ಮಹಿಳಾ ಸಂಗಾತಿ
ಅಭಿಜ್ಞಾ ಪಿ.ಎಮ್.ಗೌಡ
ಮಹಿಳೆ ಎಷ್ಟು ಸ್ವತಂತ್ರಳು..?
ಈ ಪ್ರಶ್ನೆ ಎಲ್ಲರ ಮನದೊಳಗೂ ಮೂಡುವುದು ಸಹಜ ಅಲ್ವಾ.? ಏಕೆಂದರೆ ನಮಗೆ ಸ್ವತಂತ್ರ ಬಂದು ೭೫ ವರ್ಷಗಳೆ ಕಳೆದರೂ ಕೂಡ ಮಹಿಳೆಗೆ ಮಾತ್ರ ಸ್ವತಂತ್ರವಿಲ್ಲ.ಪ್ರತಿಯೊಂದು ಕ್ಷೇತ್ರದ ಪ್ರಗತಿಯ ಹಿಂದೆ ಮಹಿಳೆಯ ಪಾತ್ರ ಮಾತ್ರ ಅದ್ವಿತೀಯ ಆದರೆ ಅವಳ ಮೇಲಾಗುತ್ತಿರುವ ದೌರ್ಜನ್ಯಗಳು,ಕಿರುಕುಳ, ಅವಮಾನ, ಅನ್ಯಾಯಗಳಿಂದಾಗಿ ಅವಳ ಜೀವ ,ಜೀವನ ಮಾತ್ರ ಅತಂತ್ರ. ಸ್ವತಂತ್ರ ಎಂಬ ಅಸ್ತ್ರವನ್ನ ಸ್ವೇಚ್ಚಾಚಾರದಿಂದಾಗಿ ದುರ್ಬಳಕೆ ಮಾಡಿಕೊಂಡ ದುರಳ, ದುಷ್ಟರ ದುಷ್ಕೃತ್ಯಗಳು ಮಾತ್ರ ಯಾವುದೆ ಅಡೆತಡೆಯಿಲ್ಲದೆ ಸಾಗುತ್ತಿರುವುದನ್ನು ನೋಡುತ್ತಿದ್ದರೆ ಮನಸ್ಸಿಗೆ ಒಂಥರ ಖೇದವಾಗುತಿದೆ.ಮಹಾತ್ಮ ಗಾಂಧೀಜಿಯವರು ಮಧ್ಯರಾತ್ರಿ ಭಾರತದ ಬೀದಿಗಳಲ್ಲಿ ಮಹಿಳೆಯರು ಸುರಕ್ಷಿತವಾಗಿ ನಡೆದಾಡಿದಾಗ ಭಾರತ ಸ್ವಾತಂತ್ರ್ಯವಾದಂತೆ ಎಂದು ಹೇಳಿರುವ ಈ ಮಾತು ನೆನೆಪಿಗೆ ಬರುತಿದೆ.
“The day a women can walk freely on the road at night, that day we can say that India has achieved independence “
ಇತ್ತೀಚೆಗಂತು ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನು ನಿಯಂತ್ರಿಸಲು ಅದೆಷ್ಟೆ ಕಠಿಣ ಕಾನೂನುಗಳನ್ನು ರೂಪಿಸುತ್ತಿದ್ದರು ಕೂಡ ದೇಶದೆಲ್ಲಡೆ ಮಹಿಳೆಯರ ಮೇಲಿನ ಇಂತಹ ಕೃತ್ಯಗಳು ದಿನೆ ದಿನೇ ಹೆಚ್ಚಾಗುತಿದೆಯೆ ಹೊರತು ಕಮ್ಮಿಯಾಗುತ್ತಿಲ್ಲ.ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯವನ್ನು ಎಲ್ಲೆಡೆ ಎತ್ತಿ ಹಿಡಿಯುತ್ತಿರುವರು.ಆದರೆ ಮಹಿಳೆಯರು ಪ್ರತಿ ದಿನವೂ ಸುರಕ್ಷತೆಯ ಬಗ್ಗೆ ತಮ್ಮ ಸ್ವಾತಂತ್ರ್ಯದ ಮೇಲೆ ರಾಜಿ ಮಾಡಿಕೊಳ್ಳುತ್ತಿರುವುದು ಯಾರ ಕಣ್ಣಿಗೂ ಬೀಳದಿರುವುದು ಬೇಸರದ ಸಂಗತಿಯಾಗಿದೆ.ಇದರ ಜೊತೆಗೆ ಸಮಾಜದ ವಿಕೃತ ವರ್ಗ ತನ್ನ ಕಾಮುಕ ದೃಷ್ಟಿಕೋನವನ್ನು ಬದಲಿಸಿಕೊಳ್ಳದೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿರುವುದು ಸಹ ಒಂದು ವಿಪರ್ಯಾಸ.
ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾದರೂ ಕೂಡ ಇಂತಹ ನೂರಾರು ಪ್ರಕರಣಗಳು ಮರುಕಳಿಸುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ವಿಕೃತಕಾಮಿಗಳು ಅದೆಷ್ಟು ಕ್ರೂರವಾಗಿ ನಡೆಯುತ್ತಿದ್ದಾರೆ ಎಂದರೆ ಊಹಿಸಲು ಕಷ್ಟವಾಗಿದೆ.ಎರಡು ವರ್ಷದ ಹಸುಳೆಯಿಂದಿಡಿದು ವೃದ್ಧೆಯರು ಎನ್ನದೆ ಅತ್ಯಾಚಾರ ಮಾಡುತ್ತಿದ್ದಾರೆ. ಅಪ್ಪನಿಂದ ಮಗಳು ಕೂಡ ಇಂತಹ ಅತ್ಯಾಚಾರದ ಕೃತ್ಯಗಳಿಗೆ ಬಲಿಯಾಗುತ್ತಿರುವುದು ದುರಂತವೆನಿಸುತಿದೆ.ಹಾಗೆಯೇ ಪ್ರಸ್ತುತ ಹೋರಾಟ ನಡೆಯುತ್ತಿರುವ ಧರ್ಮಸ್ಥಳದ ಸೌಜನ್ಯಳಿಂದಿಡಿದು ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಇಂತಹ ಘೋರ ಅಪರಾಧಗಳು ನಿಜಕ್ಕೂ ಎಂಥವರನ್ನು ಕುಗ್ಗುವಂತೆ ಮಾಡುತಿವೆ. ಹಸುಳೆ ,ಯುವತಿ,ಗರ್ಭಿಣಿ, ಅಂಗವಿಕಲೆ ಎಂದು ನೋಡದೆ ಕ್ರೂರ ಮೃಗಗಳಂತೆ ವರ್ತಿಸೊ ಕಾಮ ಪಿಶಾಚಿಗಳು ದಿನೆ ದಿನೇ ಪಾರ್ಥೇನಿಯಂ ಗಿಡ ಹಬ್ಬುವಂತೆ ಎಲ್ಲೆಡೆ
ಹೆಚ್ಚಾಗುತಿದ್ದಾರೆ.ಇತ್ತೀಚೆಗಷ್ಟೆ ಓದಿದ್ದೆ ಶವಾಗಾರದಲ್ಲಿದ್ದ ಮಹಿಳಾ ಶವವನ್ನು ಬಿಟ್ಟಿಲ್ಲ ಇನ್ನೆಂಥ ಕಾಮುಕರಿರಬಹುದು ಥೂ ಅಲ್ವಾ.? ಹೀಗೆ ಅತ್ಯಾಚಾರಕ್ಕೆ ಯಾವುದೇ ಚೌಕಟ್ಟುಗಳಿಲ್ಲ ಎಂದು ನಿರೂಪಿಸುವ ರೀತಿಯಲ್ಲಿ ವಿಕೃತ ಪುರುಷರು ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ. ಮನೆಪಾಠಕ್ಕೆಂದು ಬರುತ್ತಿದ್ದ ಹಸುಳೆಯನ್ನು ಬಿಡದೆ ಅತ್ಯಾಚಾರಕ್ಕೊಳಗಾದ ಐದು ವರ್ಷದ ಕಂದಮ್ಮನ ಮೇಲಿನ ಅತ್ಯಾಚಾರ ವಿಷಾದನೀಯವಾಗಿದೆ.
