“ಅರಿದ ಶರಣಂಗೆ ಆಚಾರವಿಲ್ಲ
ಆಚಾರವುಳ್ಳವಂಗೆ ಲಿಂಗವಿಲ್ಲ

ಲಿಂಗವಿಲ್ಲದ ಶರಣನ ಸುಳುಹು
ಜಗಕ್ಕೆ ವಿಪರೀತ
ಚರಿತ್ರವದು ಪ್ರಕಟವಲ್ಲ ನೋಡಾ!

ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು
ಸಟೆಯ ಹಿಡಿದು ದಿಟವ ಮರೆದು

ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು ಆಚಾರವುಳ್ಳವಂಗೆ ಗುರುವುಂಟು

ಗುರುವುಳ್ಳವಂಗೆ ಲಿಂಗವುಂಟು
ಲಿಂಗಪೂಜಕಂಗೆ ಭೋಗವುಂಟು

ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು ಗುಹೇಶ್ವರಲಿಂಗವು ಅಲ್ಲಿ

 ಇಲ್ಲವೆಂಬುದನು ಈ ವೇಷಲಾಂಛನರೆತ್ತ ಬಲ್ಲರು ಹೇಳಾ ಸಂಗನಬಸವಣ್ಣ”.

              ಶರಣ ಮಹಾ ಮಹಿಮ ಅಲ್ಲಮಪ್ರಭು ದೇವರು”
*********

ದಿವ್ಯಜ್ಞಾನಿ ಶರಣ ಮಹಾ ಮಹಿಮ ಅಲ್ಲಮಪ್ರಭು ದೇವರು
ಇಡೀ ಶರಣ ತತ್ವದ ಆಶಯವನ್ನು ಆಧ್ಯಾತ್ಮಿಕ ನೆಲೆಗಟ್ಟಿನ  ಸೂಕ್ಷ್ಮತೆಯನ್ನು ಈ ಒಂದೇ ವಚನದಿಂದ ತಿಳಿಯಪಡಿಸಿದ್ದನ್ನು ಅರಿಯಬಹುದಾಗಿದೆ.

ಶರಣರ ಅನುಭಾವ ವಚನಗಳ ಸಾಲಿನಲ್ಲಿ ಸಾಗರ ಸಂಪತ್ತಿನಂತೆ,
ಬತ್ತಲಾರದ ಬುಗ್ಗೆಯಂತೆ,ಇತಿ ಮಿತಿಗಳನ್ನು ಮೀರಿದ ಜ್ಞಾನ ದಾಸೋಹ  ಶರಣರ ವಚನಗಳಲ್ಲಿ ತುಂಬಿ ನಿಂತಿದೆ.

ಇದನ್ನು ಬಯಸಿ ಉಂಡವರೇ ಭಾಗ್ಯವಂತರು
ಅದನ್ನು ಅರ್ಥ ಮಾಡಿಕೊಂವರೇ ಸೌಭಾಗ್ಯವಂತರು.
ಇದನ್ನು ಅರಿತು ಆಚರಿಸುವವರೇ ಶರಣರು.

ಅರಿದ ಶರಣಂಗೆ ಆಚಾರವಿಲ್ಲ
ಆಚಾರ ಉಳ್ಳವನಿಗೆ ಲಿಂಗವಿಲ್ಲ
ಯಾರು ನಿಜವಾದ ಅರಿವು ಹೊಂದಿರುತ್ತಾರೆಯೋ ಅವರಿಗೆ ಯಾವುದೇ ಆಚಾರವಿಲ್ಲ,
ಯಾರು ಆಚರಣೆಯಲ್ಲಿ ಅರಿವನ್ನು ತರುತ್ತಾರೆಯೋ ಅವರಿಗೆ ಲಿಂಗವೂ ಇಲ್ಲ.
ಎಂತಹ ಅಧ್ಭುತ…..!  ಅನುಭಾವದ ಮಾತುಗಳು!

ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ
ಚರಿತ್ರವದು ಪ್ರಕಟವಲ್ಲ ನೋಡಾ!

ಎಲ್ಲವನ್ನೂ ಮೀರಿದ ಆಧ್ಯಾತ್ಮಿಕ ಬೆಳಗು ಇದನ್ನು ಶಬ್ಧಕ್ಕೆ ಹಿಡಿಯಲು ಸಾಧ್ಯವೇ?

ಸಂಸಾರಿ ಬಳಸುವ ಬಯಕೆನೆಂದು ಹೊದ್ದನು
ಸೆಟೆಯ ಹಿಡಿದು ದಿಟವ ಮರೆದು

ಸಂಸಾರಿ ಬಳಸುವ ಯಾವುದೇ ಆಶೆ, ರೋಷ, ಬಯಕೆಗಳು ಶರಣನ ಸಮೀಪ ಸುಳಿಯಲಾರವು ಒಂದು ವೇಳೆ ಸಂಸಾರಿಕ ಅಂದರೆ ಕ್ಷಣಿಕ ಸುಖ ಭೋಗಗಳ ಸಾಮಿಪ್ಯ ಸಾಧಿಸಿದರೆ ಆತನೆಂದು ಶರಣರಾಗಲು ಸಾಧ್ಯವಿಲ್ಲ
ಹೀಗಾದರೆ ಸಟೆಯ ಹಿಡಿದು ದಿಟವ ಮರೆದಂತಾಗುತ್ತದೆ.

