ಉಂಬಳದ ಕಡಿತಕ್ಕೆ ಹೆದರಿದ ಹುಲ್ಲೆ ಮರಿಯಾಗಿದ್ದಳು ಸುಮತಿ. ಇದುವರೆಗೂ ಕಾಣದ ಜೀವಿಯೊಂದನ್ನು ಮೊದಲ ಬಾರಿಗೆ ಕಂಡಿದ್ದಳು. ಉಂಬಳ ಹೇಗೆ ಇರುತ್ತದೆ ಎಂದು ಅವಳಿಗೆ ಗೊತ್ತೇ ಇರಲಿಲ್ಲ. ಏಕೆಂದರೆ ಅವರ ಊರಲ್ಲಿ ಇದನ್ನು ಕಂಡಿರಲಿಲ್ಲ. ಉಂಬಳಗಳು ಕೇರಳದ ಕೆಲವು ತಂಪಾದ ಪ್ರದೇಶಗಳಲ್ಲಿ ಇದೆ ಎಂದು ಕೇಳಿದ್ದಳು ಅಷ್ಟೇ ಆದರೆ ಎಂದೂ ನೋಡಿರಲಿಲ್ಲ. ಅಪ್ಪ ಉಂಬಳದ ಮೇಲೆ ಸುಣ್ಣ ಹಚ್ಚಿದ ಕೂಡಲೇ ಅದು ಕೆಳಗೆ ಬಿದ್ದು ಹೋಯಿತು. ಅದು ಕಚ್ಚಿದ್ದ ಭಾಗದಿಂದ ರಕ್ತ ಒಸರಲು ಪ್ರಾರಂಭವಾಯಿತು. ಸುಮತಿ ಗಾಬರಿಯಾದಳು. ಅರಿವಿಲ್ಲದೇ ಬಾಯಿಂದ ಅಮ್ಮಾ ಎನ್ನುವ ಕೂಗು ಹೊರಬಂತು. ಅವಳ ಜೊತೆ ಇಲ್ಲಿ ಅಮ್ಮ ಇಲ್ಲ ಎನ್ನುವ ವಾಸ್ತವದ ಅರಿವಾದಾಗ ಅವಳಿಗೇ ತಿಳಿಯದಂತೆ ಕಣ್ಣಿಂದ ನೀರ ಹನಿಗಳು ಜಾರಿ ಅವಳ ಕೆನ್ನೆ ತೋಯಿಸಿದವು. ಅಮ್ಮನ ನೆನಪು ತುಂಬಾ ಕಾಡಿತು. ಈಗ ಅಮ್ಮ ನಮ್ಮ ಜೊತೆ ಇದ್ದಿದ್ದರೆ? ಅಪ್ಪ ಕರೆದಾಗ ಜೊತೆ ಬಂದಿದ್ದರೆ ನಮ್ಮ ನಡುವೆ ಈಗ ಅಮ್ಮ ಇರುತ್ತಾ ಇದ್ದರು. ಈ ಪರಿಸರ ತೋಟ ಇವೆಲ್ಲವನ್ನೂ ನೋಡಿ ಖಂಡಿತಾ ಖುಷಿ ಪಡುತ್ತಿದ್ದರು.