ಹೀಗೆ ದೌರ್ಜನ್ಯಕ್ಕೊಳಗಾದ ಮಹಿಳೆಯರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಅಬ್ಬಾ.!
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ನನೆದರಂತು ಮೈ ಜುಮ್ ಎನಿಸುವುದು.ಸ್ವಾತಂತ್ರ್ಯ ಬಂದು ಇಷ್ಟೂ ವರ್ಷಗಳಲ್ಲಿಯೂ ಭಾರತದ ಪ್ರಜ್ಞಾವಂತ ಪ್ರಜಾಸಮೂಹ ಸ್ವಾತಂತ್ರ್ಯದ ಸಾಧಕ ಬಾಧಕಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಬರುತಿದೆ. ಪ್ರಯೋಜನವೇನು.? ನಿಜ, ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಸಹಸ್ರಾರು ಹೋರಾಟಗಳ, ಸತ್ಯಾಗ್ರಹಗಳ ಫಲವಾಗಿ ನಾವು ಸ್ವತಂತ್ರರಾಗಿದ್ದೇವೆ.ಆದರೆ ಆ ಸ್ವಾತಂತ್ರ್ಯದ ಸ್ವೇಚ್ಚಾಚಾರದಿಂದಾಗಿ ಮಹಿಳೆ ಹಗಲಿನಲ್ಲಿಯೆ ಒಬ್ಬಳೆ ಓಡಾಡಲು ಹೆದರುವ ಸಂದರ್ಭ ಒದಗಿಬಂದಿದೆ.ಕಾಮುಕ/ವಿಕೃತ ಪಿಶಾಚಿಗಳು ಅಷ್ಟು ಭಯ ಹುಟ್ಟಿಸಿರುವರು.ಮಹಿಳೆಯರು; ನಾವು ಅಬಲೆಯರಲ್ಲ ,ಸಬಲೆಯರೆಂದು;ಎಷ್ಟು ಗಟ್ಟಿಯಾಗುತ್ತಿದ್ದಾರೋ ಅಷ್ಟೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ.ಹೀಗಾಗಿ ದೇಶದೊಳಗೆ ಸ್ವಾತಂತ್ರ್ಯದ ಸ್ವೇಚ್ಚಾಚಾರ ಹೆಚ್ಚಾಗುತಿದೆ.
ಭಾರತದಂತಹ ಪುರುಷ ಪ್ರಧಾನ ಸಮಾಜದಲ್ಲಿ ಸ್ವಾತಂತ್ರ್ಯ ಭಾರತದ ಮಹಿಳೆಯರು ಎಷ್ಟು ಸ್ವತಂತ್ರರಾಗಿದ್ದಾರೆ .? ಎಂಬ ಪ್ರಶ್ನೆ ಗಂಭೀರವಾಗಿ ಎಲ್ಲರೊಳಗೂ ತಳಕು ಹಾಕುತ್ತಿರುವುದಂತು ಸತ್ಯ.ಇತ್ತೀಚೆಗಂತು ಮಹಿಳೆ ಯಾವುದರಲ್ಲಿ ಸ್ವತಂತ್ರಳು ಎಂಬುದನ್ನು ಮನಗಾಣಬೇಕಾಗಿದೆ.ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದ್ದರು ;ದೇಶದೊಳಗೆ ನಡೆಯುತ್ತಿರುವ ದುಷ್ಕೃತ್ಯಗಳಿಗೇನು ಕಮ್ಮಿಯಿಲ್ಲ.
ಮಹಿಳೆಯರಿಗೆ ಆದ್ಯತೆ ಇದ್ರೂ ಕೂಡ ಸ್ವತಂತ್ರವಿಲ್ಲ.
ದುಡಿಯುತ್ತಿರುವ ಮಹಿಳೆಯರಂತು ಮನೆಯ ಒಳಗೂ, ಹೊರಗು ದುಡಿಯಲೇ ಬೇಕು.ಹಾಗಾದರೆ ಮಹಿಳೆಯರ ಆದ್ಯತೆ ಮತ್ತು ಆಯ್ಕೆಗಳಿಗೆ ಇರುವ ಸ್ವಾತಂತ್ರ್ಯ ಎಷ್ಟು ? ಎಂಬುದನ್ನು ಒಮ್ಮೆ ಅವಲೋಕಿಸಿದಾಗಲೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವುದು.ಜೊತೆಗೆ ತಮ್ಮ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೆಲವು ಮಹಿಳೆಯರಿಗಂತು ಇಲ್ಲವೆ ಇಲ್ಲ. ತಮ್ಮ ಜೀವನದ ಬಗ್ಗೆ ಸ್ವತಃ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವು ಕೂಡ ಇಲ್ಲದಂತಾಗಿದೆ.೨೧ ನೇ ಶತಮಾನದಲ್ಲು ಇಷ್ಟೊಂದು ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ. ದೇಶ ಅಭಿವೃದ್ಧಿಯ ಕಾಲಘಟ್ಟದಲ್ಲಿದ್ದರು ಹೆಣ್ಣು ಮಕ್ಕಳು ಮಾತ್ರ ಒಬ್ಬೊಬ್ಬರೆ ಓಡಾಡಲಾಗದೆ ಭಯಭೀತರಾಗಿದ್ದಾರೆ.ಆದ್ದರಿಂದ ಮಹಿಳೆಯರು ಅನುಭವಿಸುತ್ತಿರುವ ಕಿರುಕುಳ ,ಅನ್ಯಾಯಗಳಂತಹ ಹತ್ತು ಹಲವು ಪ್ರಶ್ನೆಗಳು ಇಡೀ ಮಹಿಳಾ ಸಮುದಾಯವನ್ನು ಬಾಧಿಸುತ್ತಿವೆ.
ಮಹಿಳೆಯನ್ನು ಅದೆಷ್ಟು ಶ್ರೀಮಂತ ನಾಮಗಳು ಅಂದರೆ ಉಪಮಾನ ಉಪಮೇಯಗಳೊಂದಿಗೆ ಅಲಂಕರಿಸಿ ಹಲವಾರು ರೂಪಗಳೊಂದಿಗೆ ಕರೆಯುತ್ತಿರುವುದನ್ನ ಬಲ್ಲಿರಾ.! ತಾಯಿ, ತಂಗಿ, ಅಕ್ಕ, ಮಗಳು, ದೊಡ್ಡಮ್ಮ, ಚಿಕ್ಕಮ್ಮ, ಅತ್ತಿಗೆ, ಹೆಂಡತಿ, ಅತ್ತೆ ,ಅಜ್ಜಿ ಹೀಗೆ ಪ್ರತಿ ಕುಟುಂಬದಲ್ಲಿ ಕರೆಸಿಕೊಂಡು, ಲಕ್ಷ್ಮಿ, ಸರಸ್ವತಿ, ದುರ್ಗೆ, ಕಾಳಿ, ಚಾಮುಂಡೇಶ್ವರಿ ಎಂದೆಲ್ಲಾ ಪೂಜೆಗೆ ಕುಳಿತುಕೊಳ್ಳುವ ಅರ್ಹತೆ ಮಹಿಳೆಗೆ ಮೀಸಲಾಗಿದೆ.ಸಮಾಜದ ಪ್ರತಿಯೊಂದು ಕುಟುಂಬಗಳಲ್ಲೂ ಗೌರವಾಧಾರಗಳಿಂದ ಪೂಜೆಗೆ ಅರ್ಹಳಾಗುವ ಮಹಿಳೆ ಅದೇ ಕುಟುಂಬದಿಂದಲೆ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕೂಡ ಒಂದು ಸೋಜಿಗವೇ! ನಮ್ಮ ದೇಶ ಸಂಸ್ಕೃತಿ, ಸಂಸ್ಕಾರಗಳ ನಾಡಾಗಿದ್ದು ಹೆಣ್ಣನ್ನು ಪೂಜಿಸುತಿದ್ದರು ಕೂಡ ಮಹಿಳೆಯ ಮೇಲಾಗುತ್ತಿರುವ ಅತ್ಯಾಚಾರಗಳಂತಹ ದುರ್ನಡತೆ ದುಷ್ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ.
