“ಆ ಮುಖ” ಸಣ್ಣ ಕಥೆ ಅನಸೂಯ ಜಹಗೀರದಾರ.

ಕೊಂಚ ಓಡುವ ನಡಿಗೆಯಲ್ಲೇ ನಡೆದು ಬಸ್ಸೇರಿ ಓಲಾಡುತ್ತ ನಿಂತಿದ್ದೆ. ದಿನದ ಕರ್ಮ ಕಾಯಕವಿದು.ಬಸ್ಸುಗಳೋ ಸಿಕ್ಕಾಪಟ್ಟೆ ಗದ್ದಲವೆ..! ಎಲ್ಲರದೂ ಒಂದೊಂದು ಬಗೆಯ ಧಾವಂತ‌..ಎಲ್ಲವೂ
ಉದರ ನಿಮಿತ್ಯಂ..! ಬಹು ಭಾರಿ ಇದು ತುತ್ತಿನ ಚೀಲ ಅನಿಸುತ್ತದೆ ಒಮ್ಮೊಮ್ಮೆ..! ಬಸ್ಸು ಚಲಿಸಿದಂತೆಲ್ಲ, ಬ್ರೇಕು ಹಾಕಿದಂತೆಲ್ಲ ನಮ್ಮಗಳ ಮೈ ಮನವೂ ಚಲನೆಯೆ.. ಒಬ್ಬರ ಉಸಿರು ಮತ್ತೊಬ್ಬರಿಗೆ ತಾಕುವಷ್ಟು ನಿಂತಿತ್ತು ಜನ..! ಇನ್ನೇನು ಮುಂದಿನ ತಾಣದಲ್ಲಿ ಇಳಿಯಬಹುದು ಅಂದುಕೊಳ್ಳುತ್ತಿದ್ದರೆ ಇಳಿಯುವವರಿಗಿಂತ ಹತ್ತುವವರ ಸಂಖ್ಯೆಯೇ ಹೆಚ್ಚಾಯಿತು.ಪಕ್ಕದಲ್ಲಿ ನಿಂತುಕೊಂಡಿದ್ದವಳ ಮಗು ರಾಗ ತೆಗೆಯಿತು. ಎತ್ತಿಕೊಳ್ಳಬೇಕೆನಿಸಿತು.ಹೇಗೆ ತಾನೇ ಸಾಧ್ಯ..! ನನ್ನನ್ನೇ ನಿಯಂತ್ರಿಸಿ ನಿಲ್ಲಲಾಗದ
ಸ್ಥಿತಿಯಲ್ಲಿರುವಾಗ ಮಗು ಬೇರೆ ಹೇಗೆ ಹಿಡಿಯಬಲ್ಲೆ ಅಂದುಕೊಂಡು ಸುಮ್ಮನಾದೆ. ಆ ಮಗುವಿನ ಅಳು ಮತ್ತೂ ಹೆಚ್ಚಾಯಿತು. ತಾರಕಕ್ಕೇರಿತು.ಅಷ್ಟರಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ “ಮೇಡಮ್
ಮಗೂನ ಕೊಡಿ, ನಿಮ್ಮ ಸ್ಟಾಪ್ ಬರುವತನಕ ತೊಡೆಯ ಮೇಲೆ ಕೂರಿಸಿಕೊಳ್ಳುವೆ”ಅಂತ ಹೇಳಿದ.
