ಒಳಗೆ ಪ್ರವೇಶ ಮಾಡಿದಾಗ ಸುಮತಿಗೆ ಅದೊಂದು ಸುಂದರವಾದ ಸುಸಜ್ಜಿತ ಬಂಗಲೆ ಅನಿಸಿತು. ಆಧುನಿಕ ಸೌಕರ್ಯಗಳಿಂದ ಕೂಡಿದ ಅಚ್ಚು ಕಟ್ಟಾದ ಮನೆ. 

ಅಲಂಕಾರದ ವಸ್ತುಗಳೆಲ್ಲವೂ ಇಂಗ್ಲಿಷರ ಶೈಲಿಯಲ್ಲಿ ಇದ್ದವು. ಹೆಚ್ಚಿನವು ಎಲ್ಲವೂ ಗಾಜಿನಿಂದ ಕೂಡಿದ ವಸ್ತುಗಳು ಪಿಂಗಾಣಿಗಳು ಬೆಲೆ ಬಾಳುವ ಮರದ ಪೀಠೋಪರಣಗಳು ಗೋಡೆಯನ್ನು ಅಲಂಕರಿಸಿದ್ದ ಹಲವಾರು ಸುಂದರ ಚಿತ್ರಗಳು. ವಿಶಾಲವಾದ ಹಜಾರದಲ್ಲಿ ಗೋಡೆಗೆ ಲಗತ್ತಿಸಿದ್ದ ಸಾರಂಗ ಜಿಂಕೆಗಳ ಆಕರ್ಷಕ  ಕೊಂಬುಗಳು. ಕಾಡು ಕೋಳಿಯ ರೆಕ್ಕೆ ಪುಕ್ಕಗಳಿಂದ ಅಲಂಕರಿಸಿದ ಚಿತ್ರಗಳು ಹಲವು ವನ್ಯ ಜೀವಿಗಳ ಅಪರೂಪದ ತೈಲ ಚಿತ್ರಗಳು ಹಜಾರದ ಮನೋಹರತೆಯನ್ನು ಹೆಚ್ಚಿಸಿದ್ದವು. ಹೀಗೆ ಎಲ್ಲವನ್ನೂ ಗಮನಿಸುತ್ತಾ ನಡೆದಂತೆ ಮನೆಯೊಳಗಿನಿಂದ  ಅಡುಗೆ ಮಾಡುವ ಕೆಲಸದವರು ಹಜಾರಕ್ಕೆ ಬಂದು ದೊಡ್ಡ ಗಾಜಿನ ಲೋಟಗಳಲ್ಲಿ ಹಣ್ಣಿನ ಪಾನಕವನ್ನು ತಂದು ಟೀಪಾಯಿಯ ಮೇಲೆ ಇಟ್ಟು ಜೊತೆಗೆ ಹಲವು ಬಗೆಯ ತಿನಿಸುಗಳನ್ನು ತಂದು ಇಟ್ಟರು.  ನಾಲ್ವರನ್ನೂ ಕರೆದು ಹಣ್ಣಿನ ಪಾನಕ ಹಾಗೂ ಪಲಹಾರ ತಿನಿಸುಗಳನ್ನು ಸೇವಿಸುವಂತೆ ವಿನಂತಿಸಿಕೊಂಡರು. ಜೊತೆಗೆ ತೋಟದ ಮಾಲೀಕರೂ ಇದ್ದರು. ಮಕ್ಕಳಿಗೆ ಪಾನಕವನ್ನು ಕುಡಿಯುವಂತೆ ಹೇಳಿದರು. ಮಕ್ಕಳು ಗಾಜಿನ ಲೋಟವನ್ನು ಕೈಗೆ ಎತ್ತಿಕೊಂಡರು. ಇಲ್ಲಿಯವರೆಗೂ ತಾವು ಸೇವಿಸಿರದ ಹಣ್ಣಿನ ಪಾನಕವಾಗಿತ್ತು. ಎಲ್ಲರೂ ಅಚ್ಚರಿಯಿಂದ ನೋಡುತ್ತಾ ಇರಲು ಜೊತೆಗೆ ಬಂದಿದ್ದ ಬ್ರೋಕರ್ ಹೇಳಿದರು… “ಇದು ಒಂದು ವಿಶೇಷ ಬಗೆಯ ಹಣ್ಣಿನ ರಸ…. ನಂತರ ಕರೆದುಕೊಂಡು ಹೋಗಿ ತೋರಿಸುತ್ತೇನೆ…. ಕುಡಿದು ನೋಡಿ ನಿಮಗೂ ಇಷ್ಟವಾಗುತ್ತದೆ”…. ಎನ್ನುತ್ತಾ ತಾವೂ ಒಂದು ಲೋಟ ತೆಗೆದುಕೊಂಡು ಕುಡಿದರು.

