ಮಹಿಳಾ ಸಂಗಾತಿ
ಪ್ರಮೀಳಾ. ಎಸ್.ಪಿ
“ಮಹಿಳಾ ದಿನಾಚರಣೆ ಮತ್ತು
ಮಹಿಳಾ ಶಿಕ್ಷಕಿಯರ
ಜವಾಬ್ದಾರಿಗಳು.”
ಕ್ಲಾರಾಜೆಟ್ಕಿನ್ ಎಂಬ ಹೋರಾಟಗಾರ್ತಿಯನ್ನು ನೆನಪು ಮಾಡಿಕೊಳ್ಳುತ್ತಾ ವಿಶ್ವದಲ್ಲೆಡೆ ಮಾರ್ಚ್ 8ರಂದು “ಅಂತರಾಷ್ಟ್ರೀಯ ಮಹಿಳಾ ದಿನ” ಆಚರಿಸಲಾಗುತ್ತದೆ. ಈ ದಿನದಂದು ಮಹಿಳಾ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಮಹಿಳೆಯರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಹೇಳಿಕೊಳ್ಳುತ್ತಲೇ ಮಹಿಳೆಯರ ಎದುರಿಗಿರುವ ಜವಾಬ್ದಾರಿಗಳನ್ನು ಹೆಗಲಿಗಿರಿಸಿಕೊಳ್ಳುವತ್ತ ಗಮನ ಹರಿಸಬೇಕಾಗುತ್ತದೆ
.ಹುಟ್ಟಿನಿಂದಲೇ ನಿರ್ಧರಿಸಲ್ಪಡುವ ಹೆಣ್ಣು ಮತ್ತು ಗಂಡಿನ ಜೈವಿಕ ಲಕ್ಷಣಗಳು ಬಾಹ್ಯ ಶರೀರ ರಚನೆಯಲ್ಲಿ ಹಾಗೂ ಸಂತಾನೋತ್ಪತ್ತಿ ಕ್ರಿಯೆಗಳಲ್ಲಿ ವಿಶೇಷ ಗುಣ ಹೊಂದಿವೆ.ಸ್ವಭಾವತಃ ಈ ಎರಡು ದೇಹ ಗುಣಗಳು ಒಂದಕ್ಕೊಂದು ಪೂರಕವೇ ಹೊರತು ಮೇಲು ಕೀಳೆಂಬುದು ಇಲ್ಲ. ಮಹಿಳೆಯರ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ಅಳೆಯಲು ಹೊರಟಾಗ ಭಾರತದಲ್ಲಿ ಮಹಿಳೆಯರು ತುತ್ತಾಗುವ ಅನಾರೋಗ್ಯ, ಅಭಿವೃದ್ಧಿಯ ಅಡೆ-ತಡೆ, ದೌರ್ಜನ್ಯಕ್ಕೆ ಒಳಗಾಗುವುದು ತನ್ನ ಸುತ್ತಲಿನ ಸಮುದಾಯ ಅಥವಾ ಸಮಾಜ ಎಂಬುದನ್ನು ನಾವು ಗುರುತಿಸಬೇಕಾಗಿದೆ.
ಮಹಿಳೆಯರ ಕೊಡುಗೆಗಳನ್ನು ವಿಶ್ಲೇಷಿಸಿದಾಗ ಆರ್ಥಿಕ ಅಭಿವೃದ್ಧಿಗೆ ಆಕೆಯ ಬೌದ್ಧಿಕ ಶಕ್ತಿ ಮತ್ತು ಸೃಜನಶೀಲ ಕಾರ್ಯಗಳು ಪೂರಕವಾಗಿರುವುದು ಕಂಡುಬರುತ್ತದೆ.
20024ರ ಹ್ಯಾಶ್ ಟ್ಯಾಗ್ ಅನ್ನು ಈ ಸಂದರ್ಭದಲ್ಲಿ ನೋಡಿದಾಗ
” ಮಹಿಳೆಯರಲ್ಲಿ ಹೂಡಿಕೆ ಮಾಡಿ ಪ್ರಗತಿಯನ್ನು ವೇಗಗೊಳಿಸಿ” ಎಂಬುದಾಗಿದ್ದು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹಣ ವ್ಯಯಿಸಿದರೆ ರಾಷ್ಟ್ರದ ಅಭಿವೃದ್ಧಿಯ ಓಟದ ವೇಗವನ್ನು ಹೆಚ್ಚಿಸಬಹುದಾಗಿದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ.
