ನಮ್ಮ ದೇಹದ ಎಲ್ಲ ಭಾಗಗಳ ಅಷ್ಟೂ ಮೇದಸ್ಸನ್ನೂ ಒಟ್ಟಾಗಿ ‘ಕೊಬ್ಬು’ ಎಂದು ಕರೆಯಲಾಗಿದೆ; ಆದರೆ, ವಾಸ್ತವವಾಗಿ ಕೊಬ್ಬಿನಲ್ಲಿ ಅನೇಕ ಮಾದರಿಗಳಿವೆ. ಅವುಗಳಲ್ಲಿ ಕೆಲವು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಕೆಲಸ ಮಾಡಿ ಕಾಯಿಲೆಗಳ ಉತ್ಪನ್ನಕ್ಕೆ ಕಾರಣವಾದರೆ, ಇನ್ನು ಕೆಲವು ನಮಗೆ ಪ್ರಯೋಜನಕಾರಿ ಮತ್ತು ನಮ್ಮ ದೇಹಕ್ಕೆ ಅತ್ಯವಶ್ಯಕ ಕೂಡ.                            
ಕೊಬ್ಬಿನಲ್ಲಿ ಮೂರು ವಿಧದ ಬಣ್ಣಗಳಿವೆ – ಬಿಳಿ, ಕಂದು ಮತ್ತು ಬೀಜ್ (White, Brown and Beige). ಅಷ್ಟೇ ಅಲ್ಲದೆ, ನಮ್ಮ ದೇಹದೊಳಗಿನ ಎಲ್ಲ ಬಗೆಯ ಕೊಬ್ಬು ಮೂರು ವಿಧಾನಗಳಲ್ಲಿ  ಸಂಗ್ರಹವಾಗಿರುತ್ತವೆ – ಅವಶ್ಯಕ ಕೊಬ್ಬು (Essential Fat), ಉಪಚರ್ಮೀಯ ಕೊಬ್ಬು (Subcutaneous Fat)  ಮತ್ತು ಒಳಾಂಗಣ ಕೊಬ್ಬು (Visceral Fat)  ಎಂದು. ಪ್ರತಿಯೊಂದು ರೀತಿಯ ಕೊಬ್ಬು ಸಹ ತನ್ನದೇ ಆದಂತಹ ಪಾತ್ರ ನಿರ್ವಹಿಸುತ್ತದೆ. ನಮ್ಮ ಆರೋಗ್ಯಕರ ಉಪಾವಚಯವನ್ನು (healthy metabolism) ಮತ್ತು ಸಂಗತಗಳ/ಅಂತಃಸ್ರಾವಗಳ ಪ್ರಮಾಣಗಳನ್ನು (harmone levels) ಕೆಲವು ಥರದ ಕೊಬ್ಬು ಉತ್ತೇಜಿಸಿದರೆ, ಇನ್ನು ಕೆಲವು ಜೀವಹಾನಿಕಾರಕ ಕಾಯಿಲೆಗಳಾದ ಮಧುಮೇಹ (ಸಕ್ಕರೆ ಕಾಯಿಲೆ), ಹೃದಯ ಸಂಬಂಧಿ ರೋಗ, ಅಧಿಕ ರಕ್ತದೊತ್ತಡ ಮತ್ತು ಅರ್ಬುದ ರೋಗ (ಕ್ಯಾನ್ಸರ್) ಮುಂತಾದ ವ್ಯಾಧಿಗಳಿಗೆ ದಾರಿ ಮಾಡಿಕೊಡುತ್ತವೆ.
ಈಗ ಈ ಮೂರು ರೀತಿಯ ಕೊಬ್ಬಿನ ಬಗ್ಗೆ ಇನ್ನಷ್ಟು ಮಾಹಿತಿ…

