ಲೇಖನ ಸಂಗಾತಿ
ಹನಿಬಿಂದು
‘ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ’
ಶುಕ್ರವಾರ ನಾವೆಲ್ಲ ಬಹಳ ಗಮ್ಮತ್ತಾಗಿ ಶಿವರಾತ್ರಿ ಮತ್ತು ಮಹಿಳಾ ದಿನಾಚರಣೆಯನ್ನು ಆಚರಿಸಿದೆವು. ಶಿವ ಎನ್ನುವುದು ಬ್ರಹ್ಮಾಂಡ ಬ್ರಹ್ಮಾಂಡದ ಧನಾತ್ಮಕ ಶಕ್ತಿಯನ್ನೆಲ್ಲವು ಸೇರಿ ಶಿವ ಎಂಬ ಹೆಸರಿನಿಂದ ಕರೆದು ಅದನ್ನು ಪೂಜಿಸುತ್ತೇವೆ. ದೇವನೊಬ್ಬ ನಾಮ ಹಲವು. ಹಿಂದೂ ದೇವರುಗಳಲ್ಲಿ ಶಿವನಿಗೆ ವರದಿ ಆದಂತಹ ಒಂದು ಭಕ್ತಿಯ ಪರತಷ್ಟೇ ಇದೆ. ಉತ್ತರ ಭಾರತದಲ್ಲಿ ಅಂತೂ ಶಿವನ ದೇವಾಲಯಗಳೇ ತುಂಬಿಹೋಗಿವೆ. ಪ್ರಾಚೀನ ಕಾಲದಿಂದಲೂ ಶಿವನನ್ನು ಪೂಜಿಸುತ್ತಾ ಬಂದಿದ್ದಾರೆ ಎನ್ನುವುದಕ್ಕೆ ಹರಪ್ಪ ಮೊಹೆಂಜೋದಾರೋನಲ್ಲಿ ದೊರೆತಂತಹ ಪಶುಪತಿ ವಿಗ್ರಹವೇ ಸಾಕ್ಷಿ. ಹಾಗಾಗಿ ಶಿವ ಸಾನಿಧ್ಯದಲ್ಲಿ ಬರೆದ ಸಂತಸವನ್ನು ಪಡೆದವನೇ ವಿವರಿಸಬೇಕಷ್ಟೆ.
ಈಗೊಂದಿಷ್ಟು ಹೆಣ್ಣುಮಕ್ಕಳ ಬಗ್ಗೆ. ಹೆಣ್ಣು ಮಕ್ಕಳು ಮನೆಯಲ್ಲಿ ಗಂಡನನ್ನು ತಮ್ಮ ಮುಷ್ಟಿಯೊಳಗೆ ಇಟ್ಟುಕೊಳ್ಳುತ್ತಾರೆ, ಅವನ ಕುಟುಂಬವನ್ನು ನೋಡಿಕೊಳ್ಳಲು ಬಿಡುವುದಿಲ್ಲ, ಯಾವುದೇ ಕುಟುಂಬದಲ್ಲಿ ಹೆಣ್ಣು ಮಕ್ಕಳ ಗ್ರೇಟ್, ಹೆಣ್ಣು ಮಕ್ಕಳಿಲ್ಲದೆ ಸಂಸಾರ ನಡೆಯುವುದೇ ಇಲ್ಲ, ಹೆಣ್ಣು ಹೊನ್ನು ಮಣ್ಣು ಒಂದೇ , ಹೆಣ್ಣು ಮನೆಯ ಕಣ್ಣು. ಹೆಣ್ಣು ಗೃಹಲಕ್ಷ್ಮಿ. ಹೆಣ್ಣಿನಿಂದಲೇ ಸಂಸಾರ ಬೆಳೆಯುವುದು ಇವೆಲ್ಲಾ ಹಲವಾರು ಮಾತುಗಳಿವೆ. ಅಲ್ಲದೆ ಹೆಣ್ಣು ಮಕ್ಕಳಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡುತ್ತಿದ್ದೇವೆ, ಶೇಕಡಾ 30ರಷ್ಟು ಮೀಸಲಾತಿ ಕೂಡ ಇದೆ. ಎಲ್ಲಾ ಹೆಣ್ಣು ಮಕ್ಕಳ ಕಡೆಗೆ ಇವೆ ನ್ಯಾಯ… ಇವೆಲ್ಲವನ್ನೂ ನಾವು ಪತ್ರಿಕೆಗಳಲ್ಲಿ ಓದುತ್ತೇವೆ, ಭಾಷಣಗಳಲ್ಲಿ ಕೇಳುತ್ತೇವೆ. ಅಷ್ಟೇ. ನಿಜ ಜೀವನದಲ್ಲಿ?