ಅವನೇ ಏಳಬಾರದಿತ್ತೇ ಅಂದುಕೊಂಡೆನಾದರೂ ಅವನ ನಿಲುವು ಸರಿಯೆನಿಸಿತು.ಮೂವರು ಕುಳಿತುಕೊಳ್ಳುವ ಸೀಟಿನಲ್ಲಿ ಅದ್ಹೇಗೋ ಹೊಂದಿಕೆ ಮಾಡಿಕೊಂಡು ನಾಲ್ಕು ಜನ ಕುಳಿತಿದ್ದಾರೆ.ಅಂಥದ್ದರಲ್ಲಿ ಇವಳು ತಾನೆ ಹೇಗೆ ಕೂಡಬಲ್ಲಳು..ಅದೂ ಸರಿ ಸಮಂಜಸ ಜಾಗವಿಲ್ಲದೆ..?! ಆಕೆ ನೋಡಿ ಸುಮ್ಮನಾದಳು
ಅವನನ್ನು ಒಮ್ಮೆ ದೀರ್ಘವಾಗಿ ದಿಟ್ಟಿಸಿದೆ.ಅವನ ಬಲಗೆನ್ನೆಗೆ ಅಂಗೈ ಅಗಲದ ಕಪ್ಪು ಕಲೆ ಇತ್ತು.ಏನೋ ಗಾಯ ಆಗಿರಬಹುದು.ಅವನೊಬ್ಬ ಸಿನಿಮಾದಲ್ಲಿ ತೋರುವ ಹಳೆಯ ರೌಡಿಯಂತೆ ಕಂಡ ನನ್ನ ದಿಟ್ಟಿಗೆ..! ಆ ಮಹಿಳೆಯೂ ಮಗುವನ್ನು ಕೊಡಲು ಅನುಮಾನಿಸಿದಳು.ಎರಡು ಬಾರಿ ಕೇಳಿದ ಅವನು ತನ್ನ ಬಲಗೆನ್ನೆಯನು ಕೈಯ ಬೆರಳಿಂದ ಸವರಿಕೊಳ್ಳುತ್ತ
ಸುಮ್ಮನಾದ.” ಪರವಾಗಿಲ್ಲ ಕೊಡಿ. ನೀವಾದರೂ ಹೇಗೆ  ನಿಲ್ತೀರಿ” ಹೇಳಿದೆ ನನಗನ್ನಿಸಿತು. ನನಗೇಕೆ ಸುಮ್ಮನಿರಲಾಗುವುದಿಲ್ಲ.ಮಧ್ಯಸ್ಥಿಕೆ ವಹಿಸುವುದೇಕೆ ಇದು ಪದೇ ಪದೇ ನನಗೆ ನಾನೇ ಕೇಳಿಕೊಳ್ಳುವ ನಿರುತ್ತರದ ಪ್ರಶ್ನೆ ಇದು.ಅವಳು ಅನುಮಾನಿಸುತ್ತಲೇ ಅನಿವಾರ್ಯವಾಗಿ ಮಗುವನ್ನು ಕೊಟ್ಟಳು.ಅತ್ತು ಸುಸ್ತಾಗಿದ್ದ ಮಗು ತೂಕಡಿಸುತ್ತ ಆತನ ತೊಡೆಯ ಮೇಲೆ ನಿದ್ದೆಹೋಯಿತು.

           ಬಸ್ ನಲ್ಲಿ ಜನ ನಿಂತೇ ಇದ್ದರು.ಮುಂದಿನ ತಾಣಗಳು ಬಂದಂತೆಲ್ಲ ಹತ್ತುವವರೇ ಹೆಚ್ಚಾದರು. ಎಲ್ಲರಿಗೂ ಗಡಿಬಿಡಿ, ಅವಸರ. ತಂತಮ್ಮ ತಾಣ ಸೇರಿಕೊಳ್ಳುವ ಆತುರ.ನೂಕು ನುಗ್ಗಾಟದಲ್ಲಿ ನಾನು ಮತ್ತು ಆ ಮಹಿಳೆ ಹಿಂದೆ ಹಿಂದೆ ಸರಿಯುತ್ತ ಬಹು ಹಿಂದೆ ಉಳಿದೆವು.ಆ ಗದ್ದಲದಲ್ಲಿ ನಾವೊಂದು ಕಡೆ ಆ ವ್ಯಕ್ತಿಯೊಂದು ಕಡೆ.ಆಗಿಹೋದೆವು.ಮಗು ಕೊಟ್ಟವಳ ಮುಖದಲ್ಲಿ ಗಾಬರಿಯ ಚಿಹ್ನೆಗಳು ಗೋಚರಿಸತೊಡಗಿದವು.ನನ್ನ ಮನಕ್ಕೂ ಕಸಿವಿಸಿ ಕಳವಳ ಅನಿಸತೊಡಗಿತು.”ಪರವಾಗಿಲ್ಲ ಕೊಡಿ” ಅಂತ ಮಧ್ಯಸ್ಥಿಕೆ ಬೇರೆ ವಹಿಸಿದ್ದೆನಲ್ಲ..! ಕಾಣಲು ಅವನು ಒಂಥರಾ ಇದ್ದಾನೆ. ಆತನ ಕೆಂಪು ಉದ್ದನೆಯ ಗೀರಿನ ಅಂಗಿ, ಕಪ್ಪು ನೀಲಿಯ ಪ್ಯಾಂಟು, ಬಿಸಿಲಲಿ ಕಪ್ಪಾಗುವ ಕನ್ನಡಕ ಎಲ್ಲ ಕಣ್ಮುಂದೆ ಬಂದವು.ಸಾಲದ್ದಕ್ಕೆ ಮುಖದ ಮೇಲಿದ್ದ ಆ ಕಪ್ಪು ಕಲೆ..?! ಅದೇ ಯೋಚನೆಯಲ್ಲಿದ್ದೆ ಆಚೆ ಈಚೆ ಹೊರಳಿ ಆತ ಇದ್ದ ಬಗ್ಗೆ ಖಾತ್ರಿಪಡಿಸಿಕೊಳ್ಳುತ್ತಿದ್ದೆ.ಆ ಮಹಿಳೆಯೂ ನೋಡುತ್ತಿದ್ದಳು ಆಗಾಗ..! .