1)ಬಿಳಿ ಕೊಬ್ಬು:
ಜನಸಾಮಾನ್ಯರ ಕಲ್ಪನೆಯಲ್ಲಿ ಕೊಬ್ಬಿನ ಬಣ್ಣ ಎಂದರೆ ಅದು ಬಿಳಿ ಬಣ್ಣದ್ದೇ ಆಗಿರುತ್ತದೆ ಎಂದು. ಬಿಳಿ ಕೊಬ್ಬು ಗಾತ್ರದಲ್ಲಿ ದೊಡ್ಡದಾದ ಮತ್ತು ಶ್ವೇತ ಬಣ್ಣದ ಕೋಶಗಳಿಂದ ಕೂಡಿದ್ದು, ಚರ್ಮದ ಕೆಳಭಾಗದಲ್ಲಿ, ಅಥವ ಉದರದೂಳಗಿನ ಅಂಗಗಳ ಸುತ್ತ ಮತ್ತು ತೋಳು, ತೊಡೆ ಮತ್ತು ಪೃಷ್ಠ (ಕುಂಡೆ) ಗಳ ಸುತ್ತಮುತ್ತ ಶೇಖರವಾಗಿರುತ್ತದೆ. ಬಿಳಿ ಕೊಬ್ಬಿನ ಕೋಶಗಳ ಮೂಲಕವೇ ನಮ್ಮ ದೇಹಕ್ಕೆ ಮುಂದೆ ಅವಶ್ಯಕವಾದ ಊರ್ಜದ (ಎನರ್ಜಿ/ಶಕ್ತಿ) ಸಂಗ್ರಹ ಶೇಖರಿಸಿರುವುದು. ಈ ಥರದ ಕೊಬ್ಬು ನಮ್ಮ ದೇಹದ ಕೆಲವು ಅಂತಃಸ್ರಾವಗಳ (ಹಾರ್ಮೋನ್) ಕಾರ್ಯಚಟುವಟಿಕೆಗಳಿಗೆ ಪ್ರಮುಖ ಕಾರಣ. ಅವುಗಳೆಂದರೆ – ಮಹಿಳೆಯರ ಲೈಂಗಿಕತೆಗೆ ಅವಶ್ಯವಾದ ‘ಈಸ್ಟ್ರೊಜನ್’, ನಮ್ಮ ಹಸಿವನ್ನು ಉತ್ತೇಜಿಸುವ ‘ಲೆಪ್ಟಿನ್’, ಸಿಹಿಮೂತ್ರರೋಗವನ್ನು ಅಂಕೆಯಲ್ಲಿಡಲು ಬೇಕಾದ ‘ಇನ್ಸುಲಿನ್’, ‘ಕಾರ್ಟಿಸೋಲ್’ ಎಂಬ ಒತ್ತಡ/ಉದ್ವೇಗದ ಹಾರ್ಮೋನ್, ಬೆಳವಣಿಗೆಗೆ ಬೇಕಾದ ‘ಗ್ರೋಥ್ ಹಾರ್ಮೋನ್’ ಇತ್ಯಾದಿ.                                      
ಬಿಳಿ ಕೊಬ್ಬಿನ ಸ್ವಲ್ಪ ಭಾಗ ನಮ್ಮ ದೇಹದ ಉತ್ತಮ ಆರೋಗ್ಯಕ್ಕೆ ಅತ್ಯವಶ್ಯಕವೇ ಆದರೂ, ಅದು ಅಧಿಕವಾದರೂ ಸಹ ಹಾನಿಕಾರಕ.        

