಲೈನ್ ಪಾಠದ ನೆಪದಲ್ಲಿ ತಾಯಂದಿರ ಕೈಗೆ ಬಂದ ಮೊಬೈಲ್ ಇಂದು ಪ್ರಾಥಮಿಕ ಶಾಲೆ ಓದುವ ಮಕ್ಕಳ ಕೈಯಲ್ಲಿ ಸುಲಭವಾಗಿ ಹರಿದಾಡುತ್ತಿದೆ .ಹೀಗಾಗಿ  ಪ್ರಶ್ನೋತ್ತರ , ಪ್ರಬಂಧ ಎಲ್ಲದಕ್ಕೂ ಮೊಬೈಲ್ ಅವಲಂಬನೆ ಹೆಚ್ಚಾಗಿ ಸ್ವಂತಿಕೆ ಕುಸಿಯುತ್ತಿದೆ ;ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ; ಶಾಲೆಯಲ್ಲಿ ಶಿಕ್ಷಕರ ಬೋಧನೆ, ನೀರಸ ಅನ್ನಿಸುತ್ತಿದೆ; ಪಠ್ಯಪುಸ್ತಕಗಳಲ್ಲಿ ಉತ್ತರ ಲಭ್ಯವಿದ್ದರೂ ಮೊಬೈಲ್ ನೋಡಿ ಬರೆಯುವ,  ಒಬ್ಬರು ಬರೆದದ್ದನ್ನು ಮತ್ತೊಬ್ಬರಿಗೆ ಶೇರ್ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.  ಅಷ್ಟೇ ಅಲ್ಲ ಮಕ್ಕಳ ಕೈಗೆ ಮೊಬೈಲ್ ಬಂದ ಮೇಲೆ ಮಕ್ಕಳು ಏನೇನು ಮಾಡುತ್ತಾರೆ , ಏನೇನೆಲ್ಲ ನೋಡುತ್ತಾರೆ ಎಂಬ ಬಗ್ಗೆ ಪಾಲಕರು ನಿಗಾ ಇಡದೆ ಅನೇಕ ಆತಂಕಕಾರಿ ಘಟನೆಗಳು ಸಂಭವಿಸುತ್ತಿವೆ. ದೈಹಿಕ  ಚಟುವಟಿಕೆಗಳು ಕಡಿಮೆಯಾಗಿವೆ. ಮಕ್ಕಳು ಸಣ್ಣ ಪ್ರಾಯದಲ್ಲಿ ದಾರಿ ತಪ್ಪುವ ಸಾಧ್ಯತೆ ಹೆಚ್ಚುತ್ತಿದೆ …ಈ ಬಗ್ಗೆ ಹಾಲಕರು ತಮಗೆ ತಾವೇ ನಿಯಂತ್ರಣವಹಿಸಿ ,ಅತಿ ಜಾಗರೂಕರಾಗಿ ಮಕ್ಕಳ ಮುಂದೆ ಮೊಬೈಲ್ ಬಳಸುವ ಮತ್ತು ಮಕ್ಕಳ ಬಳಕೆಗೆ ಒದಗಿಸುವ ಜಾಣ್ಮೆಯನ್ನು ನಿರ್ವಹಿಸಬೇಕಾಗಿದೆ.

