ಕಾವ್ಯ ಸಂಗಾತಿ
ಡಾ.ಜಿ. ಪಿ. ಕುಸುಮ ಮುಂಬಯಿ
‘ನಗರದಲ್ಲೊಂದು ರಾತ್ರಿಯ ತುಣುಕು’
ಹಳ್ಳಿ ದಾಟಿ ನಗರ ಹೊಕ್ಕಾಗ
ಬೆಳಕು ಎಲ್ಲೆಂದರಲ್ಲಿ ಕೈಚಾಚಿ ಕರೆದಾಗ
ನಗರದಲ್ಲಿ ನಡಿಗೆಗೆ ಭಯವಿಲ್ಲ
ಎಂದನ್ನಿಸಿದ್ದು ಸುಳ್ಳಲ್ಲ
ಹಳ್ಳಿಯ ಕತ್ತಲಲ್ಲಿ ಬರಿಗಾಲ ನಡಿಗೆಗೆ
ಬೆಳದಿಂಗಳ ಬೆಂಬಲವಿತ್ತು
ನಗರದಲ್ಲಿ ಅಭ್ಯಾಸ ತಪ್ಪಿಹೋಯಿತು
ಹಳ್ಳಿಯೆಂದರೆ ಕತ್ತಲ ಗೂಡೆನಿಸಿತು
ನಗರದಲ್ಲಿ ಮೊನ್ನೆ ರಾತ್ರಿ ಎರಡಾದರೂ
ಹೆಣ್ಣು ನಿರ್ಭಿಡೆಯಿಂದ ಹೆಜ್ಜೆ ಹಾಕುತ್ತಿದ್ದಳು
ಕೈಯಲ್ಲಿ ಸಿಗರೇಟು ಹಿಡಿದು
ಹೊಗೆ ಉಗುಳುವುದೆಂದರೆ
ಪ್ರತಿಷ್ಠೆ ಅವಳಿಗೆ
ಬಿಯರ್ ಬಾಟಲಿನೊಳಗೆ ಈಜುವ ತವಕ
ನಾಲ್ಕು ಕಾಸು ಉಳಿಯಲೆಂದು
ಅಪ್ಪನ ಹರಿದ ಕಿಸೆಗೆ
ಹೊಲಿಗೆ ಹಾಕಿ ಕೊಟ್ಟ ಅಮ್ಮ
ದಾರಿ ಕಾಯುತ್ತಾಳೆ
ಚಿಕ್ಕ ಅಂಗಿ ಹಾಕಿಕೊಂಡು
ಕಾಲೇಜು ಮುಗಿಸಿ ಬರುವ ಮಗಳಿಗಾಗಿ
ನಗರದಲ್ಲೀಗ ಸ್ವಾತಂತ್ರ್ಯವೆಲ್ಲದ್ದಕ್ಕೂ
ಹಳ್ಳಿಯ ಹಾಗಲ್ಲ
ಎಲ್ಲದಕ್ಕೂ ಒಂದು ಮಿತಿ
ಎಂದನ್ನಿಸಿದರೂ
ಬೇಕೆನಿಸುವುದು ಮಿತಿಯ ಮತಿ.
ಡಾ.ಜಿ. ಪಿ. ಕುಸುಮ ಮುಂಬಯಿ