   

ಆರೋಗ್ಯವಂತ ದೇಹದ ಕೊಬ್ಬಿನ ಪ್ರತಿಶತದ ವ್ಯಾಪ್ತಿಯು (body fat percentage range) ವ್ಯಕ್ತಿಯೊಬ್ಬನ ದೈಹಿಕ ಚಟುವಟಿಕೆ ಹಾಗು ಆತ ತನ್ನ ಮೈಕಟ್ಟನ್ನು ಹೇಗೆ ನಿರ್ವಹಿಸಿದ್ದಾನೆ (fitness) ಎಂಬುದನ್ನು ಅವಲಂಬಿಸಿರುತ್ತದೆ. ಕ್ರೀಡಾಪಟುಗಳು ಆಗಿರದಂಥ ಪುರುಷರಲ್ಲಿ ಶೇಕಡ 14 ರಿಂದ 24 ಮತ್ತು ಮಹಿಳೆಯರಲ್ಲಿ ಶೇಕಡ 21 ರಿಂದ 31 ರವರೆಗೆ ಒಟ್ಟು ದೈಹಿಕ ಕೊಬ್ಬು ಇರಬೇಕಾಗುತ್ತದಂತೆ. ಆದರೆ ಈ ರೀತಿ ವೈಜ್ಞಾನಿಕವಾಗಿ ಇರಬಹುದಾದ ಕೊಬ್ಬಿಗಿಂತ ಹೆಚ್ಚಾದರೆ ಕೆಲವು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು. ಅವುಗಳೆಂದರೆ:
.. ಟೈಪ್ 2 ಮಧುಮೇಹ ರೋಗ.
..ಹೃದಯದ ಅಪಧಮನಿ ರೋಗ (ಕಾರೊನರಿ ಆರ್ಟರಿ ಡಿಸೀಸ್)
.. ಅಧಿಕ ರಕ್ತದೊತ್ತಡ
..  ಪಾರ್ಶ್ವವಾಯು
.. ಹಾರ್ಮೋನ್ ಅಸಮತೋಲನ

.. ಗರ್ಭಾವಸ್ಥೆಯ ತೊಡಕುಗಳು
.. ಯಕೃತ್ತಿನ ರೋಗಗಳು
.. ಮೂತ್ರಪಿಂಡದ ರೋಗಗಳು
.. ಕ್ಯಾನ್ಸರ್ ಮುಂತಾಗಿ.

2) ಕಂದು ಕೊಬ್ಬು:
ಕಂದು ಬಣ್ಣದ ಕೊಬ್ಬು ಪ್ರಮುಖವಾಗಿ ಹಸುಳೆಗಳಲ್ಲಿ ಇರುವಂಥದು; ಹಾಗು ವಯಸ್ಕರಲ್ಲೂ ಅತ್ಯಲ್ಪ ಪ್ರಮಾಣದಲ್ಲಿ ಕುತ್ತಿಗೆ ಮತ್ತು ಭುಜ ಭಾಗಗಳಲ್ಲಿ ಕಂಡುಬರುವುದು. ಈ ಥರದ ಕೊಬ್ಬು ನಮ್ಮನ್ನು ಬೆಚ್ಚಗಿಡುವುದಕ್ಕಾಗಿ ಕೊಬ್ಬಿನಾಮ್ಲಗಳ ದಹನ ಕ್ರಿಯೆ ಮಾಡುವುದು. ಹಾಗಾಗಿ ಕಂದು ಕೊಬ್ಬನ್ನು ನಮ್ಮ ದೇಹದ ಬೊಜ್ಜು ಕರಗಿಸುವ ವಿಧಾನಗಳಿಗೆ ಹೇಗೆ ಉತ್ತೇಜಿಸಬಹುದು ಎಂಬತ್ತ ಹೆಚ್ಚಿನ ಸಂಶೋಧನೆಗೆ ವಿಜ್ಞಾನಿಗಳು ತೊಡಗಿದ್ದಾರಂತೆ.