ನಾರಾಯಣನ್ ಹಾಗೂ ಮಕ್ಕಳು ಗಾಜಿನ ಲೋಟವನ್ನು ಕೈಗೆತ್ತಿಕೊಂಡು ಅದರೊಳಗೆ ಇದ್ದ ಪಾನೀಯವನ್ನು  ಸ್ವಲ್ಪ ಕುಡಿದರು. ಹುಳಿ ಸಿಹಿ ಹಾಗೂ ನಡು ನಡುವೆ ಬಾಯಿಗೆ ಸಿಗುತ್ತಿದ್ದ  ಹಣ್ಣಿನ ದುಂಡಗಿನ ಬೀಜಗಳಿಂದ ಕೂಡಿದ ಪಾನಕವಾಗಿತ್ತು. ಪಾನಕದ ರುಚಿ ಮಕ್ಕಳಿಗೆ ಇಷ್ಟವಾಯ್ತು. ಜೊತೆಗೆ ಅವರು ಇಟ್ಟಿದ್ದ ಪಲಹಾರ ತಿನಿಸುಗಳು ಇಷ್ಟವಾಯ್ತು. ಪಾನಕ ಕುಡಿದ ನಂತರ ಉಭಯ ಕುಶಲೋಪರಿ ಮಾತನಾಡುತ್ತಾ ಹಾಗೆಯೇ ಮನೆಯ ಮಾಲೀಕರು  ಮನೆಯ ಹಿಂದಿನ ಕೈತೋಟಕ್ಕೆ ಕರೆದುಕೊಂಡು ಹೋದರು. ಅವರ ಹಿಂದೆಯೇ ಹೋದಂತಹ ಮಕ್ಕಳಿಗೆ ಆಶ್ಚರ್ಯ ಕಾದಿತ್ತು. ದೊಡ್ಡ ಕಮಾನಿನಂತಹ ಚಪ್ಪರದಲ್ಲಿ ಹಸಿರು ಎಲೆಗಳ ನಡುವೆ ಹಳದಿ ಹಾಗೂ ನೇರಳೆ ಬಣ್ಣದಿಂದ ಕೂಡಿದ್ದ ಸಣ್ಣ ಚೆಂಡಿನ ಆಕಾರದ ಹಣ್ಣುಗಳು ತೂಗಾಡುತ್ತಿದ್ದವು. ಚಪ್ಪರದ ಒಳಗೆಲ್ಲಾ ನೇತಾಡುತ್ತಿದ್ದ ಹಣ್ಣುಗಳು ಕೆಲವೊಂದು ಕೈಗೆ ಎಟುಕುವಷ್ಟು ಕೆಳಗೆ ಇದ್ದವು. ಕೆಲವು ಕಳಿತು ಕಣ್ಣಾಗಿ ನೆಲದಲ್ಲಿ ಬಿದ್ದಿದ್ದವು. ಮಾಲೀಕರು ಹಲವಾರು ಹಣ್ಣುಗಳನ್ನು ಕಿತ್ತು ಮಕ್ಕಳ ಕೈಗೆ ಕೊಟ್ಟರು. ಕೆಲಸಗಾರರನ್ನು ಸನ್ನೆ ಮಾಡಿ ಕರೆದು ಅವುಗಳನ್ನು ಸಣ್ಣ ಚಾಕುವಿನಿಂದ ಮೇಲ್ಭಾಗವನ್ನು ಕತ್ತರಿಸಿ ಮಕ್ಕಳಿಗೆ ಕೊಡುವಂತೆ ಹೇಳಿದರು. ಮಕ್ಕಳಿಗೆ ಇದೇನೆಂಬ ಕುತೂಹಲ ತಡೆಯಲಾರದೆ ಕೇಳಿದರು…”ಸರ್ ಈ ಹಣ್ಣುಗಳ ಹೆಸರೇನು? …. ಎಂದು ಕೇಳಲು ನಗುತ್ತಾ ಬ್ರೋಕರ್ ಕಡೆ ನೋಡಿ…. “ಮಕ್ಕಳಿಗೆ ವಿವರಿಸಿ ಹೇಳಿ” ಎಂದರು ಇಂಗ್ಲಿಷಿನಲ್ಲಿ. ಅವರಿಗೆ ಭಾರತ ದೇಶದ ಯಾವ ಭಾಷೆಯೂ ಬರುತ್ತಾ ಇರಲಿಲ್ಲ. ಬ್ರೋಕರ್ ಮಕ್ಕಳನ್ನು ಉದ್ದೇಶಿಸಿ… “ಮಕ್ಕಳೇ ಈ ಹಣ್ಣುಗಳನ್ನು ಪ್ಯಾಷನ್ ಫ್ರೂಟ್ ಎಂದು ಕರೆಯುತ್ತಾರೆ…..