ಡಾ ರವೀಂದ್ರನಾಥ ಠಾಗೋರ್ ಅವರ ಇಂಗ್ಲೀಷ್ ಕವಿತೆಯ ಭಾವಾನುವಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರಿಂದ

ನಿನ್ನೊಳಗನು ನೀ ತಿಳಿದರೆ
ದೇವಾಲಯಗಳಿಗೆ ಹೋಗಬೇಕಿಲ್ಲ.
ದೇವರ ಪಾದಕ್ಕೆ ಹೂವನರ್ಪಿಸಲು ಅಲ್ಲಿಗೆ ಹೋಗಬೇಡ
ಅದಕ್ಕೂ ಮೊದಲು ನಿನ್ನ ಮನೆಯಲ್ಲಿ ಪ್ರೀತಿಯ ಪರಿಮಳವನ್ನು ತುಂಬು ಸಾಕು.

ದಿವ್ಯಾತ್ಮದ ಮುಂದೆ ದೀಪ ಬೆಳಗಲು
ಅಲ್ಲಿ ಹೋಗಿಯೇ ದೀಪ ಹಚ್ಚಬೇಕಿಲ್ಲ,
ಅದಕ್ಕೂ ಮೊದಲು ನಿನ್ನ ಮನದಲ್ಲಿ ಆವರಿಸಿದ ಪಾಪಭೀತಿಯ ಕತ್ತಲೆಯನ್ನು ಹೊಡೆದೊಡಿಸಿದರೆ ಸಾಕು.

ಕೈ ಮುಗಿದು ಅತೀ ಕೈಂಕರ್ಯದಿಂದ
ದೇವರ ಮುಂದೆ ಪ್ರಾರ್ಥಿಸಬೇಡ.
ನಿನ್ನೊಳಗಿನ ಅಹಂ ತೊರೆದು,
ಮಾನವೀಯತೆಯ ಬೆಳಕಿಗೆ ತಲೆಬಾಗು, ಜೊತೆಗಾರರಿಗಾಗಿ ಒಳಿತು ಮಾಡುವುದನ್ನು
ರೂಢಿಸಿಕೋ ಸಾಕು.

ದೇವರಿಗೆ ಪ್ರಾರ್ಥನೆ ಸಲ್ಲಿಸಲು
ಅವನ ಆಲಯಕ್ಕೆ ಹೋಗಬೇಕಿಲ್ಲ.
ಮೊದಲು ಲೋಕದ ಒಳತಿಗಾಗಿ,
ಒಳ್ಳೆಯವರಿಗೆ ವಿಧೇಯನಾಗಿ
ದೀನ ದುರ್ಬಲರ ಏಳಿಗೆಗಾಗಿ
ಸತ್ಯದ ಅನ್ವೇಷಣೆಗಾಗಿ
ನಿನ್ನನ್ನು ಸಮರ್ಪಿಸಿಕೋ ಸಾಕು.

ದೇವರ ಮುಂದೆ ಮಂಡೆಗಾಲೂರಿ,
ಆರ್ದತೆಯಿಂದ ನಿನಗಾಗಿ ಮಾತ್ರ
ಬೇಡಿಕೊಳ್ಳಲು ಅಲ್ಲಿಗೆ ಹೋಗಬೇಡ.
ನಿನ್ನನ್ನು ಕೆಳಕ್ಕೆ ತುಳಿದವರನ್ನೂ,
ಮಾನವಿಯತೆಯಿಂದ ಮೇಲಕ್ಕೆತ್ತಿ
ಮೊದಲು ಮಾನವನಾಗುವ
ಮಾರ್ಗದಲ್ಲಿ ಮುನ್ನಡೆ ಸಾಕು.

ನಿನ್ನ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ
ದೇವರ ಮುಂದೆ ನಿಂತು ದೀನತೆಯಿಂದ
ಬೇಡಿಕೊಳ್ಳಲು ಅಲ್ಲಿಗೆ ಹೋಗಬೇಡ
ನಿನ್ನ ವಿರುದ್ಧವಾಗಿ ಪಾಪ ಮಾಡಿದವರನ್ನೂ,
ನೋವು ಕೊಟ್ಟವರನ್ನೂ, ಕ್ಷಮಿಸುವ
ವಿಶ್ವಮಾನವ ಗುಣವನ್ನು ಬೆಳಿಸಿಕೋ ಸಾಕು.

