ಈವತ್ತು ಪ್ರೇಮಿಗಳ ದಿನ, ದೃಢ ನಿರ್ಧಾರದಿಂದ ಹೂದೋಟದ ಕಡೆಗೆ ಹೆಜ್ಜೆ ಹಾಕಿದೆ
ಮುಳ್ಳ ಚುಚ್ಚಿಸಿ ಕೊಂಡು
ಸುಂದರ ಕೆಂಪು ಗುಲಾಬಿಯ ಆರಿಸಿದೆ

ಅದರ ಸೊಗಸು ಹಾಗೂ ಪರಿಮಳ
ನನ್ನ ಹೃದಯ ಬಡಿತ ತೀವ್ರಗೊಳಿಸಿತು
ಅವಳಲ್ಲಿ ನನ್ನ ಪ್ರೀತಿಯ ಅಭಿವ್ಯಕ್ತಿಸಿ
ಅವಳ ತುಟಿ ಚುಂಬಿಸುವಾಸೆ ಮೂಡಿತು

ಹೃದಯ ಆಲಿಂಗನ, ಚುಂಬನ ನೆನೆಸಿ
ಪ್ರೀತಿಯ ಕವಿತೆ ತಯಾರಿಸಿತ್ತು
ಕೈಯಲ್ಲಿದ್ದ ಕೆಂಪು ಗುಲಾಬಿಯು
ಕೆನ್ನೆಯಲ್ಲಿ ಪ್ರತಿಬಿಂಬಿಸುವಂತೆ ಕೆನ್ನೆ ಕೆಂಪಾಗಿತ್ತು

ದೂರದಿಂದಲೆ ಅವಳ ಸುಂದರ ನಡಿಗೆ
ಆಕೆಯ ಪರಿಚಯಿಸಿತ್ತು
ಆದರೆ ಆತನಾರು?
ಹೃದಯ ಮಿಡಿತ ವೇಗವಾಯ್ತು

ಆಕೆಯ ಕೈಯಲ್ಲಿ ಆತನ ಕೆಂಪು
ಗುಲಾಬಿಯು ನನ್ನ ನೋಡಿ ನಗುತಿತ್ತು.
ಒಡೆದ ಗಾಜಿನ ಚೂರಿನಂತೆ ಕ್ಷಣದೊಳಗೆ
ನನ್ನ ಹೃದಯ ಚೂರಾಗಿತ್ತು

ಅವರ ಪ್ರೀತಿಯನ್ನು ಸ್ಪಷ್ಟಗೊಳಿಸಿತ್ತು
ಆಕೆ ಆತನ ಆಲಂಗಿಸಿದ ರೀತಿ
ಕಣ್ಣಂಚಿನಲಿ ಮೂಡಿದ ಭಾವನೆಗಳು
ಹಾರೈಸಿದವು ಅಮರವಾಗಲಿ ನಿಮ್ಮ ಪ್ರೀತಿ


Leave a Reply

Back To Top