         ಆ ಮಹಿಳೆ ಇಳಿಯುವ ತಾಣ ಬಂದಿತು.ಆಕೆ ಲಗುಬಗೆಯಿಂದ ತನ್ನ ಮಗುವನ್ನು ಆತನಿಂದ ಪಡೆದು
ಆತನಿಗೆ ಥ್ಯಾಂಕ್ಸ ಅಂತ ಹೇಳಿ ಇಳಿದು ಹೋದಳು.
ತನ್ನ ಗೂಡು ಸೇರುವ ತವಕ ಯಾವ ಹಕ್ಕಿಗೆ ಇರುವುದಿಲ್ಲ…! ಹೊರಗಿದ್ದೂ ಸದಾ ಗೂಡಿನದೇ ಚಿಂತೆ ಇಲ್ಲಿಯ ಜೀವಗಳಿಗೆ.. ಅಂತೆಯೇ ಅಲ್ಲವೆ ಈ ಬಗೆಯ ಲಗುಬಗೆಯ ಪಯಣ…ನಿಂತೋ ಕೂತೋ ಒಟ್ಟಾರೆ ನಮ್ಮ ಮೂಲ ಪಾದಗಟ್ಟಿ ಸೇರುವ ಅದಮ್ಯ ಬಯಕೆ ಆತುರ..! ಜೀವನದ ಪಯಣದಲ್ಲಿ ಅದೆಷ್ಟು ಜಂಜಡಗಳು..ಕಷ್ಟನಷ್ಟಗಳು..ಅದೆಷ್ಟು ಅಡೆತಡೆಗಳು..
ತೊಂದರೆಗಳ ನಿಭಾಯಿಸುವುದಲ್ಲವೆ ಬದುಕು..!
ಸಾಗಬೇಕಲ್ಲವೆ ನಾವೆ..ಹಲವು ತೆರೆಗಳನೇರಿ ಎಲ್ಲವ ಮೀರಿ..ಸೇರಬೇಕಲ್ಲ ತನ್ನ ಠಾವು..!

          ಗೋಮುಖ ವ್ಯಾಘ್ರಗಳೆನ್ನುವುದು ಲೋಕಾರೂಢಿ. ಆದರೆ ಈ ವ್ಯಕ್ತಿ‌..ಮಧ್ಯ ವಯಸ್ಸಿನ ಯುವಕ…! ಸುಮ್ಮನೆ ಶಂಕಿಸಿದೆನಲ್ಲ ಈತನನ್ನು…ಹೀಗೆಂದು ಪರಿತಪಿಸುತ್ತ ಯೋಚಿಸುತ್ತಿರುವಾಗಲೇ ನಾನು ಇಳಿಯುವ ತಾಣ ಬಂತು.ತುಂಬಿದ ಆ ಗಲಾಟೆಯಲ್ಲಿ ದಾರಿ ಮಾಡಿಕೊಂಡು ಇಳಿದೆ.ದೀರ್ಘ ನಿಟ್ಟುಸಿರೊಂದು ಹೊರಬಂತು ದಣಿದ ದೇಹದಿಂದ..