ಏಕೆ ಅಮ್ಮ ಇಂತಹ ಗಟ್ಟಿ ನಿರ್ಧಾರ ಮಾಡಿದರು. ನಾವು ಮಕ್ಕಳೂ ಕೂಡಾ ಬೇಡವಾದೆವೆ? ಈ ಪ್ರಶ್ನೆಯೊಂದು ಅವಳನ್ನು ಸದಾ ಕಾಡುತ್ತಲೇ ಇತ್ತು. ಅಮ್ಮನ ನೆನಪು ಬಾರದ ಒಂದು ಕ್ಷಣವೂ ಇರಲಿಲ್ಲ. ಏನೇ ಆಗಲಿ ಸ್ವಲ್ಪ ದಿನಗಳ ನಂತರ ಅಪ್ಪ ಹೋಗಿ ಅಮ್ಮನನ್ನು ಕರೆದುಕೊಂಡು ಬರುತ್ತಾರೆ ಎಂದು ಅವಳಿಗೆ ತಿಳಿದಿತ್ತು. ಏಕೆಂದರೆ ಅಪ್ಪ ಅಮ್ಮನ ಪ್ರೀತಿಯ ಪರಿಚಯ ಅವಳಿಗೆ ಚೆನ್ನಾಗಿ ಇತ್ತು. ಒಬ್ಬರನ್ನು ಇನ್ನೊಬ್ಬರು ಬಿಟ್ಟಿರಲಾರದ ಆತ್ಮೀಯತೆ ಅವರಲ್ಲಿ ಇತ್ತು. ಕಲ್ಯಾಣಿ ಮತ್ತು ನಾರಾಯಣನ್ ಅವರದು ಅನುರೂಪದ ಜೋಡಿಯಾಗಿತ್ತು.  ಎಲ್ಲರಿಗೂ ಆದರ್ಶಪ್ರಾಯರಾದ ಪತಿ ಪತ್ನಿ ಎನಿಸಿಕೊಂಡಿದ್ದರು ನಾರಾಯಣನ್ ದಂಪತಿಗಳು.

ಎಲ್ಲರೂ ತೋಟದಿಂದ ಬಂಗಲೆಗೆ ಹಿಂತಿರುಗಿದರು. ಸುಮತಿಯ ಕಾಲಲ್ಲಿ ಉಂಬಳ ಕಚ್ಚಿದ ಕಡೆ ಜಿನುಗುತ್ತಿದ್ದ ರಕ್ತ ನಿಂತು ಹೋಗಿತ್ತು. ಎಲ್ಲರೂ ಕೈ ಕಾಲು ತೊಳೆದುಕೊಂಡು ತೋಟದ ಮಾಲೀಕರ ಜೊತೆ ಕುಳಿತು ಊಟ ಮಾಡಿದರು. ಸ್ವಲ್ಪ ಹೊತ್ತು ಮಾತುಕತೆ ನಡೆಸಿ ಹೊರಡಲು ಅನುವಾದರು.

ತೋಟವನ್ನು ಮಾರುವ ಬಗ್ಗೆ ಸ್ವಲ್ಪ ದಿನಗಳಲ್ಲೇ ತೀರ್ಮಾನಿಸಿ ಹೇಳುವುದಾಗಿ ತಿಳಿಸಿ ಎಲ್ಲರನ್ನೂ ಬೀಳ್ಕೊಟ್ಟರು. ಹೋಗುವ ಮುನ್ನ ಜೊತೆಗೆ ಹಲವಾರು ಬಗೆಯ ಹಣ್ಣುಗಳನ್ನು ಬುಟ್ಟಿಗಳಲ್ಲಿ ತುಂಬಿ ಕಳುಹಿಸಲು ಮಾಲೀಕರು ಮರೆಯಲಿಲ್ಲ. ಗೇಟನ್ನು ದಾಟುವಾಗ ಅಲ್ಲಿಯೇ ಸ್ವಲ್ಪ ದೂರದಲ್ಲಿ ಇದ್ದ ಮುಳ್ಳಿನಿಂದ ಕೂಡಿದ ಗಿಡದ ಪೊದೆಯೊಂದು ಸುಮತಿಯ ಗಮನ ಸೆಳೆಯಿತು..

” ಅಪ್ಪಾ  ಯಾವುದು ಈ ಗಿಡ? ತೋಟದ ಒಳಗೆ ನೋಡಿಲ್ಲ ಗಿಡದ ರೆಂಬೆಗಳಲ್ಲಿ ಕೆನೆ ಬಣ್ಣದ ಸಣ್ಣ ಹಣ್ಣುಗಳು