ಕ್ಷಮಯಾಧರಿತ್ರಿ ಹೆಣ್ಣೆಂದು ಪೂಜಿಸುವರು.
ದೇವರನ್ನು ಪೂಜಿಸುವ ನಾಡಿನಲ್ಲೆ ಹೆಣ್ಣನ್ನು ಕೂಡ ಪೂಜಿಸುವರು.ಆದರೇನು.? ನಾಡಿನಲ್ಲಿ ಹೆಣ್ಣು ಭ್ರೂಣಗಳ ಮಾರಣಹೋಮ ದಿನೆದಿನೇ ಹೆಚ್ಚಾಗುತ್ತಿರುವುದು ಹೇಯಕೃತ್ಯವೆನಿಸಿದೆ.ಹಾಗೆಯೆ ಪುರುಷ ಮತ್ತು ಹೆಣ್ಣು ಮಕ್ಕಳ ಅನುಪಾತಗಳಲ್ಲಿ ವ್ಯತ್ಯಾಸಗಳನ್ನು ಕಾಣುತಿದ್ದೇವೆ.ಈ ವ್ಯತ್ಯಾಸಕ್ಕೆ ಕಾರಣ ಗಂಡು ಮಕ್ಕಳ ಮೇಲಿನ ವ್ಯಾಮೋಹ; ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ.ಹೆಣ್ಣು ಭ್ರೂಣ ಹತ್ಯೆ ಈಗಲೂ ಕೂಡ ಅವ್ಯಾಹತವಾಗಿ ನಡೆಯುತಿದೆ.
ಹೀಗಾಗಿ ಹೆಣ್ಣು ಮಗುವಿನ ಮೇಲಿನ ತಾರತಮ್ಯ ಇನ್ನೂ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ.ಮಹಿಳೆ ಎಷ್ಟೆ ದಿಟ್ಟತನದಿಂದ ಜೀವನ ನಡೆಸುತಿದ್ದರು ಕೂಡ ಈಗಲೂ ಕೆಲವು ಕಡೆಗಳಲ್ಲಿ ಅವಳಿಗೆ ಸ್ವತಂತ್ರವಿಲ್ಲ.ಒಬ್ಬಳೆ ಎಲ್ಲೂ ಹೋಗುವ ಆಗಿಲ್ಲ ಹೆಚ್ಚು ಓದುವಂತಿಲ್ಲ ಹುಡುಗರ ಸಮಾನವಾಗಿ ನಡೆಯುವಂತಿಲ್ಲ ಹೀಗೆ ಒಂದಾ ಎರಡಾ ಹಲವಾರು ಕಟ್ಟು ಪಾಡುಗಳೊಂದಿಗೆ ಜೀವನ
ಸಾಗಿಸುತ್ತಿರುವಳು.ಅಲ್ಲಾ.! ಈ ಮಹಿಳೆಯನ್ನು ಕುಟುಂಬದ ಕಣ್ಣು ; ಜಗವನ್ನು ಬೆಳಗುವ ಜ್ಯೋತಿ ಎಂದೆಲ್ಲ ಕರೆಯುವರು.ಆದರೆ ಅವಳಿಗೆ ಪುರುಷರಂತೇಕೆ ಸ್ವತಂತ್ರ ನೀಡುತಿಲ್ಲ.? ನಿತ್ಯವೂ ಭಯದಿಂದಲೆ ಜೀವನ ಸಾಗಿಸಬೇಕು.
