ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ತರಹಿ ಗಜಲ್
ಚಿದಂಬರ ನರೇಂದ್ರ ಅವರದು
(ಗಂಭೀರತೆಯೊಂದು ನಾಚಿ ನೀರಾಗಿತ್ತು….)
ಕಣ್ಣ ಎವೆ ಬುವಿಯೆಡೆಗೆ ವಾಲಿತ್ತು ನಿನ್ನ ಕೈ ಬೆರಳು ಸೋಕಿದಾಗ
ಗಂಭೀರತೆಯೊಂದು ನಾಚಿ ನೀರಾಗಿತ್ತು ನಿನ್ನ ಕೈ ಬೆರಳು ಸೋಕಿದಾಗ
ಪಿಸು ಮಾತು ಕಿವಿ ಕಚ್ಚಿ ಹಿಡಿದಿವೆ ನಿನ್ನ ಹಾಲ್ಜೇನು ಸವರಿದ ದನಿಯಲಿ
ಪದಗಳು ಬೆಸೆದು ಹಾಡಾಗಿತ್ತು ನಿನ್ನ ಕೈ ಬೆರಳು ಸೋಕಿದಾಗ
ಲಜ್ಜೆಯ ಹೊದ್ದಿಹ ಪಾದ ಮರಳಿನಲಿ ಉಂಗುರ ತೀಡುತಿತ್ತು
ಹೇಳದ ಭಾವವು ಅಧರದಲಿ ಬಂಧಿಯಾಗಿತ್ತು
ನಿನ್ನ ಕೈ ಬೆರಳು ಸೋಕಿದಾಗ
ಹರಿಯುವ ಹೊನಲೊಂದು ದಿಕ್ಕುಗಾಣದೆ ಬೆಟ್ಟದಿಂದಲೇ ಧುಮುಕಿತು
ಮೈ ನವಿರೆದ್ದು ಗರಿಗೆದರಿದ ನವಿಲಾಗಿತ್ತು ನಿನ್ನ ಕೈ ಬೆರಳು ಸೋಕಿದಾಗ
ಹಲವು ವರುಷದ ಮೊರೆಗೆ ಒಲಿದು ಒನಪಿನಲಿ ದುತ್ತನೆ ಪ್ರಕಟವಾದ ನೋಟವಿತ್ತು ಅನು
ಅತ್ತರಿನ ಘಮಲು ಹತ್ತಿರ ಎಳೆತಂದು ಸಾಕ್ಷಿಯಾಗಿತ್ತು ನಿನ್ನ ಕೈ ಬೆರಳು ಸೋಕಿದಾಗ
ಅನಸೂಯ ಜಹಗೀರದಾರ