ಕಾಣಿಸುತ್ತಾ ಇದೆಯಲ್ಲ… ಏನೆಂದು ಒಮ್ಮೆ ಜೀಪಿನಿಂದ ಇಳಿದು ನೋಡೋಣವೇ?” ಎಂದು ಸುಮತಿ ಕೇಳಿದಾಗ ಕೈ ಹಿಡಿದು ಎಳೆದು ಸುಮ್ಮನೆ ಇರುವಂತೆ ಮೆಲ್ಲನೇ ಅವಳ ಅಕ್ಕ ಹೇಳಿದಳು. ಆಗ ಬ್ರೋಕರ್ ಚಾಲಕನಿಗೆ ಜೀಪ್ ನಿಲ್ಲಿಸುವಂತೆ ಹೇಳಿ ಮಕ್ಕಳನ್ನು ಜೀಪಿನಿಂದ ಇಳಿದು ಬರುವಂತೆ ಹೇಳಿದರು. ಮಕ್ಕಳು ನಾಲ್ವರೂ ಖುಷಿಯಿಂದ ಇಳಿದರು. ನಾರಾಯಣ್ ಕೂಡಾ ಇಳಿದರು. ಅವರನ್ನೆಲ್ಲ ಪೊದೆಯ ಬಳಿಗೆ ಕರೆದುಕೊಂಡು ಹೋದ ಬ್ರೋಕರ್ ಪಕ್ಕದಲ್ಲಿ ಬಿದ್ದಿದ್ದ ಒಂದು ದೊಡ್ಡ ಕೊಕ್ಕೆಯಂತಹ ಕೋಲನ್ನು ತೆಗೆದುಕೊಂಡು ಒಂದು ರೆಂಬೆಯನ್ನು ಬಗ್ಗಿಸಿ ಹಿಡಿದು…. “ಮಕ್ಕಳೇ ಅದರಲ್ಲಿ ಇರುವ ಹಣ್ಣುಗಳನ್ನು ಕಿತ್ತುಕೊಳ್ಳಿ ಆದರೆ ಜಾಗ್ರತೆ ಮುಳ್ಳುಗಳು ಇವೆ ಚುಚ್ಚುತ್ತದೆ”….ಎಂದು  ಹೇಳಿದರು. ಕೊನೆಯವನನ್ನು ಬಿಟ್ಟು ಮೂರು ಮಕ್ಕಳೂ ಹಣ್ಣನ್ನು ಕಿತ್ತು  ಅಪ್ಪ  ಕೊಟ್ಟ ಮುತ್ತುಗದ ಎಲೆಯಲ್ಲಿ ಹಾಕಿದರು. ಪುಟ್ಟ ಪುಟ್ಟ ಹಣ್ಣುಗಳು ಮುಟ್ಟಲು ಮೃದುವಾಗಿತ್ತು.

