ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
ದೈವದಾಟ
ಕಾಲ ಸರಿದದ್ದು ತಿಳಿಯಲೇ ಇಲ್ಲ
ಕಾಲನು ಕಣ್ಣೆದುರು ಬಂದು ಗರ್ವದಿ ಕರೆಯುವವರೆಗೂ
ಶರೀರದ ಸೊಗವು ಮಾಸಿದ್ದು ತಿಳಿಯಲೇ ಇಲ್ಲ
ತೊಗಲಲಿ ತೆರೆಗಳು ಬೀಳುವವರೆಗೂ
ಯವ್ವನವು ಓಡಿದ್ದು ಅರಿವಿಗೆ ಬರಲೇ ಇಲ್ಲ
ನೆರೆಗೂದಲು ಬಂದು ಕನ್ನಡಿಯಲಿ ಅಣಕಿಸುವವರೆಗೂ
ದೃಷ್ಟಿ ಯಾವಾಗ ಮಂಜಾಯಿತೋ ಕಾಣಲೇ ಇಲ್ಲ
ಬೆಳಗಿನಲ್ಲಿಯೇ ಬೈಗು ಕಾಣುವವರೆಗೂ
ಮೈಯ್ಯ ಚೇತನ ಕಳೆದದ್ದು ಗೋಚರಿಸಲೇ ಇಲ್ಲ
ನಡೆವಾಗ ಕಾಲುಗಳ ಹೆಜ್ಜೆಯು ನಡುಗುವವವರೆಗೂ
ಮುಸ್ಸಂಜೆಯ ಮಬ್ಬಿನಲಿ ಹೊರಡಲು ಸಿದ್ದವಾಗಿದ್ದರೂ ಅದರಲ್ಲೂ ಕಂಡ ತಾತ್ಸಾರವ ಸಹಿಸಲಾಗುವುದಿಲ್ಲ
ಒಮ್ಮೆಯಾದರೂ ಹೇಳಿಹೋಗು ನೀ
ಕಾರಣವ
ವರ್ಷಗಳು ನಿಮಿಷಗಳಂತೆ ಕಳೆದದ್ದು ಹೇಗೆ ಗಮನಕ್ಕೆ ಬಾರದೇ?
ಬೇಕೆನಿಸಿದ್ದು ದೊರೆಯದೇ ಬೇಡವಾದದ್ದೇ ಕರುಣಿಸಿ ನೀನೀನಾಡುವ
ಈ ಕಣ್ಣ ಮುಚ್ಚಾಲೆಯಾಟವ ನಾನ್ ಅರಿಯಲೇ ಇಲ್ಲ ನಿನ್ನ ಮರ್ಮವಾ ನಾ ತಿಳಿಯಲೇ ಇಲ್ಲ
ಶೋಭಾ ನಾಗಭೂಷಣ
ವಾಸ್ತವದ ಚಿತ್ರಣವನ್ನು ಕಟ್ಟಿಕೊಡುವ ಉತ್ತಮ ಕವನ