ಕಂಸ ಅವರ ಹೊಸ ಗಜಲ್

ಎದೆಯ ನೋವನು ಮರೆತು ಪ್ರೇಮಗೀತೆ ಹಾಡಿದೆಯಾ
ಮುಗ್ಧ ಮನಸಿನ ಚೆಲುವನ ನೋಡಿ ಕದವ ತಟ್ಟಿದೆಯಾ

ಕನಸಲ್ಲಿ ಕಂಡ ಚೆಲುವೆಯ ನೋಡಲು ಹಗಲಲ್ಲಿ ಬಂದೆನೇ
ಹೃದಯದ ಪುಟದಲಿ ಒಲವಿನ ಓಲೆಯ ಓದಿದೆಯಾ

ಪ್ರೇಮ ನಿವೇದನೆಗಾಗಿ ಮುಖಪುಟದಲ್ಲಿ ಹುಡುಕಾಡಿದೆ ನಾನು
ನೆನಪಿನ ದೋಣಿಯಲಿ ಪಯಣವ ಮಾಡಿ ದಡವ ಸೇರಿದೆಯಾ

ಜಂಗಮವಾಣಿಯ ಸಂಖ್ಯೆಗಾಗಿ ದಿನಚರಿ ಎಲ್ಲಾ ತಡಕಾಡಿದೆ
ಒಡಲಿನ ಕಿಚ್ಚು ಆರಲು ತಣ್ಣನೆ ನೀರನು ಎರಚಿದೆಯಾ

ನಿನಗಾಗಿ ನನ್ನ ಶತ್ರುಗಳು ಸ್ನೇಹಿತರೊಂದಿಗೂ ಬಡಿದಾಡಿದೆ
ಎದುರಾದ ಕಂಸನ ಕಂಡು ಗಡಿಬಿಡಿಯಿಂದ ನಾಚಿದೆಯಾ


Leave a Reply

Back To Top