ದಿನಕ್ಕೊಂದು ವಚನ ಮೌಲ್ಯ

  ಕೆಂಚ ಕರಿಕನ ನೆನೆದರೆ ಕರಿಕನಾಗ ಬಲ್ಲನೇ,
 ಕರಿಕ ಕೆಂಚನ ನೆನೆದರೆ ಕೆಂಚನಾಗಬಲ್ಲನೆ,
 ದರಿದ್ರ ಸಿರಿವಂತನ ನೆನೆದರೆ ಸಿರಿವಂತನಾಗಬಲ್ಲನೆ,
 ಸಿರಿವಂತ ದರಿದ್ರನ ನೆನೆದರೆ ದರಿದ್ರನಾಗಬಲ್ಲನೆ,
 ಮುನ್ನಿನ ಪುರಾತನರ ನೆನೆದು
ಧನ್ಯನಾದೇನೆಂಬ ಮಾತಿನ ರಂಜಕರೇನೆಂಬ ಕೂಡಲ ಸಂಗಮ ದೇವ….

ಅಪ್ಪ ಬಸವಣ್ಣನವರು
*********

12ನೇ ಶತಮಾನದ ಬಸವಾದಿ ಶರಣರು ವಾಸ್ತವತೆಯನ್ನು ಮೆರೆದ ವಾಸ್ತವಿಕ ಶಾಸ್ತ್ರಜ್ಞರಾಗಿದ್ದರು.
ಕೇವಲ ಕಲ್ಪನೆಯ ಆಧಾರದ ಮೇಲೆ ವಚನ ಸಾಮ್ರಾಜ್ಯವನ್ನು ಕಟ್ಟದೆ,
 ಪ್ರಾಯೋಗಿಕ ತಳಹದಿಯ ಮೇಲೆ ಶಾಸ್ತ್ರೀಯವಾಗಿ ಸರ್ವತೋಮುಖ ಸತ್ಯದ ಅಡಿಪಾಯ ಹಾಕಿದ ಶರಣರ ವಾಸ್ತವ ವ್ಯವಸ್ಥೆಯನ್ನು ಎಲ್ಲರೂ ಒಪ್ಪಿಕೊಳ್ಳುವ ಅಮೂಲ್ಯ ಕೊಡುಗೆ ಆಗಿದೆ.

ಕೆಂಚ ಕರಿಕನ ನೆನೆದರೆ ಕರಿಕನಾಗ ಬಲ್ಲನೇ,
ಕರಿಕ ಕೆಂಚನ ನೆನೆದರೆ ಕೆಂಚನಾಗ ಬಲ್ಲನೇ,

ಈ ಸಾಲುಗಳಲ್ಲಿ ಅಪ್ಪ ಬಸವಣ್ಣನವರು ಎಂಥಹ ವಾಸ್ತವ ಸಂಗತಿ ಹೇಳಿದ್ದಾರೆ ಅಂದರೆ
ಕ್ರಿಯೆ ಇಲ್ಲದ ಜ್ಞಾನ ಪ್ರಯೋಜನವಿಲ್ಲ. ಎಂಬುದನ್ನು ಅರ್ಥಮಾಡಲು ಈ ಎಲ್ಲ ಉದಾಹರಣೆಗಳನ್ನು ಹೇಳಿದ್ದಾರೆ.
ಕೇವಲ ಕಪ್ಪಾಗಿರುವವರನ್ನು ನೆನದ ಮಾತ್ರಕ್ಕೆ ಕೆಂಪಗಿರುವವರು ಕಪ್ಪಾಗುವುದಿಲ್ಲ,
ಹಾಗೆಯೇ ಕಪ್ಪಾಗಿರುವವರು  ಕೆಂಪು ಬಣ್ಣದವರನ್ನು ನೆನೆದ ಮಾತ್ರಕ್ಕೆ ಕೆಂಪಗಾಗಲು ಇಲ್ಲವೇ ಬೆಳ್ಳಗಾಗಲು ಸಾಧ್ಯವಿಲ್ಲ.
ಕೇವಲ ಒಳ್ಳೆಯದನ್ನು, ಒಳ್ಳೆಯ ವಿಚಾರಗಳನ್ನು ಆಚರಿಸದೆ ಬರೀ ಓದಿದರೆ,ಬರೆದರೆ,ಹೇಳಿದರೆ ಅವರೆಂದೂ ಒಳ್ಳೆಯವರಾಗುವದಿಲ್ಲ.
ಹಾಗೆಯೇ ಕೆಟ್ಟವರು ನಮಗೆ ಎಷ್ಟೇ ಕೆಟ್ಟದ್ದು ಬಯಸಿದರೆ ಕೆಟ್ಟದಾಗಲು ಸಾದ್ಯವಿಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕು.