ಉಸ್ಸಪ್ಪ…!! ಇನ್ನು ಮುಂದಿನ ದಾರಿ ಕಾಲ್ನಡಿಗೆಗೆ ಸಜ್ಜುಗೊಳಿಸುತ್ತ ವೇಗದಲಿ ನಡೆಯತೊಡಗಿದೆ.

          ಈ ಸಿನಿಮಾದವರು ರೌಡಿಯನ್ನು ಹೀಗೆಲ್ಲ ಚಿತ್ರಿಸಿ ನಮ್ಮ ಚಿತ್ತದಲಿ ಅಚ್ಚೊತ್ತಿ ನಮಗೂ ಕೂಡ ಇಂತಹ ಡಿಫರೆಂಟ್ ವ್ಯಕ್ತಿಯ ಕಂಡಾಗ ಅನುಮಾನ ಬರುವಂತೆ ಮಾಡುತ್ತಾರಲ್ಲ..! ಅವನ ಅಸುಂದರ ಮುಖದ ಹಿಂದೆ ಎಂತಹ ಒಳ್ಳೆಯ ಮನಸ್ಸಿದೆ.ಅಂದು ಕೊಳ್ಳುತ್ತ ನಡೆದವಳಿಗೆ ಸ್ವಲ್ಯ ಮುಂದಿದ್ದ ಅವನೇ ಕಾಣಿಸಿದ.ಬಹುಶಃ ನನ್ನ ಯೋಚನೆಯ ಗುಂಗಿನಲ್ಲಿ ನಡೆದವಳಿಗೆ ಆತ ಮುಂದೆ ಹೋದದ್ದು ಗೊತ್ತಾಗಿರಲಿಕ್ಕಿಲ್ಲ.
“ನೀವೂ ಇದೇ ರೂಟ್ ನಲ್ಲಿ ಹೋಗಬೇಕಾ ಮೇಡಮ್” ಆತ ಕೇಳಿದ.
“ಹೌದೌದು” ಅನ್ನುತ್ತಾ ಅಲ್ಲಿಯವರೆಗೆ ಮನದಲಿ ಮಿಸುಕಾಡುತ್ತಿದ್ದ ಆ ಮಾತನ್ನು ಕೇಳಿಯೇಬಿಟ್ಟೆ
“ನಿಮ್ಮಮುಖದ ಕಲೆ ..? ಏನಾಗಿತ್ತು..? ಏಕೆ ಹೀಗೆ..?”
“ಓ..! ಅದಾ..! ಮೇಡಂ ‌.” ಆತ ತನ್ನ ಬಲಗೆನ್ನೆ ಸವರಿಕೊಂಡ..ಹೇಳತೊಡಗಿದ.
“ನೀವು ಕೇಳುತ್ತಿದ್ದೀರ ಅಂತ ಹೇಳುತ್ತಿರುವೆ.ಯಾಕೋ ಹೇಳಬೇಕೆನಿಸುತ್ತಿದೆ.ಕಾರಣ ಹೇಳುವ ಅಗತ್ಯ ಇದೆಯೋ ಇಲ್ಲವೋ ಆದರೂ..!! ” ಅನ್ನುತ್ತ ಹೇಳತೊಡಗಿದ.
“ಮೆಡಂ ಇದು ನನ್ನ ಕಾಲೇಜು ದಿನಗಳ ಚಿರ ನೆನಪಾಗಿ ಉಳಿಯಿತು‌.ಈಗಲೂ ಕಾಡುತ್ತಿದೆ.ನಾನು ವಿಜ್ಞಾನದ ವಿದ್ಯಾರ್ಥಿ ಆಗಿದ್ದೆ.ನನ್ನ ಕ್ಲಾಸ್ ಮೇಟ್ ಒಬ್ಬ ಹುಡುಗಿಯೊಬ್ಬಳನ್ನು ನಿತ್ಯವೂ ಚುಡಾಯಿಸುತ್ತಿದ್ದ.ಕಾಡುತ್ತಿದ್ದ.ಪದೇ ಪದೇ ಈ ರಾದ್ಧಾಂತಕ್ಕೆ ಅವಳೂ ಬೇಸತ್ತು ಅವನಿಗೆ ಕೋಪದಲ್ಲಿ ಏನೋ ಹೇಳಿದಳು ರೂಷ್ಠವಾಗಿ..!ಮನ ಬಂದಂತೆ ಬೈಯ್ದಿರಬೇಕು.ಇವನೋ ಪುರುಷ ಪಾರಮ್ಯ ಅಹಂಭಾವ..ಅವಳ ಮೈಮೇಲೆ ಕೈ ಹಾಕಿದ.