3) ಬೀಜ್ ಕೊಬ್ಬು:                          
ಬೀಜ್ ಬಣ್ಣದ ಕೊಬ್ಬಿನ ಕೋಶಗಳು ಬಿಳಿ ಮತ್ತು ಕಂದು ಕೊಬ್ಬಿನ ಕ್ರಿಯೆಗಳ ಮಧ್ಯದ ಪಾತ್ರ ನಿರ್ವಹಿಸುವುದು. ಕಂದು ಕೊಬ್ಬಿನ ಹಾಗೆಯೇ ಬೀಜ್ ಕೊಬ್ಬು ಕೂಡ ನಮ್ಮ ದೈಹಿಕ ಕೊಬ್ಬನ್ನು ಸಂಗ್ರಹಿಸಿಡುವ ಬದಲಿಗೆ ಅದರ ದಹನ ಮಾಡುವುದು. ಹಾಗಾಗಿ ಆ ನಿಟ್ಟಿನಲ್ಲಿ ದೈಹಿಕ ಬೊಜ್ಜನ್ನು ಕಡಿಮೆಗೊಳಿಸಿ, ಆರೋಗ್ಯವಂತ ಕೊಬ್ಬನ್ನು ದೇಹದಲ್ಲಿ ಅಧಿಕಗೊಳಿಸುವತ್ತ ವಿಜ್ಞಾನ ತೊಡಗಿದೆ.

ಈಗ ಸಂಗ್ರಹ ಕೊಬ್ಬಿನ ಮಾದರಿಗಳ ಬಗ್ಗೆ ಒಂದಿಷ್ಟು ಮಾಹಿತಿ:

1) ಅವಶ್ಯಕ ಕೊಬ್ಬು (Essential Fat):
ಅವಶ್ಯಕ ಕೊಬ್ಬು ಎಂದರೆ ನಮ್ಮ ಆರೋಗ್ಯವಂತ ದೇಹಕ್ಕೆ ಮತ್ತು ಜೀವನಕ್ಕೆ ಅತ್ಯವಶ್ಯಕವಾದ ಮೇದಸ್ಸು ಎಂದರ್ಥ. ಇಂಥ ಕೊಬ್ಬು ನಮ್ಮ ದೇಹದ ಮೆದುಳು, ನರಗಳು, ಮೂಳೆಮಜ್ಜೆ (bone marrow)  ಮತ್ತು ನಮ್ಮ ಅಂಗಗಳ ರಕ್ಷಣೆಗಾಗಿ ಅವುಗಳನ್ನು ಹೊದಿಕೆಯ ರೀತಿ ಸುತ್ತಿಕೊಂಡಿರುವ ಪೊರೆಗಳಲ್ಲಿ ಕಂಡುಬರುತ್ತದೆ.
ಈ ಅವಶ್ಯಕ ಕೊಬ್ಬು ಹಾರ್ಮೋನ್ ನಿಯಂತ್ರಣದಲ್ಲಿ (ಸಂತಾನ ಕ್ರಿಯೆ ನಿಯಂತ್ರಿಸುವ ಹಾರ್ಮೋನುಗಳೂ ಸಹ ಸೇರಿದಂತೆ), ವಿಟಮಿನ್ನುಗಳ ಒಳಹೀರುವಿಕೆಯ ಪ್ರಕ್ರಿಯೆಯಲ್ಲಿ ಮತ್ತು ದೇಹದ ಉಷ್ಣಾಂಶ ನಿಯಂತ್ರಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ವಿಜ್ಞಾನಿಗಳ ಪ್ರಕಾರ ಮಹಿಳೆಯರಲ್ಲಿ ಈ ಥರದ ಕೊಬ್ಬು ಅವರ ದೇಹದ 10 ರಿಂದ
13 ರಷ್ಟು ಇದ್ದರೆ ಅವರ ಆರೋಗ್ಯಕ್ಕೆ ಉತ್ತಮವಂತೆ. ಆದರೆ ಪುರುಷರಲ್ಲಿ ಕೇವಲ ಶೇಕಡ 2 ರಿಂದ 5 ರಷ್ಟಿದ್ದರೆ ಸಾಕಂತೆ.