ಇದನ್ನು ನಮ್ಮ ದೇಶದಲ್ಲಿ ಕೃಷ್ಣ ಫಲ ಎಂದೂ ಹೇಳುತ್ತಾರೆ…. ಈ ಹಣ್ಣಿನ ಮೂಲ ದಕ್ಷಿಣ ಬ್ರೆಜಿಲ್…. ಇದು ಭಾರತದಲ್ಲಿ ಕೂಡಾ ಕೆಲವೆಡೆ ಬೆಳೆಯುತ್ತಾರೆ…. ನಿಮ್ಮ ಕೇರಳದ ವೈನಾಡಿನಲ್ಲಿ ಕೂಡಾ ಸಿಗುತ್ತವೆ”…. ಎಂದು ಹೇಳಿದಾಗ ಹೌದೇ ಎನ್ನುವಂತೆ ಅಪ್ಪನ ಮುಖ ನೋಡಿದರು ಮಕ್ಕಳು. 

ಹೌದು ಎನ್ನುವಂತೆ ನಾರಾಯಣನ್ ತಲೆ ಅಲ್ಲಾಡಿಸಿದರು.

ಕೆಲಸಗಾರರಿಗೆ ಒಂದು ಬುಟ್ಟಿಯಷ್ಟು ಪ್ಯಾಷನ್ ಫ್ರೂಟ್ ಗಳನ್ನು ಕುಯ್ದು ಜೀಪಿನಲ್ಲಿ ಇಡಲು ಹೇಳಿದರು. ನಂತರ ಕೈತೋಟದಲ್ಲಿ ಇನ್ನೂ ಸ್ವಲ್ಪ ಮುಂದೆ ಕರೆದುಕೊಂಡು ಹೋದರು. ಬ್ರೋಕರ್ ನಡೆಯುತ್ತಾ ಹೋದಂತೆ ಒಂದೊಂದೇ ಹಣ್ಣಿನ ಮರದ  ಪರಿಚಯ ಮಾಡಿಕೊಟ್ಟರು. ಹಲವಾರು ಬಗೆಯ ಹಣ್ಣಿನ ಮರಗಳು ಸಪೋಟ ದಾಳಿಂಬೆ ಪೇರಳೆ ಗುಲಾಬಿ ಹಾಗೂ ಕೆನೆ ಬಣ್ಣದ   ಪನ್ನೇರಳೆ ಜಂಬು ನೇರಳೆ ಕಮರಾಕ್ಷಿ ಹಣ್ಣು ಮೈಸೂರು ನೆಲ್ಲಿಕಾಯಿ ಬೆಟ್ಟದ ನೆಲ್ಲಿಕಾಯಿ ಮೂಸಂಬಿ ನೇರಳೆ ಜೀರ್ಕನ ಹಣ್ಣು ಮುರುಗಲ ಹಣ್ಣು  ಮರಗಳನ್ನು ನೋಡಿ ಮಕ್ಕಳಿಗೆ ಹಿಗ್ಗೋ ಹಿಗ್ಗು. ಸುಮತಿ ಸುತ್ತಲೂ ನೋಡಿದಳು ತನ್ನ ಪ್ರಿಯ ಮಂಜಾಡಿಕ್ಕುರುವಿನ ಮರ ಇದೆಯೇ ಎಂದು. ಎತ್ತ ಕಣ್ಣು ಹಾಯಿಸಿದರೂ ಒಂದೇ ಒಂದು ಮರ ಕಾಣಸಿಗಲಿಲ್ಲ. ಅವಳ ಮುಖ ಸ್ವಲ್ಪ ಮಂಕಾಯಿತು. ಆದರೂ ಇಷ್ಟೆಲ್ಲಾ ಹಣ್ಣುಗಳ ಮರಗಳನ್ನು ನೋಡಿ ಖುಷಿಯಾಯಿತು. ಅಪ್ಪ ಹೇಳಿದ್ದು ನಿಜ ಇಲ್ಲಿ ಬಂದು ನೋಡಿದರೆ ಅಪ್ಪ ಅಂದು ವರ್ಣಿಸಿದ್ದಕ್ಕಿಂತ ಇನ್ನೂ ಸುಂದರವಾಗಿದೆ ಈ ತೋಟ. ಇನ್ನು ಮುಂದೆ ಇದು ತಮ್ಮದೇ ಎಂದು ನೆನೆದಾಗ ಸುಮತಿಗೆ ಅತೀವ ಸಂತೋಷವಾಯಿತು. ಕೇರಳದಲ್ಲಿ ಕಂಡಿರದಂತಹ ಹಲವಾರು ಬಗೆಯ ಹೂ ಗಿಡಗಳು ಹಣ್ಣಿನ ಮರಗಳನ್ನು ಇಲ್ಲಿ ಅವರೆಲ್ಲರೂ ಕಂಡರು. ನಂತರ ಎಲ್ಲರೂ ಸ್ವಲ್ಪ ದೂರದವರೆಗೂ ಕಾಫಿ ತೋಟವನ್ನು ಕಾಲ್ನಡಿಗೆಯಲ್ಲಿ ನೋಡ ಹೊರಟರು. ಬೇಸಿಗೆಯ ಮೇ ತಿಂಗಳಾದರೂ ಸೆಕೆ ಇರಲಿಲ್ಲ. ತಂಪಾದ ಮರದ ನೆರಳು ದಟ್ಟವಾದ ಎತ್ತರದ ಮರಗಳು ಇದ್ದುದರಿಂದ ಬಿಸಿಲು ನೆಲಕ್ಕೆ ಬೀಳುತ್ತಿರಲಿಲ್ಲ. ಒಂದೊಂದೇ ಮರದ ಹೆಸರುಗಳನ್ನು ಬ್ರೋಕರ್ ಪರಿಚಯಿಸುತ್ತಾ ಮುಂದೆ ನಡೆದರು. ಬೀಟೆ ತೇಗ ಹೊನ್ನೆ ನಂದಿ ಮತ್ತಿ ಹೆಬ್ಬಲಸು ಹಲಸಿನ ಮರಗಳು ಸಿಲ್ವರ್ ಓಕ್ ಮರದ ಎಲೆ ನೋಡಲು ತುಂಬಾ ಸೊಗಸಾಗಿತ್ತು. ನೆಲದಲ್ಲಿ ಬಿದ್ದಿದ್ದ ಒಂದು ಹಸಿ ಸಿಲ್ವರ್ ಓಕ್ ಎಲೆಯನ್ನು ಸುಮತಿ ಬಗ್ಗಿ ತೆಗೆದುಕೊಂಡಳು. ಅದರ ಬಣ್ಣ ಎಲೆಯ ತುದಿಯ ಸೂಜಿಯ ಆಕಾರ ಅವಳಿಗೆ ಬಹಳ ಇಷ್ಟವಾಯಿತು. ತೋಟ ನೋಡುತ್ತಾ ಹೋದಂತೆ ಮನಸ್ಸು ಕಣ್ಣು ಎರಡೂ ತಂಪಾದವು. 

ಸ್ವಲ್ಪ ಇಳಿಜಾರು ಇರುವ ಕಡೆ ಮೆಟ್ಟಿಲುಗಳನ್ನು ಮಾಡಲಾಗಿತ್ತು. ಸಾವಕಾಶವಾಗಿ ಎಲ್ಲರೂ ಇಳಿದರು. ಕೆಳಗೆ ಇಳಿದಾಗ ಸಣ್ಣಗೆ ನೀರು ಹರಿಯುವ ಜುಳು ಜುಳು ನಾದ ಕೇಳಿತು. ಮಕ್ಕಳಿಗೆ ನೀರಲ್ಲಿ ಆಡಬಹುದು ಎಂಬ ಹಿಗ್ಗು. ಅಲ್ಲಿನ ಮಣ್ಣು ಸ್ವಲ್ಪ ತೇವವಾಗಿತ್ತು. ಅಲ್ಲಿದ್ದ ಗಿಡಗಳನ್ನು ನೋಡಿ ಮಕ್ಕಳು ಅಚ್ಚರಿಗೊಂಡರು ಅದೇನು ಗಿಡ ಎಂದು ಕೇಳಲು ಅವೆಲ್ಲಾ ಪಾಯಸ ಹಾಗೂ ಸಿಹಿ ತಿಂಡಿಗಳಿಗೆ ಉಪಯೋಗಿಸುವ ಏಲಕ್ಕಿಯ ಗಿಡಗಳು ಎಂದು ಅಪ್ಪ ಹೇಳಿದರು. ಕೆಲವು ಗಿಡಗಳು ಹೂ ಬಿಟ್ಟಿದ್ದವು. ಅಚ್ಚರಿ ಎಂದರೆ ಅವು ಗಿಡದ ಬುಡದಲ್ಲಿ  ನೀಳವಾದ ಬೇರುಗಳಂತೆ ಕಾಣುವ ಬಿಳಲುಗಳಲ್ಲಿ ಬಿಟ್ಟು ನೆಲದ ಮೇಲೆ ಹರಡಿ ಕೊಂಡಿದ್ದವು.  