ಇಂದಿರಾ ಮೋಟೆಬೆನ್ನೂರ ಕವಿತೆ ಮತ್ತೇನಿಲ್ಲ…

ನಿನ್ನ ಜೊತೆ ಜೊತೆಯಾಗಿ
ನಡೆಯುವ ಆಸೆ
ಮತ್ತೇನಿಲ್ಲ….
ನಿನ್ನ ಹೆಜ್ಜೆಗೆ ಗೆಜ್ಜೆಯಾಗಿ
ಘಳಿರೆನುವ ಆಸೆ
ಮತ್ತೇನಿಲ್ಲ….

ನಿನ್ನ ಕವಿತೆಯ ಪದವಾಗಿ
ಉಲಿಯುವಾಸೆ
ಮತ್ತೇನಿಲ್ಲ….
ನಿನ್ನ ತುಟಿಯಂಚಿನ ನಗುವಾಗಿ
ಬಿರಿಯುವಾಸೆ
ಮತ್ತೇನಿಲ್ಲ….

ನಿನ್ನೆದೆಯ ದನಿಯಾಗಿ
ಮಿಡಿವ ಆಸೆ
ಮತ್ತೇನಿಲ್ಲ…
ನಿನ್ನ ಮನದಂಗಳದಿ
ಮಲ್ಲಿಗೆಯಾಗಿ ಅರಳುವಾಸೆ
ಮತ್ತೇನಿಲ್ಲ….

ನಿನ್ನೊಲವ ಆಗಸದಿ
ಚುಕ್ಕೆಯಾಗಿ ಮಿನುಗುವಾಸೆ
ಮತ್ತೇನಿಲ್ಲ…
ನಿನ್ನ ಸ್ನೇಹ ಕಡಲಿನಲ್ಲಿ
ಮುತ್ತಾಗಿ ಹೊಳೆಯುವಾಸೆ
ಮತ್ತೇನಿಲ್ಲ…

ನಿನ್ನಂತರಂಗದ ಹಣತೆಗೆ
ಬೆಳಕಾಗುವಾಸೆ
ಮತ್ತೇನಿಲ್ಲ…
ನೀನಡೆವ ಹಾದಿಬದಿಯ
ಬೇಲಿ ಹೂವಾಗುವಾಸೆ
ಮತ್ತೇನಿಲ್ಲ….

ನಿನ್ನಂಗಳದ ಮಾಮರದಿ
ಕುಹುವಾಗಿ ಪಾಡುವಾಸೆ
ಮತ್ತೇನಿಲ್ಲ….
ನಿನ್ನೆದೆಯ ನೋವುಗಳಿಗೆ
ನೇಹ ನೇವರಿಕೆಯಾಗುವಾಸೆ
ಮತ್ತೇನಿಲ್ಲ….

ನಿನ್ನ ಕಂಗಳಲಿ ಬೆಳದಿಂಗಳಾಗಿ
ಇಳಿದು ಬೆಳಗುವಾಸೆ
ಮತ್ತೇನಿಲ್ಲ…
ನಿನ್ನ ದೂರ ದಾರಿಯ ಪಯಣದಿ
ಬಿಸಿಲಲಿ ನೆರಳಾಗುವಾಸೆ
ಮತ್ತೇನಿಲ್ಲ…

ನಿನ್ನ ಕನಸಿನ ಗೂಡಲಿ
ಮರಿ ಗುಬ್ಬಚ್ಚಿಯಾಗುವಾಸೆ
ಮತ್ತೇನಿಲ್ಲ….
ಶಶಿಯ ವಿಶಾಲ ಸ್ನೇಹ ಶರಧಿಯಲಿ
ಕಿರು ತೊರೆಯಾಗಿ ಸೇರುವಾಸೆ
ಮತ್ತೇನಿಲ್ಲ….


Leave a Reply

Back To Top