2) ಉಪಚರ್ಮೀಯ ಕೊಬ್ಬು (Subcutaneous Fat):
ನಮ್ಮ ಚರ್ಮದ ಕೆಳಗೆ ಸಂಗ್ರಹಿಸಲ್ಪಟ್ಟ ಕೊಬ್ಬು ಇದು. ಬಿಳಿ, ಕಂದು ಮತ್ತು ಬೀಜ್ ಬಣ್ಣದ ಕೋಶಗಳ ಸಂಯೋಜನೆಗಳಿಂದ ಕೂಡಿದ್ದು ಈ ಥರದ ಕೊಬ್ಬು. ನಮ್ಮ ದೇಹದ ಬಹುತೇಕ ಕೊಬ್ಬು ಈ ರೀತಿ ಉಪಚರ್ಮೀಯ. ನಮ್ಮ ತೋಳು, ತೊಡೆ, ಕುಂಡೆ ಮತ್ತು ಹೊಟ್ಟೆಯ ಚರ್ಮದ ಮೂಲಕ ಜಿಗುಟಿ ಹಿಸುಕಬಹುದಾದಂಥ ಕೊಬ್ಬು ಇದು. ಕೈವಾರದ ಸಹಾಯದಿಂದ ಈ ಕೊಬ್ಬಿನ ಪರಿಮಾಣದ ಅಳತೆ ಸಾಧ್ಯ. ಹಾಗೆ ಮಾಡುವುದರಿಂದ ದೇಹದ ಒಟ್ಟು ಕೊಬ್ಬಿನ ಪ್ರತಿಶತದ ಅಳತೆಗೆ ಅನುಕೂಲವಾಗುತ್ತದೆ. ಸ್ವಲ್ಪ ಪ್ರಮಾಣದ ಉಪಚರ್ಮೀಯ ಕೊಬ್ಬು ನಮಗೆ ಅವಶ್ಯ ಮತ್ತು ಆರೋಗ್ಯಕರ; ಆದರೆ, ಅತಿಯಾದರೆ ಹಾರ್ಮೋನುಗಳ ಅಸಮತೋಲನಕ್ಕೆ ಹಾಗು ಸೂಕ್ಷ್ಮತೆಗೆ ಕಾರಣವಾಗಬಹುದು.

3) ಒಳಾಂಗಣ ಕೊಬ್ಬು (Visceral Fat):
ಒಳಾಂಗಣ ಅಥವ “ಉದರ ಕೊಬ್ಬು” ಎಂದು ಕೂಡ ಕರೆಸಿಕೊಳ್ಳುವ ಈ ಥರದ ಕೊಬ್ಬು, ಹೊಟ್ಟೆಯ ಸುತ್ತ, ಮತ್ತು ನಮ್ಮ ಎಲ್ಲ ಥರದ ಪ್ರಮುಖ ಅಂಗಗಳಾದ ಯಕೃತ್, ಮೇದೋಜ್ಜೀರಕ ಗ್ರಂಥಿ, ಕರುಳುಗಳು, ಮೂತ್ರಪಿಂಡಗಳು ಹಾಗು ಹೃದಯದ ಸುತ್ತ ಹರಡಿಕೊಂಡಿರುವ ಇದು ಬಿಳಿ ಕೊಬ್ಬು. ಆದ್ದರಿಂದ ಈ ಕೊಬ್ಬು ಅಧಿಕವಾದರೆ, ಮಧುಮೇಹ, ಹೃದಯರೋಗ, ಪಾರ್ಶ್ವವಾಯು, ಅಪಧಮನಿ ರೋಗ, ಮೂತ್ರಪಿಂಡ ರೋಗ ಮತ್ತು ಕ್ಯಾನ್ಸರ್ ರೋಗಗಳಿಗೆ ದಾರಿಯಾಗಬಹುದು.