ಎಲ್ಲರೂ ಎಲೆಯಿಂದ ಹಣ್ಣನ್ನು ತೆಗೆದುಕೊಂಡು ತಿಂದರು. ಸಿಹಿಯಾದ ರುಚಿ ಬೆಣ್ಣೆಯಂತೆ ಮೃದುವಾಗಿ ಇತ್ತು. ತಿರುಳಿಗಿಂತ ಬೀಜವೇ ದೊಡ್ಡದಿತ್ತು…”ಈ ಹಣ್ಣಿನ ಹೆಸರೇನು? ಎಂದು ನಾರಾಯಣ್  ಕೇಳಲು ಬ್ರೋಕರ್ “ಇದನ್ನು ಚೊಟ್ಟೆಹಣ್ಣು ಎಂದು ಇಲ್ಲಿನವರು ಕರೆಯುತ್ತಾರೆ…ಇದು ಮಲೆನಾಡಿನ ಗುಡ್ಡಗಾಡು ಹಾಗೂ ಕುರುಚಲು ಕಾಡುಗಳಲ್ಲಿ ಸಿಗುವ ಹಣ್ಣು…. ಬೇಸಿಗೆಯ ತಿಂಗಳಲ್ಲಿ ಮಾತ್ರ ಹಣ್ಣುಗಳು ಬಿಡುತ್ತವೆ” ಎಂದರು. ಎಲ್ಲರ ಜೊತೆ ಇದ್ದರೂ ಎಲ್ಲಾ ಕಡೆ ಸುತ್ತಾಡಿದರೂ ಅಮ್ಮನ ನೆನಪೇ ಸುಮತಿಗೆ ಬರುತ್ತಿತ್ತು. ಏನು ಮಾಡಲೂ ತೋಚದೆ ಆಗಾಗ ಅಪ್ಪನ ಮುಖ ನೋಡುತ್ತಾ ಇದ್ದಳು. ಅವಳ ನೋಟದ ಭಾವ ಅರ್ಥ ಆದಂತೆ ನಾರಾಯಣ್ ಮುಖ ಪಕ್ಕಕ್ಕೆ ತಿರುಗಿಸಿ ಎತ್ತಲೋ ನೋಡುತ್ತಾ ಇದ್ದರು. ಇದು ಸುಮತಿಗೆ ಅರ್ಥ ಆಗದೇ ಇರಲಿಲ್ಲ. ಹಾಗೂ ಹೀಗೂ ತಿರುವುಗಳಲ್ಲಿ ಜೀಪು ವಾಲುತ್ತಾ ರಸ್ತೆಯಲ್ಲಿ ಸಾಗಿತು. ಸುತ್ತಲಿನ ಚೆಲುವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾ ಎಲ್ಲರೂ ಸಕಲೇಶಪುರ ತಲುಪಿದರು. ಸಂಜೆಯಾಗುತ್ತಾ ಬಂದಿದ್ದರಿಂದ ಹೇಮಾವತಿಯ ನೀರಿನಲ್ಲಿ ನೇಸರನ ತಿಳಿಯಾದ ಹಳದಿ ಮಿಶ್ರಿತ ಕೆಂಪು ಬಣ್ಣದ ಪ್ರತಿಬಿಂಬ ಕಾಣುತ್ತಾ ಇತ್ತು. ಹಕ್ಕಿಗಳು ಗೂಡು ಸೇರುವ ತವಕದಲ್ಲಿ ಆಕಾಶದಲ್ಲಿ ಹಾರುತ್ತಾ ಬಗೆ ಬಗೆಯ ಚಿತ್ತಾರ ಮೂಡಿಸಿದ್ದವು. ಗಿಳಿಯ ಹಿಂಡು ಹಾರಿ ಬಂದು ಅತ್ತೆಯ ಮನೆಯ ಹಿಂದೆ ಇರುವ ಮರದಲ್ಲಿ ಕುಳಿತವು. ಅವುಗಳ ಕಲರವ ಕೇಳಿ ಸುಮತಿ ಮರವನ್ನು ನೋಡಿದಳು ಹಸಿರು ಎಲೆಗಳ ನಡುವೆ ಅವುಗಳು ಎಲೆಗಳಂತೆ ಗೋಚರಿಸಿದವು.

ಅವುಗಳ ಕಲರವ ಅಮ್ಮನ ತುತ್ತಿಗಾಗಿ ಮರಿಗಳ ಕಿಚ ಕಿಚ ಧ್ವನಿ ಅಮ್ಮನನ್ನು ಮತ್ತೆ ಮತ್ತೆ ಜ್ಞಾಪಿಸುತ್ತಾ ಇದ್ದವು. ಮರಿಗಳು  ಮರದ ಪೊಟರೆಯ ಒಳಗಿಂದ ಕೊಂಚವೇ ಹೊರಗೆ ಕತ್ತು ಚಾಚಿ ಅಮ್ಮನಿಂದ ತುತ್ತು ಪಡೆದು ತಿನ್ನುವುದು ನೋಡಿ ಅಮ್ಮ ಈಗ ನಮ್ಮ ಬಳಿಯೇ ಇದ್ದಿದ್ದರೆ ಎಷ್ಟು ಚೆಂದವಿತ್ತು ಅನಿಸಿತು ಅವಳಿಗೆ.

