ಪ್ರೇಮ ಎಂಬುದು ಮಧುರವಾದ ಕವಿತೆ
ಜೀವ ತುಂಬುವ ಸಂಜೀವಿನಿಯ ಒರತೆ
ಮೊಗೆದಷ್ಟೂ ಒಸರುವ ಬರಿದಾಗದ
ಅಕ್ಷಯ ಪಾತ್ರೆಯದು ಪ್ರೇಮ

ನೂರು ತರಹದ ವೇದನೆಯ ತಂದರೂ
ಸಾವಿರ ಕನಸದು ನುಚ್ಚು ನೂರಾದರೂ
ಮನದ ಬರಹವ ಅಳಿಸಲಾಗದ
ಅಚ್ಚು ಮೂಡಿಸಿಹುದು ಪ್ರೇಮ

ಯುಗಯುಗಗಳ ಇತಿಹಾಸವುಂಟು
ತ್ಯಾಗ ಬಲಿದಾನಗಳ ನೋವುಗಳುಂಟು
ಸಾವಿಗೂ ಹೆದರದೆ ಎದೆಗುಂದದ
ಧೈರ್ಯ ತುಂಬುವುದು ಪ್ರೇಮ

ಹೃದಯದ ಪ್ರತಿಯೊಂದು ಮಿಡಿತದಿ
ನರ ನಾಡಿಗಳ ಕಣಕಣವ ಮೀಟುತಲಿ
ಬದುಕೆಂಬ ಬಂಡಿಯ ಪಯಣದಿ
ಜೀವನೋತ್ಸಾಹ ಹರಿಸುವುದು ಪ್ರೇಮ


Leave a Reply

Back To Top