ಕಾವ್ಯ ಸಂಗಾತಿ
ಮಧು ವಸ್ತ್ರದ್
ನಾನು ಶಬರಿ
ಪ್ರಾಪಂಚಿಕ ಸುಖವ ತೊರೆದು ಗುರಿ ಸಾಧನೆಗಾಗಿ ಪಾರಮಾರ್ಥಿಕವ ಆಯ್ದಿರುವೆ ರಾಮಾ
ಪಂಪಾ ಪುಷ್ಕರಣಿಯ ಪಶ್ಚಿಮದ ತಟದಲಿ ಕುಳಿತು ನಿನ್ನ ದರ್ಶನಕಾಗಿ ಕಾಯ್ದಿರುವೆ ರಾಮಾ
ಮುನಿ ಮಾತಂಗರಿಂದ ನಿನ್ನ ಪೂಜಿಸಿ ಆರಾಧಿಸುವ ಎಲ್ಲ ಬಗೆಯ ಅರಿತಿರುವೆ ರಾಮಾ
ಮೌನಿ ಋಷಿಯ ಮಾರ್ಗದರ್ಶನವ ಪಡೆದು ವ್ರತ ಜಪ ತಪಗಳಲಿ ಬೆರೆತಿರುವೆ ರಾಮಾ
ಕಾನನದೆಲ್ಲ ವಿಕಸಿತ ವರ್ಣರಂಜಿತ ಕುಸುಮಗಳಲಿ ನಿನ್ನದೇ ಮೊಗವ ಕಂಡಿರುವೆ ರಾಮಾ
ಬಾನ ಚುಕ್ಕಿ ಹಾರು ಹಕ್ಕಿ ರವಿ ಶಶಿಯರ ಬಿಂಬದಲಿ ನಿನ್ನಿರುಹ ಮನಗಂಡಿರುವೆ ರಾಮಾ
ಮಾತಂಗಾಶ್ರಮದ ಮಾರ್ಗದ ಮುಳ್ಳುಕಂಟಿಗಳನು ಆರಿಸಿ ಬದಿಗೆ ಸರಿಸಿರುವೆ ರಾಮಾ
ಆತಂಕವೆನಿತೂ ಇಲ್ಲದೆ ನಾಡ ಬಿಟ್ಟು ಕಾಡಲಿ ನಿನ್ನ ದರ್ಶನ ಭಾಗ್ಯವ ಅರಸಿರುವೆ ರಾಮಾ
ತಿಳಿಗೊಳದಿ ಮುಳುಗೆದ್ದು ನಿನ್ನ ನಾಮವ ಜಪಿಸುತ ನಾರುಮಡಿಯ ಉಟ್ಟಿರುವೆ ರಾಮಾ
ಅಂಗಳದಿ ರಂಗೋಲಿ ಇಟ್ಟು ಹೊಸ್ತಿಲನು ಪೂಜಿಸಿ ಬಾಗಿಲಿಗೆ ತೋರಣ ಕಟ್ಟಿರುವೆ ರಾಮಾ
ಕಂಪು ಬೀರುವ ಮಾಗಿದ ತುಂಬು ತನಿವಣ್ಣುಗಳ ನಿನಗಾಗಿ ಆರಿಸಿ ತಂದಿರುವೆ ರಾಮಾ
ಕೆಂಪು ಗುಲಾಬಿ ಮಲ್ಲಿಗೆ ಸಂಪಿಗೆ ಹೂಗಳ ಬಿಡಿಸಿ ಮಾಲೆಯ ಮಾಡಿರುವೆ ರಾಮಾ
ಮಲೆಯ ತರುಗಳು ನದಿಯಲೆಗಳೆಲ್ಲ ಗುಣಗಾನ ಗೈವುದ ಕೇಳಿ ಆನಂದಿಸಿರುವೆ ರಾಮಾ
ಎಲೆಯ ಚಲನೆಯಲಿ ಎಲರು ಬೀಸುವಲಿ ನಿನದೇ ದನಿಯನು ಆಲಿಸಿರುವೆ ರಾಮಾ
ಮೆಲುಕು ಹಾಕುತ ತುರುಗಳು ನಿನ್ನ ನಾಮಾಮೃತವ ಸವಿದಿಹುದ ನೋಡಿರುವೆ ರಾಮಾ
