ಮಧುರಾ ಮೂರ್ತಿ ಕವಿತೆ-ಮೂಕ ವೇದನೆ

ಬಳ್ಳಿಯೊಂದು ಸೊರಗುತಿಹುದು
ಪೊರೆಯುವವರಿಲ್ಲದೆ
ಸತ್ತು ಸತ್ತು ಬದುಕುತಿಹುದು
ಅರಿಯುವವರಿಲ್ಲದೆ

ಹೇಗೋ ಬಿದ್ದ ಮಣ್ಣಿನೊಡಲ
ಸೀಳಿ ಮೇಲೆ ಬಂದಿದೆ
ಮರವ ತಬ್ಬಿ ನಗುತಲಿರುವ
ಚಿಗುರು ಕಣ್ಣ ಮುಂದಿದೆ

ಬಿಸಿಲ ತಾಪ ಸುಡುತಲಿಹುದು
ನೀರ ಹನಿಸುವರಿಲ್ಲದೆ
ಎಲ್ಲ ಸುಖವು ಕ್ಷಣಿಕವಾಗಿ
ಕಷ್ಟದಲ್ಲಿ ನರಳಿದೆ

ರಕ್ಷೆಯಿರದೆ ಒಂಟಿಯಾಗಿ
ಮುದುಡಿ ಒಣಗುತಿರುವುದು
ಎಷ್ಟು ದಿನದ ಬದುಕೋ ಏನೊ
ನಿತ್ಯ ಮರುಗುತಿರುವುದು

ಕಣ್ಣ ತಣಿಸುವಂತ ಹೂವ
ನೀಡದೇನು ಹೆರಳಿಗೆ
ಯಾವ ಪಾಪಕೀ ಶಿಕ್ಷೆ
ಕರುಣೆಯಿಲ್ಲ ದೇವಗೆ

ಮುಗಿಲಿನಿಂದ ಮಳೆ ಹನಿಯು
ಬಿದ್ದರಷ್ಟೆ ಮತ್ತೆ ಜೀವ
ನಿಯತಿ ಇಚ್ಚೆ ಹೇಗೋ ಹಾಗೆ
ಸಹಿಸಬೇಕು ನೋವ


    Leave a Reply

    Back To Top