ಯಾರೋ ಒಂದು ಶೇಕಡಾ ಹೆಣ್ಣು ಮಕ್ಕಳು ತಾಯಿ ಮನೆಯ ದೌಲತ್ತಿನ ಕಾರಣದಿಂದ ಗಂಡನನ್ನು ಅಮ್ಮಾವ್ರ ಗಂಡ ಆಗಿ ಮಾಡಿ ಕೊಂಡಿರಬಹುದು. ಇನ್ನು ಎರಡು ಶೇಕಡಾದಷ್ಟು ಕಲಿತ ಗಂಡಸರು ತಮ್ಮ ಮಡದಿಯನ್ನು ಅರಿತು ಆಕೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರಬಹುದು. ಎಲ್ಲೋ ಒಂದು ಶೇಕಡಾ ಪತಿರಾಯರು ತಮ್ಮ ಮಡದಿ ಹೇಳಿದ ಮಾತುಗಳನ್ನು ಕೇಳಿ ಅದರಂತೆ ನಡೆದುಕೊಳ್ಳುತ್ತಿರಬಹುದು. ಇನ್ನೂ ಅಬ್ಬಬ್ಬಾ ಎಂದರೆ ಮದುವೆ ಆದ ಬಳಿಕ ನಾನು ಗಂಡನ ಮನೆಯಲ್ಲಿ ಅಮ್ಮನ ಮನೆಯಷ್ಟೇ, ಅಥವಾ ಅದಕ್ಕಿಂತಲೂ ಸುಖಿ ಎಂದು ಬದುಕುವ ಹೆಣ್ಣು ಮಕ್ಕಳು ಭಾರತದಲ್ಲಿ ಒಂದು ಅಥವಾ ಎರಡು ಶೇಕಡಾ ತಪ್ಪಿದರೆ ಮೂರು ಶೇಕಡಾ ಅಷ್ಟೇ. ಇನ್ನು ಉಳಿದವರ ಕಥೆ?
ಕಥೆ ಅಲ್ಲ ಜೀವನ! ನೈಜ ಬದುಕು. ಇದರ ಬಗ್ಗೆ ಅದೆಷ್ಟು ಚಿಂತನೆಗಳು ನಡೆದಿವೆಯೋ ಗೊತ್ತಿಲ್ಲ. ಹೆಣ್ಣು ಮಕ್ಕಳಿಗೆ ತಾಯಿ ಎಂಬ ಜೀವ ಇರಬೇಕು. ತಾಯಿ ಮನೆಯವರು ಸಿರಿವಂತರಾದರೆ ಮಾತ್ರ ಮದುವೆಯ ಬಳಿಕ ಆಕೆಯ ಜೀವನ ಸ್ವರ್ಗ ಎಂಬುದು ಎಲ್ಲರಿಗೂ ತಿಳಿದ ಮಾತು, ಅದು ಕಟು ವಾಸ್ತವದ ಸತ್ಯ ಕೂಡಾ. ತಾಯಿ ಇಲ್ಲದ ಹೆಣ್ಣು ಮಕ್ಕಳ ಬಾಳು ಗೋಳು ಆ ದೇವರಿಗೇ ಗೊತ್ತು. ಅವರ ಕಷ್ಟ ಸುಖ ಕೇಳುವವರು ಯಾರು? ಅಣ್ಣ ಅಥವಾ ತಮ್ಮ, ಮಾವ, ಅಕ್ಕ ತಂಗಿ ಅಷ್ಟು ಜವಾಬ್ದಾರಿಯುತರು ಇದ್ದರೆ ಅವರ ಪುಣ್ಯ. ಅದು ಎಷ್ಟು ಜನರಿಗೆ ಸಿಗಲು ಸಾಧ್ಯ?
