ಇಂದಿರಾ ಮೋಟೆಬೆನ್ನೂರ ಅವರ ಕವಿತೆ ‘ಕಾರಣವ ನೀ ಹೇಳು’

ಹೃದಯ ಮಂದಿರದಿ ಒಳ ಕರೆದು
ಭಾವ ಬುತ್ತಿಯ ಉಣಿಸಿ
ಮತ್ತೆ ಹೊರ ನೂಕುವ
ಕಾರಣವ ನೀ ಹೇಳು…

ನಿನ್ನೆದೆಯ ಆಗಸದಿ
ಕಿರು ತಾರೆಯಾಗಿಸಿ
ಮಿನುಗಿಸಿ ಮೆರೆಸಿ
ಮತ್ತೆ ಕರಗಿಸುವ ಕಾರಣವ ನೀ ಹೇಳು..

ನಿನ್ನ ಮನದಂಗಳದ
ಮಲ್ಲಿಗೆಯಾಗಿಸಿ
ಮತ್ತೆ ಹೊಸಕಿ ಹಾಕುವ
ಕಾರಣವ ನೀ ಹೇಳು…

ಬರ ಸೆಳೆದು ಬಳಿ ಕರೆದು
ಭಾವ ಜೀವವ ಸ್ಫುರಿಸಿ
ಮತ್ತೆ ಬರಿದು ಮಾಡುವ
ಕಾರಣವ ನೀ ಹೇಳು

ಸಾವಿರ ಹೊಂಗನಸುಗಳ
ಕಂಗಳಲಿ ಅರಳಿಸಿ
ಮತ್ತೆ ಈಗ ನಿತ್ಯ ಕಣ್ಣೀರು
ನೀಡುತಿಹ ಕಾರಣವ ನೀ ಹೇಳು..

ಮಾತುಗಳ ಬೆಟ್ಟವನೆ
ಹೊತ್ತು ತಂದು ನಿರಪರಾಧಿಯ
ಮತ್ತೆ ಮೌನ ಕೂಪದಲೀ
ತಳ್ಳಿರುವ ಕಾರಣವ ನೀ ಹೇಳು …

ಮೊಗದದಂಗಳದಿ ನಗೆ
ಬೆಳದಿಂಗಳ ಸುರಿಸಿ
ಮೋಡದಲಿ ಮೊಗ ಮರೆಸಿ
ಕತ್ತಲಾಗಿಸಿಹ ಶಶಿಯೇ
ಕಾರಣವ ನೀ ಹೇಳು…

ಆತ್ಮವನೇ ಸೆಳೆದೊಯ್ದೆ
ಉಸಿರನ್ನೆ ಕಸಿದೊಯ್ದೆ
ಹಿಡಿಜೀವ ಉಳಿಸಿರುವ
ಕಾರಣವ ನೀ ಹೇಳು…

ಜೀವವನೇ ಕೊಂಡೊಯ್ದು
ಜೀವಂತವಾಗಿಸಿರುವೆ…
ಕಣಕಣ ಕ್ಷಣಕ್ಷಣ ಕೊಲ್ಲುತಿಹೆ
ಕಾರಣವ ನೀ ಹೇಳು…


Leave a Reply

Back To Top