ಕಾವ್ಯ ಸಂಗಾತಿ
ಡಾ.ಅಭಿಷೇಕ್ ಭಾರದ್ವಾಜ್ ಬಿ ಕೆ
ಕನವರತೆ
ನಸೀಬಿನೊಳು ನಿನ್ನ ಹೆಸರಿಲ್ಲ
ನಿನ್ನ ಹೃನ್ಮನದಿ ನನಗೆ ಋಣವಿಲ್ಲ
ಕನಸು ಕಂಡಂತೆ
ಮಿಂಚು ಹೊಳೆದಂತೆ
ಕ್ಷಣಗಳ ಮಾತ್ರದಿ ಕಳೆದವು
ಜೊತೆಗೂಡಿ ನಡೆದ ದಿನಗಳು
ಕಡಲ ತೀರದ ಉಸುಕಾಗಿದೆ ಮನ
ಮತ್ತೆ ನಿನ್ನೊಲವ ಹೆಜ್ಜೆಗಳ
ಗುರುತಿನ ಸಾಂಗತ್ಯ ಕಾಣಲು
ಅಲೆಗಳಾಗಿವೆ ಭಾವ ನಿನ್ನೊಲವ
ಪ್ರೇಮ ಚಹರೆಗಳ ಮುತ್ತಿಕ್ಕಲು
ಅಳಿಸಲಾಗದ ನಿನ್ನ ಜೊತೆ ಕಳೆದ
ಆ ದಿನದ ನೆನಪುಗಳ ಭಿತ್ತಿಚಿತ್ರಗಳ
ಮತ್ತೆ ಮತ್ತೆ ಕಾಡುತಿದೆ ಬೆಂಬಿಡದೆ
ಕಣ್ಣ ಕನಸಿನ ಕನವರತೆಗಳ
ಪಟ ಪಟನೆ ಜಿಟಿ ಮಳೆಯಂತೆ
ಸುರಿವ ನಿನ್ನ ಮಾತಿನ ಸದ್ದಿಲ್ಲದೆ
ಗಾಢ ಮೌನ ಭಯವುಟ್ಟಿಸಿ ಕೊಲ್ಲುತಿದೆ
ಮುಂಗುರುಳೂ ಮಗ್ಗಲಿಗೆ
ತಿರುಗಿ ಮಲಗಿದೆ
ನಿನ್ನ ಬೆರಳುಗಳ
ತಂಗಾಳಿಯ ಸ್ಪರ್ಶವಿಲ್ಲದೆ
ಕಾಣುವ ಜಗವೆಲ್ಲಾ
ಕಪ್ಪಾಗಿ ಕಾಣುತಿದೆ
ನಿನ್ನ ಕಣ್ಗಳ ಪ್ರಕಾಶತೆಯ
ಬೆಳಕಿಲ್ಲದೆ
ಹುಣ್ಣಿಮೆಯೂ ಕಾರ್ಗತ್ತಲಾಗಿ
ಕಂಡಿದೆ ನಿನ್ನ ನಗುವಿನ ಬೆತ್ತಿಂಗಳಿಲ್ಲದೆ
ನೀಲಾಕಾಶವೂ ಕುರೂಪಿಯಂತೆ
ಕಾಣುತಿದೆ ನಿನ್ನ ಮುಖ
ಚಂದ್ರನೊಳಪ ಕಾಣದೆ
ಸಹಿಸಲಾರೆ ಈ ಮೌನದ ಭೀಕರತೆಯ
ತಳಲಾರೆ ಈ ನರಕ ಯಾತನೆಯ ವಿರಹ
ಹೇಳಲಾರೆ ಭಾವನೆಗಳ ಬಡಿದಾಟಗಳ
ಚಿತ್ತವೇರಿದೆ ಚಿತೆಗೆ
ಚಿಂತೆಗಳ ಎದುರಿಸಲಾರದೆ
ಉಸಿರಾಡುತ್ತಿದ್ದರೂ ನಿಸ್ತೇಜವಾಗಿದೆ ಹೃದಯ
ಮನವಾಗಿಹುದು
ಕೊರತೆಗಳ ಕೋಣೆಯೊಳು
ಮಸಣದ ಜೀವಂತ ಶವದಂತೆ
ನಿನ್ನೊಲವ ಪ್ರಣಯ ಮಳೆಗೆ
ಬಾಯ್ಬಿರಿದು ಕಾದ ಬರಡಾಡ ಇಳೆಯಂತೆ
———————————————
ಶೈವಾನೀಕ
ಅದ್ಭುತ ಅಪ್ರತಿಮ ಸುಂದರ ಕವನ