ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಹುಸಿ ಪ್ರೀತಿಯ ನಂಬಿ ನಶೆಯೇರಿಸಿಕೊಂಡು ಏಕಾದೆ ಪಾಗಲ್
ಹಸಿದ ಹಂಬಲ ಹಾಸಿ ಬಿಸಿಯೇರಿಸಿಕೊಂಡು ಏಕಾದೆ ಪಾಗಲ್

ನಲುಮೆಯಿಂದ ಆಡಿದ ಮಾತುಗಳೆಲ್ಲ ಸತ್ಯವೆಂದು ನಂಬಿಬಿಟ್ಟಿ
ತನುವ ತದಿಕಿ ತಲ್ಲಣಿಸಿ ತಾಪಪೆರಿಸಿಕೊಂಡು ಏಕಾದೆ ಪಾಗಲ್

ನಗುಮೊಗದ ಕಣ್ಣೋಟ ಪಿಸುಮಾತುಗಳೆಲ್ಲ ದಿಟವೆಂದುಬಿಟ್ಟೆ
ಮನದ ಮಾಮರವ ಹಸಿರಾಗಿಸಿಕೊಂಡು ಏಕಾದೆ ಪಾಗಲ್

ಮಂಪರಿನ ಸ್ಪರ್ಶ ಸುಖದ ಹರ್ಷ ಶಾಶ್ವತವೆಂದು ತಿಳಿದುಬಿಟ್ಟೆ
ಒಡಲಾಳ ತೆರೆದು ತೃಷೆಯೇರಿಸಿಕೊಂಡು ಏಕಾದೆ ಪಾಗಲ್

ಸುಳ್ಳು ಭರವಸೆಯ ಬಾನಿಗೆ ಕಟ್ಟಿದ ತೋರಣಕ್ಕೆ ಮರುಳಾಗಿಬಿಟ್ಟೆ
ತುಡಿತಗಳನಂತ ಮಿಡಿಸಿ ಹಸಿಯಾಗಿಸಿಕೊಂಡು ಏಕಾದೆ ಪಾಗಲ್

ಚಿತ್ತ ಕದಡಿ ಕೆಣಕಿದ ಮಾಯಗಾರನ ಮೋಸದ ಬಲೆಗೆ ಸಿಕ್ಕುಬಿಟ್ಟೆ
ಕಂಡ ಕನಸುಗಳ ಆಸೆ ಗಾಸಿಯಾಗಿಸಿಕೊಂಡು ಏಕಾದೆ ಪಾಗಲ್

ಅನುಳ ಹೃದಯ ಹಿಂಡಿ ಹಿಸುಕಿ ಗಾಯಮಾಡಿ ದೂರಾಗಿಬಿಟ್ಟೆ
ನಿಲ್ಲದ ಪ್ರೇಮದಾವೇಗ ಹಿಡಿದಿಟ್ಟುಕೊಂಡು ಏಕಾದೆ ಪಾಗಲ್

————————–

One thought on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

Leave a Reply

Back To Top