ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಮುಕ್ತಕಗಳು
ಜೇಡಹುಳ ಬಲೆಹೆಣೆದು ತಾನಾಗಿ ಸಿಲುಕಿದೊಲು
ಕೇಡನ್ನು ಬಗೆವಂತ ಹೀನತನ ವೇಕೆ
ಸೇಡಿನಲಿ ದಹಿಸದೇ ನಲುಮೆಯನು ತೋರುತಿರೆ
ಪೇಡವನು ಸವಿದಂತೆ ಚಂದ್ರಕಾಂತೆ.
ತುಂಬುಪೆರೆ ಮೂಡಿರಲು ಇಳೆಗೆಲ್ಲ ಸಂಭ್ರಮವು
ನಂಬುಗೆಯ ದೈವಗಳ ದರ್ಶನವ ಪಡೆಯೆ
ತಂಬೆಲರು ಜೊತೆಗೂಡಿ ಇಂಬನ್ನು ನೀಡಿರಲು
ಲುoಬಿನಿಯ ವನದಂತೆ ಚಂದ್ರಕಾಂತೆ.
ಬಾಳೆಗಿಡ ಬಾಗುತಲಿ ನೀಡುವುದು ಸಿಹಿಫಲವ
ತಾಳುತಲಿ ದುಡುಕದಲೆ ಸಹನೆಯಲಿ ಬಾಳು
ತಾಳೆಗರಿ ಸಾರಿದಂತೆ ಮಹದಾದ ವಿಚಾರವ
ನಾಳೆಗಳು ಸುಖವಿಹುದು ಚಂದ್ರಕಾಂತೆ.
ನರರೂಪ ಧರಿಸುತಲಿ ದೈವವದು ತಾಬರಲು
ಗರಬಡಿದ ಬದುಕಿಂದು ಹಸನಾಯ್ತು ಕೇಳು
ಗುರುವಿoಗೆ ನಮಿಸುತಲಿ ವಂದನೆಯ ಸಲ್ಲಿಸಲು
ಚರಣದಲಿ ಎರಗಿರುವೆ ಚಂದ್ರಕಾಂತೆ.
ಕುಸುಮದಲಿ ಜೇನನ್ನು ಹೀರುತಿರೆ ದುಂಬಿಯದು
ಕಮನೀಯ ಸಂಭ್ರಮವು ತನ್ನೊಳಗೆ ಸುಮಕೆ
ಘಮವರಡಿ ಪರಿಸರಕೆ ಸಾರುತಲಿ ಸಂದೇಶ
ರಮಣೀಯ ನಿಲುವಲ್ಲಿ ಚಂದ್ರಕಾಂತೆ
ಮಾಲಾ ಚೆಲುವನಹಳ್ಳಿ