ಕುಟುಂಬದಲ್ಲೂ ಯಜಮಾನಿಕೆ ಪಾತ್ರವಿಲ್ಲ ಅದೆಲ್ಲ ಪುರುಷರಿಗೆ ಮಾತ್ರ ಮೀಸಲಾಗಿದೆ ಎಂಬುದನ್ನು ನೋಡುತಿದ್ದೇವೆ.ಹಾಗೆಯೆ ಮಹಿಳೆಯರಿಗೆ ಹೆಚ್ಚು ಅಧಿಕಾರವನ್ನು ಕೂಡ ನೀಡುತ್ತಿಲ್ಲ.
ಯಾವುದೇ ಸಮುದಾಯ, ಕುಟುಂಬ ಅಭಿವೃದ್ಧಿಯಾಗ ಬೇಕಾದರೆ ಆ ಸಮುದಾಯ ಮತ್ತು ಕುಟುಂಬದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಇಂದಿನ ಅತ್ಯಗತ್ಯ.ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವ ಅತ್ಯಗತ್ಯತೆ ಹಿಂದಿಗಿಂತ ಇಂದು ಮುಖ್ಯವಾಗಿದೆ. ಮಹಿಳೆ ಅಡುಗೆ ಕೆಲಸಕ್ಕೆ ಸೀಮತವಾಗದೇ ಹಲವು ಬಗೆಯ ಕೌಶಲ್ಯಗಳನ್ನು ಬೆಳೆಸಿಕೊಂಡು ವಿವಿಧ ಆರ್ಥಿಕ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.ಆದ್ದರಿಂದ ಅವಳಿಗೂ ಕೂಡ ಸ್ವತಂತ್ರವನ್ನು ನೀಡಬೇಕು.
ಮಹಿಳೆಯರ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರ ಬೇಕಾದರೆ, ಮಹಿಳೆಯರಿಗೆ ಬಾಲ್ಯದಿಂದಲೇ ತಮ್ಮ ಅಧಿಕಾರ, ಹಕ್ಕುಗಳ ಅರಿವಿರ ಬೇಕು. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು. ಇದನ್ನು ಎಲ್ಲರು ಮಾಡಿಸುತ್ತಿರಬೇಕು.ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಮಹಿಳೆಯರಿರುವರು.ಆದರೆ ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ.ದೇಶ ಅದೆಷ್ಟೆ ಪ್ರಗತಿಯ ಸಾಲಿನಲ್ಲಿ ಮಿಂಚುತಿದ್ದರು ಅಲ್ಲಲ್ಲಿ ಮೂಢನಂಬಿಕೆಗಳೆಂಬ ಮಹಾಕೂಪದೊಂದಿಗೆ ಸಿಲುಕಿ ಮಹಿಳೆಯರು ನರಳಿ ಹೈರಾಣುಗುತ್ತಿದ್ದಾರೆ.ಗಂಡಿನಷ್ಟು ಸ್ವತಂತ್ರವಿರದೆ ನಲಗುತ್ತಿರುವುದು ಬೇಸರದ ಸಂಗತಿಯಾಗಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕೆ ಹೊರತು ಮತ್ತೊಬ್ಬರನ್ನು ತುಳಿದು ಬದುಕಬಾರದು. ಹಾಗೆ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ವಿದ್ಯಾವಂತಳಾಗಬೇಕು. ಆಗ ಮಾತ್ರ ಸಂವಿಧಾನ ಕಲ್ಪನೆಯ ಭಾರತ ನೋಡಲು ಸಾಧ್ಯ.ಹಾಗೆಯೆ ಗಾಂಧಿಯವರ ಕನಸನ್ನು ನನಸುಮಾಡುವ ನಿಟ್ಟಿನಲ್ಲಿ ನಾವೆಲ್ಲರು ಸಾಗೋಣ…
————-
ಅಭಿಜ್ಞಾ ಪಿ.ಎಮ್.ಗೌಡ