ಡಾ ಸುರೇಶ ನೆಗಳಗುಳಿ ಭಾವನೆಯ ಮಜಲಿನಲ್ಲಿ

ಬಾನಿನಂಗಳದಲ್ಲಿ ಹರಡಿತ್ತು ಬಿಳಿ ಮೋಡ ನಿನ್ನ ಸೌಂದರ್ಯವನಲ್ಲಿ ಕಂಡೆ ನಾನು
ಜೇನಿನಂತಹ ಮಧುರ ಕಲ್ಪನೆಯ ಜಾಡಿನಲಿ ಸವಿಗನಸ ಸವಿಯನ್ನು ಉಂಡೆ ನಾನು

ಸರಿದ ಮೆಘದ ಬದಿಯಲಿದ್ದನಾ ಚಂದ್ರಮನು ನಿನ್ನ ಮೊಗವನು ಅಲ್ಲಿ ತೋರಿದಂತೆ
ಸುರಿದ ಕಾಂತಿಯ ಹೊಳಪು ಮುದವ ನೀಡುತಲಿರಲು ಚೆನ್ನು ಸಡಗರದಿ ಬೆಸಗೊಂಡೆ ನಾನು

ಸಾವಿರದ ಚಿಕ್ಕೆಗಳ ನರ್ತನವ ನೋಡು ಬಾ‌ ವಜ್ರವೂ ನಾಚಿ ನೀರಾಗುವಂತೆ
ನೋವಿರದ ದಿನಮಾನ ನಿನ್ನ ಸಾಂಗತ್ಯದಲಿ ಇರುವ ಖಾತ್ರಿಯ ಪಡೆದುಕೊಂಡೆ ನಾನು

ಮನದ ಪುಸ್ತಕ ತುಂಬ ಅಕ್ಕರೆಯ ಅಕ್ಷರವ ಪೋಣಿಸುವೆ ಮಣಿ ಮುತ್ತು ಹಾರದಂತೆ
ಮನನ ಮಾಡುವುದೇನು ಮಥನ ವೇತಕೆ ಇನ್ನು ಕಥೆ ಕವನ ನಿನಗಾಗಿ ಬರಕೊಂಡೆ ನಾನು

ಒಲವಿನಂಗಳದಲ್ಲಿ ಬಲಬಂದು ಸಂತಸವ ಪಡೆವ ಆಸೆಯನೇಕೆ ಬರಿದೆ ಸುಡುವೆ
ಇರುವುದಾದರೆ ಬುವಿಯನಾವರಿಸಿದಂಥ ಗಿರಿಯಂದದಲಿ ಇಹೆನೆಂದುಕೊಂಡೆ ನಾನು

ಮುತ್ತುಗಳ ಮಾಲೆಗಳ ಪೋಣಿಸುತಲಿರುವಾಗ ದಾರವನು ಕಡಿಯುತಿಹೆ ಯಾಕೆ
ಅಧರ ತೇವವ ಗೊಂಡು ಸಿಹಿಯೊಲವು ತೊಟ್ಟಿಕ್ಕಿ ಉಣಿಸಲಿಹೆ ನೀನೆಂದುಕೊಂಡೆ ನಾನು

ಕಣಜ ಪ್ರಕೃತಿಯೆನಗೆ ಸಾಹಿತ್ಯ ಸೌರಭದ‌ ಗ್ರಂಥವಾಗಲಿ ಒಲವ ಬರೆಹ ಈಶಾ
ಹಣತೆಯಾಗುತ ಎನ್ನ ಬಾಳಿನರಮನೆ ಬೆಳಗೆ ನಿನ್ನ ಸವಿಯನು ಬಾಚಿಕೊಂಡೆ ನಾನು


ಡಾ ಸುರೇಶ ನೆಗಳಗುಳಿ

One thought on “ಡಾ ಸುರೇಶ ನೆಗಳಗುಳಿ ಭಾವನೆಯ ಮಜಲಿನಲ್ಲಿ

Leave a Reply

Back To Top