ಇಂದು ಎಲ್ಲ ಇಲಾಖೆಗಳಲ್ಲಿ ಸರ್ಕಾರದ  ಯೋಜನೆಗಳು ನೇರವಾಗಿ ಫಲಾನುಭವಿಗಳನ್ನು ತಲುಪುವ ಉದ್ದೇಶದಿಂದ ಡಿಜಿಟಲ್ಲಿಕರಣಕ್ಕೆ ,ಪೇಪರ್ ಲೆಸ್ ದಾಖಲಿಕರಣಕ್ಕೆ ಒತ್ತು ನೀಡಲಾಗುತ್ತಿದೆ;  ಇದು ಸಂತಸದ ವಿಚಾರವೇ ಆದರೆ ಶಾಲೆಗಳಲ್ಲಿ ! ಡಿಜಿಟಲೀಕರಣ ಅಗತ್ಯ ಇಲ್ಲವೆಂದಲ್ಲ;  ಆದರೆ ಇಂದು  ಪಾಠ ಬೋಧನೆ ಮಾಡಬೇಕಾದ ಶಿಕ್ಷಕರು ದಿನವಿಡೀ ಮೊಬೈಲ್ ನೋಡುತ್ತಾ ಕಾಲ ಕಳೆವ ಪರಿಸ್ಥಿತಿ ಬಂದಿರುವುದು ತುಂಬಾ ಆತಂಕಕಾರಿ ದುರಂತ… ಮಕ್ಕಳಿಗೆ ಮೊಬೈಲ್ ನೋಡಬೇಡಿ ಎಂದು ಹೇಳುವ ನಾವುಗಳು ಬೋಧನಾ ಅವಧಿಯಲ್ಲಿ ತರಬೇತಿಗೆ ಹಾಜರಾಗಬೇಕಾಗುತ್ತದೆ ; ಮೀಟಿಂಗ್ ಗೆ ಜಾಯಿನ್ ಆಗಬೇಕಾಗುತ್ತದೆ, ಗೂಗಲ್  ಫಾರ್ಮ್ ತುಂಬ ಬೇಕಾಗುತ್ತದೆ ದಿನವೂ ಕೇಳುವ ಎಷ್ಟೋ ಮಾಹಿತಿಗಳನ್ನು, ದಿನದ ಅಂಕೆ ಸಂಖ್ಯೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ , ಮುಖ್ಯ ಶಿಕ್ಷಕರಿಗೆ ಮೊಬೈಲ್ ಬಿಟ್ಟು ಒಂದು ಗಂಟೆಯೂ  ಇರಲಾರದ ಪರಿಸ್ಥಿತಿ! ಎಲ್ಲವೂ ಅತಿ ತುರ್ತು !! ಮುಖ್ಯ ಶಿಕ್ಷಕರು ಇದೆಲ್ಲವನ್ನು ನಿಭಾಯಿಸಲು ಅಸಮರ್ಥರಾಗಿದ್ದಲ್ಲಿ ಅವರಿಗೆ ಸಹಾಯಕರಾಗಿ ಇನ್ನೋರ್ವ ಶಿಕ್ಷಕರು ಈ ಎಲ್ಲ ಕೆಲಸಗಳನ್ನು ಮಾಡುತ್ತಿರುತ್ತಾರೆ .ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು  ಆನ್ಲೈನ್ ಮಾಹಿತಿಯನ್ನು ಅಪೇಕ್ಷಿಸುವುದರಿಂದ ದಿನವಿಡೀ ಡಾಟಾ ಎಂಟ್ರಿ,  ವರದಿ ಮಾಡುವುದು ಇವು ಒಂದು ದಿನವೂ ತಪ್ಪುವುದಿಲ್ಲ.  ಶಾಲೆಯಲ್ಲಿ ಮೊದಲೇ ಶಿಕ್ಷಕರ ಕೊರತೆ ಅದರ ನಡುವೆ ಹೆಚ್ಚುತ್ತಿರುವ ಈ ಬಗೆಯ ಒತ್ತಡ ಶಿಕ್ಷಕರ ಅಂತ:ಸಾಕ್ಷಿಯನ್ನು ಕಲಕುವಂತಿದೆ.


ಹಿಂದೆಲ್ಲಾ ಪ್ರಾರ್ಥನೆ ಆದೊಡನೆ ಶಿಕ್ಷಕರು ವರ್ಗ ಕೋಣೆಗೆ ತೆರಳಿ, ಮಕ್ಕಳೊಡನೆ ಶುಭಾಶಯ ವಿನಿಮಯ ಮಾಡಿಕೊಂಡು ಮುಂಜಾನೆಯ ತಾಜಾತನದೊಂದಿಗೆ ಬೋಧನೆಯಲ್ಲಿ ನಿರತರಾಗುತ್ತಿದ್ದರು;  ಆದರಿಂದು ಪ್ರಾರ್ಥನೆ ಮುಗಿಯುತ್ತಿದ್ದಂತೆ ದಿನದ ಹಾಜರಿ, ಊಟದ ಹಾಜರಿ, ಕ್ಷೀರಭಾಗ್ಯ ಹಾಜರಿ  ಅಪ್ಲೋಡ್ ಮಾಡಿ , ಲೆಕ್ಕಪತ್ರ ನಿರ್ವಹಿಸುವಲ್ಲಿ ಅರ್ಧ ಗಂಟೆ ಕಳೆದು ಹೋಗುತ್ತದೆ!  ಇವೆಲ್ಲ ಶಿಕ್ಷಣದ ಗುಣಮಟ್ಟದ ಮೇಲೆ ಬೀರುವ ಪರಿಣಾಮವನ್ನು ಶಿಕ್ಷಕರು ಯಾರ ಬಳಿ ಹೇಳಿಕೊಳ್ಳುವುದು??? ಪರಿಹಾರವೇ ಇಲ್ಲದಂತಾಗಿದೆ… ಹಿಂದೆಂದೂ ಕಾಣದ,  ದಿನದಿಂದ ದಿನಕ್ಕೆ ಹೊಸ ಹೊಸ ಬಗೆಯ ಯೋಜನೆಗಳ,  ಕಾರ್ಯಕ್ರಮಗಳ ಭಾರದಿಂದಾಗಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಗೆ ಒತ್ತು ನೀಡಲಾಗದಿರುವುದು ತಳಮಟ್ಟದಲ್ಲಿರುವ ಶಿಕ್ಷಕರ ಪ್ರತಿದಿನದ ಕೊರಗು.   ಇಷ್ಟೆಲ್ಲದರ ನಡುವೆಯೂ ಇಲಾಖೆ ಮೇಲಾಧಿಕಾರಿಗಳು ಅಪೇಕ್ಷಿಸುವ ಗುಣಮಟ್ಟ , ವಿವಿಧ ಎನ್‌ ಜಿ ಓ ಗಳು ನಡೆಸುವ ಮೌಲ್ಯಾಂಕನಗಳಿಗೆ ಮಕ್ಕಳ ತಯಾರಿಯನ್ನು ನಡೆಸುವುದು ಸುಲಭವೇ?  ಅಥವಾ ನಡೆಸುವ ಮೌಲ್ಯಾಂಕನಗಳು ಎಷ್ಟು ಪ್ರಾಮಾಣಿಕವಾಗಿ ನಡೆಯುತ್ತವೆ?  ಎಂಬುದು ವಿಚಾರ ಮಾಡತಕ್ಕದ್ದು.