ಹಾಗಾದರೆ ಯಾವೆಲ್ಲ ಕ್ಷೇತ್ರದಲ್ಲಿ ಮಹಿಳೆಯರ ಅಭಿವೃದ್ಧಿಗೆ ಬಂಡವಾಳ ಹೂಡಿ ಸೇವೆ ಒದಗಿಸಬೇಕೆಂಬದರ ಅರಿವು ಪ್ರಭುತ್ವಕ್ಕೆ ಇರಬೇಕಾಗುತ್ತದೆ.
ಬಂದು ಸುಸ್ತಿರ ಆರೋಗ್ಯದಾಯಕ ಸಮಾಜದ ನಿರ್ಮಾಣದಲ್ಲಿ ರಾಷ್ಟ್ರದ ಒಳಗೆ ಬೇರು ಮಟ್ಟದಲ್ಲಿ ಕೆಲಸ ನಿರ್ವಹಿಸುವ ಅಂಗನವಾಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕಿಯರು ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ದೇಶದ ಭವಿಷ್ಯದ ಪೈರಿನ ಮೊಳಕೆಯು ಶಿಕ್ಷಕರ ಹಿಡಿತದಲ್ಲಿ ನೆಲೆಗೊಂಡಿರುತ್ತದೆ.
ಭಾರತದಲ್ಲಿ ಮಹಿಳಾ ಶಿಕ್ಷಕಿಯರ ಸಂಖ್ಯೆ ಯು ದೊಡ್ಡ ಗಾತ್ರದ್ದೇ ಇದೆ.
” ಶಿಕ್ಷಕರ ವೃತ್ತಿಯು ಪಡೆಯುವ ಸಂಬಳಕ್ಕೆ ಮೀರಿದ ಸೇವೆಯಾಗಿದ್ದು’ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಪರಿಣಾಮಕಾರಿ ಮೌಲ್ಯಗಳ ಅನುಷ್ಠಾನಕ್ಕೆ ಅವಕಾಶ ನೀಡುತ್ತದೆ.
ಹಾಗಾಗಿಯೇ ಮಹಿಳಾ ಶಿಕ್ಷಕಿಯರು ಹೆಣ್ಣು ಮಕ್ಕಳು ಎದುರಿಸಬೇಕಾದ ಸಮಸ್ಯೆಗಳು/ ಸವಾಲುಗಳ ಬಗ್ಗೆ ಸದಾ ಜಾಗೃತರಾಗಿದ್ದು ಸಾಮಾಜಿಕಹೊಣೆಗಾರಿಕೆ ಹೊತ್ತು ಕಾರ್ಯನಿರ್ವಹಿಸಬೇಕಾಗುತ್ತದೆ.
*ಲಿಂಗ ಆಧಾರಿತ ಹಿಂಸೆ .
*ಸ್ತ್ರೀ ಮೇಲಿನ ದೌರ್ಜನ್ಯ .
*ಅವಕಾಶ ವಂಚಿತ ಹೆಣ್ಣು ಮಕ್ಕಳು.
* ಕುಪೋಶಿತ ಬೆಳವಣಿಗೆ.
ಇವುಗಳ ಅರಿವನ್ನು ಮಹಿಳಾ ಶಿಕ್ಷಕಿಯರು ಹೊಂದಿದ್ದು ಮೂಲದಿಂದಲೇ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮತ್ತು ಕಾರ್ಯಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಇನ್ನಷ್ಟು ಹೊಸ ಆಲೋಚನೆ ಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಾದ ಅಗತ್ಯ ಇದೆ.