ದ್ವೇಷ , ಅಸೂಯೆ, ವೈರುದ್ಯತೆ, ಅಧರ್ಮಗಳನ್ನು ತುಂಬಿಕೊಂಡಿರುವ ನಿನ್ನ ಮನಸ್ಥಿತಿಯಿಂದ
ಹೊರ ಬಂದು ಮೊದಲು ಬಂಧ ಮುಕ್ತನಾಗು.
ನಿನ್ನ ಸಾತ್ವಿಕತೆಯ ವಿರುದ್ಧವಾಗಿ,
ನಿನ್ನೊಳಗೆ ವಿಷ ತುಂಬುವ
ನಕಾರಾತ್ಮಕತೆಯಿಂದ ಹೊರನಡೆ ಸಾಕು.

ಸದಾ ಮಾನವಿಯ ಅಂತಃಕರಣದ
ಸಕಾರಾತ್ಮಕತೆಯನ್ನು ನಿನ್ನ ಎದೆಯಲ್ಲಿ ತುಂಬಿಕೊಂಡದ್ದೆಯಾದರೇ,
ದೇವರು ದೇವಾಲಯದಲ್ಲಿರದೇ
ನಿನ್ನ ಹೃದಯಾಂತರಂಗದಲ್ಲಿಯೇ
ಅರಿವಿನ ಮಹಾಗುರುವಾಗಿ
ಬದುಕ ಬೆಳಕಾಗಿ
ದಾರಿದೀಪವಾಗಿರುತ್ತಾನೆ.


9 thoughts on “ಡಾ ರವೀಂದ್ರನಾಥ ಠಾಗೋರ್ ಅವರ ಇಂಗ್ಲೀಷ್ ಕವಿತೆಯ ಭಾವಾನುವಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರಿಂದ

  1. ‘ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೇ ದೇವ ನೋಡಾ ಕೂಡಲಸಂಗಮದೇವ ‘ ಬಸವಣ್ಣನವರ ವಚನವನ್ನೇ ರವೀಂದ್ರನಾಥ ಟ್ಯಾಗೂರ್ ಅವರ ಈ ಕಾವ್ಯ ಹೋಲಿಕೆ ಆಗುತ್ತದೆ. ಅನುವಾದಕ್ಕೆ ಧನ್ಯವಾದಗಳು, ಮೇಡಂ

  2. ” ತನ್ನರಿವೆ ತನಗೆ ಗುರು ” ಅಲ್ಲಮನ ವಾಣಿಯ ಆಶಯದ ಕವಿತೆ ಮತ್ತು ಅದರ ಅನುವಾದ ಸಹಜ ಸುಂದರವಾಗಿ ಮೂಡಿದೆ.ನಿಮಗೆ ಅಭಿನಂದನೆ.

  3. “ದೇಹವೆ ದೇವಾಲಯವಾದ ಬಳಿಕ ಮತ್ತೆ ಬೇರೆ ದೇವಾಲಯವೇಕೈಯ್ಯ?ಎರಡಕ್ಕೆ ಹೇಳಲಿಲ್ಲ ಗುಹೇಶ್ವರ ನೀನು ಇಲ್ಲಾಂದ್ರೆ ನಆನಏನಪ್ಪಎನಯ್ಯ!?” “ತನ್ನರಿವೆ ತನಗೆ ಗುರು ” ಅಲ್ಲಮನ ವಾಣಿಯ ಆಶಯದ ಕವಿತೆ ಮತ್ತು ಅದರ ಅನುವಾದ ಸಹಜ ಸುಂದರವಾಗಿ ಮೂಡಿದೆ.ನಿಮಗೆ ಅಭಿನಂದನೆ.

  4. ತುಂಬ ಅರ್ಥವತ್ತಾದ ಕವಿತೆ ಸಾರ್ವಕಾಲಿಕ ಸಾರ್ವತ್ರಿಕ ಮೌಲ್ಯ ಸಾರುವ ಕವಿತೆ, ಅನುವಾದ ಭೇಷ ಭೇಷ

    1. ಮೆಮ್ ತಮ್ಮ ಆಶೀರ್ವಾದ ಸದಾ ಇರಲಿ……ಕವಿತೆ ಓದಿ ಪ್ರತಿಕ್ರಿಯೆ ನೀಡಿದ್ದಕ್ಕ‍‍ಾಗಿ ಅನಂತ ಶರಣಾರ್ಥಿ

Leave a Reply

Back To Top