ಇಲ್ಲದ ಲಿಂಗವನ್ನು ಉಂಟೆಂದು ಪೂಜಿಸುವವರಾಗಿ ಆಚಾರವುಂಟು ಆಚಾರವುಳ್ಳವನಿಗೆ ಗುರುವುಂಟು

ಭವಿತನದ ಗೋಳಾಟ  ಇಲ್ಲದ್ದನ್ನು ಹುಡುಕಾಡುವ ತವಕ ಸತ್ಯದ ಮೇಲೆ ಮುಸುಕಿದ ಮರೆಯನ್ನು ತೆರೆಯದೆ ಅಜ್ಞಾನಿಗಳಂತೆ ವರ್ತಿಸಿ ನಿಜದ ಮಾರ್ಗ ಹಿಡಿಯಲು ತಪ್ಪಿದ ಮಂದಮತಿಗಳ ಗೋಳಾಟವನ್ನು ಶರಣ ದಿವ್ಯ ಜ್ಞಾನಿ ಅಲ್ಲಮಪ್ರಭುಗಳು ವಿಡಂಬಿಸಿದ್ದಾರೆ.
ಇಲ್ಲದ ಲಿಂಗವನ್ನು ಇದೆ ಎಂದು
ಅಜ್ಞಾನವನ್ನು ಅರಿವು ಮಾಡಿಕೊಳ್ಳುವವರಿಗೆ ಆಚಾರ ಇದೆ ಆಚಾರ ಇದ್ದವನಿಗೆ ಗುರುವುಂಟು ಎಂದು ಹೇಳುತ್ತ

ಗುರು ಉಳ್ಳವನಿಗೆ ಲಿಂಗವುಂಟು ಲಿಂಗಪೂಜಕಂಗೆ ಭೋಗವುಂಟು

ಭಕ್ತನಾದವನಿಗೆ ಯಾವುದೇ ರೀತಿಯ ಭಂಧ ಭೋಗಗಳ ಭಾದೆ ಇರಲಾರದು.ಆದರೆ ಭವಭಂದನಕ್ಕೆ ಒಂದಕ್ಕೊಂದು ಜೊಡಕವಾಗಿ ಬೆನ್ನಟ್ಟಿ ಬರುತ್ತವೆ.ಶರಣರು ವ್ಯಕ್ತಿ, ವಸ್ತು ಗಳನ್ನು ಅಲ್ಲಗಳೆದು ತತ್ವಕ್ಕೆ ಬೆಲೆ ಕೊಟ್ಟರು
ಶರಣರ ದೃಷ್ಟಿಯಲ್ಲಿ ಗುರು, ಲಿಂಗ,ಜಂಗಮ  ತತ್ವಗಳಾಗಿವೆ.
ವಿನಹ ಕೇವಲ ವಸ್ತು ವ್ಯಕ್ತಿಗಳಲ್ಲ.

ಈ ಬರಿಯ ಬಾಯಿ ಬಣ್ಣಕರೆಲ್ಲರೂ
ಪೂಜಕರಾದರು ಗುಹೇಶ್ವರ ಲಿಂಗವು ಅಲ್ಲಿ

ಇಂತಹ ಸ್ಥಾವರ ಪೂಜಕರು ಬರೀ ಬಾಯಿ ಬಣ್ಣ ಬಣ್ಣದ ಮಾತಿನಲ್ಲಿ ಭವಿಗಳಾಗಿ ಉಳಿಯುವವರೇ ವಿನಃ ಭಕ್ತರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಶರಣ ಅಲ್ಲಮಪ್ರಭುದೇವರು.

ಇಲ್ಲವೆಂಬುದನು ಈ ವೇಷಲಾಂಛನರೆತ್ತ
ಬಲ್ಲರು ಹೇಳಾ ಸಂಗನಬಸವಣ್ಣ

ಇಲ್ಲದ ಸತ್ಯ ಶುದ್ಧತೆಯನ್ನು ವೇಷ ಧರಿಸಿ ಲಾಂಛನದಲ್ಲಿ ಎಷ್ಟೇ ಹುಡುಕಿದರೂ ಸಿಗುವುದಿಲ್ಲ ಎಂಬುದನ್ನು
ದೈವಸಾಕ್ಷಿಯಾಗಿ ಸ್ಪಷ್ಟನೆ ನೀಡಿದ್ದಾರೆ
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಸಂದೇಶ ಸಾರುವ, ಮತ್ತು ಅರಿವೇ ಗುರು ಆಚಾರವೇ ಲಿಂಗ ಅನಭಾವವೇ ಜಂಗಮ
ಈ ಸತ್ವ ಉಣಬಡಿಸಿದ ದಿವ್ಯ ಜ್ಞಾನಿ ಅಲ್ಲಮಪ್ರಭುದೇವರಿಗೆ ನಮೊ: ನಮೊ:


Leave a Reply

Back To Top