‘ ಪ್ರಮುಖ ಜವಾಬ್ದಾರಿಗಳು”
* ತಮ್ಮ ಕಾರ್ಯ ವ್ಯಾಪ್ತಿಯ ಪರಿಮಿತಿಯೊಳಗೆ ಮಹಿಳಾ ಸಬಲತೆಗೆ ಅಗತ್ಯ ಮಾಹಿತಿ ಜ್ಞಾನವನ್ನು ಹೆಣ್ಣು ಮಕ್ಕಳಿಗೆ ಒದಗಿಸಬೇಕಾಗಿದೆ.
* ಹದಿಹರೆಯದ ಬಾಲಕ ಬಾಲಕಿಯರಲ್ಲಿ ಆರೋಗ್ಯ ,ಸುರಕ್ಷಿತ ತಾಯ್ತನ, ಸಂತಾನೋತ್ಪತ್ತಿ, ವಿವಾಹ ವಯಸ್ಸು, ಇವುಗಳ ಅರಿವು ಮೂಡಿಸಬಹುದು.
* ಸ್ಪಷ್ಟವಾದ ಲಿಂಗತ್ವ ಪಾತ್ರಗಳನ್ನು ಬೆಳೆಸಲು ಮಕ್ಕಳಲ್ಲಿ ಕಾರ್ಯ ಹಂಚಿಕೆ ಮಾಡಬಹುದು. ಉದಾಹರಣೆಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಇಬ್ಬರಿಗೂ ತರಗತಿ ನಾಯ್ಕತ್ವದ ಜವಾಬ್ದಾರಿ ನೀಡುವುದು.
ಹೆಣ್ಣು ಮಕ್ಕಳು ನೆಲ ಆಗೆದು ಗಿಡ ನೆಟ್ಟರೆ ಗಂಡು ಮಕ್ಕಳು ನೀರು ಹಾಕುವ ಕಾರ್ಯ ಹಂಚಿಕೆ ಮಾಡುವುದು.
ರೂಡಿಯಿಂದ ಲಿಂಗತ್ವದ ಆಧಾರದ ಮೇಲೆ ಬಂದ ಕಾರ್ಯಗಳನ್ನು ಅದಲು ಬದಲು ಮಾಡಿ ಜವಾಬ್ದಾರಿ ನೀಡುವುದು.
* ಹೆಣ್ಣು ಮಕ್ಕಳಿಗೆ ಬೇಕಾಗುವ ಪೂರಕ ಪೌಷ್ಟಿಕ ಆಹಾರ ಮತ್ತು ದೇಹ ಸ್ವಚ್ಛತೆಯನ್ನು ಹೇಳಿಕೊಡುವುದು.
* ಸ್ವತಂತ್ರ ಚಿಂತನೆ, ಅಭಿವ್ಯಕ್ತಿ, ಆತ್ಮವಿಶ್ವಾಸ ,ಆತ್ಮ ಗೌರವಗಳನ್ನು ಮಕ್ಕಳಲ್ಲಿ ಬೆಳೆಸುವ ಪರಿ ಅರಿತುಕೊಂಡು ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿಕೊಳ್ಳಬೇಕು.
* ಸ್ವಾಭಾವಿಕವಾಗಿ ಹೆಣ್ಣು ಮಕ್ಕಳು ನಿರ್ವಹಿಸಲೇಬೇಕಾದ ಕಾರ್ಯಗಳ ಬಗ್ಗೆ ಹೆಣ್ಣು ಮಕ್ಕಳು ಹೆಮ್ಮೆಪಟ್ಟುಕೊಳ್ಳಬೇಕಾದ ವಿಷಯಗಳನ್ನು ವಿವರವಾಗಿ ತಿಳಿಸಬೇಕು. ಉದಾಹರಣೆಗೆ, ಗರ್ಭಾಶಯ ಹೊಂದಿರುವುದು ಪ್ರಕೃತಿ ದತ್ತ ಕೊಡುಗೆಯಾಗಿದೆ.