ಸಣ್ಣ ಬಿಳಿ ಬಣ್ಣದ  ಹೂವುಗಳ ನಡುವೆ ನೀಲಿಬಣ್ಣದ ಗೆರೆಗಳು ಚಿತ್ರಕ್ಕೆ ಬಣ್ಣ ಹಚ್ಚಿದಂತೆ ಇದ್ದವು.  ಜೊತೆಗೆ ಸಣ್ಣ ಪುಟ್ಟ ಏಲಕ್ಕಿಯ ಎಳೆಯ ಹಾಗೂ ಬಲಿಯಲು ಪ್ರಾರಂಭಿಸಿದ ಕಾಯಿಗಳು ಇದ್ದವು. ಅವುಗಳ ಅಂದವನ್ನು ನೋಡುತ್ತಾ ಇದ್ದ ಸುಮತಿಯ ಕಾಲಿಗೆ ಕಡಿತದ ಅನುಭವ ಆಯಿತು. ಕೈಯಿಂದ ಕೆರೆದುಕೊಳ್ಳಲು ನೋಡಿದಳು. ಆಗ ತಣ್ಣಗೆ ಕೈಗೆ ಏನೋ ಸಿಕ್ಕಿದ ಅನುಭವ ಆಯಿತು. ಒಮ್ಮೆಲೆ… “ಅಯ್ಯೋ ನನ್ನ ಕಾಲಲ್ಲಿ ಏನೋ ಇದೆ ಕೆರೆತ ಆಗುತ್ತಿದೆ ಅಪ್ಪಾ… ನೋಡಿ”… ಎಂದು ಅಪ್ಪನನ್ನು ಕೂಗಿದಳು. ನಾರಾಯಣನ್ ಅವಳ ಕಾಲು ನೋಡಿದರು. ಮುಟ್ಟಿದಾಗ ಏನೋ ಮೆದುವಾಗಿ ಕೈಗೆ ಸಿಕ್ಕಿತು.  ಕೈಯಿಂದ ತೆಗೆಯಲು ಹೋದರು.  ಆಗ ಬ್ರೋಕರ್ ಇವರ ಗಲಾಟೆ ಕೇಳಿ ಅಲ್ಲಿಗೆ ಬಂದರು. ಸುಮತಿಯ ಕಾಲಲ್ಲಿ ಕಚ್ಚಿಕೊಂಡಿದ್ದ ಉಂಬಳವನ್ನು ನೋಡಿ ಜೋರಾಗಿ ನಕ್ಕರು. ಮಲೆನಾಡಿನ ತಂಪಾದ ತಗ್ಗು ಪ್ರದೇಶಗಳಲ್ಲಿ  ನೀರಿನ ತೇವಾಂಶ ಹೆಚ್ಚು ಇರುವ ಸ್ಥಳಗಳಲ್ಲಿ ಇರುವಂತಹ ಪುಟ್ಟ ಜೀವಿ (ಜಿಗಣೆ)ಉಂಬಳವಾಗಿತ್ತು. ಬ್ರೋಕರ್ ಹೇಳಿದರು… “ನಾರಾಯಣನ್ ಅದನ್ನು ಕೈಯಲ್ಲಿ ತೆಗೆಯಲು ಪ್ರಯತ್ನಿಸ ಬೇಡಿ. ಉಂಬಳವನ್ನು ಕೈಯಲ್ಲಿ ತೆಗೆದರೆ ಚರ್ಮದ ಸಮೇತ ಕಿತ್ತುಕೊಂಡು ಬರುತ್ತದೆ… ಸ್ವಲ್ಪ ತಡೆಯಿರಿ…. ನನ್ನ ಜೇಬಲ್ಲಿ ಎಲೆ ಅಡಿಕೆಯ ಜೊತೆ ಹಾಕಲು ಬಳಸುವ ಸುಣ್ಣ ಇದೆ…. ಉಂಬಳದ ಮೇಲೆ ಸ್ವಲ್ಪ ಹಚ್ಚಿದರೆ ಅದು ತಾನೇ ಬಿದ್ದು ಹೋಗುತ್ತದೆ ಎಂದರು”…..


Leave a Reply

Back To Top