ದರಿದ್ರ ಸಿರಿವಂತನ ನೆನೆದರೆ
ಸಿರಿವಂತನಾಗಬಲ್ಲನೆ,
ಸಿರಿವಂತ ದರಿದ್ರನ ನೆನೆದರೆ
ದರಿದ್ರನಾಗಬಲ್ಲನೆ,

 ಬಡವನೊಬ್ಬ ಸಾಹುಕಾರನನ್ನು ನೆನೆದ ಮಾತ್ರಕ್ಕೆ ಶ್ರೀಮಂತನಾಗುವುದಿಲ್ಲ.
ಅದೇರೀತಿ  ಸಿರಿವಂತ ಬಡವನ ಕಂಡರೆ  ದರದ್ರನಾಗಲಾರನು, ಇದರ ಅರ್ಥ ಪ್ರತಿಯೊಬ್ಬ ವ್ಯಕ್ತಿಯೂ ಗುರಿ ಮುಟ್ಟಲು ಸ್ವಂತ ಪರಿಶ್ರಮ ಮಾಡಬೇಕು.ಸ್ವಂತ ಸತ್ಯ ಶುದ್ಧ ದುಡಿಮೆ ಕಾಯಕ ಮಾಡಬೇಕು, ಪ್ರತಿಯೊಬ್ಬರಿಗೂ ಕಾಯಕ ಬೇಕೇಬೇಕು ಇದು ಶರಣರ ಅತ್ಯಂತ ಉತ್ಕಟ ಆಶಯವಾಗಿದೆ.
ಈಗಲೂ ಕೂಡ ಪೂಜೆ ಅರ್ಚನೆ ಮಾಡಿ, ಮಾಟ ಮಂತ್ರ ಮಾಡಿಸಿ ಶ್ರೀಮಂತರಾಗಬಹುದು ಎಂಬುದನ್ನು ನಂಬಿದ ಅಮಾಯಕ ಮೂಢ ಜನರ ಶೋಷಣೆ ಮಾಡುವ ಪದ್ಧತಿಗೆ ಶರಣರು ಅಂದೆ ಬುದ್ಧಿ ಹೇಳಿದ್ದಾರೆ .

 ಮುನ್ನಿನ ಪುರಾತನರ
ನೆನೆದು
ಧನ್ಯನಾದೇನೆಂಬ ಮಾತಿನ
ರಂಜಕರೇನೆಂಬ ಕೂಡಲಸಂಗಮ ದೇವ….

ಅದೇ ರೀತಿಯಲ್ಲಿ ಜ್ಞಾನಿಗಳನ್ನು ನೆನೆದರೆ, ಜ್ಞಾನಿಗಳಾಗುವದಿಲ್ಲ. ಕಷ್ಟ ಪಟ್ಟು ಅರಿವು  ತಿಳಿದುಕೊಳ್ಳಬೇಕು.  ಕೆಲವರು  ತಾವು ಕೇವಲ  ಶರಣರನ್ನು, ಸಂತರನ್ನು , ಗುರುಗಳನ್ನು, ಮಹಾತ್ಮರನ್ನು, ಅನುಭಾವಿಗಳನ್ನು ಮತ್ತು  ಮಹಾ ಭಕ್ತರನ್ನು ನೆನೆದು  ತಾವು ಭಕ್ತರು ಎನ್ನುವವರು, ಆದರೆ ಅವರು ಯಾವುದೇ ಕಾಲಕ್ಕೂ ನಿಜ ಭಕ್ತರಾಗಲು ಸಾದ್ಯವಿಲ್ಲ, ಅದು ಕೇವಲ ಬೂಟಾಟಿಕೆಯ ಮಾತು, ಸ್ವಂತ ಸಾಧನೆ ಮುಖ್ಯ ಎಂಬುದನ್ನು ಶರಣರು ತಿಳಿಸಿದ್ದಾರೆ.
ಆದರೆ ಕೆಲವರು ಬೇರೊಬ್ಬರ ಸಾಧನೆಯನ್ನು ತಾವು ಕೇವಲ ಬಾಯಿ ಬಣ್ಣಕ ಮಾತುಗಳಲ್ಲಿ ಹೇಳುವದರ ಮೂಲಕ,ಬಾಹ್ಯ ಢಾಂಬಿಕ ನಡುವಳಿಕೆಯಿಂದ ಒಳ್ಳೆಯವರೆನಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಅದು ಒಂದಿಲ್ಲ ಒಂದು ದಿನ ನಿಜವಾದ ನ್ಯಾಯ,ನಿಜ ವ್ಯಕ್ತಿಗೆ ದೊರಕುವದೇ ಸತ್ಯ.
ಬೇರೆಯವರ ಸಾಧನೆ ನಮ್ಮ ಸಾಧನೆ ಎಂದೂ ಆಗುವುದಿಲ್ಲ, ಎಂದು ಅಪ್ಪ ಬಸವಣ್ಣನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Leave a Reply

Back To Top