ಮಗುವಿನ ಪೋಷಣೆಗಾಗಿ ಸ್ತನ ಹೊಂದಿರುವುದು ಸೃಷ್ಟಿ ಮುಂದುವರಿಕೆಗೆ ಇರುವ ದೇಹ ರಚನೆ. ಇಂತಹ ವಿಚಾರಗಳಲ್ಲಿ ಹೆಣ್ಣು ಮಕ್ಕಳು ಅಭಿಮಾನ ಇಟ್ಟುಕೊಳ್ಳ ಬೇಕೇ ಹೊರತು ಅಸಹ್ಯ ಪಡ ಬಾರದು ಮತ್ತು ದುರ್ಬಳಕೆ ಗೆ ಅವಕಾಶ ನೀಡಬಾರದು ಎಂಬುದನ್ನು ತಿಳಿಸಿಕೊಡಬೇಕು.
* ಹಕ್ಕು ಮತ್ತು ಕಾನೂನಿನ ಅವಕಾಶಗಳು ಹಾಗೂ ಸಾಮಾಜಿಕ ನ್ಯಾಯದ ಅರಿವು ಮಹಿಳಾ ಶಿಕ್ಷಕಿಯರಿಗೆ ಇರಬೇಕು. ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಹದಿ ಹರೆಯದ ಹೆಣ್ಣು ಮಕ್ಕಳಿಗೆ ತಿಳಿಸಬೇಕಾಗುತ್ತದೆ.
* ಭ್ರೂಣ ಲಿಂಗ ಹತ್ಯೆ, ಅತ್ಯಾಚಾರ, ಲಿಂಗ ಅಸಮಾನತೆ ಇವುಗಳ ಬಗ್ಗೆ ಗಂಡು ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ತಿಳಿ ಹೇಳುತ್ತಾ ಸಾಗಬೇಕು .ಹಾಗೂ ತನ್ನ ಸಹಪಾಠಿ, ಸಹೋದರಿ ,ಇತರ ಹೆಣ್ಣು ಮಕ್ಕಳೊಂದಿಗೆ ವರ್ತನೆ ಹೇಗಿರಬೇಕೆಂಬುದನ್ನು ಮಹಿಳಾ ಶಿಕ್ಷಕಿಯರು ತಿಳಿಸಬೇಕು .
*ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಬದಲಾಗಿ ,ಅವಳ ಮದುವೆ ,ಆಭರಣ, ವಸ್ತ್ರಗಳಿಗೆ ಹಣ ಸಂಗ್ರಹಿಸಲು ತವಕ ಪಡುವ ಕುಟುಂಬ ವ್ಯವಸ್ಥೆ ಒಳಗೆ ಹೆಣ್ಣು ಮಕ್ಕಳು ಹೇಗೆ “ಸರಳ ಜೀವನವನ್ನು” ಸರಕ್ಷಿತವಾಗಿ ರೂಡಿಸಿಕೊಳ್ಳಬೇಕೆಂಬುದನ್ನು ಶಿಕ್ಷಕಿಯರು ಮಾದರಿ ಯಾಗಿದ್ದು ಹೇಳಿಕೊಡ ಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.
*ಶಾಲೆ ಮತ್ತು ಮನೆ ಎರಡರಲ್ಲೂ ಹೆಣ್ಣು ಮಕ್ಕಳ ನಡೆ ನುಡಿಯ ಮೇಲೆ ಕೆಲಸಗಳು, ಆಲೋಚನೆ ಮೇಲೆ ಗಂಡು ಮಕ್ಕಳು ಬಾಲ್ಯದಿಂದಲೇ ಒಂದು ಬಿಗಿ ಹಿಡಿತ ಇಟ್ಟುಕೊಳ್ಳಲು ಸಹಜವಾಗಿ ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣುಮಕ್ಕಳಿಬ್ಬರಲ್ಲಿಯೂ ಮಹಿಳಾ ಶಿಕ್ಷಕಿಯರು ಮುಂದೆ ಇದರ ಪರಿಣಾಮವಾಗಿ ಉಂಟಾಗುವ ಸಮಸ್ಯೆ ಗಳ ಬಗ್ಗೆ ತಿಳಿಹೇಳಬೇಕಾಗುತ್ತದೆ.
* ಶಿಕ್ಷಕ ಮತ್ತು ಪೋಷಕರ ನಡುವೆ ಅಗಾಗ್ಗೆ ನಡೆಯುವ ಶೈಕ್ಷಣಿಕ ಭಾಗಿದಾರರ ಸಭೆಯಲ್ಲಿ ಹೆಣ್ಣು ಮಕ್ಕಳ ಸಾಧನೆ ಸವಾಲುಗಳನ್ನು ಚರ್ಚಿಸಬೇಕು.