ಬಲಾತ್ಕರಿಸಲು ನೋಡಿದ.ಸರಿ ಸಮಯಕ್ಕೆ ಕಾಲೇಜಿನ ಲೈಬ್ರರಿ ಹತ್ತಿರ ನಾನೂ ಇದ್ದೆ. ಅವಳ ಚೀರಾಟ ಕೇಳಿ ನಡೆದೆ ಹೇಗೆ ಸುಮ್ಮನಿರುವುದು ಹೇಳಿ‌.ಅವಳನ್ನು ಅವನಿಂದ ಬಿಡಿಸಿ ಅವನಿಗೆ ಬುದ್ಧಿವಾದ ಹೇಳ ಹೋದೆ. ಈ ಗಲಾಟೆಯಲ್ಲಿ ಒಂದೆರಡು ಏಟುಗಳಾದವು.ಆತ ಸರಿದು ನಡೆದ..”

“ಓ…ಹೀಗಾ..ಹೆಣ್ಮಕ್ಜಳದು ಯಾವಾಗಲೂ ಇದೇ ಕಥೆ ಆಯ್ತಲ್ರೀ..!!” ನಾನು ಮಧ್ಯದಲ್ಲಿಯೇ ಆತ ಹೇಳುವುದನ್ನು ತಡೆದು ತಡೆಯದೆ ಉದ್ಘರಿಸಿದೆ.
“ಹಾಂ‌.! ಮೇಡಮ್..ಅವನಿಗೆ ಅವಮಾನ ಅನ್ನಿಸಿರಬೇಕು.ಒಳಗೊಳಗೆ ಕುದಿಯುತ್ತಿದ್ದನೇನೋ..
ಆಮೇಲೇನೋ ನಾರ್ಮಲ್ ಆಗಿಯೇ ವರ್ತಿಸುತ್ತಿದ್ದ.ನಾನೂ ಕ್ಷಮಿಸಿದ್ದೆ.ಆಕೆಯೂ ಕ್ಷಮಿಸಿದ್ದಳು.ಎಲ್ಲವೂ ಸರಿಯಾಗಿಯೇ ನಡೆದಿತ್ತು.ಆದರೊಂದು ದಿನ‌…! ಕೆಟ್ಟದಿನವಾಗಿತ್ತು ನನ್ನ ಪಾಲಿಗೆ‌..ಕೆಮಿಸ್ಟ್ರಿಪ್ರಾಕ್ಟಿಕಲ್ ತರಗತಿ ನಡೆದು ಮುಕ್ತಾಯಗೊಂಡಿತ್ತು.ಇನ್ನೇನು ಲ್ಯಾಬ್ ನಿಂದ ನಾನು ಹೊರಬಂದಿದ್ದೆ.ಆತನೂ ಬಂದ ನನ್ನ ಹತ್ತಿರವೇ ನಿಂತ.
ಹಿಂದೆ ಹಿಡಿದಿದ್ದ ಕೈಯಲ್ಲಿ ಆ್ಯಸಿಡ್ ಬಾಟಲಿ ಇತ್ತು.