ಚಿಲಿಪಿಲಿ ಕಲರವ ದುಂಬಿಯ ಝೇಂಕಾರ ಶುಕಪಿಕ ಸ್ವರದಲಿ ನಿನ್ನ ಸ್ಮರಣೆ ಕೇಳಿರುವೆ ರಾಮಾ
ಅಮಾವಾಸ್ಯೆಯ ರಾತ್ರಿಯಲೂ ಬೆಳಕು ಚೆಲ್ಲೆಂದು ಚಂದಿರನ ಕೋರಿರುವೆ ರಾಮಾ
ನಮಿಸುತ ನಭೋಮಣಿಗೆ ವೈಶಾಖದ ಶಾಖವನೂ ತಂಪಾಗಿಸೆಂದು ಬೇಡಿರುವೆ ರಾಮಾ
ದಾರಿಯಲಿ ಧೂಳೆಬ್ಬಿಸುತ ರಾಮನ ಕಾಡದಿರೆಂದು ಇಳೆಯನು ಯಾಚಿಸಿರುವೆ ರಾಮಾ
ಧಾರಾಕಾರವಾಗಿ ಸುರಿದು ಬೇಸರವ ತಾರದಿರೆಂದು ಮಳೆರಾಯನ ವಿನಂತಿಸಿರುವೆ ರಾಮಾ
ವರ್ಷಗಳುರುಳಿದಂತೆ ನಿನ್ನ ಸೇವೆಗೈವ ಇಚ್ಛೆಯನು ಹೆಚ್ಚೆಚ್ಚು ಬೆಳೆಸಿಕೊಂಡಿರುವೆ ರಾಮಾ
ಹರ್ಷಚಿತ್ತದಿ ಭಕ್ತಿಭಾವದಿ ನಿನ್ನ ಪಾದ ಸೇರಿ ಮುಕ್ತಿ ಪಡೆಯಬೇಕೆಂದೆಣಿಸಿರುವೆ ರಾಮಾ
ವಯಸ್ಸಾಗಿ ಮಂಜಾದ ಕಣ್ಣು ಮಂದಗಿವಿ ಬಾಗಿದ ಬೆನ್ನ ಹೊತ್ತು ಬದುಕಿರುವೆ ರಾಮಾ
ಆಯುಸ್ಸಿನ ಈ ಸಂಜೆಯಲಿ ನಿನ್ನ ಆದರಿಸಿ ಆತಿಥ್ಯ ನೀಡುವ ಭಾಗ್ಯ ಬಯಸಿರುವೆ ರಾಮಾ
ಹೊಳೆವ ರತ್ನದೀಪಗಳೆರಡು ನನ್ನೆಡೆಗೆ ನಡೆಯುತ ಬರುತಿಹುದ ನೋಡುತಿರುವೆ ರಾಮಾ
ಏಳು ಸೂರ್ಯರ ಶೋಭೆಯನು ನಿಮ್ಮಲಿ ಕಂಡು ದಿಘ್ಮೂಢಳಾಗಿರುವೆ ರಾಮಾ
ಬೋರೆಯ ರುಚಿ ನೋಡಿ ಹುಳುಕಿಲ್ಲದ ಸಿಹಿಹಣ್ಣ ನಿನಗಾಗಿ ಇರಿಸಿರುವೆ ರಾಮಾ
ಓರೆಕೋರೆಗಳಿಲ್ಲದ ಮುಗ್ಧ ಭಕ್ತಿಯಿಂದಿತ್ತ ಎಡೆಯ ಮೆಚ್ಚುವೆಯೆಂದು ಭಾವಿಸಿರುವೆ ರಾಮಾ
ಪಾದ ಸ್ಪರ್ಶವ ಮಾಡಿ ನಿನ್ನಾಶೀರ್ವಾದವ ಪಡೆದು ಪರಮ ಪಾವನಳಾಗಿರುವೆ ರಾಮಾ
ನಾದ ಬಿಂದು ಕಲಾತೀತನ ಇರುಹನೂ ಅರಿಯದ ನಾನಿಂದು ಭವಮುಕ್ತಳಾಗಿರುವೆ ರಾಮಾ..
ಮಧು ವಸ್ತ್ರದ್