ಉಪಯೋಗಗಳು:
ದೇಹದ ಎಲ್ಲ ಭಾಗಗಳ ಯೋಗ್ಯವಾದ ರಚನೆ ಅತಿ ಮುಖ್ಯ. ಹಾಗೆಯೇ ಪ್ರತಿ ದೇಹಕ್ಕೆ ಸೂಕ್ತವಾದ ಶೇಕಡಾವಾರು ಕೊಬ್ಬಿಂದ ಆ ಶರೀರದ ಅತ್ಯುತ್ತನ ಕಾರ್ಯ ಚಟುವಟಿಕೆ ಕೂಡ ಸಾಧ್ಯ. ಅವಶ್ಯವಾದಷ್ಟು ಕೊಬ್ಬಿಂದ ಆರೋಗ್ಯಕ್ಕೆ ಉಪಯೋಗಗಳು: ದೇಹದ ಉಷ್ಣಾಂಶ ನಿಯಂತ್ರಣ ಮಾಡುವುದು, ಸಮತೋಲನವಾದ ಹಾರ್ಮೋನುಗಳ ಪರಿಮಿತಿ ಕಾಪಾಡುವುದು, ಉತ್ತಮ ಸಂತಾನ ಆರೋಗ್ಯ ನೀಡುವುದು, ಸಾಕಾಗುವಷ್ಟು ವಿಟಮಿನ್ನುಗಳನ್ನು ಸಂಗ್ರಹಿಸುವುದು, ಸಮತೋಲನವಾದ ರಕ್ತದ ಸಕ್ಕರೆಗೆ ಎಡೆ ಮಾಡಿಕೊಡುವುದು, ಆರೋಗ್ಯಕರ ಉಪಾವಚಯ (metabolism) ಮತ್ತು ಉತ್ತಮ ನರಸಂಬಂಧಿ ಕಾರ್ಯಕ್ಷಮತೆ ಕಾಪಾಡುವುದು.

ತೊಂದರೆಗಳು:
ಅಧಿಕವಾದ ಬಿಳಿ, ಅದರಲ್ಲೂ ಒಳಾಂಗಣ ಕೊಬ್ಬಿಂದ ನಮ್ಮ ದೇಹಕ್ಕೆ ಆಗುವ ಹಾನಿಗಳು: ಹೃದ್ರೋಗ, ಪಾರ್ಶ್ವವಾಯು,  ಹೃದಯ ಅಪಧಮನಿ ರೋಗ, ಅಥಿರೋಸ್ಕ್ಲೀರೋಸಿಸ್ ರೋಗ, ಮಧುಮೇಹ ರೋಗ, ಗರ್ಭಾವಸ್ಥೆಯ ಕಾಯಿಲೆಗಳು, ಹಾರ್ಮನುಗಳ ತೊಂದರೆ, ಕೆಲವು ಥರ ಕ್ಯಾನ್ಸರ್ ಮುಂತಾಗಿ.

ಕೊಬ್ಬಿನ ಬಗ್ಗೆ ಹೇಳಬೇಕಾದ ಮಾಹಿತಿ ಇಷ್ಟಕ್ಕೆ ಸೀಮಿತ ಖಂಡಿತ ಅಲ್ಲ. ಒಂದು ಪುಸ್ತಕವನ್ನೆ ರಚಿಸಬಹುದು. ಆದರೆ ಸಾಮಾನ್ಯ ಜ್ಞಾನಕ್ಕಾಗಿ ಇಷ್ಟು ಸಾಕು ಎಂದು ನನ್ನ ಅನಿಸಿಕೆ; ಅಥವ ಇದೂ ಸಹ ಹೆಚ್ಚಾಯಿತೋ ಏನೋ ಕಾಣೆ.


One thought on “

  1. ಅಚ್ಚ ಕನ್ನಡದಲ್ಲಿ ಪ್ರತಿಯೊಬ್ಬರಿಗೂ ಅಥ೯ವಾಗುವ ರೀತಿಯಲ್ಲಿ ಮಾಹಿತಿ ನೀಡಿರುವಿರಿ ಸರ್, ಧನ್ಯವಾದಗಳು ನಿಮಗೆ

Leave a Reply

Back To Top