ಹೀಗೆ ಯೋಚನೆಯಲ್ಲಿ ಮುಳುಗಿದ ಸುಮತಿ ತಮ್ಮ ಬಂದು ಎಚ್ಚರಿಸಿದಾಗಲೇ ವಾಸ್ತವಕ್ಕೆ ಬಂದಿದ್ದು. ” ಅಕ್ಕಾ ಏನು ನೋಡುತ್ತಾ ಇರುವೆ ಆ ಮರದಲ್ಲಿ? ಎಂದು ತಮ್ಮ ಕೇಳಿದಾಗ ಮರದಲ್ಲಿ ಕುಳಿತಿದ್ದ ಗಿಳಿಗಳನ್ನು ಹಾಗೂ ಪೊಟರೆಯಲ್ಲಿ ಅಮ್ಮನ ಕೊಕ್ಕಿನಿಂದ ತುತ್ತು ತಿನ್ನಿಸಿ ಕೊಳ್ಳುತ್ತಾ ಇದ್ದ ಮರಿಗಳನ್ನು ತೋರಿಸಿ…. ” ಅಮ್ಮನ ನೆನಪು ತುಂಬಾ ಆಗುತ್ತಿದೆ ಕಣೋ….ಅಮ್ಮ ಇಲ್ಲಿ ನಮ್ಮ ಜೊತೆ ಇಲ್ಲ…. ಯಾವಾಗ  ಅಪ್ಪ ಕರೆದುಕೊಂಡು ಬರುವರೋ ಗೊತ್ತಿಲ್ಲ”…. ಎಂದಾಗ ತಮ್ಮನ ಮುಖ ಕಳೆಗುಂದಿತು. ಅಮ್ಮನ ನೆನಪಿನಿಂದ ಅವನ ಕಣ್ಣುಗಳೂ ಹನಿಗೂಡಿತು. ಇದನ್ನು ಕಂಡ ಸುಮತಿಯ ಮನಸ್ಸಿಗೆ ತುಂಬಾ ನೋವಾಯಿತು. ತಮ್ಮನನ್ನು ಅವುಚಿ ಹಿಡಿದಳು…

ಅಪ್ಪ ತೋಟವನ್ನು ಖರೀದಿಸಿದ ಮೇಲೆ ಅಮ್ಮ ಇಲ್ಲಿಗೆ ಬರುತ್ತಾರೆ…. ನಾವು ನೋಡಿದ ತೋಟ ಬಂಗಲೆ ಎಷ್ಟು ಚೆನ್ನಾಗಿದೆ ಅಲ್ವೇನೋ…. ಅಲ್ಲಿ ಅಮ್ಮನೂ ನಮ್ಮ ಜೊತೆ ಬಂದು ಇದ್ದರೆ ನಮಗೆ ಈ ಲೋಕವೇ ಸ್ವರ್ಗ ಕಣೋ…. ನೀನು ಈಗ ಅಳಬೇಡ…. ಆದಷ್ಟು ಬೇಗ ಅಮ್ಮ ಬರುತ್ತಾರೆ” ಎಂದು ತಮ್ಮನನ್ನು ಸಮಾಧಾನ ಪಡಿಸಿದಳು.

ಎಲ್ಲರೂ ಸಂಜೆ ಮತ್ತೊಮ್ಮೆ ಮಿಂದು ಅತ್ತೆ ದೀಪ ಹಚ್ಚಿದಾಗ ಕುಳಿತು ದೇವರ ಸ್ಮರಣೆ ಮಾಡಿದರು. ದೇವರ ನಾಮ ಸ್ಮರಣೆಯ ನಂತರ ದೊಡ್ಡವರೆಲ್ಲ ಹಜಾರದಲ್ಲಿ ಕುಳಿತು ಅಂದಿನ ವಿಶೇಷಗಳ ಬಗ್ಗೆ ಚರ್ಚಿಸುತ್ತಾ ಕುಳಿತರು. ಮಕ್ಕಳೆಲ್ಲರೂ ಕೋಣೆಯೊಳಗೆ ಕುಳಿತು ಇಂದು ತಾವು ನೋಡಿದ ತೋಟ  ಅಲ್ಲಿ ಅವರಿಗೆ ಆದ ಅನುಭವಗಳನ್ನು ಹೇಳುತ್ತಾ ಹರಟುತ್ತಾ ಕುಳಿತರು. ಆದರೆ ಮಕ್ಕಳೆಲ್ಲರಿಗೂ ಅಮ್ಮನ ನೆನಪು ಕಾಡಿತು. ಸ್ವಲ್ಪ ಸಮಯದ ನಂತರ ಎಲ್ಲರೂ ಊಟ ಮಾಡಿ ತೋಟವನ್ನು ಸುತ್ತಾಡಿ ಆಯಾಸ ಆಗಿದ್ದ ಕಾರಣ ಬೇಗನೆ ಮಲಗಿ ನಿದ್ರೆ ಮಾಡಿದರು.


Leave a Reply

Back To Top