ಈ ಬಗೆಯ ಮೊಬೈಲ್ ಅವಲಂಬನೆ ಶಿಕ್ಷಣ ಎಂದಲ್ಲ ಎಲ್ಲ ರಂಗಗಳಲ್ಲಿ,  ಎಲ್ಲ ವಯೋಮಾನದವರಲ್ಲಿ ಹೆಚ್ಚಾಗುತ್ತಿದೆ . ಬೆವರು ಚೆಲ್ಲಿ ದುಡಿಯುವ ಪ್ರವೃತ್ತಿ ನಶಿಸುತ್ತಿದೆ,  ಅದೆಷ್ಟೋ ಐಟಿಬಿಟಿ ಕಂಪನಿಗಳು ಕೊರೋನ ನಂತರದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಚ್ಚಿದ್ದು ಪರ್ಮನೆಂಟ್ ‘ವರ್ಕ್ ಫ್ರಮ್ ಹೋಮ್’  ಘೋಷಿಸಿವೆ; ಇದರಿಂದ ಮೂರು ಹೊತ್ತು ಕಂಪ್ಯೂಟರ್ ನಲ್ಲಿ ಕಣ್ಣು ಹುಗಿದು,  ಬೆನ್ನು ಬಗ್ಗಿಸಿ ಕುಳಿತುಕೊಳ್ಳುವ ಯುವಕರ  ಆರೋಗ್ಯದ ಸ್ಥಿತಿಗತಿ ಏನಾಗಬೇಡ? ನಾಲ್ಕು ಗೋಡೆಯ ಮಧ್ಯದಲ್ಲಿ ಕಂಪ್ಯೂಟರ್ನಲ್ಲಿ ಕಳೆದುಹೋಗುವ ಯುವ ಜನಾಂಗ ವ್ಯಾವಹಾರಿಕ ಶೂನ್ಯರಾಗಿ , ಬಾವಿಯಲ್ಲಿರುವ ಕಪ್ಪೆಯಂತಾಗಿ ನಿಸ್ಸೇಜರಾಗಿ ವಾರದ ದಣಿವನ್ನು ವಾರಾಂತ್ಯದ ರಜೆಯಲ್ಲಿ ಮೋಜು ಮಸ್ತಿ,  ಗಡದ್ದಾದ ನಿದ್ದೆಯಲ್ಲಿ ಕಳೆಯುವಂತಾಗಿದೆ.  ಈ ಬಗೆಗೂ ಒಂದಿಷ್ಟು ವಿಶ್ಲೇಷಣೆ ಯೋಗ್ಯ ಎನಿಸುವುದಿಲ್ಲವೇ?


ಸುವಿಧಾ ಹಡಿನಬಾಳ

2 thoughts on “ಕೊರೋನಾ ನಂತರದಲ್ಲಿ ಬದಲಾದ ಆತಂಕಕಾರಿ ಜೀವನ ಶೈಲಿ!ಸುವಿಧಾ ಹಡಿನಬಾಳ ಅವರ ವಿಶೇಷ ಲೇಖನ

Leave a Reply

Back To Top