ಎ.ಎನ್.ರಮೇಶ್.ಗುಬ್ಬಿ. ನಂಜಳಿಯಲಿ ನಂಜಿ.!

ಹೊಸ ಹೊಸ ಪದಗಳ ಪದ್ಯಾಮೋದ. ನವ ಶಬ್ದಗಳ ಪ್ರಾಸ ಲಹರಿಯ ಭಾವನಾದ. ನೂತನ ಪದಗಳಲ್ಲಿ ಬಾಳಿನ ಹೂರಣವನ್ನು, ಸತ್ವವನ್ನು ಅನಾವರಣಗೊಳಿಸುವ ಯತ್ನ. ಹೊಸ ಶಬ್ದಗಳಲಿ ಜೀವನ ತತ್ವವನ್ನು, ಜೀವದ ಚಾರಣವನ್ನು ಕಾವ್ಯವಾಗಿಸುವ ಪ್ರಯತ್ನ. ಭಾಷ್ಯ ಬದಲಾದರೂ ಬದುಕಿನ ಭಾವ ನವನವೀನ. ಬೆಳಕಿನ ಯಾನ ನಿತ್ಯ ಸತ್ಯ ಚಿರಂತನ. ಏಣಂತೀರಾ.?” ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ನಂಬಿದವರ ಎದೆಗೆ
ನಂಜಾಗದಿರು ನಂಜಿ.!
ಅನ್ಯಾಯ ಅನೃತದೆದುರು
ಶರಣಾಗದಿರು ಅಂಜಿ.!

ತುಂಬಿದವರ ಹೊಟ್ಟೆಗೆ
ಹಾಕದಿರು ಗಂಜಿ.!
ಗುಟ್ಟಾಗಿ ಮಾಡದಿರೆಂದು
ಮದುವೆ-ಮುಂಜಿ.!

ಮನೆ ಮುಂದಿನ ದೀಪ
ಆರಿಸದಿರು ಸಂಜಿ.!
ಮನದೊಳಗಣ ತಾಪ
ಆಗದಿರಲಿ ಸುಡು ಪಿಂಜಿ.!

ಮಕ್ಕಳಿಲ್ಲದ ಜೀವನವಲ್ಲ
ಈ ಜಗದಿ ಬಂಜಿ..
ಮಾತೃತ್ವ ಮಮಕಾರವಿಲ್ಲದ
ಬಾಳು ಪಾಳು ಮಂಜಿ.!

ಎದೆಯಾಗಬಾರದು ನಿತ್ಯ
ಕಿಚ್ಚಲಿ ಉರಿವ ಹಂಜಿ.!
ಹರಿಯದಿರು ಬಂಧಗಳ
ಸುಮ್ಮನೆಳೆದೆಳೆದು ಹಿಂಜಿ.!

ಆಗದಿರಲೆಂದು ಬದುಕು
ತಿಪ್ಪೆಗೆಸೆವ ಪುಂಜಿ.!
ಆಡಿಕೊಳ್ಳದಿರಲಿ ನಮ್ಮನು
ಹಾದಿಬೀದಿಯ ಕಾಂಜಿಪಿಂಜಿ.!

ನಡೆ-ನುಡಿಯಾಗಬೇಕು
ಲೋಕದೆದುರು ಅಪರಂಜಿ
ಉಸಿರಳಿದ ಮೇಲೂ ನಮ್ಮ
ಹೆಸರೇಳಬೇಕು ಕೊರವಂಜಿ.!

( ಪಿಂಜಿ = ಅರಳೆಯ ಸುರಳಿ, ಮಂಜಿ = ಹಾಯಿ ಹಡಗು, ಹಂಜಿ = ಹತ್ತಿಯ ಬತ್ತಿ, ಪುಂಜಿ = ಉಂಡೆ, ಮುದ್ದೆ,)

Leave a Reply

Back To Top