ಕಾವ್ಯ ಸಂಗಾತಿ
ಸುಧಾ ಪಾಟೀಲ
ನನ್ನ ಕವನಗಳು
ಜಗವನ್ನೇನು ಬದಲಿಸುವುದಿಲ್ಲ
ನನ್ನ ಕವನಗಳು
ಖುಷಿಯ ಬುಗ್ಗೆಯನ್ನಿಕ್ಕುಸುತ್ತವೆ
ನನ್ನಲ್ಲೇ
ಅರಿವಿನ ಹಾದಿಯಲ್ಲಿ
ಕೊಂಡೊಯ್ಯುತ್ತವೆ
ತಮ್ಮ ಜೊತೆಗೆ
ಭಾವದ ಬೆಂಬತ್ತಿ
ಕನಲುತ್ತವೆ ತಮ್ಮೊಳಗೆ
ಸಂಪೂರ್ಣವಾಗಿ
ಬರಸೆಳೆಯುತ್ತವೆ
ತನ್ನೆಡೆಗೆ
ಮುದ್ದಿಸುತ್ತವೆ
ಗಾಢವಾಗಿ ಮತ್ತೆಂದೂ
ಅಗಲದಂತೆ
ತನ್ನಲ್ಲೇ ಲೀನವಾಗುವಂತೆ
ಮಾಡುತ್ತವೆ
ಜಗವನ್ನೇನೂ ಬದಲಿಸುವುದಿಲ್ಲ
ನನ್ನ ಕವನಗಳು
ಮನಸಿನ ಹಂದರದಲ್ಲಿ
ಜೀಕುತ್ತವೆ
ಕುಣಿದು ಕುಪ್ಪಳಿಸುತ್ತವೆ
ಅಗಾಧ ಆನಂದವನ್ನೀಯುತ್ತವೆ
ಏಷ್ಟೋ ವರುಷಗಳ
ಅವುಡುಗಚ್ಚಿ
ತಡೆದ ಕ್ಷಣಗಳನ್ನು
ಹೊರಹಾಕುತ್ತವೆ
ಭೋರ್ಗರೆಯುತ್ತವೆ
ಯಾವ ಅಡೆತಡೆಯಿಲ್ಲದೆ
ಮುನ್ನುಗ್ಗುತ್ತವೆ
ತನ್ನದೇ ಸ್ಥಾನವನ್ನು
ಪಡೆದು
ಎಲ್ಲರ ಮನವ
ನಿಧಾನವಾಗಿ
ಆವರಿಸಿಕೊಂಡುಬಿಡುತ್ತವೆ
ಜಗವನ್ನೇನು ಬದಲಿಸುವುದಿಲ್ಲ
ನನ್ನ ಕವನಗಳು
ಇಡಿಯಾಗಿ
ನನ್ನನ್ನಾವರಿಸಿ
ಹಿಡಿದಿಡುತ್ತವೆ ತಮ್ಮಲ್ಲೇ
ಯಾರ ಮರ್ಜಿಗೂ
ಕಾಯದೆ ತಮ್ಮಲ್ಲೇ
ಒಂದಾಗಿಸಿಕೊಳ್ಳುತ್ತವೆ
ಸುಧಾ ಪಾಟೀಲ