ವಾಣಿ ಶೆಟ್ಟಿ ಅವರ ಕವಿತೆ-“ಬದುಕಿನ ಕುಂಭ ‘

ಬದುಕಿನ ಕುಂಭದಲ್ಲಿ , ನೋವು ನೈರಾಶ್ಯ ಗಳೇ ತುಂಬಿವೆ

ವ್ಯಕ್ತಿತ್ವದ ಹಂದರಕೆ
ಬಿಗಿದ ಸಂಕೋಲೆಯನು
ಜಗ್ಗಿದಂತಾಗಿ ಉಸಿರೂ ಭಾರವಾಗಿದೆ

ಸಂಬಂಧಗಳ ,ಒಳಪದರು ತೆರೆದಂತೆ
ನಿಗೂಢ ವಾಗುತ್ತಿವೆ,
ಅದೆಷ್ಟೋ , ಮುಖವಾಡಗಳು!
ಈ ವಿಕೃತ ಮನಗಳಿಗೆ !!,
ಬಂಧನವ ಭೇದಿಸುತ್ತಾ ಹೋದಂತೆ
ಕಾಪಿಟ್ಟ ಸದ್ಭಾವನೆಗಳೂ ಮುಗ್ಗರಿಸಿ
ಬೀಳತೊಡಗಿವೆ
ಏಳಲಾಗದ ಚಡಪಡಿಕೆ ಯಲ್ಲಿ

ಸೀದು, ಘಾಟು ತಳಹಿಡಿದ
ಪಾತ್ರೆ ಯಾಗಿದೆ, ಈ ತನುವೂ
ಮನವೂ ಆವರಿಸಿದ ಭಾವಗಳು
ಅದೇಷ್ಟೆ ತಿಕ್ಕಿ ತೀಡಿದರೂ, ಎಲ್ಲೊ ಕಮರು ಮುಗ್ಗಲು
ಹಿಡಿದ ಕಿಲುಬು ವಾಸನೆ
ಬದುಕಿನ ಹಣೇ ಬರಹವೆ ಇದು?

ಇಲ್ಲಿ, ವಿಲ ವಿಲನೆ ಒದ್ದಾಡುತ್ತಾ ಹೃದಯಗಳು ಕಮರುತ್ತಿವೆ,
ಬಿರುಕು ಬಿಟ್ಟ ಛಾವಣಿಯಂತೆ
ಬಣ್ಣ ಬಿಟ್ಟ ಬಟ್ಟೆಯಂತೆ
ಚೂರಾದ ಕನ್ನಡಿಯ, ತುಣುಕುಗಳಂತೆ,

ನೆನಪಿನಂಗಳದಿ ಬಂದು
ಮರೆಯಾದ ಜೀವಗಳ ನಂಟು
ಮರೆತೆನೆಂದರೂ ಮರೆಯಲಾಗದ,
ಸಿಹಿ ಕಹಿ ನೆನಪುಗಳ ರಿಂಗಣದಲಿ
ಬದುಕು ದಣಿಯತೊಡಗಿದೆ

ಈಗ ಈ ನಂಟುಗಳು
ಮಸ್ತಕದಲ್ಲಿ ಹೂತು ಹೋದಂತೆ
ಪುಸ್ತಕ ದಲ್ಲಿ ಮಾಯವಾದಂತೆ
ಮನುಕುಲ ಮರೆತ ಮಾನವೀಯ
ಸಂವೇದನೆ ಕಳಚಿಕೊಂಡಂತೆ.

ಗಗನದಂಚಿನ ಹದ್ದೊಂದು ಕಾನನದ ಮೊಲದ ಮರಿಯ ಹೊತ್ತೊಯ್ದಂತೆ,

ಚಡಪಡಿಸುತಿವೆ ಹನಿಗಳುದುರಿಸುತ,

ಗೊತ್ತಿಲ್ಲಾ, ಈ ಬದುಕಿನ ಕುಂಭ ಖಾಲೀ ಯಾಗುವುದೆಂದು .,?


3 thoughts on “ವಾಣಿ ಶೆಟ್ಟಿ ಅವರ ಕವಿತೆ-“ಬದುಕಿನ ಕುಂಭ ‘

  1. ಬದುಕಿನ ಸಂಕೋಲೆಯ ವಿವಿಧ ಬಗೆಯ ನೋವುಗಳ ಅನಾವರಣ ನೈಜತೆ ನಿರಾಶೆ ಚಿತ್ರಣ

Leave a Reply

Back To Top