* ಒಳ್ಳೆಯ ಶಿಕ್ಷಣ ದಿಂದ ಒಂದು ಕುಟುಂಬ,ಒಂದು ಸಮಾಜ,ಆ ಮೂಲಕ ಒಂದು ಸದೃಢ ರಾಷ್ಟ್ರ ನಿರ್ಮಾಣ ದ ಗುರಿ ಶಿಕ್ಷಣ ದ್ದು ಎಂಬ ಅರಿವು ಇಟ್ಟುಕೊಂಡು ಮಹಿಳಾ ಶಿಕ್ಷಕಿಯರು ಕಾರ್ಯ ಪ್ರವೃತ್ತರಾಗಬೇಕು.
ತನಗೆ ವಹಿಸಿರುವ ಪಠ್ಯಪುಸ್ತಕದ ಪಾಠಗಳನ್ನು ಪೂರೈಸಿ ತರಗತಿಯಿಂದ ಹೊರಬರುವ ಮಹಿಳಾ ಶಿಕ್ಷಕಿಯರಲ್ಲಿ ಮಾನವೀಯತೆಯ ಒಳನೋಟ ಒಂದು ಜಾಗೃತವಾಗಬೇಕು ಎಂಬುದು ಈ ಲೇಖನದ ಉದ್ದೇಶವಾಗಿದೆ.ಅನಾಥ ಮಹಿಳೆಯರು, ವೃದ್ಧಾಪ್ಯದ ಮಹಿಳೆಯರು, ಮಾನಸಿಕ ಅಸ್ವಸ್ಥ ಮಹಿಳೆಯರು,ದೌರ್ಜನ್ಯ ಕ್ಕೆ ಈಡಾಗಿ ಬದುಕು ಕಳೆದುಕೊಂಡ ಮಹಿಳೆಯರು, ನಮ್ಮ ಸುತ್ತಲಿರುವಾಗ ಮಹಿಳಾ ಶಿಕ್ಷಕಿಯರು ಶಾಲಾ ಹಂತದಲ್ಲಿಯೇ ಗಂಡು ಹೆಣ್ಣಿನ ನಡುವಿನ ಗೌರವಯುತ ಸಂಬಂಧ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ತಮ್ಮ ಒಳಗಣ್ಣು ತೆರೆದು ನೋಡಬೇಕಾಗಿದೆ.
ಅನೇಕ ವರ್ಷಗಳ ಮಹಿಳಾ ಪರ ಹೋರಾಟ ಮಾಡಿ ಇಂದು ಅದರ ಪಲಾನುಭವಿಗಳಾದ ಮಹಿಳೆಯರು ಒಂದು ಸ್ವಾಸ್ಥ್ಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಆಲೋಚನೆ ಮಾಡುವರೆಂದು ಆಶಿಸೋಣ. ಅವಕಾಶ ವಂಚಿತ ಹೆಣ್ಣು ಮಕ್ಕಳಿಗೆ,ಕಷ್ಟದಲ್ಲಿರುವ ಮಹಿಳೆಯರಿಗೆ ಗುಲಾಭಿ ಜೊತೆಗೆ ಸಹಾಯದ ಹಸ್ತ ಚಾಚಿ ಮಹಿಳಾ ದಿನ ಆಚರಿಸಿಕೊಳ್ಳೋಣವೇ….
ಪ್ರಮೀಳಾ. ಎಸ್.ಪಿ
ಇದೆಲ್ಲಾ ವಿಷಯ ಈಗಾಗಲೇ ಪ್ರೌಢಶಾಲೆಗಳಲ್ಲಿ ಅಳವಡಿಸಲಾಗಿದೆ.ವಿಶೇಷತೆ ಕಾಣುತ್ತಿಲ್ಲ. ಆದರೆ ಮತ್ತೊಮ್ಮೆ ಶಿಕ್ಷಕಿಯರಿಗೆ ನೆನಪಿಸಿರುವುದು ಶ್ಲಾಘನೀಯ.