ಇನ್ನು ಪತಿ ಬಿಟ್ಟು ಹೋದ, ಪತಿ ಕೈ ಕೊಟ್ಟ, ಪತಿ ಸತ್ತು ಹೋದ, ರೋಗಿಷ್ಟ ಪತಿ ಇರುವ, ಪತಿ ಇದ್ದರೂ ಇಲ್ಲದಂತೆ ಇರುವ, ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೆ ಇರುವ ಪತಿಯನ್ನು ಹೊಂದಿರುವ, ಹೆಸರಿಗೆ ಮಾತ್ರ ಪತಿಯ ಸ್ಥಾನ ಹೊತ್ತ, ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತಹ ಪತಿಯನ್ನು ಪಡೆದ, ಹೆಂಡತಿಯನ್ನೇ ಅವಲಂಬಿಸಿ ಬದುಕುವ ಜನರ ಜೊತೆ ಬಾಳುವ ಹೆಣ್ಣು ಮಕ್ಕಳಿಗಿದೋ ಸಲಾಂ. ಪುರುಷರಿಗಿಂತ ತಾವು ಏನೂ ಕಡಿಮೆ ಇಲ್ಲ ಎಂದು ತೋರಿಸಿ ಬದುಕುವ ಹೆಣ್ಣು ಮಕ್ಕಳಿಗಾಗಿಯೇ ಮಹಿಳೆಯರ ದಿನ ಮೀಸಲು.
ಮಹಿಳೆ ಮಾನಸಿಕವಾಗಿ ಶಕ್ತಿಶಾಲಿ . ಪುರುಷ ದೈಹಿಕವಾಗಿ. ಮಾನಸಿಕ ದೃಢ ಶಕ್ತಿ ಎರಡು ಕುಟುಂಬಗಳ ಜೋಡಿಸಬಲ್ಲುದು ಹಾಗೆಯೇ ನಾಶ ಮಾಡಬಲ್ಲುದು. ತೊಟ್ಟಿಲು ತೂಗುವ ಕೈಗಳು ದೇಶವನ್ನೇ ಆಳ ಬಲ್ಲವು. ಅಷ್ಟೇ ಏಕೆ, ಮಗುವನ್ನು ಮಾನವರನ್ನು ಮಾತ್ರ ಅಲ್ಲದೆ ಪ್ರಾಣಿಗಳನ್ನೂ ಮಕ್ಕಳಂತೆ ಪ್ರೀತಿಸಿ ಅವುಗಳ ಕ್ರೋಧವನ್ನು ಕಡಿಮೆ ಮಾಡಬಹುದು. ಪ್ರೀತಿಯ ಇನ್ನೊಂದು ಹೆಸರು ಹೆಣ್ಣು. ಮಹಿಳೆಗೆ ಕೇವಲ ಒಂದು ದಿನ ಅಲ್ಲ. ವರ್ಷಪೂರ್ತಿ ಬೇಕು. ಗಂಡು ದುಡಿದು ತಂದು ಹಾಕಿದರೂ ಅದೆಷ್ಟೋ ಕುಟುಂಬಗಳನ್ನು ಸರಿಯಾಗಿ ನಿಭಾಯಿಸುವುದು ಹೆಣ್ಣೇ.
ಕುಡುಕ ಹಾಗೂ ಇತರ ಬೇಡದ ಚಟಗಳಿರುವ ಗಂಡನ ಜೊತೆ ಬಾಳುತ್ತಾ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಕಾರ್ಯ ಸುಲಭದ ಮಾತಲ್ಲ. ದುಷ್ಟ ಚಟಗಳ ದಾಸರಾಗುವುದು ಗಂಡಿಗೆ ಎಷ್ಟು ಸುಲಭವೋ ಅಂತಹ ಕುಟುಂಬ ನಿಭಾಯಿಸುವುದು ಹೆಣ್ಣಿಗೂ ಅಷ್ಟೇ ಕಷ್ಟ. ಆದರೂ ಛಲ ಬಿಡದೆ ಸಾಧಿಸುವ ತ್ರಿವಿಕ್ರಮ ಸಾಧನೆ ಮೆರೆದು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ತಾನು ತೊಡಗಿಸಿಕೊಂಡ ಎಲ್ಲಾ ಮಹಿಳೆಯರಿಗೆ ಈ ಅಂಕಣ ಸಮರ್ಪಣೆ. ಎಲ್ಲರಿಗೂ ಸಲಾಂ ಅನ್ನೋಣ. ನೀವೇನಂತೀರಿ?
———————————–
ಹನಿಬಿಂದು