ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಪಾರ್ಥೆನಿಯಂ
ಹಸಿಹಸಿರ ತನುವುಳ್ಳ ನೀನು
ಬಿಳಿಬಿಳಿ ಮುಖವುಳ್ಳ ನೀನು
ನಗುನಗುತಾ ನಗುನಗುತಾ
ಸ್ವಾಗತಿಸುವ ನೀನು
ಯಾರೆಂದು ತಿಳಿದೆನು
ತಿಳಿದು ದಂಗಾದೆನು!
ಒಡೆದು ಹೋದ ಮನುಜರಿಗೆ
ನೀ ತೋರುವೆ ದಾರಿ
ವಿಶಾಲ ಒಗ್ಗಟ್ಟಿನ ನಿನ್ನೀ ಪರಿವಾರ
ಸಂಕುಚಿತ ಮನುಜರಿಗೆ ಮಾದರಿ
ಅದೆಷ್ಟೋ ಸಲ ನಿನ್ನ ಶಿರಕ್ಕೊದ್ದರೂ
ಬುಡದಿಂ ಕಡಿದೆಳೆದೊದ್ದರೂ
ಮತ್ತೇ ಸಂಪ್ರೀತನಾಗಿ ಚಿಗುರಿ
ಅದೇ ಮಂದಸ್ಮಿತ ಮುಖ
ಅದೇ ಸ್ವಾಗತಿಸುವ ನಗು
ವರ್ಣನೆಗೆ ದಕ್ಕದ ವಿಭಿನ್ನ ಚೆಲುವು!
ಅದೆಷ್ಟೋ ಕವಿಗಳು ಬಂದರು
ನೀ ಕಾಣದಾದೆ..
ವಸ್ತುವಾಗದೆ ಹೋದೆ
ಇಂದು ನೀ ಕಂಡೆ, ಹೃದಯದೊಳಗೆ ನಿಂದೆ
ಬೆಳ್ಳಂಬೆಳಗೆ ನಾ ಬಿಟ್ಟ ಹಾದಿಯಿಂದ
ನಾ ಮುಟ್ಟೋ ಹಾದಿವರೆಗೆ
ಪರಿವಾರ ಸಮೇತ ಸ್ವಾಗಿತಿಸುವ ನೀ
ಹಲವರಿಗೆ ಕಳೆಗಿಡವಾದೆ
ನನ್ನೀ ಹೃದಯದಿ ಕವನವಾದೆ!
ಲೀಲಾಕುಮಾರಿ ತೊಡಿಕಾನ