ಗಜಲ್ ಜುಗಲ್ ಬಂದಿ- ಡಾ.ವಾಯ್ ಎಂ. ಯಾಕೊಳ್ಳಿ ಮತ್ತು ಅರುಣಾ ನರೇಂದ್ರ

ಬರೆದಷ್ಟೂ ಅರಿಯದೆ ಉಳಿದೆ ನೀನು
ಹೇಳಿದಷ್ಟೂ ತಿಳಿಯದೆ ಹೋದೆ ನೀನು

ವೇದ ಮಂತ್ರಗಳ ಹಾಗೆ ನಿಗೂಢದಲಿರುವೆ
ಮುಗ್ದ ಮನಸಿಗೆ ನಿಲುಕದ ಗಂಟಾದೆ ನೀನು

ನಿಗೂಢ ಲೋಕದ ಮಂತ್ರಗಾತಿ ಆಗಿರುವೆ
ಆರಾಧಕನ ಕಣ್ಣಿಗೂ ಕಾಣದೇ ಇದ್ದೆ ನೀನು

ಪುಸ್ತಕ ಲೋಕದ ಅಕ್ಷರದಲಿ ಹುದುಗಿರುವೆ
ಲೇಖಕನ ಲೇಖನಿಗೆ ನಿಲುಕದೆ ಹೋದೆ ನೀನು

ಅರಿದವನೆಂಬ ಮೌಢ್ಯದಲಿ ಸೋತಿರುವೆ
ಯಯಾನ ಮನದ ಹುಂಬತನ ಗೆದ್ದೆ ನೀನು

ಮೌನ ಧ್ಯಾನವ ಮೀರಿ ಮಾತಾದೆ ನೀನು
ಹೂ ಮಕರಂದದಿ ಜಿನುಗಿ ಜೇನಾದೆ ನೀನು

ನಿಗಮಾಗಮಗಳ ಅರ್ಥ ನಿನ್ನೊಳಗೆ ಕಂಡೆ
ಅರಿವಿನ ಆಳಕ್ಕೆ ಇಳಿದ ಮುತ್ತಾದೆ ನೀನು

ಬೇಕು ಬೇಕೆಂದಷ್ಟು ಬಲು ದೂರ ದೂರ
ಬದುಕಿನುದ್ದಕೂ ಬರೀ ಗೀಳಾದೆ ನೀನು

ಪುಟ ತಿರುವಿದಂತೆ ತೆರೆದುಕೊಳ್ಳದ ನಿಗೂಢ
ಕೈಗೆಟುಕದ ಬಾನ ಬಣ್ಣದ ಬಿಲ್ಲಾದೆ ನೀನು

ತಿಳಿನೀರು ಕಾಲಾಡಿಸಿದಂತೆ ಹಾಳು ನೆನಪು
ಅರುಣಾಳ ಮನದಾಸೆಗೆ ಹೊರತಾದೆ ನೀನು

Leave a Reply

Back To Top