ತಡಮಾಡದೇ ನನಗೆ ಎರಚಲು ಬಂದ.ಅದೆಷ್ಟೇ ತಡೆಯಲೆತ್ನಿಸಿದರೂ ಆತನ ಕೈ ಮತ್ತು ನನ್ನ ಮುಖದ ಮೇಲೆ ಹನಿ ಹನಿ ಚೆಲ್ಲಿತು.ಆತನ ಕೈ‌‌ಯೂ‌‌..ನನ್ನ ಈ ಮುಖವೂ.. ಸುಟ್ಟಿತು.ಅದೆಷ್ಟೇ ಬೇಗ ಟ್ರೀಟ್ ಮೆಂಟ್ ಪಡೆದರೂ ಇಷ್ಟು ಕಲೆ ಉಳಿಯಿತು.ಇದು ಅ ದಿನದ ಕುರುಹು ಮತ್ತು ಹಳೆಯ ಗೆಳೆಯನ ನೆನಪು‌.!” ಅನ್ನುತ್ತ ಬಲಗೆನ್ನೆಯನು ಮತ್ತೊಮ್ಮೆ ಸವರಿಕೊಂಡ.
ನನ್ನತ್ತ ನೋಡಿದ..! ನಾನು ಸುಮ್ಮನಿದ್ದೆ.ಏನನ್ನೂ ಮಾತನಾಡಲಿಲ್ಲ.ಗಾಢ ಮೌನ ಆವರಿಸಿತ್ತು ನನ್ನಲ್ಲಿ….ಕೆಲ ಗಳಿಗೆತನಕ..!
“ಅರೆ..ನೀವೇಕೆ ಇಷ್ಟು ಸೀರಿಯಸ್ ಆದ್ರಿ..ಹೋಗ್ಲಿಬಿಡಿ”
ಅಂದ. ಮುಂದುವರೆದು “ಪ್ರಾಣಾನೇ ಹೋಗುತ್ತದಂತೆ ಇದೆಲ್ಲ ಏನ್ಮಹಾ..!!” ಅನ್ನುತ್ತ ಬಲವಂತದ ನಗೆಯ ತಂದುಕೊಂಡ ಮೊಗದಲ್ಲಿ..! ನಾನು ಮತ್ತೂ ಸುಮ್ಮನಿದ್ದೆ.ಅವನನ್ನು ಮತ್ತೊಮ್ಮೆ ನೋಡಿದೆ.ಈ ಬಾರಿ ಅನುಮಾನದಿಂದಲ್ಲ..ಆತ ಅಸುಂದರ ಅನ್ನುವ ತಿರಸ್ಕಾರ ಭಾವದಿಂದಲ್ಲ…ಬದಲಾಗಿ ಮೆಚ್ಚುಗೆಯಿಂದ ನೋಡಿದೆ.”ಇನ್ನೊಮ್ಮೆ ಯಾರಿಗೂ ಉಪಕಾರ ಮಾಡುವ ಗೋಜಿಗೆ ಹೋಗಬೇಡಿ” ಅಂತ ಹೇಳಬೇಕೆನಿಸಿತು.ಹೇಗೆ ಹೇಳಲು ಸಾಧ್ಯ..?! ಅದು ಸಹಜ ಸಮಯಪ್ರಜ್ಞೆ ಇರುವ ಸರಳ ಸುಶೀಕ್ಷಿತ ಹೃದಯವಂತಿಕೆಯುಳ್ಳ ಯಾವ ವ್ಯಕ್ತಿಯಾದರೂ ಮಾಡುವ ಮಾನವೀಯ ಕೆಲಸ.ಇಂತಹ ವ್ಯಕ್ತಿ ಸಹಾಯಕ್ಕೆ ಧಾವಿಸಿ ಬಂದರೆ ತಾನೇ ಮಾನವೀಯತೆ ಅಲ್ಲಿ ನೆಲೆ ನಿಲ್ಲಲು ಸಾಧ್ಯ..! ಏನೂ ಹೇಳಲಿಲ್ಲ ನಾನು.

             ಮುಂದೆ ದಾರಿ ಕವಲೊಡೆಯಿತು.ಅವನು ನನ್ನತ್ತ ತಿರುಗಿ “ನೀವೂ ಹೀಗೆ ಬರ್ಬೇಕಾ ಮೇಡಮ್” ಎಂದು ಕೇಳಿದ.ನಾನು ಇಲ್ಲವೆಂದು ತಲೆಯಾಡಿಸಿ ನನ್ನ ದಾರಿ ತುಳಿದೆ.


2 thoughts on ““ಆ ಮುಖ” ಸಣ್ಣ ಕಥೆ ಅನಸೂಯ ಜಹಗೀರದಾರ.

Leave a Reply

Back To Top