ಅನುರಾಧಾ ರಾಜೀವ್ ಗಜಲ್

ನೇಸರನ ಹಣೆಗೆ ಮುತ್ತನಿತ್ತು ನಿದಿರೆ
ಮಂಪರು ಓಡಿಸಿದೆಯಾ
ಬೇಸರದ ಛಾಯೆಗೆ ಕಚಗುಳಿ ನೀಡುತ
ಒಲವ ಬಡಿಸಿದೆಯಾ

ನಸುನಗು ಮೊಗದ ತುಂಬಾ ಹರಡಿ
ಬೆಳಕ ತೂರಿದೆಯೇನು
ಬೆಸೆಯುತ ಬಾಂಧವ್ಯ ಪ್ರಕೃತಿ ಸಿರಿಗೆ
ಹಸಿರ ಉಡಿಸಿದೆಯಾ

ನಸುಕಿನ ವೇಳೆ ಹಕ್ಕಿಯ ಚಿಲಿಪಿಲಿ
ಕೇಳಲು ಇಂಪಾಗಿದೆ
ಬಿಸುಪಿನ ಭಾವಕೆ ಮಣಿದು ಹೊನ್ನಿನ
ಉಂಗುರ ತೊಡಿಸಿದೆಯಾ

ಬಿಸಿಲಿನ ತಾಪಕೆ ಕುಂದಿದ ಮನಕೆ
ಸಾಂತ್ವಾನದ ಚೈತನ್ಯ
ಹುಸಿಕೋಪ ತೋರಿ ಬಾನಿನ ನಡುವೆ
ಚಿತ್ತಾರ ಬಿಡಿಸಿದೆಯಾ

ಉಸಿರಾಗಿ ಬಂದನು ಭಾಸ್ಕರನು ವೇಗದಿ
ರಾಧೆಯ ಬದುಕಲಿ
ಬೀಸುತಲಿ ತಂಗಾಳಿಯ ತಂಪನು ಜೀವ
ವೀಣೆಯ ನುಡಿಸಿದೆಯಾ


Leave a Reply

Back To Top