ಮಂಡಲಗಿರಿ ಪ್ರಸನ್ನ ತರಹೀ ಗಜಲ್

ಕಳೆದುಕೊಂಡ ಮೇಲೆ ಹುಡುಕುತ್ತಾರೆ ಎಲ್ಲರೂ
ಹೊತ್ತು ಸರಿದ ನಂತರ ಮರುಗುತ್ತಾರೆ ಎಲ್ಲರೂ

ಇರುವಾಗ ಪ್ರೀತಿ ಕೈಗೆಟುಕದ ಸಾಧನವೇನಲ್ಲ
ದೂರವಾದಾಗ ಸುಮ್ಮಗೆ ಅಳುತ್ತಾರೆ ಎಲ್ಲರೂ

ಕಾಲಚಕ್ರ ಯಾರಿಗೆ ನಿಲ್ಲುವುದೋ ತಿಳಿಯದು
ನಾವಷ್ಟೇ ಪ್ರಬುದ್ಧರು ತಿಳಿಯುತ್ತಾರೆ ಎಲ್ಲರೂ

ಕಣ್ಣೀರಿನ ಬೆಲೆ ಅರಿತವರಿಗಷ್ಟೇ ಗೊತ್ತು ಗೆಳೆಯ ಅದೇಕೋ ವ್ಯರ್ಥವಾಗಿ ಕರಗುತ್ತಾರೆ ಎಲ್ಲರೂ

ಅಂತರಂಗ ತೆರೆದಿಟ್ಟರೆ ಎಲ್ಲವು ಅರ್ಥವಾದೀತು ಶಬ್ದಶಬ್ದಕೂ ತಾತ್ಪರ್ಯ ಹುಡುಕುತ್ತಾರೆ ಎಲ್ಲರೂ

ನುಡಿಯೆಲ್ಲವೂ ಬೆಡಗಿನ ವಚನದಂತಿದ್ದರೆ ಚೆನ್ನ
ಮೃದುವಾದ ಮಾತಿಗೂ ಚುಚ್ಚುತ್ತಾರೆ ಎಲ್ಲರೂ

ತಿಳಿದು ಬದುಕುವುದೇ ಜಗದ ವಿಸ್ಮಯ ‘ಗಿರಿ’
ತನ್ನ ತಾನು ತಿಳಿದು ಬಯಲಾಗುತ್ತಾರೆ ಎಲ್ಲರೂ


  • ಮಂಡಲಗಿರಿ ಪ್ರಸನ್ನ

Leave a Reply

Back To Top